*ಶಿಕ್ಷಣ ಕೇವಲ ಅಂಕ ಗಳಿಕೆ ಮಾರ್ಗವಲ್ಲ; ಅದು ವ್ಯಕ್ತಿತ್ವದ ಕೈಗನ್ನಡಿಯಾಗಿದೆ: ತರಬೇತಿದಾರ ಮಹೇಶ ಮಾಶಾಳ.*
ಧಾರವಾಡ (ಕರ್ನಾಟಕ ವಾರ್ತೆ) ಜು.01: ಶಿಕ್ಷಣವು ಮನುಷ್ಯನಲ್ಲಿ ಅಡಗಿರುವ ಶಕ್ತಿಯನ್ನು ಬಡಿದೆಬ್ಬಿಸುತ್ತದೆ. ಅದು ಕೇವಲ ಅಂಕ ಗಳಿಕೆಯ ಮಾರ್ಗವಲ್ಲ ಬದಲಾಗಿ ವ್ಯಕ್ತಿತ್ವದ ಕೈಗನ್ನಡಿಯಾಗಿದೆ. ಶಿಕ್ಷಕರು ವಿದ್ಯಾಥಿಗಳನ್ನು ಪ್ರೇರಣಾದಾಯಕವಾಗ ಮಾರ್ಗದರ್ಶನ ಮಾಡುವುದು ಅವಶ್ಯಕ ಎಂದು ಮೈಂಡ್‌ಸೆಟ್ ತರಬೇತುದಾರ ಹಾಗೂ ಚಿಂತಕ ಮಹೇಶ ಮಾಶಾಳ ಹೇಳಿದರು.
ಅವರು, ನಗರದ ಜೆಎಸೆಸ್ ಸನ್ನಿಧಿ ಸಭಾಂಗಣದಲ್ಲಿ ಇಂದು (ಜು.01) ಬೆಳಿಗ್ಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ ಬದಲಾವಣೆಯ ಶಿಕ್ಷಣ; ಭವಿಷ್ಯದ ನಿರ್ಮಾಣ 2025-26 ರ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮುಖ್ಯಗುರುಗಳು ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣೆ ಸಮಿತಿ ಆಡಳಿತ ಮಂಡಳಿ ಅಧ್ಯಕ್ಷ/ ಕಾರ್ಯದರ್ಶಿಗಳಿಗೆ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಸ್ತುತವಾಗಿ ಮಾನವೀಯ ಮೌಲ್ಯಗಳು ಕಡಿಮೆಯಾಗಿದೆ. ನಾವು ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡುವ ಮನೋಭಾವ ಕಡಿಮೆಯಾಗುತ್ತಿದೆ. ಶಿಕ್ಷಕರಾದವರು ಜವಾಬ್ದಾರಿಯುತ ಸ್ಥಾನವನ್ನು ನಿರ್ವಹಣೆ ಮಾಡುವ ಸವಾಲು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ತಲೆಯಲ್ಲಿ ಕಲಿಸುವ ಹುಚ್ಚು ಮತ್ತು ಎದೆಯಲ್ಲಿ ಸಾಧನೆಯ ಕಿಚ್ಚಿಟ್ಟುಕೊಂಡು ಪ್ರಾಮಾಣಿಕವಾಗಿ ಮುನ್ನುಗ್ಗಿದರೇ ಯಶಸ್ಸುಗಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಪ್ರತಿಯೊಬ್ಬರಿಗೂ ಕಣ್ಣೀರು, ಬಡತನ, ಅವಮಾನ ಮತ್ತು ಸೋಲು ಎಂಬುದು ಜೀವನದ ಪಾಠ ಕಲಿಸುತ್ತವೆ. ಮುಂದೆ ಒಂದು ದಿನ ಸಾಧನೆಗೆ ಪೂರಕವಾಗುತ್ತದೆ. ಗುರುಕುಲ ಶಿಕ್ಷಣ ಪದ್ಧತಿಯಲ್ಲಿರುವ ಉತ್ತಮ ಆದರ್ಶ ಮೌಲ್ಯಗಳನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳಬೇಕು. ಮನುಷ್ಯನ ಆಲೋಚನೆ ಅನುಗುಣವಾಗಿ ವ್ಯಕ್ತಿ, ವ್ಯಕ್ತಿತ್ವ ಮಾರ್ಪಾಡು ಆಗಿರುತ್ತದೆ. ಅದನ್ನು ಸರಿಯಾಗಿ ಮಾರ್ಗದಲ್ಲಿ ತೆಗೆದುಕೊಂಡು ಹೋಗವ ಅವಶ್ಯಕತೆ ಇದೆ. ಗುರುವಿನ ಮೌಲ್ಯಗಳು ಸಮಾಜದಲ್ಲಿ ಕಡಿಮೆಯಾಗದಂತೆ ಎಚ್ಚರ ವಹಿಸಿ ವಿದ್ಯಾರ್ಥಿಗಳು ಸರಿಯಾದ ಮಾರ್ಗದಲ್ಲಿ ನಡೆಯುವಂತಹ ಶಿಕ್ಷಣವನ್ನು ನೀಡಬೇಕು ಎಂದು ತಿಳಿಸಿದರು.
ಶಾಲೆಯಲ್ಲಿ ಮಕ್ಕಳಿಗೆ ಪ್ರೌಢಾವಸ್ಥೆಯ ಬಂದ ನಂತರ ಅವರ ದೇಹದಲ್ಲಿ ಆಗುವ ಬದಲಾವಣೆಗಳ ಬಗ್ಗೆ ತಿಳಿಸುವುದು ಶಿಕ್ಷಕರ ಕರ್ತವ್ಯವಾಗಿದೆ. ಇದರಿಂದಾಗಿ ಅವರು ಮಾನಸಿಕ ಒತ್ತಡದಿಂದ ಹೊರ ಬರುತ್ತಾರೆ ಎಂದು ಹೇಳಿದರು.
ಮಕ್ಕಳ ಬಗ್ಗೆ ಅವರ ಓದಿನ ಬಗ್ಗೆ ಪೋಷಕರು ಆಸಕ್ತಿ ವಹಿಸಬೇಕು. ಅವರು ಮಾಡುವ ಕೆಲಸದ ಮೇಲೆ ಗಮನಹರಿಸಿ. ಒತ್ತಡಗಳಿಂದ ಮುಕ್ತವಾಗಿಡಲು ಪ್ರಯತ್ನಿಸಬೇಕು. ಈಗಿನ ಸಮಾಜದಲ್ಲಿ ಮೊಬೈಲ್ ಬಳಕೆಯಿಂದ ಮಕ್ಕಳು ಒತ್ತಡಕೊಳ್ಳಲಾಗುತ್ತಿದ್ದಾರೆ. ಆದ್ದರಿಂದ ಮಕ್ಕಳ ಆರೋಗ್ಯದ ಮೇಲೆ, ಮಕ್ಕಳ ಮೆದುಳಿನ ಮೇಲೆ, ಮನಸ್ಸಿನ ಮೇಲೆ ಪ್ರಭಾವ ಬೀರುತ್ತಿದೆ. ಇದರಿಂದಾಗಿ ಮೊಬೈಲ್ ಬಳಕೆ ಆಗದೆ ಇರುವ ಹಾಗೆ ಎಚ್ಚರ ವಹಿಸಿ ಎಂದು ತಿಳಿಸಿದರು.
ಮಕ್ಕಳೊಂದಿಗೆ ಶಾಲೆಯಲ್ಲಿ ಶಿಕ್ಷಕರು ಮತ್ತು ಮನೆಯಲ್ಲಿ ಪೋಷಕರು ಬೆರೆಯುವುದರಿಂದ ಅವರು ಮುಕ್ತವಾಗಿ ಮಾತನಾಡುತ್ತಾರೆ. ಅವರ ಸಮಸ್ಯೆಯ ಬಗ್ಗೆ ತಿಳಿಸುತ್ತಾರೆ. ಆದ್ದರಿಂದ ಎಷ್ಟೊ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಹೇಳಿದರು.
ಶಾಲೆಯಲ್ಲಿ ಮಕ್ಕಳಿಗೆ ಮೆದುಳಿನ ಬಗ್ಗೆ, ಮೆದುಳು ಮಾಡುವ ಕೆಲಸದ ಬಗ್ಗೆ ಪಾಠದ ಮೂಲಕ ತಿಳಿಸಬೇಕು. ಅವರ ಮನಸ್ಸು ಹೇಗೆ ಶಕ್ತಿ ಕೆಲಸ ಮಾಡುತ್ತದೆ ಎಂದು ತಿಳಿದರೆ ಅವರು ಜೀವನದಲ್ಲಿ ಮುಂದೆ ಬರಲು ಅನುಕೂಲವಾಗುತ್ತದೆ.
ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಶಾಲಾ ಅಭಿವೃದ್ಧಿ ಹಾಗೂ ಮೇಲ್ವಿಚಾರಣಾ ಸಮಿತಿ ಜವಾಬ್ದಾರಿ ಹಾಗೂ ಕರ್ತವ್ಯ ಕುರಿತು ಮಾತನಾಡಿ, ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಪ್ರವೇಶ, ಹಾಜರಾತಿ ಮತ್ತು ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸುವ ಸಮರ್ಥನೀಯ ಕಾನೂನು ಚೌಕಟ್ಟನ್ನು ಒದಗಿಸುತ್ತದೆ. ಇದು ಸಮಾನತೆ ಮತ್ತು ತಾರತಮ್ಯದ ತತ್ವಗಳ ಆಧಾರದ ಮೇಲೆ ಸಮಾನ ಗುಣಮಟ್ಟದ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕನ್ನು ಒದಗಿಸುತ್ತದೆ. ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ. ಶಾಲೆಗಳನ್ನು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣೆ ಸಮಿತಿಗಳು ತಮ್ಮ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸಿದರೇ ಮಕ್ಕಳಗೆ ಉತ್ತಮ ಶಿಕ್ಷಣ ನೀಡಬಹುದು. ಇದು ಶಾಲೆಯ ಫಲಿತಾಂಶ ಹಾಗೂ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಉತ್ತಮ ಶಿಕ್ಷಣವನ್ನು ಶಿಕ್ಷಕರು ಮಕ್ಕಳಿಗೆ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಶಿಕ್ಷಣ ಹಕ್ಕು ಕಾಯ್ದೆ-2009ರ ಅಡಿಯಲ್ಲಿ, ಪ್ರತಿಯೊಂದು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಎಸ್‍ಡಿಎಂಸಿ ರಚಿಸುವುದು ಕಡ್ಡಾಯವಾಗಿದೆ. ಇದು ಶಾಲೆ, ಪೋಷಕರು ಮತ್ತು ಸ್ಥಳೀಯ ಸಮುದಾಯದ ನಡುವಿನ ಒಂದು ಪ್ರಮುಖ ಕೊಂಡಿಯಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದರು.
ಶಾಲೆ, ಪೋಷಕರು, ಗ್ರಾಮ ಪಂಚಾಯತಿ ಮತ್ತು ಶಿಕ್ಷಣ ಇಲಾಖೆಯ ನಡುವೆ ಒಂದು ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತದೆ. ಮಕ್ಕಳ ಬಗ್ಗೆ ಮತ್ತು ಅವರ ಹಕ್ಕುಗಳು ಬಗ್ಗೆ ಶಾಲೆಯ ನಿಯಮದ ಬಗ್ಗೆ ಹೇಳಿದರು. ಶಾಲಾ ವ್ಯಾಪ್ತಿಯಲ್ಲಿರುವ 6 ರಿಂದ 14 ವರ್ಷ ವಯಸ್ಸಿನ ಎಲ್ಲಾ ಮಕ್ಕಳನ್ನು ಶಾಲೆಗೆ ದಾಖಲು ಮಾಡುವುದು ಮತ್ತು ಅವರು ಶಾಲೆಗೆ ಹಾಜರಾಗುವಂತೆ ನೋಡಿಕೊಳ್ಳಬೇಕು. ಮತ್ತು 14 ವರ್ಷದ ಒಳಗಿನ ಮಕ್ಕಳು ಬಂದು ಶಾಲೆಗೆ ಹಾಜರಾದರೆ ಅವರ ವಯಸ್ಸನ್ನು ಪರಿಗಣಿಸಿ, ಅವರಿಗೆ ಶಾಲೆಗೆ ಬರಲು ಅನುವು ಮಾಡಿ ಕೊಡಬೇಕು. ಶಾಲಾ ಅಭಿವೃದ್ಧಿ ಹಾಗೂ ಮೇಲ್ವಿಚಾರಣಾ ಸಮಿತಿಯ ಜವಾಬ್ದಾರಿಗಳು ಹಾಗೂ ಕರ್ತವ್ಯಗಳ ಬಗ್ಗೆ ಅವರು ಮಾಹಿತಿ ನೀಡಿದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಎಸ್ ಕೆಳದಿಮಠ ಮಾತನಾಡಿ, ವಿದ್ಯಾರ್ಥಿಗಳ ಉನ್ನತ ಕನಸುಗಳಿಗೆ ಶಿಕ್ಷಕರು ದಾರಿದೀಪವಾಗಿ ಕೆಲಸ ಮಾಡಬೇಕು. ಮಕ್ಕಳ ಉತ್ತಮ ಫಲಿತಾಂಶ ದೇಶದ ಭವಿಷ್ಯ. ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ನಾವೆಲ್ಲರೂ ಪ್ರಯತ್ನ ಮಾಡಿ, ಮಿಷನ್ ವಿದ್ಯಾಕಾಶಿ ಯಶಸ್ವಿಗೆ ಪ್ರಯತ್ನಿಸೋಣ ಎಂದು ತಿಳಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಡಯಟ್ ಪ್ರಾಚಾರ್ಯೆ ಜಯಶ್ರೀ ಕಾರ್ಯಕಾರಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮುಖ್ಯೋಪಾದ್ಯಯರ ಸಂಘ, ಶಿಕ್ಷಕರ ಸಂಘದ ಪ್ರಮುಖರು ಇದ್ದರು.
ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಪ್ರಧಾನ ಗಿರುಗಳು, ಮುಖ್ಯೋಪಾಧ್ಯಾಯರು, ಎಸ್.ಡಿ.ಎಂ.ಸಿ. ಅಧ್ಯಕ್ಷರು ಭಾಗವಹಿಸಿದ್ದರು.
****************