ಲಿಂಗಾಯತ ಮಹಿಮರು' ಎಂಬ ಶಿರ್ಷಿಕೆಯ ಭಾಗ-2 ಮತ್ತು 3 ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ.
ಧಾರವಾಡ :
ಗಾಯಕಿ ನಂದಾ ಪಾಟೀಲರು ನಾಡಿನ, ದೇಶದ ಶ್ರೇಷ್ಠ ಗಾಯಕಿ, ಸಂಗೀತ ವಿದ್ವಾಂಸರು. ಅವರ ವಚನ ಸಂಗೀತದ ನೆಲೆಗಳು ಶರಣ ಸಂಸ್ಕೃತಿಯ ಮೌಲ್ಯಗಳಿಗೆ ಹೆಸರಾಗಿವೆ. ಅವರ ಮುಖ್ಯ ಪ್ರತಿಭೆ ಇರುವುದು ಅವರ ಗಾಯನದಲ್ಲಿ ಇವರು ಕಲಾವಿದರಿಗೆ ಆದರ್ಶ ಪ್ರಾಯರು, ಇವರಿಗೆ ಸಲ್ಲಬೇಕಾದ ಸ್ಥಾನಮಾನ ಗೌರವಗಳು ಸಲ್ಲಬೇಕು ಎಂದು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ ಹೇಳಿದರು.
ಧಾರವಾಡ ನೆಲ ಸಂಗೀತ, ಸಾಹಿತ್ಯ ಮತ್ತು ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಅನೇಕ ಸಂಗೀತಗಾರರನ್ನು ದೇಶಕ್ಕೆ ನೀಡಿದ ಕೀರ್ತಿ ಧಾರವಾಡಕ್ಕೆ ಸಲ್ಲುತ್ತದೆ ಎಂದ ಅವರು ಪ್ರತಿಭೆ ಇರುವವರನ್ನು ಗುರುತಿಸಿ ಅವರಿಗೆ ಸಲ್ಲಬೇಕಾದ ಗೌರವ ಸಲ್ಲಿಸುವ ಅವಶ್ಯಕತೆ ಇದೆ ಎಂದರು.
ಅವರು ಇಲ್ಲಿಯ ನಗರದ ಗೌರಮ್ಮ ರಪಾಟಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಗಾಯಕಿ ಡಾ. ನಂದಾ ಪಾಟೀಲರ ಷಷ್ಟಿಪೂರ್ತಿ ಅಭಿನಂದನಾ ಸಮಾರಂಭ ಮತ್ತು ಗ್ರಂಥ ಬಿಡುಗಡೆ ಸಮಾರಂಭದಲ್ಲಿ ‘ಲಿಂಗಾಯತ ಮಹಿಮರು' ಎಂಬ ಶಿರ್ಷಿಕೆಯ ಪುಸ್ತಕಗಳ ಭಾಗ-2 ಮತ್ತು 3 ಬಿಡುಗಡೆಗೊಳಿಸಿ ಮಾತನಾಡಿದರು.
‘ಸಂಗೀತ ವಿಶಾರದೆ' ಡಾ. ನಂದಾ ಪಾಟೀಲರ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದ. ಮಾಜಿ ವಿಧಾನ ಪರಿಷತ್ತ ಸದಸ್ಯ ಎಂ. ಪಿ. ನಾಡಗೌಡ, ಡಾ. ನಂದಾ ಪಾಟೀಲ ದಂಪತಿಗಳ ಸಂಗೀತ, ಸಾಹಿತ್ಯ ಸೇವೆ ಅನನ್ಯವಾದದ್ದು, ಸಾಧನೆ ಮಾಡಲು ವ್ಯಕ್ತಿಗೆ ಸ್ಪೂರ್ತಿ ಸೆಲೆಯಾಗಿ ಡಾ. ಮಲ್ಲಿಕಾರ್ಜುನ ಪಾಟೀಲ ಆದರ್ಶ ಸತಿಪತಿಗಳೊಂದಾದ ಭಕ್ತಿ ಶಿವಗೆ ಅರ್ಪಿತ, ಡಾ. ಮಲ್ಲಿಕಾರ್ಜುನ ಪಾಟೀಲರ ಮಾರ್ಗದರ್ಶನವು ಡಾ. ನಂದಾ ಪಾಟೀಲರ ಸಂಗೀತ ಜೀವನವನ್ನು ಅರಳಿಸಿತು. ನಂದಾ ಪಾಟೀಲರು ನಮ್ಮ ಕಾಲದ ಅಪ್ರತಿಮ ಗಾಯಕಿ. ಅವರು ಹಿಂದುಸ್ತಾನಿ ಮತ್ತು ಸುಗಮ ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆ ಶ್ಲಾಘನೀಯ, ಪಂ. ಮಲ್ಲಿಕಾರ್ಜುನ ಮನ್ಸೂರ, ಬಸವರಾಜ ರಾಜಗುರು ಅವರ ಕಲಾಪರಂಪರೆಯನ್ನು ಕಾಪಾಡಿದ್ದಾರೆ ಎಂದರು.
ಹಾರನಹಳ್ಳಿ ಸುಕ್ಷೇತ್ರ ಶ್ರೀ ಕೋಡಿಮಠ ಮಹಾಸಂಸ್ಥಾನದ ಶ್ರೀ ಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ವಿದುಷಿ ನಂದಾ ಪಾಟೀಲರ ಸಂಗಮದಂತಹ ಸಮನ್ವಯದ ಬದುಕನ್ನು, ಕಾಯಕ ದಾಸೋಹವನ್ನು ಬಣ್ಣಿಸುತ್ತಾ, ಕಲೆ ಜೀವನಕ್ಕೆ ಬೇಕು. ಅದರಲ್ಲೂ ಸಂಗೀತ ಕಲೆ ಶ್ರೇಷ್ಠವಾದದ್ದು. ನಂದಾ ಪಾಟೀಲರು ಸಂಗೀತ ಸಾದನೆಯಲ್ಲಿಯೇ ತಮ್ಮ ಜೀವನದ ಸಾಕ್ಷಾತ್ಕಾರವನ್ನು ಕಂಡವರು ಎಂದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಮಹಾದೇವ ಹೊರಟ್ಟಿ ನಂದಾ ಪಾಟೀಲರ ಸಂಗೀತ ಸೇವೆಯ ಕುರಿತು ಮಾತನಾಡಿದರು. ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಡಾ. ವಿ. ಎಸ್. ಸಾಧುನವರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ. ನಂದಾ ಪಾಟೀಲರ ಷಷ್ಠಪೂರ್ತಿ ನಿಮಿತ್ತ ಅವರನ್ನು ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ನಂತರ ಸಂಘ, ಸಂಸ್ಥೆಗಳು, ಗಣ್ಯರು, ಸಾರ್ವಜನಿಕರು, ಅಭಿಮಾನಿಗಳು ಡಾ. ನಂದಾ ಪಾಟೀಲ ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದರು. ನಿವೃತ್ತ ಪೊಲೀಸ್ ಅಧಿಕಾರಿ ಬಿ. ಡಿ. ಪಾಟೀಲ, ಮಲಪ್ರಭಾ ಸಹಕಾರಿ ನೂಲಿನ ಗಿರಣಿ, ಸವದತ್ತಿ ಮಾಜಿ ನಿರ್ದೇಶಕ ಡಿ. ಆರ್. ಪಾಟೀಲ ಹಾಗೂ ಮಾಜಿ ಕಾರ್ಪೋರೇಟರ್ ಶಂಕರ ಬೆಟಗೇರಿ ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು, ಡಾ. ವೀಣಾ ಸವದತ್ತಿ ಅವರಿಂದ ಸುಶ್ರಾವ್ಯವಾಗಿ ವಚನ-ಸಂಗೀತ ಕಚೇರಿ ಜರುಗಿತು. ಇವರಿಗೆ ಪ್ರಮೋದ ಹೆಬ್ಬಳ್ಳಿ ಹಾರ್ಮೋನಿಯ ಮತ್ತು ಅಕ್ಷಯ ಜೋಶಿ ತಬಲಾ ಸಾಥ್ ನೀಡಿದರು.
ಪ್ರೊ. ಬಿ. ಎಲ್. ಪಾಟೀಲ, ಪ್ರೊ. ಸಿ. ಆರ್. ಯರವಿನತೆಲಿಮಠ, ಎಸ್. ಎಸ್. ದೇಸಾಯಿ ಸೇರಿದಂತೆ ಅನೇಕ ಮಹನೀಯರಿಗೆ ಶ್ರೀಗಳು 'ಲಿಂಗಾಯತ ಮಹಿಮರು' ಗ್ರಂಥಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎ. ಎಸ್. ಪಾಶ್ಚಾಪೂರೆ, ಎ. ಎಂ. ರಾಜಶೇಖರ ಅಜ್ಜಂಪುರಶೆಟ್ಟರ, ಗುರುರಾಜ ಹುಣಸಿಮರದ, ವಿ. ಆರ್. ಕಿರೇಸೂರ ದಂಪತಿಗಳು. ಪಾರ್ವತಿ ಪಾಲಭಾವಿ, ರತ್ನಾ ಗಂಗಣ್ಣವರ, ಜಿ. ಸಿ. ತಲ್ಲೂರ, ಎನ್. ಆರ್. ಬಾಳಿಕಾಯಿ, ಸಿದ್ಧರಾಮಣ್ಣ ಲಕ್ಷೇಶ್ವರ, ಚಂದ್ರಗೌಡ ಎಸ್. ಪಾಟೀಲಎಲ್. ಶಿವಳ್ಳಿ, ರಾಜು ಸಿ. ಪಾಟೀಲ, ಸಿದ್ಧರಾಮ ನಡಕಟ್ಟಿ, ಬಸವಂತಪ್ಪ ತೋಟದ, ಅಯ್ಯನಗೌಡರ ಎಸ್,ಕೆ. ಕುಂದರಗಿ ಮತ್ತು ಬಸವಸಮಿತಿ ಹಾಗೂ ಶ್ರೀ ಕುಮಾರೇಶ್ವರ ಸೊಸೈಟಿ ಪದಾಧಿಕಾರಿಗಳು, ಡಾ. ನಂದಾ ಪಾಟೀಲ ಸಂಗೀತ ಅಕಾಡೆಮಿ, ಅಕ್ಕನಬಳಗದ ಮಹಿಳಾ ಮಂಡಳಗಳ ಸದಸ್ಯರು, ಪಾಟೀಲ ಬಂಧುಗಳು, ಅಭಿಮಾನಿಗಳು, ವಿದ್ಯಾರ್ಥಿಗಳು, ಸಂಗೀತಾಸಕ್ತರು, ಕಲಾವಿದರು, ವಿವಿಧ ಭಾಗಗಳಿಂದ ಆಗಮಿಸಿದವರು ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಅತಿಥಿಗಳನ್ನು ಪ್ರೊ. ಮಲ್ಲಿಕಾರ್ಜುನ ಪಾಟೀಲ ಸ್ವಾಗತಿಸಿದರು. ಡಾ. ಮಹೇಶ ಹೊರಕೇರಿ ಅತಿಥಿಗಳನ್ನು ಪರಿಚಯಿಸಿದರು. ಸಿ.ಎಸ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. 'ಸಂಗಿತ ವಿಶಾರದೆ' ಅಭಿನಂದನಾ ಗ್ರಂಥದ ಸಂಪಾದಕ ಡಾ. ಹರೀಶ ಹೆಗಡೆ ಸಂಪಾದನಾಪರ ನುಡಿಗಳನ್ನಾಡಿದರು. ಡಾ. ಸಿದ್ದರಾಮಯ್ಯ ಮಠಪತಿ ಅಭಿನಂದನಾ ನುಡಿಗಳನ್ನಾಡಿದರು. ಡಾ. ಶೈಲಜಾ ಅಮರಶೆಟ್ಟಿ 'ಸಂಗೀತ ವಿಶಾರದೆ' ಅಭಿನಂದನಾ ಗ್ರಂಥ ಹಾಗೂ ಡಾ. ಸಿ. ಎಂ. ಕುಂದಗೋಳ 'ಲಿಂಗಾಯತ ಮಹಿಮರ ಭಾಗ-2 ಮತ್ತು 3 ಗ್ರಂಥಗಳ ಪರಿಚಯಿಸಿದರು. ಶಿವಾನಂದ ಭಾವಿಕಟ್ಟಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
ಫೊಟೊ ಶಿರ್ಷಿಕೆ-
ನಗರದ ಗೌರಮ್ಮ ರಪಾಟಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಗಾಯಕಿ ಡಾ. ನಂದಾ ಪಾಟೀಲರ ಷಷ್ಟಿಪೂರ್ತಿ ಅಭಿನಂದನಾ ಸಮಾರಂಭ ಮತ್ತು ಗ್ರಂಥ ಬಿಡುಗಡೆ ಸಮಾರಂಭದಲ್ಲಿ ‘ಲಿಂಗಾಯತ ಮಹಿಮರು' ಎಂಬ ಶಿರ್ಷಿಕೆಯ ಭಾಗ-2 ಮತ್ತು 3 ಪುಸ್ತಕಗಳನ್ನು ವಿಧಾನ ಪರಿಷತ್ತ ಸಭಾಪತಿ ಬಸವರಾಜ ಹೊರಟ್ಟಿ ಬಿಡುಗಡೆಗೊಳಿಸಿದರು.