ಗುಣಮಟ್ಟದ ಶಿಕ್ಷಣಕ್ಕೆ-ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಗೆ ಚಾಲನೆ.
ಧಾರವಾಡ 18 : ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸಿರುತ್ತದೆ. ಇದು ಸಾಧ್ಯವಾಗಬೇಕಾದರೆ ಪೌಷ್ಟಿಕ ಆಹಾರ ಅತ್ಯವಶ್ಯಕ. ಸರಕಾರಿ ಶಾಲೆಗೆ ಬರುವ ಬಹುತೇಕ ಮಕ್ಕಳು ಕೂಲಿ ಕಾರ್ಮಿಕರು ಹಾಗೂ ಬಡ ಕುಟುಂಬದ ಹಿನ್ನೆಲೆಯಿರುವ ಮಕ್ಕಳಾಗಿರುತ್ತಾರೆ. ಇಂತಹ ಮಕ್ಕಳಲ್ಲಿ ಪೌಷ್ಠಿಕತೆಯನ್ನು ಹೆಚ್ಚಿಸುವ ಅದರ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ಸದುದ್ದೇಶದಿಂದ ಸರ್ಕಾರ ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ (ಮಧ್ಯಾಹ್ನ ಉಪಹಾರ ಯೋಜನೆ ) ವನ್ನು ಅನುಷ್ಠಾನಕ್ಕೆ ತಂದಿದೆ ಎಂದು ಜಿಲ್ಲಾ ಪಂಚಾಯತ ಧಾರವಾಡದ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ (ಮಧ್ಯಾಹ್ನ ಉಪಹಾರ ಯೋಜನೆ) ಶಿಕ್ಷಣಾಧಿಕಾರಿಗಳಾದ ರೂಪಾ ಪುರಮಕರ ಹೇಳಿದರು.
ಅವರು ಧಾರವಾಡ ಶಹರದ ಹೆಬ್ಬಳ್ಳಿ ರಸ್ತೆಯಲ್ಲಿರುವ ದುರ್ಗಾ ಕಾಲೋನಿ ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಅಕ್ಷರ ದಾಸೋಹದಡಿಯಲ್ಲಿ ಶಾಲಾ ಮಕ್ಕಳಿಗೆ ಆಹಾರ ಕೊಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಯೋಜನೆಯಡಿ ಹಾಲು, ಪೌಷ್ಟಿಕಾಂಶಯುಕ್ತ ಮಧ್ಯಾಹ್ನದ ಬಿಸಿ ಊಟ ,ಪ್ರಸ್ತುತ ವರ್ಷ ಜಾರಿಗೆ ಬಂದಿರುವ ಪೂರಕ ಪೌಷ್ಟಿಕ ಅಂಶಗಳಾದ ಮೊಟ್ಟೆ ,ಬಾಳೆಹಣ್ಣು ,ಶೇಂಗಾ ಚಿಕ್ಕಿ ಕೊಡುವ ಮಹತ್ಕಾರ್ಯ ಮಾಡುತ್ತಿದೆ .ಈಗ ಪ್ರಾಯೋಗಿಕವಾಗಿ ಆಯ್ದ ಸರ್ಕಾರಿ ಕಿರಿಯ ಪ್ರಾಥಮಿಕ ಕೆಲವು ಶಾಲಾ ಮಕ್ಕಳಿಗೆ ಚಪಾತಿ -ಬಾಜಿ ಕೊಡುವ ಯೋಜನೆಯನ್ನು ಜಾರಿಗೆ ತರುತ್ತಿದ್ದೇವೆ .ಈ ಜವಾಬ್ದಾರಿಯನ್ನು ಸರಕಾರದ ಅನುದಾನದಲ್ಲಿ ಅಕ್ಷಯಪಾತ್ರೆ ಫೌಂಡೇಶನ್ ರಾಯಪುರ ಧಾರವಾಡದವರು ಅಚ್ಚುಕಟ್ಟತನದಿಂದ ನಿರ್ವಹಣೆ ಮಾಡುತ್ತಿದ್ದಾರೆ .ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತಿಯಲ್ಲಿರುವ ಎಲ್ಲ ಮಹನೀಯರನ್ನು ಸ್ವಾಗತಿಸುತ್ತಾ, ಪ್ರಸ್ತಾವಿಕವಾಗಿ ಧಾರವಾಡ ತಾಲೂಕ ಪಂಚಾಯತ್ ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ (ಮಧ್ಯಾಹ್ನ ಉಪಹಾರ ಯೋಜನೆ )ಯ ಸಹಾಯಕ ನಿರ್ದೇಶಕರಾದ ಲಲಿತಾ ಹರ್ಲಾಪೂರರವರು ಮಾತನಾಡಿ, ಧಾರವಾಡ ಶಹರದಲ್ಲಿ ಅತ್ಯುತ್ತಮ ಶಾಲೆಯಾದ ಈ ದುರ್ಗಾ ಕಾಲೋನಿ ಶಾಲೆಯು ಸರ್ಕಾರದ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರುವ ಕೆಲಸ ಮಾಡುತ್ತಾ ಬಂದಿದೆ. ಮಕ್ಕಳಿಗೆ ಸರ್ಕಾರದಿಂದ ಕೊಡ ಮಾಡುವ ಎಲ್ಲ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಇಲ್ಲಿಯ ಶಾಲಾ ಶಿಕ್ಷಕರು, ಎಸ್ ಡಿ ಎಂ ಸಿ ಪದಾಧಿಕಾರಿಗಳು ,ಅಡುಗೆ ಸಹಾಯಕರು ,ಬಹಳ ಕ್ರಿಯಾಶೀಲತೆಯಿಂದ
ಕಾರ್ಯನಿರ್ವಹಿಸುತ್ತಿದ್ದಾರೆ.ಇವರು ಸ್ವಚ್ಛತೆಗೆ ಹೆಚ್ಚು ಮಹತ್ವವನ್ನು ಕೊಡುತ್ತಾ ಬಂದಿದ್ದಾರೆ. ಎಂದರು.
ಅಕ್ಷಯ ಪಾತ್ರೆ ಫೌಂಡೇಶನ ರಾಯಪುರ ಧಾರವಾಡ ಸರಕಾರದ ನೀತಿ ನಿಯಮದಂತೆ ಸ್ವಚ್ಛತೆಗೆ ಮತ್ತು ಪೌಷ್ಠಿಕತೆಗೆ ಹೆಚ್ಚು ಮಹತ್ವ ನೀಡುತ್ತಾ ಕಾರ್ಯನಿರ್ವಹಿಸುತ್ತಿದೆ. ಬಹು ಬೇಡಿಕೆಯ ಚಪಾತಿ ಬಾಜಿ ಯೋಜನೆಯ ಜವಾಬ್ದಾರಿಯನ್ನು ತೆಗೆದುಕೊಂಡು ಪ್ರಾಯೋಗಿಕವಾಗಿ ಒಂದರಿಂದ ಐದನೇ ತರಗತಿಯ ಆಯ್ದ ಕೆಲವು ಶಾಲಾ ಮಕ್ಕಳಿಗೆ ಕೊಡುವ ಕಾರ್ಯ ಪ್ರಾರಂಭಿಸಿದ್ದೇವೆ. ಇದನ್ನು ನೋಡಿಕೊಂಡು ಮುಂದೆ ಎಲ್ಲಾ ಸಿದ್ಧತೆಯೊಂದಿಗೆ ಉಳಿದ ಎಲ್ಲಾ ತರಗತಿಯ ಎಲ್ಲಾ ಶಾಲೆಗೆ ವಿಸ್ತರಿಸುವ ಕೆಲಸ ಮಾಡಲಿದ್ದೇವೆ. ಎಂದು ಅಕ್ಷಯಪಾತ್ರೆ ಫೈನಾನ್ಸ್ ಮ್ಯಾನೇಜರ್ ವಿದ್ಯಾ ಕುಲಕರ್ಣಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಬೆಳಿಗ್ಗೆ ಶಾಲೆಗೆ ಬಂದ ಮಕ್ಕಳು ಸಾಯಂಕಾಲದವರೆಗೆ ಹೆಚ್ಚು ಸಮಯವನ್ನು ಶಾಲೆಯಲ್ಲಿಯೇ ಕಳೆಯುತ್ತಾರೆ .ಜೊತೆಗೆ ವಾರದ ಐದು ದಿನಗಳು ಹಾಗೂ ಶನಿವಾರದ ಅರ್ಧ ದಿನ ಶಾಲೆಯಲ್ಲಿಯೇ ಇರುವುದರಿಂದ ಬೆಳೆಯುವ ಮಕ್ಕಳು ಕೇವಲ ಅನ್ನ ಮಾತ್ರ ಉಂಡು ಇರುವುದು ಕಷ್ಟ ಸಾಧ್ಯ .ಮನೆಯಲ್ಲಿದ್ದರೆ ಮೂರ್ನಾಲ್ಕು ಸಲ ಊಟ ಮಾಡ್ತಾರೆ. ಅದಕ್ಕಾಗಿ ಅನ್ನ ಸಾಂಬರ್ ಜೊತೆಗೆ ಚಪಾತಿ -ಭಾಜಿ ನೀಡುವುದು ಅತ್ಯವಶ್ಯಕವಾಗಿದೆ .ಈ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು 7ನೇ ವಾರ್ಡಿನ ಕಾರ್ಪೊರೇಟರ್ ಯಾದ ದೀಪಾ ನೀರಲಕಟ್ಟಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ಅಕ್ಷಯ ಪಾತ್ರೆ ಅಕೌಂಟೆನ್ಸ್ ಸುನಿತಾ ಕುಲಕರ್ಣಿ, ಗೀತಾ ಪಿ, ಪಿ ಆರ್ ಓ ರಾಜೇಶ್, ಡಿಸ್ಟ್ರಿಬ್ಯೂಟರ್ ಮ್ಯಾನೇಜರ್ ಕಿರಣ ಕರಿಗೌಡರ, ಮಹಾಂತೇಶ ,ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ರೇಣುಕಾ ಜಗ್ಗಲ, ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಲ್ಲಿಕ್ ಅಹ್ಮದ್ ಬಿಸ್ತಿ, ಉಪಾಧ್ಯಕ್ಷರಾದ ವನಮಾಲಾ ತಿಟ್ಟೆನ್ನವರ, ಸದಸ್ಯರಾದ ಅಶೋಕ ಗರಗದ, ಪಾಲಕರಾದ ರಮೇಶ ಸಾಳುಂಕೆ, ಶ್ರೀಕಾಂತ ತಿಟ್ಟೆನ್ನವರ, ಶಾಲಾ ಪ್ರಧಾನ ಗುರುಗಳಾದ ಎನ್.ಬಿ.ದ್ಯಾಪೂರ, ಶಾಲಾ ಶಿಕ್ಷಕಿ ಮಂಜುಳಾ ಹರ್ಲಾಪೂರ ,ಅಡುಗೆ ಸಹಾಯಕಿ ಶ್ರೀಮತಿ ನಿರ್ಮಲಾ ಕಲಕಣಿ, ಮುಂತಾದರು ಉಪಸ್ಥಿತರಿದ್ದರು. ಶ್ರೀಮತಿ ಲಲಿತಾ ಹರ್ಲಾಪೂರ ರವರು ಸ್ವಾಗತಿಸಿದರು. ಶ್ರೀಮತಿ ರೇಣುಕಾ ಜಗ್ಗಲ ವಂದಿಸಿದರು . ಎನ್.ಬಿ.ದ್ಯಾಪೂರ ನಿರೂಪಿಸಿದರು.
Subscrib our STAR 74 NEWS channel