ಕಾಲಮಿತಿಯಲ್ಲಿ ಅಹವಾಲು ಪರಿಹರಿಸುವ ಭರವಸೆ ನೀಡಿದ ಸಚಿವ ಸಂತೋಷ ಲಾಡ್

ಜಿಲ್ಲಾ ಮಟ್ಟದ 7ನೇ ಜನತಾ ದರ್ಶನ 213 ಅಹವಾಲು ಸ್ವೀಕಾರ
ಕಾಲಮಿತಿಯಲ್ಲಿ ಅಹವಾಲು ಪರಿಹರಿಸುವ ಭರವಸೆ ನೀಡಿದ ಸಚಿವ ಸಂತೋಷ ಲಾಡ್
ಧಾರವಾಡ, ಅಕ್ಟೋಬರ್ 21: ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ 7 ನೇ ಜಿಲ್ಲಾ ಮಟ್ಟದ ಜನತಾದರ್ಶನ ಕಾರ್ಯಕ್ರಮದಲ್ಲಿ ಮಹಾನಗರ ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಂಘ, ಸಂಸ್ಥೆ ಹಾಗೂ ಸಾರ್ವಜನಿಕರಿಂದ ಸುಮಾರು 213 ಅಹವಾಲುಗಳನ್ನು ಸ್ವೀಕರಿಸಲಾಯಿತು.

ಸಾರ್ವಜನಿಕರಿಂದ ಅಹವಾಲು, ಮನವಿಗಳನ್ನು ಸ್ವೀಕರಿಸಿ ಮಾತನಾಡಿದ ಸಚಿವ ಸಂತೋಷ ಲಾಡ ಅವರು, ಸಲ್ಲಿಕೆ ಆಗಿರುವ ಎಲ್ಲ ಅಹವಾಲುಗಳನ್ನು ಕಾಲಮಿತಿಯಲ್ಲಿ ಪರಿಹರಿಸಲು ಕ್ರಮಕೈಗೊಳ್ಳಲಾಗುತ್ತದೆ. ಆದರೆ ಕೆಲವು ಮನವಿಗಳು ಸರಕಾರದ ನೀತಿ, ನಿರೂಪಣೆಗೆ ಒಳಪಡಬೇಕಾಗುತ್ತದೆ. ಮತ್ತು ಕೆಲವು ಕೋರ್ಟ್‌ ವ್ಯಾಜ್ಯಗಳಾಗಿರುತ್ತವೆ. ಇವುಗಳಿಗೆ ಹಿಂಬರಹ ನೀಡಿ, ಕಳಿಸಲಾಗುತ್ತದೆ. ಕೆಲವು ಸಾರ್ವಜನಿಕರು ತಮ್ಮ ವಯಕ್ತಿಕ ಸಮಸ್ಯೆ, ಆಸ್ತಿ ಜಗಳ, ಸಂಬಂಧಿಕರ ಕೇಸ್, ಆಂತರಿಕ ಜಗಳ ಹೀಗೆ ವಿವಿಧ ರೀತಿಯ ಸಮಸ್ಯೆಗಳನ್ನು ಸಲ್ಲಿಸುತ್ತಾರೆ. ಇವುಗಳನ್ನು ಸಹ ಸಹಾನುಭೂತಿಯಿಂದ ಪರಿಶೀಲಿಸಿ, ಸಾಧ್ಯವಾದಷ್ಟು ಅವರ ಸಮಸ್ಯೆಗಳ ಪರಿಹಾರ ದೊರಕಿಸಲು ಸಂಬಂಧಿಸಿದ ಇಲಾಖೆಗಳಿಗೆ ನಿರ್ದೇಶನ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಜಿಲ್ಲಾ ಮಟ್ಟದಲ್ಲಿ ನಡೆದ ಕಳೆದ ಆರು ಜನತಾ ದರ್ಶನ ಕಾರ್ಯಕ್ರಮಗಳಲ್ಲಿಯೇ ಸುಮಾರು 1242 ಅಹವಾಲುಗಳನ್ನು ಮತ್ತು ಇಂದಿನ 7ನೇ ಸಭೆಯಲ್ಲಿ 213 ಅಹವಾಲುಗಳು ಸೇರಿ ಇಲ್ಲಿವರೆಗೆ ಒಟ್ಟು 1455 ಅರ್ಜಿಗಳನ್ನು ಸೀಕರಿಸಲಾಗಿದೆ. ಇದರಲ್ಲಿ ಇಂದು ಸಲ್ಲಿಕೆ ಆಗಿರುವ ಅರ್ಜಿಗಳನ್ನು ಹೊರತುಪಡಿಸಿ, ಹಿಂದಿನ ಎಲ್ಲ ಅಹವಾಲು, ಅರ್ಜಿಗಳನ್ನು ಜಿಲ್ಲಾ ಮಟ್ಟದಲ್ಲಿ ಇತ್ಯರ್ಥಗೊಳಿಸಿ, ಅರ್ಜಿದಾರರಿಗೆ ಹಿಂಬರಹ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿ, ಮಹಾನಗರ ಪೊಲೀಸ್ ಆಯುಕ್ತ  ಎನ್.ಶಶಿಕುಮಾರ, ಜಿಲ್ಲಾ ಪಂಚಾಯತ್ ಸಿಇಓ ಸ್ವರೂಪ ಟಿ.ಕೆ., ಜಿಲ್ಲಾ ಪೊಲೀಸ್‌ ವರಿಷ್ಠಾಕಾರಿ ಡಾ.ಗೋಪಾಲ ಬ್ಯಾಕೋಡ, ಡಿಸಿಪಿ ಮಾನಿಂಗ ನಂದಗಾವಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರು ಉಪಸ್ಥಿತರಿದ್ದರು. 

ಉಪವಿಭಾಗಾಧಿಕಾರಿ ಶಲಂ ಹುಸೇನ್, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಿ.ಎಸ್.ಮುಗನೂರಮಠ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಂತೋಷ ಬಿರಾದರ, ಸ್ಮಾರ್ಟ್ ಸಿಟಿ ಎಂಡಿ ರುದ್ರೇಶ ಗಾಳಿ, ಎಲ್ಲ ತಾಲೂಕುಗಳ ತಹಶೀಲ್ದಾರರು, ತಾ.ಪಂ. ಇಓ ಅವರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನವೀನ ಹಳೆಯದು

نموذج الاتصال