ಧಾರವಾಡ :26 ಕ್ಕೆ ವರಕವಿ ಅಂಬಿಕಾತನಯದತ್ತ (ಡಾ.ದ ರಾ ಬೇಂದ್ರೆ) ಅವರ ಪುಣ್ಯಸ್ಮರಣೆ."ಶೃಂಗದ ಬೆನ್ನೇರಿ" ಕಾರ್ಯಕ್ರಮ .

26 ಕ್ಕೆ ವರಕವಿ ಅಂಬಿಕಾತನಯದತ್ತ (ಡಾ.ದ ರಾ ಬೇಂದ್ರೆ) ಅವರ ಪುಣ್ಯಸ್ಮರಣೆ."ಶೃಂಗದ ಬೆನ್ನೇರಿ" ಕಾರ್ಯಕ್ರಮ .
ಸಾವಿರದ ಸಹಸ್ರಮಾನದ ಕವಿ, ಗಾರುಡಿಗ ಡಾ. ದ ರಾ ಬೇಂದ್ರೆ ನಮ್ಮನ್ನಗಲಿ ಇದೇ 26 ಕ್ಕೆ 43 ವರ್ಷಗಳಾದವು. ಮನೆ ಮನೆಗಳಲ್ಲಿ ಕಾವ್ಯ ನಂದಾದೀಪ ಬೆಳಗಿಸಿದ ಕವಿ ಅಂಬಿಕಾತನಯದತ್ತರು ನಮ್ಮನ್ನು ಅಗಲಿದ್ದು ದೀಪಾವಳಿ ನರಕ ಚತುರ್ದಶಿಯಂದು1932 ರಲ್ಲಿ ಬೇಂದ್ರೆ ಅವರ "ಗರಿ" ಕವನ ಸಂಕಲನ ಪ್ರಕಟವಾಯಿತು. "ಗರಿ" ಕವನ ಸಂಕಲನದೊಳಗಿನ "ನರಬಲಿ" ಕವಿತೆ ಬ್ರಿಟಿಷ್ ಆಡಳಿತಗಾರರ ಕೆಂಗಣ್ಣಿಗೆ ಗುರಿಯಾಯಿತು. ಬ್ರಿಟಿಷ್ ಸರ್ಕಾರ ಅವರ ವಿಚಾರ ಮಾಡಿ ಕ್ಷಮೆ ಕೋರಲು ಕೇಳಿದರು. ಸ್ವಾಭಿಮಾನದ ಕವಿ ಕ್ಷಮೆ ಕೇಳಲು ಒಪ್ಪಲಿಲ್ಲ. ಅದಕ್ಕೆ ಬೇಂದ್ರೆಯವರಿಗೆ ಶಿಕ್ಷೆ ವಿಧಿಸಿ ಬೆಳಗಾವಿಯ ಹಿಂಡಲಗಾ, ಜೇಲಿಗೆ ಕಳಿಸಲಾಯಿತು. ಅಲ್ಲಿ ಬೇಂದ್ರೆಯವರು ತಮ್ಮ ಗೆಳೆಯರಾದ ಜೋಗ ಅವರಿಗೆ ಸಮರ್ಥ ರಾಮದಾಸ ರಚಿಸಿದ "ದಾಸಬೋಧೆ' ಯನ್ನು ಓದಿ ಹೇಳುತ್ತಿದ್ದರು, ಆಗ ಉಳಿದ ಕೈದಿಗಳೂ ಸೇರುತ್ತಿದ್ದರು.

ಬೇಂದ್ರೆಯವರ ಕಕ್ಕಂದಿರಾದ ಬಂಡೋಪಂತರ ಆರೋಗ್ಯ ಹಾಳಾದ ಕಾರಣ ಬೇಂದ್ರೆಯವರು ಜೈಲಿನಿಂದ ಹೊರಬಂದರು. ಧಾರವಾಡ ಹತ್ತಿರದ "ಮುಗದ" ಎಂಬ ಹಳ್ಳಿಯಲ್ಲಿ ನಜರಬಂದಿಯಾಗಿ 9 ತಿಂಗಳುಗಳ ಕಾಲ ಇಡಲಾಯಿತು. ಅವರನ್ನು ಕೆರೆ ಮತ್ತು ದುರ್ಗಾದೇವಿ ಗುಡಿ ಹತ್ತಿರ ಇರುವ ಮನೆಯಲ್ಲಿ ಇಟ್ಟಿದ್ದರು.

ಅವರ ಕಾವ್ಯ ಸೃಷ್ಟಿಗೆ ಇವೆರಡೂ ಪೂರಕವಾಗಿದ್ದವು. ಅವರಿಗೆ ದುರ್ಗಾದೇವಿ ಕನಸಿನಲ್ಲಿ 'ಶೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ" ಎಂಬ ಸಾಲು ನೀಡಿದಳು. ಕಾವ್ಯದೇವತೆಯಿಂದ ಅದನ್ನು ಸ್ವೀಕಾರ ಮಾಡಿದ ಕವಿ ಹತ್ತು ನುಡಿಯ "ಭಾವಗೀತ" ಎಂಬ ನಾಲ್ವತ್ತು ಸಾಲಿನ ಪದ್ಯ ಬರೆದರು. ಐತಿಹಾಸಿಕವಾಗಿ ಈ ಪದ್ಯ ಬಹಳ ಮಹತ್ವವಾದದ್ದು. ನವೋದಯ ಕಾಲಘಟ್ಟದಲ್ಲಿ ಮೂಡಿಬಂದ ಈ ಕವಿತೆ "ಭಾವಗೀತ" ಎಂಬ ಕಾವ್ಯ ಪ್ರಕಾರದ ಸ್ವರೂಪ, ಸಿದ್ಧಾಂತ ಮತ್ತು ದರ್ಶನವನ್ನು ತಿಳಿಸುತ್ತದೆ.

ಬೇಂದ್ರೆಯವರು ತಮ್ಮ ಗೆಳೆಯರ ಗುಂಪಿನ ಸದಸ್ಯರೊಂದಿಗೆ ಸಾಹಿತ್ಯದ ಮಾತುಕತೆಯನ್ನು ಮುಗದದ ದುರ್ಗಾದೇವಿ ಗುಡಿ ಹಾಗೂ ಕೆರೆಯ ದಂಡೆಯ ಮೇಲೆ ಮಾಡುತ್ತಿದ್ದರಂತೆ. ಪ್ರತಿದಿನ ಧಾರವಾಡದಿಂದ ನಾಲ್ಕಾರು ಗೆಳೆಯರು ಅವರ ಭೇಟಿಗೆ ಮುಗದ ಗ್ರಾಮಕ್ಕೆ ಹೋಗುತ್ತಿದ್ದರಂತೆ. ಅವರ ವಾಸ್ತವ್ಯವನ್ನು ಮುಗದದ ಜನರು ತಮ್ಮ ಹಿರಿಯರಿಂದ ಕೇಳಿತಿಳಿದುಕೊಂಡದ್ದನ್ನು ಇಂದಿಗೂ ಮೆಲಕು ಹಾಕುತ್ತಾರೆ.

ಮುಗದಕ್ಕೂ ವರಕವಿ ಬೇಂದ್ರೆಯವರಿಗೂ ಒಂದು ಅವಿನಾಭಾವ ಸಂಬಂಧ. ಈ ಸಂಬಂಧ ಅವರಿರುವವರೆಗೂ ನಿರಂತರವಾಗಿತ್ತೆಂದು ಅವರ ಮಗ ವಾಮನ ಬೇಂದ್ರೆಯವರು ಮತ್ತು ಮುಗದದ ಹಿರಿಯರು ಹೇಳುತ್ತಿದ್ದರು.

ಈ ನೆನಪಿಗಾಗಿ ದಿ 26 (ಶನಿವಾರ) ಸಂಜೆ 5  ಗಂಟೆಗೆ ಮುಗದದ ಕೆರೆ ಮತ್ತು ದುರ್ಗಾದೇವಿ ದೇವಸ್ಥಾನದ ಬಯಲಿನಲ್ಲಿ ಧಾರವಾಡದ ಜಿ ಬಿ ಜೋಶಿ ಮೆಮೋರಿಯಲ್ ಟ್ರಸ್ಟ್, ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್, ಸಕ್ರಿ ಬಾಳಾಚಾರ್ಯ (ಶಾಂತಕವಿ) ಟ್ರಸ್ಟ್, ಮುಗುದದ ಗ್ರಾಮ ಪಂಚಾಯತಿ ಹಾಗೂ ಗ್ರಾಮದ ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ "ಶೃಂಗದ ಬೆನ್ನೇರಿ" ಎಂಬ ಹೆಸರಿನ ವರಕವಿ ದ ರಾ ಬೇಂದ್ರೆ ಸಂಸ್ಮರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಡಾ.ಶ್ಯಾಮಸುಂದರ ಬಿದರಕುಂದಿ ಅವರು ಉದ್ಘಾಟಿಸುತ್ತಾರೆ. ಮುಖ್ಯ ಅತಿಥಿಗಳಾಗಿ ಡಾ.ರಮಾಕಾಂತ ಜೋಶಿ ಅವರು ಉಪಸ್ಥಿತರಿರುತ್ತಾರೆ. ಅತಿಥಿಗಳಾಗಿ  ಕಲ್ಲಪ್ಪ ಹಟ್ಟಿಯವರ,  ಗಿರಿಜಾ ಮುನವಳ್ಳಿ ಮತ್ತು ಎಸ್ ಎಸ್ ಪೀರಜಾದೆ ಉಪಸ್ಥಿತರಿರುತ್ತಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಗದ ಗ್ರಾಮ ಪಂಚಾಯತಿ ಅಧ್ಯಕ್ಷ  ರವಿ ಕಸಮಳಗಿ ಅವರು ವಹಿಸುತ್ತಾರೆ. ನಂತರದಲ್ಲಿ ಇಪ್ಪತ್ತು ಜನ ಗಣ್ಯರು ಬೇಂದ್ರೆಯವರ ಕವಿತೆಗಳನ್ನು ವಾಚಿಸುತ್ತಾರೆ ಮತ್ತು ಹಾಡುತ್ತಾರೆ. ಮುಗದದ ನವಭಾರತ ಕಾನ್ವೆಂಟ್ ಸ್ಕೂಲಿನ ಮಕ್ಕಳು ಬೇಂದ್ರೆಯವರ ಹಾಡಿನೊಂದಿಗೆ ನೃತ್ಯ ರೂಪಕವನ್ನು ಪ್ರಸ್ತುತ ಪಡಿಸುತ್ತಾರೆ. ಕೊನೆಯಲ್ಲಿ ಕವಿ ದ ರಾ ಬೇಂದ್ರೆಯವರ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗುತ್ತದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಎಚ್ ವ್ಹಿ ಕಾಖಂಡಕಿ,ಕ್ಲಿಷ್ಣಾ ಕಟ್ಟಿ,ಸಮೀರ ಜೋಷಿ,ಶಶಿಧರ ನರೇಂದ್ರ ಇದ್ದರು.

ನವೀನ ಹಳೆಯದು

نموذج الاتصال