ಹಿರಿಯ ಪೊಲೀಸ್ ಅಧಿಕಾರಿಗಳ ಬೆನ್ನಿಗೆ ನಿಂತ ದಲಿತ ಸಂಘಟನೆಗಳು -- ಪ್ರತಿಭಟನೆ
ಧಾರವಾಡ 18 :-- ಹಿರಿಯ ಪೊಲೀಸ್ ಅಧಿಕಾರಿಗಳ ಬೆನ್ನಿಗೆ ನಿಂತ ದಲಿತ ಸಂಘಟನೆ ಧಾರವಾಡ : ಹುಬ್ಬಳ್ಳಿಯಲ್ಲಿ ನಡೆದಿರುವ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಅವರನ್ನು ಹತ್ಯೆ ಮಾಡಿದ ಆರೋಪಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕು . ಇದೇ ವಿಷಯವನ್ನು ಮುಂದಿಟ್ಟುಕೊಂಡು ಹಿರಿಯ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಬಿಜೆಪಿ ಹಾಗೂ ಮನುವಾದಿ ಪ್ರೇರಿತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ ಎಂದು ಆರೋಪಿಸಿ ಧಾರವಾಡದಲ್ಲಿ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಸದಸ್ಯರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ , ಜಿಲ್ಲಾಧಿಕಾರಿ ಮುಖಾಂತರ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು .
ಅಂಜಲಿ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರು ಬೆಂಡಿಗೇರಿ ಠಾಣೆಯ ಇನ್‌ಸ್ಪೆಕ್ಟರ್ ಹಾಗೂ ಮಹಿಳಾ ಪೊಲೀಸ್ ಪೇದೆಯನ್ನು ಅಮಾನತ್ತು ಮಾಡಿದ್ದಾರೆ . ಕೊಲೆಯಾದ 48 ಗಂಟೆಯೊಳಗೆ ಪೊಲೀಸರು ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ
ಇಷ್ಟೊಂದು ಚಾಕಚಕ್ಯತೆಯಿಂದ ಪೊಲೀಸರು ಕೆಲಸ ಮಾಡಿದರೂ ಬಿಜೆಪಿ ಹಾಗೂ ಮನುವಾದಿ ಪ್ರೇರಿತ ಸಂಘಟನೆಗಳು ಹಿರಿಯ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸುತ್ತಿವೆ . ಕಾಂಗ್ರೆಸ್ ಪಕ್ಷದ ಮುಖಂಡರೇ ಆದ ರಜತ್ ಉಳ್ಳಾಗಡ್ಡಿಮಠ ಅವರು ಈ ಅಪರಾಧ ಕೃತ್ಯಗಳಿಗೆ ಪೊಲೀಸ್ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಿ ವರ್ಗಾವಣೆ ಮಾಡಬೇಕು ಎಂದು ಪತ್ರ ಬರೆದಿರುವುದು ಹಾಸ್ಯಾಸ್ಪದ ಸಂಗತಿ . ಹುಬ್ಬಳ್ಳಿ , ಧಾರವಾಡ ಕಮಿಷನರೇಟ್ ವ್ಯಾಪ್ತಿಯ ಎಲ್ಲ ಪೊಲೀಸ್ ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ . ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಂಡು ಹೋಗುವಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ . ಹೀಗಾಗಿ ಯಾವುದೇ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡದಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಪತ್ರಿಭಟನೆಯ ನೇತೃತ್ವವನ್ನು ಲಕ್ಷ್ಮಣ ದೊಡಮನಿ, ಅಶೋಕ ಭಂಡಾರಿಗೆ, ನಾರಾಯಣ ಮಾದರ ಸೇರಿದಂತೆ ಇನ್ನಿತರರು ವಹಿಸಿದ್ದರು ಡಿ.ಎಸ್.ಎಸ್.ಕಾಯ೯ಕತ೯ರು ಭಾಗವಹಿಸಿದ್ದರು.