ಜಕಣಿಭಾವಿ ರಸ್ತೆಯಲ್ಲಿ ಹುತಾತ್ಮರ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ಹುತಾತ್ಮರ ದಿನಾಚರಣೆ
ಧಾರವಾಡ 01 :
ಮಕ್ಕಳಲ್ಲಿ ಇತಿಹಾಸ ಪ್ರಜ್ಞೆ ಮೂಡುಸುವ ಕಾರ್ಯ ಆದಾಗ ಮಾತ್ರ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರ ತ್ಯಾಗ ಬಲಿದಾನದ ಮಹತ್ವ ಗೊತ್ತಾಗುವುದು ಎಂದು
ಪೊಲೀಸ್ ಇನಸ್ಪೆಕ್ಟರ್ ನಾಗಯ್ಯ ಕಾಡದೇವರಮಠ ನುಡಿದರು. ಅವರು ಜಕನಿಬಾವಿ ಹತ್ತಿರದ ಹುತಾತ್ಮರ ಸ್ಮಾರಕಕ್ಕೆ ಗೌರವ ಸಲ್ಲಿಸಿ ಮಾತನಾಡುತ್ತಿದ್ದರು. ಬರುವ ದಿನಗಳಲ್ಲಿ ಇಂಥ ಕಾರ್ಯಕ್ರಮಕ್ಕೆ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವಂತೆ ಆಗಬೇಕು ಎಂದರು. ಸಹಾಯಕ ಪೋಲಿಸ್ ಕಮಿಶನರ್ ಪ್ರಶಾಂತ ಶಿವನಗೌಡರ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ, ಸ್ವಾತಂತ್ರದ ಚಳುವಳಿಯಲ್ಲಿ ಸಾವಿರಾರು ಜನ ಪ್ರಾಣಾರ್ಪಣೆ ಮಾಡಿರುವರು.
ಅವರನ್ನು ಸ್ಮರಿಸಿಕೊಳ್ಳುವುದೇ ಪುಣ್ಯದ ಕಾರ್ಯ ಎಂದರು. ವಿಜಯಾ ಲಿಂಬನದೇವರಮಠ ಮಾತನಾಡಿ ಅಂದು ಯಾವ ಫಲಾಪೇಕ್ಸೆ ಇಲ್ಲದೇ ಸ್ವಾತಂತ್ರ್ಯಕ್ಕಾಗಿ ಮಡಿದವರು ನಮ್ಮ ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಬೇಕು. ಸೇರಿದ ಮಕ್ಕಳು ಇಂಥ ಹುತಾತ್ಮರ ಹೋರಾಟದ ಇತಿಹಾಸವನ್ನು ಅಧ್ಯಯನ ಮಾಡಬೇಕು ಎಂದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಮಾತನಾಡಿ, ಜಿಲ್ಲಾ ಆಡಳಿತ ಪ್ರತಿ ವರ್ಷ ಹುತಾತ್ಮರ ದಿನವನ್ನಾಗಿ ಆಚರಿಸುವ ಮೂಲಕ ಸ್ವಾತಂತ್ರ್ಯ ಚಳುವಳಿಗೆ ಧಾರವಾಡದ ಕೊಡುಗೆಯ ಮೇಲೆ ಬೆಳಕು ಚಲ್ಲುವಂತಾಗಬೇಕು. ಅಂದಾಗ ಧಾರವಾಡದ ಬಗ್ಗೆ ಮಕ್ಕಳಲ್ಲಿ ಅಭಿಮಾನ ಮೂಡಲು ಸಾಧ್ಯವಾಗುವುದು. ಮಹಾನಗರ ಪಾಲಿಕೆ ಈ ಹುತಾತ್ಮರ ಸ್ಮಾರಕವನ್ನು ದುರಸ್ತಿ ಗೊಳಿಸಿ ಅಂದವಾಗಿ ಇಡುವಂತೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು. ಸಾಮಾಜಿಕ ಕಾರ್ಯಕರ್ತ ಉದಯ ಎಂಡಿಗೇರಿ ಮಾತಾಡಿ 1921 ಜುಲೈ 01 ರಂದು ಅಂದಿನ ಕ್ರೂರ ಬ್ರಿಟಿಷ್ ಜಿಲ್ಲಾಧಿಕಾರಿ ಪೇಂಟರ್ ಆದೇಶದಂತೆ ಪೊಲೀಸರ ಗುಂಡೇಟಿಗೆ ಬಲಿಯಾದ ಹುತಾತ್ಮರಾದ ಮಲ್ಲಿಕ್ ಸಾಬ್ ಗೌಸುಸಾಬ್, ಅಬ್ದುಲ್ ಗಫಾರ ಚೌಕಥಾಯಿ ಅವರನ್ನು ಸ್ಮರಿಸುವುದು ಎಂದರೆ ನಮ್ಮೊಳಗೆ ದೇಶಾಭಿಮಾನವನ್ನು ಹೆಚ್ಚಿಸಿಕೊಳ್ಳುವುದು. ಅಂದು ಧಾರವಾಡದ ಹಲವಾರು ಹೋರಾಟಗಾರು ಜೈಲು ಸೇರಿದರು, ಗುಂಡೇಟಿನಿಂದ ಗಾಯಗೊಂಡರು, ಇಂಥ ಹೋರಾಟವನ್ನು ನಾವೆಲ್ಲಾ ಕೃತಜ್ಞತಾ ಭಾವದಿಂದ ಸ್ಮರಿಸಿ ಕೊಳ್ಳಬೇಕು ಎಂದರು. ಶೈಕ್ಷಣಿಕ ಚಿಂತಕ ಮಲ್ಲಿಕಾರ್ಜುನ ಚಿಕ್ಕಮಠ ಮಾತನಾಡಿ, ಕಳೆದ ಇಪ್ಪತ್ತಾರು ವರ್ಷಗಳಿಂದ ಈ ಹುತಾತ್ಮದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ಇದು ಸ್ತುತ್ಯಾರ್ಹ ಕಾರ್ಯವಾಗಿದೆ. ಉದಯ ಯಂಡಿಗೇರಿ ಇಂಥದೊಂದು ದೇಶಪ್ರೇಮ ಬಿಂಬಿಸುವ ಪ್ರಯತ್ನ ನಡೆಯುತ್ತಿದ್ದು ಸಾರ್ವಜನಿಕರು ಹೆಚ್ಚು ಹೆಚ್ಚು ಪಾಲ್ಗೊಳ್ಳುವ ಮೂಲಕ ಇದೊಂದು ಧಾರವಾಡದ ಅಸ್ಮಿತೆಯ ಕಾರ್ಯಕ್ರಮವಾಗಿ ರೂಪಗೊಳ್ಳಬೇಕು ಎಂದರು. ಪ್ರೊ. ಚಂದ್ರಮೌಳಿ ನಾಯ್ಕರ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ವ್ಯಾಪಾರಸ್ಥರ ಸಂಘದ ರವೀಂದ್ರ ಆಕಳವಾಡಿ, ಇತಿಹಾಸ ಪ್ರಾಧ್ಯಾಪಕ ಡಾ. ಬಸವರಾಜ ಅಕ್ಕಿ, ಸಾರ್ವಜನಿಕರು ಹಾಗೂ ಆದರ್ಶ ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದ್ದರು.