ಧಾರವಾಡ ಜಿಲ್ಲೆಯ ಸ್ವಾತಂತ್ರ್ಯ ಚಳವಳಿ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ.
ಧಾರವಾಡ :
“ಸ್ವಾತಂತ್ರ್ಯ ಯೋಧರ ತ್ಯಾಗವನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕವಿವಿ ಕುಲಸಚಿವರಾದ ಡಾ ಎ.ಚೆನ್ನಪ್ಪ ಅಭಿಪ್ರಾಯಪಟ್ಟರು.
ಅವರು ನಗರದ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯ ಶಾಸ್ತ್ರ ವಿಭಾಗವು ಇತ್ತೀಚೆಗೆ ಕವಿವಿ ಮಾನಸೋಲ್ಲಾಸ ಸಭಾಂಗಣದಲ್ಲಿ 'ಧಾರವಾಡ ಜಿಲ್ಲೆಯ ಸ್ವಾತಂತ್ರ್ಯ ಚಳವಳಿ, ಎಂಬ ವಿಷಯದ ಕುರಿತು ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ನಮಗೆ ದೊರೆತಿರುವ ಸ್ವಾತಂತ್ರ ಹಿರಿಯರ ಆತ್ಮಾಹುತಿಯಿಂದ ಬಂದುದು, ಸ್ವಾತಂತ್ರ್ಯ ಯೋಧರ ತ್ಯಾಗವನ್ನು ದಿನನಿತ್ಯ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದ ಅವರು ಧಾರವಾಡ ಜಿಲ್ಲೆ ದೇಶಕ್ಕೆ ಅನೇಕ ಸ್ವತಂತ್ರ ಸೇನಾನಿಗಳನ್ನು ನೀಡಿದ ಕೀರ್ತಿ ಧಾರವಾಡಕ್ಕೆ ಸಲ್ಲುತ್ತದೆ ಎಂದರು.
ಸಂಕಿರಣದಲ್ಲಿ ತುಮಕೂರು ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕರಾದ ಪ್ರೊ.ಎಲ್.ಪಿ. ರಾಜು ಅವರು ಕರ್ನಾಟಕದ ಉಳಿದೆಲ್ಲ ಭಾಗಗಳಿಗಿಂತ ಧಾರವಾಡದಲ್ಲಿ ನಡೆದ ಸ್ವಾತಂತ್ರö್ಯ ಚಳವಳಿ ಹೆಚ್ಚು ವ್ಯಾಪಕವಾದುದು ಮತ್ತು ತೀವ್ರವಾದುದು ಧಾರವಾಡ ಜಿಲ್ಲೆಯಲ್ಲಿ ನಡೆದ ಸ್ವಾತಂತ್ರ ಚಳವಳಿಯನ್ನು ಕುರಿತು ಹೆಚ್ಚಿನ ಅಧ್ಯಯನ ನಡೆಯಬೇಕಾದುದು ಇಂದಿನ ಅವಶ್ಯಕತೆಯಾಗಿದೆ ಎಂದು ಅಭಿಪ್ರಾಯಿಸಿದರು
ಅತಿಥಿಗಳಾಗಿ ಆಗಮಿಸಿದ್ದ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿಗಳಾದ ಕೃಷ್ಣಮೂರ್ತಿ.ಸಿ ಅವರು ಸ್ವಾತಂತ್ರ್ಯ ಚಳವಳಿಯ ಘಟನಾವಳಿಗಳನ್ನು ಇಂದಿನ ಯುವಕರಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಇತಿಹಾಸ ಮತ್ತು ಪ್ರಾಚ್ಯ ಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ.ಎಸ್.ವಾಯ್ ಮುಗಳಿ ಅವರು ಪ್ರಾಸ್ತಾವಿಕ ಮಾತನಾಡಿದರು.
ವಿಭಾಗದ ಮುಖ್ಯಸ್ಥರಾದ ಪ್ರೊ. ಎಲ್.ಪಿ. ಮಾರುತಿ ಅವರು ಸ್ವಾಗತಿಸಿದರು. ಸಂಕಿರಣದಲ್ಲಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ರಮೇಶ ನಾಯಕ್ ಮತ್ತು ವಿಭಾಗದ ಉಪನ್ಯಾಸಕರಾದ ಡಾ. ಜಗದೀಶ ಅಸೋದೆ, ಡಾ. ಆದಿತ್ಯ ಹೆಗಡೆ, ಡಾ. ಮಾಧುರಿ ಚೌಗುಲೆ ವಿವಿಧ ವಿಷಯಗಳ ಮೇಲೆ ಪ್ರಬಂಧ ಮಂಡಿಸಿದರು.
ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯ ಶಾಸ್ತ್ರ ವಿಭಾಗವು ಇತ್ತೀಚೆಗೆ ಕವಿವಿ ಮಾನಸೋಲ್ಲಾಸ ಸಭಾಂಗಣದಲ್ಲಿ 'ಧಾರವಾಡ ಜಿಲ್ಲೆಯ ಸ್ವಾತಂತ್ರ್ಯ ಚಳವಳಿ, ಎಂಬ ವಿಷಯದ ಕುರಿತು ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಕವಿವಿ ಕುಲಸಚಿವರಾದ ಡಾ.ಎ.ಚೆನ್ನಪ್ಪ ಉದ್ಘಾಟಿಸಿ ಮಾತನಾಡಿದರು.