*ಅನುದಾನ ಸಕಾಲದಲ್ಲಿ ಬಳಸದಿದ್ದರೆ ಅಧಿಕಾರಿಯೇ ಹೊಣೆ*
======================
*ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಎಚ್ಚರಿಕೆ*
========================
ಧಾರವಾಡ, ಜೂನ್ 25: ಸರಕಾರದಿಂದ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿ, ಯೋಜನೆಗಳಿಗೆ ಬಿಡುಗಡೆಯಾಗುವ ಅನುದಾನವನ್ನು ಸರಿಯಾದ ಸಮಯದಲ್ಲಿ ಬಳಸದೇ ಉಳಿದರೆ ಸಂಬಂಧಿಸಿದ ಅಧಿಕಾರಿಯನ್ನು ಹೊಣೆಗಾರರನ್ನಾಗಿಸಿ, ಅವರಿಂದಲೇ ಅದನ್ನು ವಸೂಲು ಮಾಡಲು ಸರ್ಕಾರಕ್ಕೆ ಶಿಪಾರಸು ಮಾಡಲಾಗುವುದು ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಅಧಿಕಾರಿಗಳಿಗೆ ಎಚ್ಚರಿಸಿದರು.
ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.
ಇಲಾಖೆಗಳಿಗೆ ಬಿಡುಗಡೆಯಾದ ಅನುದಾನ ಪೂರ್ಣ ಬಳಕೆ ಆಗಬೇಕು. ಬಳಕೆಯಲ್ಲಿ ನಿರ್ಲಕ್ಷ್ಯವಹಿಸಿದರೆ ಸಲ್ಲದು. ಕ್ರಿಯಾಯೋಜನೆ ರೂಪಿಸಿ, ಗುರಿ ನಿಗದಿಗೊಳಿಸುವಾಗ ಆರ್ಥಿಕ ಗುರಿಯನ್ನು ಗುರುತಿಸಬೇಕು. ಅದರ ಪ್ರಕಾರ ಪ್ರಗತಿ ಸಾಧಿಸಬೇಕೆಂದು ಎಂದರು.
ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಉತ್ತಮವಾಗಿ ಸಾಗುತ್ತಿವೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ಸುಮಾರು 92 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಆಗಿದೆ. ಸೋಯಾ, ಹತ್ತಿ, ಶೇಂಗಾ, ಉದ್ದು ಸೇರಿದಂತೆ ಶೇ 90 ರಷ್ಟು ಪ್ರದೇಶ ಈಗಾಗಲೇ ಬಿತ್ತನೆ ಆಗಿದೆ ಎಂದು ಸಚಿವರು ತಿಳಿಸಿದರು.
*ಕುಡಿಯುವ ನೀರು: ಅನುದಾನಕ್ಕೆ ಕ್ರಮ*
ಕುಡಿಯುವ ನೀರು ಸರಬರಾಜು ಅಗತ್ಯವಿರುವ ಗ್ರಾಮಗಳಲ್ಲಿ ಮುಂದುವರಿಸಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಥವಾ ಗ್ರಾಮ ಪಂಚಾಯತಿಗಳಿಂದ ಅನುದಾನ ಪೂರೈಸಲು ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.
*ಕಾಮಗಾರಿ ಕಳಪೆ, ವಿಳಂಬ ಮಾಡಿದರೆ ಕಪ್ಪು ಪಟ್ಟಿಗೆ*
ಜಿಲ್ಲೆಯಲ್ಲಿ ಅನುಷ್ಠಾನದಲ್ಲಿರುವ ಜೆ.ಜೆ.ಎಂ. ಸೇರಿದಂತೆ ಯಾವುದೇ ಕಾಮಗಾರಿ ಅನುಷ್ಠಾನದಲ್ಲಿ ನಿಧಾನಗತಿ, ನಿರ್ಲಕ್ಷ್ಯ, ಕಳಪೆ ಗುಣಮಟ್ಟ ಮಾಡಿದರೆ ಅವರು ಡಿಪಾಜಿಟ್ ಮುಟ್ಟುಗೊಲು ಹಾಕಿಕೊಂಡು ಕಪ್ಪುಪಟ್ಟಿಗೆ ಸೇರಿಸಲು ಕ್ರಮವಹಿಸಿ. ಇಲಾಖೆ ಹಂತದಲ್ಲಿ ಆಗದಿದ್ದರೆ ನನಗೆ ಶಿಫಾರಸ್ಸು ಮಾಡಿ ನಾನೇ ಸರಕಾರದಿಂದ ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಕ್ರಮ ವಹಿಸುತ್ತೇನೆ ಎಂದು ಸಚಿವರು ಖಾರವಾಗಿ ನುಡಿದರು.
ಸಭೆಯಲ್ಲಿ ಶಾಸಕರಾದ ಎನ್.ಎಚ್. ಕೋನರಡ್ಡಿ, ಮಹೇಶ ಟೆಂಗಿನಕಾಯಿ, ಎಂ.ಆರ್.ಪಾಟೀಲ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ, ಮಹಾನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಮತ್ತಿತರರು ಇದ್ದರು.