ಖಿಲಾಫತ್ ಚಳುವಳಿ ಹೋರಾಟದ ಹುತಾತ್ಮರ ಸ್ಮಾರಕ;ರಾಷ್ಟ್ರೀಯ ಸ್ವಾತಂತ್ರ್ಯ ಚಳುವಳಿಗೆ ಧಾರವಾಡ ಜಿಲ್ಲೆಯ ಕೊಡುಗೆ ಬಗ್ಗೆ ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆ: ಜಿಲ್ಲಾಧಿಕಾರಿ ದಿವ್ಯಪ್ರಭು

ಖಿಲಾಫತ್ ಚಳುವಳಿ ಹೋರಾಟದ ಹುತಾತ್ಮರ ಸ್ಮಾರಕ;ರಾಷ್ಟ್ರೀಯ ಸ್ವಾತಂತ್ರ್ಯ ಚಳುವಳಿಗೆ ಧಾರವಾಡ ಜಿಲ್ಲೆಯ ಕೊಡುಗೆ ಬಗ್ಗೆ ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆ: ಜಿಲ್ಲಾಧಿಕಾರಿ ದಿವ್ಯಪ್ರಭು
ಧಾರವಾಡ (ಕರ್ನಾಟಕ ವಾರ್ತೆ) ಜುಲೈ:01 ಭಾರತದ ಸ್ವಾತಂತ್ರ್ಯ ಚುಳುವಳಿಗೆ, ಹೋರಾಟಗಳಿಗೆ ಧಾರವಾಡ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಅನೇಕ ಹೋರಾಟಗಾರರು ತಮ್ಮ ಆಸ್ತಿ, ಜೀವ ಹಾನಿ ಮಾಡಿಕೊಂಡಿದ್ದಾರೆ. ಈ ಕುರಿತು ಇತಿಹಾಸದಲ್ಲಿ ದಾಖಲಾಗಿದ್ದರೂ ನಮ್ಮ ಮಕ್ಕಳಿಗೆ, ನಮ್ಮ ಜಿಲ್ಲೆಯ ಜನರಿಗೆ ಇದರ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಆದ್ದರಿಂದ ಬರುವ ಆಗಸ್ಟ್ 15 ರ, ಸ್ವಾತಂತ್ರೋತ್ಸವವನ್ನು ಇನ್ನಷ್ಟು ಅರ್ಥಪೂರ್ಣವಾಗಿ ಆಚರಿಸಲು ರಾಷ್ಟ್ರದ ಸ್ವಾತಂತ್ರ್ಯ ಚಳುವಳಿಗೆ ಧಾರವಾಡ ಜಿಲ್ಲೆಯ ಕೊಡುಗೆ ಕುರಿತು ಒಂದು ದಿನದ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

ಅವರು ಇಂದು ಬೆಳಿಗ್ಗೆ ಧಾರವಾಡ ನಗರದ ಜಕಣಿಭಾವಿ ಬಳಿ ಇರುವ ಖಿಲಾಫತ್ ಹೊರಾಟಗಾರರ ಗೌರವಾರ್ಥ ಸ್ಥಾಪಿಸಿರುವ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ, ಮಾತನಾಡಿದರು.

 ಇತಿಹಾಸದ ಅರಿವಿಲ್ಲದೆ, ಉತ್ತಮ ಭವಿಷ್ಯ ಕಟ್ಟವುದು ಕಷ್ಟಸಾಧ್ಯ. ವಿಶೇಷವಾಗಿ ಇಂದಿನ ಯುವ ಸಮೂಹ ಮತ್ತು ಮಕ್ಕಳಿಗೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರು, ರಾಷ್ಟ್ರ ನಾಯಕರ ಬಗ್ಗೆ ಅರಿವು ಮೂಡಿಸಬೇಕಿದೆ. ಭಾರತದ ಸ್ವಾತಂತ್ರ್ಯ ಚಳುವಳಿಗೆ ಧಾರವಾಡ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಧಾರವಾಡ ಜಿಲ್ಲೆಯ ಅನೇಕ ಗ್ರಾಮ ಮತ್ತು ಪಟ್ಟಣಗಳಲ್ಲಿ ಸ್ವಾತಂತ್ರ್ಯದ ಹೋರಾಟಗಳು ನಡೆದಿವೆ. ಅನೇಕರು ಹೋರಾಟದಲ್ಲಿ ಹುತಾತ್ಮರಾಗಿದ್ದಾರೆ. ಈ ಕುರಿತು ಬೆಳಕು ಚಲ್ಲುವ ಒಂದು ದಿನದ ಅರ್ಥಪೂರ್ಣ ಕಾರ್ಯಕ್ರಮವನ್ನು ಧಾರವಾಡ ಜಿಲ್ಲಾಡಳಿತದಿಂದ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಥ್ಯಾಕರೆ ಸಮಾಧಿ, ಗಾನವಿಧೂಷಿ ಗಂಗೂಬಾಯಿ ಹಾನಗಲ್ಲ ಅವರು ಹುಟ್ಟಿದ ಮನೆ, ದ.ರಾ.ಬೇಂದ್ರೆ ಅವರ ಕುರಿತ ಎಲ್ಲ ವಿಷಯಗಳು ನಮ್ಮ ಧಾರವಾಡದ ಹೆಮ್ಮೆಯ ಸಂಗತಿಗಳು. ಇವುಗಳನ್ನು ರಕ್ಷಿಸಿ, ನಮ್ಮವರಿಗೆ ಪ್ರಚುರಪಡಿಸಿ ಹೆಮ್ಮೆ, ಅಭಿಮಾನ ಮೂಡಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.

ಖಿಲಾಫತ್ ಚುಳುವಳಿಯಲ್ಲಿ ಭಾಗವಹಿಸಿ, ಅಸಹಕಾರ ಚುಳುವಳಿ ಯಶಸ್ವಿಗೊಳಿಸುವಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ್ದ ಮೂರು ಜನ ಹೋರಾಟಗಾರರ ಸ್ಮರಣಾರ್ಥ ಜಕಣಿಬಾವಿ ಹತ್ತಿರ ಸ್ಮಾರಕ ನಿರ್ಮಿಸಲಾಗಿದೆ. ಇವು ನಮ್ಮ ಇತಿಹಾಸದ ದ್ಯೋತಕವಾಗಿವೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಸ್ವಾತಂತ್ರ್ಯ ಸಂಗ್ರಾಮಕ್ಕೆ ಧಾರವಾಡ ಜಿಲ್ಲೆಯ ಕೊಡುಗೆ ಕುರಿತು ಶಾಲಾ ಕಾಲೇಜು ಮಕ್ಕಳಿಗೆ ವಿವಿಧ ಸ್ಪರ್ಧೆಗಳು, ಕಿರುನಾಟಕ, ತಜ್ಞರಿಂದ ವಿಶೇಷ ಉಪನ್ಯಾಸ ಹಾಗೂ ಒಂದು ದಿನದ ವಿಚಾರ ಸಂಕೀರಣವನ್ನು ಸ್ವಾತಂತ್ರೋತ್ಸವದ ಹಿನ್ನಲೆಯಲ್ಲಿ ಜಿಲ್ಲಾಡಳಿದಿಂದ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

ಕಾರ್ಯಕ್ರಮದ ಸಂಯೋಜಕ ಉದಯ ಯಂಡಿಗೇರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ವರ್ತಕರಾದ ರವೀಂದ್ರ ಆಕಳವಾಡಿ, ಶಂಕರ ಕುಂಬಿ, ಚಂದ್ರಶೇಖರ ಅಮ್ಮಿನಬಾವಿ, ಪೆÇಲೀಸ್ ಇನ್‍ಸ್ಪೆಕ್ಟರ್ ಎನ್.ಸಿ.ಕಾಡದೇವರಮಠ, ಮಹಾಂತೇಶ ಪಟ್ಟಣಶೆಟ್ಟಿ, ಕಿರಣ ತೂಗ್ಗಿ, ವಿದೇಶಿ ಕೆಲಗೇರಿ, ಶಿಕ್ಷಕರಾದ ಭೀಮಣ್ಣಾ ಮಲ್ಲಿಗೆ, ಶಾಂತಾ ಹಂಚಿನಮನಿ, ಶಾಮರಾವ ಕುಲಕರ್ಣಿ ಮತ್ತು ಆದರ್ಶ ಬಾಲಿಕಾ ಹಾಗೂ ನಿವೇದಿತಾ ಶಾಲೆಯ ಮಕ್ಕಳು, ಸಾರ್ವಜನಿಕರು ಭಾಗವಹಿಸಿದ್ದರು.
ನವೀನ ಹಳೆಯದು

نموذج الاتصال