ಧಾರವಾಡದ ದಡ್ಡಿಕಮಲಾಪುರದಲ್ಲಿ ಇರುವ ಯೋಗ ಮತ್ತು ನೈಸರ್ಗಿಕ ಚಿಕಿತ್ಸಾಲಯದಲ್ಲಿ ಎಐಡಿಎಸ್ಓ ವತಿಯಿಂದ ವಲಯ ಮಟ್ಟದ ವಿದ್ಯಾರ್ಥಿಗಳ ಶಿಬಿರ

ವಲಯ ಮಟ್ಟದ ವಿದ್ಯಾರ್ಥಿ ಶಿಬಿರ: ಎಐಡಿಎಸ್ಓ
ಧಾರವಾಡ  : 
ಧಾರವಾಡದ ದಡ್ಡಿಕಮಲಾಪುರದಲ್ಲಿ ಇರುವ ಯೋಗ ಮತ್ತು ನೈಸರ್ಗಿಕ ಚಿಕಿತ್ಸಾಲಯದಲ್ಲಿ ಎಐಡಿಎಸ್ಓ ವತಿಯಿಂದ ವಲಯ ಮಟ್ಟದ ವಿದ್ಯಾರ್ಥಿಗಳ ಶಿಬಿರವನ್ನು ಆಯೋಜನೆ ಮಾಡಲಾಯಿತು. ಧಾರವಾಡ, ಬೆಳಗಾವಿ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಯ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡರು. ನವೆಂಬರ್ 18 ಮತ್ತು 19ರಂದು ನಡೆಯುತ್ತಿರುವ ಶಿಬಿರದ ಮೊದಲನೇ ದಿನದ ಗೋಷ್ಠಿಯನ್ನು ಉದ್ಘಾಟಿಸಿ ಎಐಡಿಎಸ್ಓ ರಾಜ್ಯ ಉಪಾಧ್ಯಕ್ಷರಾದ ಅಭಯಾ ದಿವಾಕರ್ ಅವರು ಮಾತನಾಡಿದರು. 'ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ರಾಜಕೀಯ ಸೇರಬೇಕು, ಏಕೆ?' ಎಂಬ ವಿಷಯದ ಕುರಿತು ಮಾತನಾಡಿದ ಅವರು ಹಸಿವು, ಬಡತನ, ನಿರುದ್ಯೋಗ, ವೇಶ್ಯಾವಾಟಿಕೆ ಸೇರಿದಂತೆ ಇಂದಿನ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದರು. ಬ್ರಿಟಿಷರ ಕ್ರೂರ  ದಬ್ಬಾಳಿಕೆ ವಿರುದ್ಧ ರಾಜಿರಹಿತ ಹೋರಾಟ ನಡೆಸಿದ ಭಗತ್ ಸಿಂಗ್, ನೇತಾಜಿ ಮುಂತಾದ ಕ್ರಾಂತಿಕಾರಿಗಳು ಕನಸು ಕಂಡಿದ್ದು ಹಸಿವು, ಬಡತನ ಮುಂತಾದ ಸಾಮಾಜಿಕ ಪಿಡುಗುಗಳಿಂದ ವಿಮುಕ್ತಿ ಹೊಂದಿದ್ದ ಒಂದು ಸಮಾನತೆಯ ಸಮಾಜಕ್ಕಾಗಿ. ಅವರ ಕನಸುಗಳನ್ನೆಲ್ಲ ಗಾಳಿಗೆ ತೂರಿರುವ ಇಂದಿನ ಆಳ್ವಿಕರು ಒಂದಲ್ಲ ಒಂದು ಜನ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಲೇ ಇದ್ದಾರೆ. ಹಸಿವು ಎಂಬ ಮಹಾಮಾರಿಯು ಕೊರೊನಾಗಿಂತಲೂ ವ್ಯಾಪಕವಾಗಿ ಹರಡಿ ಇಂದು ನಮ್ಮ ದೇಶದ ಜನರನ್ನು ಇಂದು ಪೀಡಿಸುತ್ತಿದೆ. ಅಪೌಷ್ಟಿಕತೆಯಿಂದ ಪ್ರತಿದಿನ 5000ಕ್ಕೂ ಹೆಚ್ಚು ಮಕ್ಕಳು ಹುಳುಗಳ ರೀತಿ ಸಾವಿಗೀಡಾಗುತ್ತಿದ್ದಾರೆ. ಪಟಾಕಿ ಕಾರ್ಖಾನೆ ಮತ್ತು ಅಪಾಯಕಾರಿ ಗಣಿಗಳಲ್ಲಿ ಹಲವಾರು ಮಕ್ಕಳು ಜೀವ ಕಳೆದುಕೊಳ್ಳುತ್ತಿದ್ದಾರೆ. ದೇಶಕ್ಕೆ ಅನ್ನ ನೀಡುವ ರೈತ ಸಾಲದ ಬಾಧೆಗೆ ಸಿಲುಕಿ ಆತ್ಮಹತ್ಯೆಗೆ ಮೊರೆ ಹೋಗುತ್ತಿದ್ದಾನೆ.
                ದೇಶದ ಪರಿಸ್ಥಿತಿಯು ಹೀಗಿರುವಾಗ ಇದನ್ನು ಬದಲು ಮಾಡುವ ಜವಾಬ್ದಾರಿಗಳನ್ನು ಇಂದಿನ ವಿದ್ಯಾರ್ಥಿಗಳು ತೆಗೆದುಕೊಳ್ಳಬೇಕಾಗಿದೆ. ಸಾಮಾಜಿಕ ಬದಲಾವಣೆಯ ಈ ಹಾದಿಯಲ್ಲಿ ಭಗತ್ ಸಿಂಗ್ ನೇತಾಜಿ ಚಂದ್ರಶೇಖರ ಆಜಾದ್ ಮುಂತಾದ ಕ್ರಾಂತಿಕಾರಿಗಳು ನಮಗೆ ದಾರಿ ದೀಪವಾಗಿದ್ದಾರೆ. ತಮ್ಮ ಕುಟುಂಬ ಮತ್ತು ವೈಯಕ್ತಿಕ ಆಸೆ ಆಕಾಂಕ್ಷಿಗಳನ್ನು ಪಕ್ಕಕ್ಕಿಟ್ಟು ದೇಶದ ಸ್ವಾತಂತ್ರ್ಯ ಯಜ್ಞಕ್ಕೆ ತಮ್ಮನ್ನೇ ಅರ್ಪಿಸಿಕೊಂಡ ಕ್ರಾಂತಿಕಾರಿಗಳ ಜೀವನದಿಂದ ನಾವು ಪಾಠ ಕಲಿಯಬೇಕು. ಜಾತಿ ಧರ್ಮಗಳ ಅಜ್ಞಾನಕ್ಕೆ ಜನರನ್ನು ತಳ್ಳಿ ಅಧಿಕಾರವನ್ನು ಕಬ್ಬಳಿಸಿಕೊಂಡಿರುವ ಇಂದಿನ ಆಳ್ವಿಕರ ವಿರುದ್ಧ ಜನರನ್ನು ಸಂಘಟಿಸಿ ಕ್ರಾಂತಿಕಾರಿಗಳ ಹೋರಾಟದ ರಾಜಕೀಯವನ್ನು ವಿದ್ಯಾರ್ಥಿಗಳು ಎತ್ತಿ ಹಿಡಿಯಬೇಕು ಎಂದು ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸಂಘಟನೆಯ ಇನ್ನೋರ್ವ ರಾಜ್ಯ ಉಪಾಧ್ಯಕ್ಷರಾದ ಹಣಮಂತು ಎಚ್ ಎಸ್, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಪೂಜಾ ನಂದಿಹಳ್ಳಿ, ಗಂಗರಾಜು ಅಲ್ಲಳ್ಳಿ ಮತ್ತು ಕಚೇರಿ ಕಾರ್ಯದರ್ಶಿಯಾದ ಮಹಾಂತೇಶ್ ಬಿಳೂರ್, ಶಶಿಕಲಾ ಮೇಟಿ ಸೇರಿದಂತೆ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ:9945564891
ನವೀನ ಹಳೆಯದು

نموذج الاتصال