ಮಹಿಳೆಯರ ಸಬಲೀಕರಣದಲ್ಲಿ ಮೂಂಚೂಣಿಯಲ್ಲಿರುವ ಭಾರತ

ಧಾರವಾಡ: ಮಹಿಳೆಯರ ಸಬಲೀಕರಣದಲ್ಲಿ ಮೂಂಚೂಣಿಯಲ್ಲಿರುವ ಭಾರತ ಇನ್ನೂ ಕೆಲವೇ ದಿನಗಳಲ್ಲಿ ವಿಶ್ವದ ಹೊಸ ಶಕ್ತಿಯಾಗಿ
 ಉದಯಿಸಲಿದ್ದು, ಆಗ ಹಿರಿಯಣ್ಣನಂತೆ ಕಾರ್ಯ ನಿರ್ವಹಿಸಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಕಲ್ಲಿದ್ದಲು, ಗಣಿ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. 
ಇಲ್ಲಿನ ವನಿತಾ ಸೇವಾ ಸಮಾಜದ ರೂವಾರಿ, ದಮನಿತ ಮಹಿಳೆಯರ ದನಿಯಾಗಿದ್ದ ಭಾಗೀರಥಿಬಾಯಿ ಪುರಾಣಿಕ ಅವರ ಬದುಕಿನ ಕುರಿತು ಬೆಳಕು ಚೆಲ್ಲುವ ಮೂರು ಕೃತಿಗಳ ಲೋಕಾರ್ಪಣೆ ಹಾಗೂ ಸಂಸ್ಥೆಯ ೯೬ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. 
ದೇಶದ ರಾಜಧಾನಿಯಲ್ಲಿ ಕಳೆದ ತಿಂಗಳು ೨೬ರಂದು ನಡೆದ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ನಾರಿಶಕ್ತಿ ಅನಾವರಣಗೊಂಡಿದ್ದು, ಅದನ್ನು ಕಂಡು ಸ್ವತಃ ಫ್ರಾನ್ಸ್ ಅಧ್ಯಕ್ಷರೇ ಚಕಿತರಾಗಿದ್ದಾರೆ. ಅಷ್ಟರಮಟ್ಟಿಗೆ ಭಾರತದಲ್ಲಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ೧೯೨೦ರಲ್ಲಿ ಇಂದಿನAತೆ ಯಾವುದೇ ರೀತಿಯ ಅವಕಾಶಗಳು ಇಲ್ಲದೇ ಇರುವಾಗ ಜನ್ಮವೆತ್ತಿದ್ದ ಮಹಾತಾಯಿ ಭಾಗೀರಥಿಬಾಯಿ ಅವರ ಜೀವನಕಥೆ ಓದಿದಾಗ ಆರಂಭದಲ್ಲಿ ಕಣ್ಣಲ್ಲಿ ನೀರು ಜಿನುಗಿದರೆ ನಂತರದ ಭಾಗದಲ್ಲಿ ಸ್ಫೂರ್ತಿಯ ಸೆಲೆಯಾಗುತ್ತಾರೆ. ಏನು ಅರಿಯದ ೮ನೇ ವರ್ಷದಲ್ಲಿ ಮದುವೆಯಾದ ಪುರಾಣಿಕರು ೯ನೇ ವರ್ಷದಲ್ಲಿ ವಿಧವೆಯಾಗಿ ಪಡಬಾರದ ಕಷ್ಟಗಳನ್ನು ಅನುಭವಿಸಿ ನಂತರ ಧಾರವಾಡಕ್ಕೆ ಬಂದು ತನ್ನಂತೆ ಇದ್ದ ಸಾವಿರಾರು ಮಹಿಳೆಯರಿಗೆ ದಾರಿದೀಪವಾಗುವ ಮೂಲಕ ಹೊಸ ಮನ್ವಂತರಕ್ಕೆ ಕಾರಣೀಭೂತರಾಗಿದ್ದಾರೆ. ಆದರೆ ಈ ಸ್ಪೂರ್ತಿದಾಯಕ ಕಥೆ ಜನ ಸಾಮಾನ್ಯರಿಗೆ ತಲುಪದೆ ಇರುವುದು ದುರಂತ. ಈಗ ಸಂಸ್ಥೆ ಅವರ ಜೀವನ ಕಥೆಯನ್ನು ಗ್ರಂಥರೂಪಕ್ಕೆ ಇಳಿಸಿರುವುದು ಹಾಗೂ ಅದನ್ನು ಆಂಗ್ಲಭಾಷೆಗೂ ತರ್ಜುಮೆ ಮಾಡಿರುವುದು ಸಂತಸ ಮೂಡಿಸಿದೆ. ಏನು ಅರಿಯದ ವಯಸ್ಸಿನಲ್ಲಿ ಆ ತಾಯಿ ಪಟ್ಟ ಕಷ್ಟಗಳನ್ನು ಇಂದಿನ ದಿನಗಳಲ್ಲಿ ಕಲ್ಪನೆ ಮಾಡಿಕೊಳ್ಳಲು ಸಹ ಸಾಧ್ಯವಿಲ್ಲ. ಕಾರಣ ಅಂದಿನ ಸಮಾಜಕ್ಕೂ ಇಂದಿನ ಸಮಾಜಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಈ ವ್ಯತ್ಯಾಸಗಳಾಗಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಹಿಳಾ ಸಬಲೀಕರಣಕ್ಕೆ ನಾಂದಿಹಾಡಿದ ಭಾಗೀರಥಿಬಾಯಿ ಅವರನ್ನು ಮನೆಮನೆಗೆ ತಲುಪಿಸುವ ಅಗತ್ಯವಿದ್ದು ಮುಂದಿನ ದಿನಗಳಲ್ಲಿ ಈ ಭಾಗದ ಶಾಲಾ ವಿದ್ಯಾರ್ಥಿಗಳಿಗೆ ಈ ಕುರಿತು ಭಾಷಣ ನಿಬಂಧ ಸ್ಪರ್ಧೆ ಏರ್ಪಡಿಸಿದಲ್ಲಿ ಅದಕ್ಕೆ ಸೂಕ್ತ ಬಹುಮಾನವನ್ನು ತಾವೇ ಕೊಡುವುದಾಗಿ ಘೋಷಿಸಿದರು.  ಇಂದು ಎಲ್ಲವೂ ಇದ್ದು ಸಹ ಕೆಲವರು ಸಣ್ಣಪುಟ್ಟ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಕೇವಲ ೯ನೇ ವರ್ಷದಲ್ಲಿ ವಿಧವೆಯಾಗಿ ನಂತರ ನಿಯಮದಂತೆ ಕೂದಲು ತೆಗೆಯಿಸಿಕೊಂಡು, ನಂತರ ಪೋಷಕರ ನಿಧನದಿಂದಾಗಿ ಅನಾಥವಾದ ಸಹೋದರ,  ಸಹೋದರಿಯನ್ನು ಸಹ ನೋಡಿಕೊಂಡು ಜೀವನ ಸಾರ್ಥಕಗೊಳಿಸಿದ ಅವರು ಜೀವನ ನಿಜಕ್ಕೂ ನಮಗೆ ಅನುಕರಣಿಯವಾಗಿದ್ದು, ಅಂದಿನ ದಿನಗಳಲ್ಲಿಯೇ ಮೂಢನಂಬಿಕೆ ಹಾಗೂ ಮಹಿಳಾ ಶಿಕ್ಷಣದ ಸಸಿ ನೆಡುವುದರ ಮೂಲಕ ಲಕ್ಷಾಂತರ ಜನರಿಗೆ ದಾರಿದೀಪವಾಗಿದ್ದಾರೆ. ಅಂತಹ ಮಹನೀಯರನ್ನು ಪಡೆದ ನಾವೇ ಧನ್ಯರು ಎಂದರು.
ಪುಸ್ತಕ ಲೋಕಾರ್ಪಣೆ ಮಾಡಿದ ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಈ ರೀತಿಯ ಕಾರ್ಯಕ್ರಮಗಳಲ್ಲಿ ಮಹನೀಯರ ಸಾಧನೆ ಕುರಿತು ಮಾತನಾಡಿದರೆ ಸಾಲದು. ಬದಲಾಗಿ, ಅವರಂತೆ ನಾವು ಸಹ ಯಾವ ರೀತಿಯಲ್ಲಿ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯ ಎನ್ನುವುದನ್ನು ಚಿಂತಿಸಬೇಕಿದೆ. ಪುಸ್ತಕಗಳನ್ನು ಓದಿ ಸುಮ್ಮನಾದರೆ ಅದರಿಂದ ಆಗುವ ಲಾಭವೇನು ಇಲ್ಲ. ಬದಲಾಗಿ ಅವರಂತೆ ನಮ್ಮ ಜವಾಬ್ದಾರಿ ಏನು ಎಂಬುದನ್ನು ಅರಿತು ಆ ಕಡೆ ಹೆಜ್ಜೆಗಳನ್ನು ಹಾಕಬೇಕಿದೆ. ಭಾಗೀರಥಿಬಾಯಿ ಪುರಾಣಿಕರು ಮಾಡಿರುವ ಕೆಲಸದಿಂದ ಪ್ರೇರೆಪಣೆಗೊಂಡು ನಾವುಗಳು ಸಹ ತನುಮನಧನದಿಂದ ದಮನಿತರ ಧ್ವನಿಯಾದಾಗ ಮಾತ್ರವೇ ಈ ರೀತಿಯ ಕಾರ್ಯಕ್ರಮಗಳಿಗೆ ಅರ್ಥ ಬರುತ್ತದೆ. ಜೊತೆಗೆ ಅವರ ಸಾಧನೆ ಹಾಗೂ ಜೀವನದ ಕುರಿತು ಪ್ರಚಾರವನ್ನು ಸಹ ಕೈಗೊಳ್ಳುವ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಗದಗ ಶಿವಾನಂದ ಮಠದ ಶ್ರೀ ಸದಾಶಿವಾನಂದ ಸ್ವಾಮಿಗಳು ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಟಿ.ಎಸ್.ಪಾಟೀಲ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ, ಗ್ರಂಥ ರಚನೆಕಾರರಾದ ಸಿಯು ಬೆಳ್ಳಕ್ಕಿ, ಡಾ. ಆನಂದ ಪಾಟೀಲ, ಮಾಯಿ ಪುಸ್ತಕದ ಆಂಗ್ಲ ಭಾಷೆಯ ಅನುವಾದಕರಾದ ಅರುಣಕುಮಾರ ಹಬ್ಬು, ಡಾ. ಚಿ. ವಿಎಸ್‌ವಿ ಪ್ರಸಾದ್, ರಾಧಿಕಾ ಕುಲಕರ್ಣಿ, ರವಿ ಎಲಿಗಾರ, ಅಶೋಕನಾಯಕ, ಅರುಣ ಶಹಾಪುರ, ಡಾ. ಶರಣಮ್ಮ ಗೋರೆಬಾಳ, ದಾನಪ್ಪ ಕಬ್ಬೇರ, ಸುನಂದಾ ಹೆಗಡೆ, ಪರಿಮಳ ಶೆಟ್ಟಿ, ರಾಜೇಶ್ವರಿ ಅಳಗವಾಡಿ, ಸೇರಿದಂತೆ ಇತರರು ಇದ್ದರು.   

ಫೋಟೋ: ವನಿತಾ ಸೇವಾ ಸಮಾಜದ ರೂವಾರಿ, ಭಾಗೀರಥಿಬಾಯಿ ಪುರಾಣಿಕ ಅವರ ಬದುಕಿನ ಕುರಿತು ಬೆಳಕು ಚೆಲ್ಲುವ ಮೂರು ಕೃತಿಗಳ ಲೋಕಾರ್ಪಣೆ ಹಾಗೂ ಸಂಸ್ಥೆಯ 96 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಕಲ್ಲಿದ್ದಲು, ಗಣಿ ಸಚಿವ ಪ್ರಹ್ಲಾದ್ ಜೋಶಿ ಉದ್ಘಾಟಿಸಿದರು.
ನವೀನ ಹಳೆಯದು

نموذج الاتصال