ಮಹಾವೀರ, ಏಸುಕ್ರಿಸ್ತ, ಬಸವಣ್ಣ, ಬುದ್ಧ, ಗುರುನಾನಕ ಹೀಗೆ ವಿವಿಧ ಶರಣರು ಸಂತರು ಹಿಂಸೆಯನ್ನು ದೂರ ಮಾಡಲೆತ್ನಿಸಿ ಈ ಜಗತ್ತಿನಲ್ಲಿ ನಡೆಯುತ್ತಿದ್ದ ಶೋಷಣೆಯನ್ನು ದಿಕ್ಕರಿಸಿ ಸಮಾಜೋದ್ಧಾರಕ ಕಾರ್ಯ ಮಾಡುವ ಮೂಲಕ ಮಾನವೀಯ ಧರ್ಮ ಸ್ಥಾಪನೆ ಮಾಡಿದ್ದಾರೆ
ಅದನ್ನು ನಾವು ಮುಂದುವರೆಸಿಕೊಂಡು ಹೋಗಬೇಕಿದೆ ಎಂದು ಹುಬ್ಬಳ್ಳಿ ಹೊಸಮಠದ ಶ್ರೀ ಡಾ.ಚಂದ್ರಶೇಖರ ರಾಜಯೋಗಿಂದ್ರ ಸ್ವಾಮಿಜಿ ಹೇಳಿದರು.
ಅಕ್ಕಮಹಾದೇವಿ ಆಶ್ರಮದಲ್ಲಿ ಶ್ರೀ ಚನ್ನಬಸವೇಶ್ವರ ಜ್ಞಾನಪೀಠದ ಡಾ.ಶ್ರೀ ಚನ್ನಬಸವಾನಂದ ಸ್ವಾಮಿಜಿಯವರ ಗುರುವಂದನೆ ಹಾಗೂ ಭಕ್ತಿಸಂಭ್ರಮ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು. ಮಹಾತ್ಮರು ರಚಿಸಿದ ಸಾಹಿತ್ಯದಲ್ಲಿ ಇತಿಹಾಸ ಸಿದ್ದಾಂತ ಮತ್ತು ಧರ್ಮದ ಅಂಶ ಸೇರಿವೆ ಅವು ಮಾನವನ ಒಳಲೋಕ ಮತ್ತು ಹೊರ ಲೋಕವನ್ನು
ಪ್ರತಿನಿಧಿಸುತ್ತವೆ. ಅಷ್ಟೇ ಅಲ್ಲದೆ ಸಾಮಾಜಿಕ ಆರ್ಥಿಕ ಸಾಂಸ್ಕೃತಿಕ ಸಾಹಿತ್ಯಿಕ ಸೈದ್ದಾಂತಿಕ ಅಂಶ ಒಳಗೊಂಡಿವೆ. ಅವರು ಬರೆದ ಸಾಹಿತ್ಯ ಆತ್ಮ ವಿಮರ್ಶೆ ಮತ್ತು ಲೋಕ ವಿಮರ್ಶೆಗಳಿಗೆ ಒಳಪಡುತ್ತಿವೆ. ಹೀಗಾಗಿ ದಕ್ಷಿಣ ಆಫ್ರಿಕಾದಲ್ಲಿ ಬಸವಜ್ಯೋತಿ ಯಾತ್ರೆ ಮಾಡಿ ನೆಲ್ಸನ್ ಮಂಡೇಲಾ, ಗಾಂಧಿಜಿ ಹಾಗೂ ಬಸವಣ್ಣನವರ ತತ್ವ ಪ್ರಸಾರ ಮಾಡಿದ ಶ್ರೀ ಚನ್ನಬಸವಾನಂದ ಸ್ವಾಮಿಜಿ ಮಹಾತ್ಮರ ಸಂದೇಶವನ್ನು ಪ್ರಚಾರ ಮಾಡುತ್ತಿರುವುದು ಶ್ಲಾಘನೀಯ ಇಂದಿನ ಯುವ ಜನಾಂಗಕ್ಕೆ ಮಹಾತ್ಮರ ತತ್ವ ಸಿದ್ದಾಂತದ ಅರಿವು ಹಾಗೂ ಜಾಗೃತಿ ಮೂಡಿಸುವದು ಅವಶ್ಯವಾಗಿದೆ ಎಂದರು.
ಶ್ರೀ ಶಿವಪುತ್ರ ಸ್ವಾಮಿಜಿ, ಸಮ್ಮುಖವಹಿಸಿ ಮಾತನಾಡಿ, 12 ನೇ ಶತಮಾನದಲ್ಲಿ ಬಸವ ಕಲ್ಯಾಣದಿಂದ ಹೊರಟ ಅನೇಕ ಶರಣರು ದೇಶವ್ಯಾಪಿ ವಚನ ಸಾಹಿತ್ಯ ಪ್ರಚಾರ ಮಾಡಿದ್ದಾರೆ. ಈಗ ವಿದೇಶದಲ್ಲೂ ಕೂಡ ಬಸವ ತತ್ವ ಪ್ರಚಾರ ನಡೆಯುತ್ತಿದ್ದು ಅಲ್ಲಿನ ಜನರು ಬಸವಣ್ಣ ಹಾಗೂ ಅವರ ವಚನದ ಅಧ್ಯಯನ ಮಾಡುತ್ತಿದ್ದಾರೆ. ಜಗತ್ತಿನ ಮೊದಲ ಅನುಭವ ಮಂಟಪ ರಚಿಸಿದ ಬಸವಾದಿ ಶರಣರು ಜಗತ್ತಿಗೆ ಮಾದರಿಯಾದರು. ಚನ್ನಬಸವಾನಂದ ಸ್ವಾಮಿಜಿ ಪ್ರತಿ ವರ್ಷ ವಿದೇಶದಲ್ಲಿ ಬಸವಾದಿ ಶರಣರ ಅಷ್ಟೆ ಅಲ್ಲದೇ ನಾಡಿಗೆ ಶ್ರಮಿಸಿದ ಮಹಾತ್ಮರ ಸಂದೇಶವನ್ನು ಜನರ ಮನಕ್ಕೆ ಮುಟ್ಟಿಸುತ್ತಿದ್ದಾರೆ ಎಂದರು.
ಶ್ರೀ ಚನ್ನಬಸವೇಶ್ವರ ಜ್ಞಾನಪೀಠದ ಡಾ.ಶ್ರೀ ಚನ್ನಬಸವಾನಂದ ಸ್ವಾಮಿಜಿ ಗುರುವಂದನೆ ಸ್ವೀಕರಿಸಿ ಮಾತನಾಡಿ, ಮಹಾತ್ಮ ನೆಲ್ಸನ್ ಮಂಡೇಲಾ ಅವರ ಜನ್ಮಸ್ಥಳದಲ್ಲಿ ಬಸವಜ್ಯೋತಿ ಯಾತ್ರೆ ಮಾಡಿದ್ದು ಐತಿಹಾಸಿಕವಾಗಿದೆ. ವಿದೇಶದಲ್ಲಿ ಬೇರೆ ಧರ್ಮ ಪ್ರಚಾರ ಮಾಡಲು ಸಾಧ್ಯವಿಲ್ಲ ಆದರೆ ಬಸವತತ್ವ ಪ್ರಚಾರ ಮಾಡಿದರೆ ಯಾವುದೇ ತೊಂದರೆ ಇಲ್ಲ. ಅಲ್ಲಿನ ಜನರು ತತ್ವ ಸಿದ್ದಾಂತ ಒಪ್ಪುತ್ತಾರೆ ಹೊರತು ಆಚರಣೆಯನ್ನಲ್ಲ ಹೀಗಾಗಿ ಬಸವಣ್ಣನವರನ್ನು ಎಲ್ಲರೂ ಗೌರವಿಸುತ್ತಾರೆ. ಮುಂಬರುವ ವರ್ಷದಲ್ಲಿ ಲಂಡನ್ ದೇಶದಲ್ಲಿ ಬಸವತತ್ವ ಸಮಾವೇಶ ಮಾಡಲು ಸಿದ್ದತೆ ನಡೆದಿದ್ದು ಈಗಾಗಲೇ 100 ಕ್ಕೆ ಹೆಚ್ಚು ಬಸವ ಭಕ್ತರು ತಮ್ಮ ಹೆಸರನ್ನು ನೊಂದಾವಣೆ ಮಾಡಿದ್ದಾರೆ. ಅಂದಾಜು 500 ಕ್ಕೂ ಹೆಚ್ಚು ಜನ ಬಸವಭೂಮಿಯಿಂದ ಲಂಡನ್ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಶ್ರೀ ಶಿವಾನಂದ ಪರಮಹಂಸ ಸ್ವಾಮೀಜಿ, ಶ್ರೀ ಚನ್ನಬಸವರಾಜ ಸ್ವಾಮಿಜಿ, ಶ್ರೀ ಬಸವಾನಂದ್ ಸ್ವಾಮೀಜಿ. ಸೂಫಿ ಕಾಶಿಮ ಷಾ ಖಾದ್ರಿ, ಅಬ್ದುಲ್ ರಜಾಕ ಖಾದ್ರಿ ಹಾಷ್ಮಿ ಸಮ್ಮುಖವಹಿಸಿದ್ದರು. ರಾಷ್ಟ್ರೀಯ ಬಸವದಳ ಸದಸ್ಯ ವೀರಣ್ಣ ಹಳಿಯಾಳ ಅಧ್ಯಕ್ಷತೆ ವಹಿಸಿದ್ದರು. ಅಶೋಕ ಹಾಗೂ ಸೂರ್ಯಕಾಂತ ಶೀಲವಂತರ ಬಸವ ಪೂಜೆ ಸಲ್ಲಿಸಿದರು. ಬಸಯ್ಯ ಗಣಾಚಾರಿ ಬಸವ ಧ್ವಜಾರೋಹಣ ನೇರವೇರಿಸಿದರು. ವೇದಿಕೆ ಮೇಲೆ ಮಂಜುಳಾ ಕುಶಪ್ಪನವರ, ಶಿವಾನಂದ ಅಬಲೂರ ಇದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿವಿಧ ಮಠದ ಸ್ವಾಮೀಜಿಗಳು ಶ್ರೀ ಚನ್ನಬಸವನಂದ್ ಸ್ವಾಮಿಜಿ ಅವರಿಗೆ ಗುರು ವಂದನೆ ನೇರವೇರಿಸಿದರು ನಂತರ ರತಿಕಾ ನೃತ್ಯ ನಿಕೇತನದ ವಿದೂಷಿ ನಾಗರತ್ನ ಹಡಗಲಿ ಅವರ ಶಿಷ್ಯರಿಂದ ವಚನ ನೃತ್ಯ ಜರುಗಿತು.
ಶಿವಕುಮಾರ್ ಕಟಗಿ ಸ್ವಾಗತಿಸಿದರು. ಸಂಗೀತಾ ಮಟಪತಿ ನಿರೂಪಿಸಿದರು. ಅಶೋಕ ಕೊಳಕುರ್ ವಂದಿಸಿದರು.