DHARWAD:ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡಿ; ಸರಕಾರಿ ಯೋಜನೆಗಳ ಸಂಪೂರ್ಣ ಲಾಭ ಬಡವರಿಗೆ, ಅರ್ಹರಿಗೆ ಮುಟ್ಟಬೇಕು

*ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡಿ; ಸರಕಾರಿ ಯೋಜನೆಗಳ ಸಂಪೂರ್ಣ ಲಾಭ ಬಡವರಿಗೆ, ಅರ್ಹರಿಗೆ ಮುಟ್ಟಬೇಕು; ಜಿಲ್ಲೆಯಲ್ಲಿ ಪಂಚ ಗ್ಯಾರಂಟಿಗಳಿಗೆ ಫಲನುಭವಿಗಳಿಂದ ಉತ್ತಮ ಸ್ಪಂದನೆ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ*
ಧಾರವಾಡ (ಕ.ವಾ) ಆ.15: ಜಿಲ್ಲೆಯ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕು. ಸರಕಾರದ ಎಲ್ಲ ಜನ ಕಲ್ಯಾಣ ಕಾರ್ಯಕ್ರಮಗಳು ಬಡವರಿಗೆ , ಅರ್ಹರಿಗೆ ತಲುಪಿಸುವಲ್ಲಿ ಎಲ್ಲರ ಪಾತ್ರ ಮುಖ್ಯವಾಗಿದೆ. ರಾಜ್ಯ ಸರಕಾರದ ಜನಪರ ಯೋಜನೆಗಳು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು, ಫಲಾನುಭವಿಗಳಿಂದ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರು ಹೇಳಿದರು.

ಅವರು ಇಂದು ಬೆಳಿಗ್ಗೆ ಜಿಲ್ಲಾಡಳಿತದಿಂದ ಆರ್.ಎನ್.ಶಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 78ನೇ ಸ್ವಾತಂತ್ರ್ಯೋತ್ಸವದ ರಾಷ್ಟ್ರಧ್ವಜಾರೋಹಣ ನೇರವೇರಿಸಿ, ಸಾರ್ವಜನಿಕರನ್ನು ಉದ್ದೇಶಿಸಿ, ಮಾತನಾಡಿದರು.

ಜನಸಾಮಾನ್ಯರ ಕಲ್ಯಾಣಕ್ಕಾಗಿ ಸರ್ಕಾರ ಹಲವು ಅಭಿವೃದ್ಧಿ ಕಾಮಗಾರಿಗಳು ಹಾಗೂ ಯೋಜನೆಗಳನ್ನು ಕೈಗೊಳ್ಳಲಿದೆ. ಅವುಗಳ ಸಂಪೂರ್ಣ ಲಾಭ ಬಡವರು ಮತ್ತು ಯೋಗ್ಯರಿಗೆ ತಲುಪುವಂತೆ ಮಾಡುವಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದು ಸಚಿವ ಸಂತೋಷ ಲಾಡ ಅವರು ಹೇಳಿದರು.

 ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿರುವ ಗಣ್ಯ ವ್ಯಕ್ತಿಗಳಿಗೆ ನನ್ನ ಅಭಿನಂದನೆಗಳು. ಎಲ್ಲ ಕ್ಷೇತ್ರದ ಸಾಧಕರು, ಪ್ರಮುಖರು ಜಿಲ್ಲೆಯ ಅಭಿವೃದ್ಧಿಗೆ ತಮ್ಮ ಸಲಹೆ ಹಾಗೂ ಸಹಕಾರವನ್ನು ನೀಡುವಂತೆ ತಮ್ಮಲ್ಲಿ ವಿನಂತಿಸುತ್ತೇನೆ ಎಂದು ಸಚಿವರು ತಿಳಿಸಿದರು.