ಧಾರವಾಡ : ಬಸವ ಪರಂಪರೆಯವರು ಸ್ಥಾವರಗಳಿಗೆ ಮೊರೆ ಹೋಗುತ್ತಿರುವುದು ತಪ್ಪಬೇಕು
ಎಂದು ಸಾಣೇಹಳ್ಳಿ ತರಳಬಾಳು ಜಗದ್ಗುರು ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು
ಹೇಳಿದರು.
ಇಲ್ಲಿನ ಚನ್ನಬಸವೇಶ್ವರ
ನಗರದಲ್ಲಿನ ಲಿಂಗಾಯತ ಭವನದಲ್ಲಿ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ
ಜರುಗಿದ ಸಾಂಸ್ಕೃತಿಕ ನಾಯಕ ವಿಶ್ವಗುರು ಶ್ರೀ ಬಸವಣ್ಣನವರು- ಚಿಂತನೆ ಹಾಗೂ ಲಿಂಗಾಯತ ಭವನದ ಎರಡನೇ ಮಹಡಿ ' ಮಹಾದಾನಿ ತ್ಯಾಗವೀರ ಶಿರಸಂಗಿ ಲಿಂಗರಾಜ ದೇಸಾಯಿ ಸಭಾಭವನದ ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.
ವಿಶ್ವಗುರು ಬಸವಣ್ಣನವರು ತಮ್ಮ ವಚನಗಳಲ್ಲಿ ನಡೆ-ನುಡಿಯನ್ನು ಕಲಿಸಿದವರು. ನಡೆ-ನುಡಿ ಒಂದೇ ಆಗಿರಬೇಕು. ಅಂತರ ಇರಬಾರದು.
ವೈದಿಕ ಪರಂಪರೆಯನ್ನು ತೊಲಗಿಸಲು, ಧರ್ಮಕ್ಕೆ ಹೊಸ ರೂಪಕೊಟ್ಟವರು ಬಸವಣ್ಣನವರು. ಧರ್ಮಕ್ಕೆ ಭಯ ಅಲ್ಲ ಬೇಡ ಭಕ್ತಿ ಸಾಕು ಎಂದು ಸಾರಿದರು.
ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಶ್ರಮಿಸಲು ಕರೆ ನೀಡಿದ ಬಸವಣ್ಣನವರು, ಜಾತಿ ಭೂತ ಓಡಿಸಬೇಕು.
ಕಾಯಕವೇ ಕೈಲಾಸ, ಕಾಯವೇ ಕೈಲಾಸ ಎಂದವರು ಬಸವಣ್ಣ.
ಸಮಾನತೆ ಬೆಳೆಸಲು
ಜಾಗೃತಿ ಮೂಡಿಸಿದವರು
ಸಮಾಜಕ್ಕೆ ಕೊಟ್ಟಿದ್ದು ಅತಿ ಸರಳ ಬದುಕು.
ಅವರ ವಚನಗಳು ಶಾಲಾ-ಕಾಲೇಜುಗಳಲ್ಲಿ ಪಠಿಸಲು ಸರಕಾರ ಆದೇಶಿಸಬೇಕು. ಮತ್ತು ಬಸವಣ್ಣನವರ ಎಲ್ಲ ಬೋಧನೆಗಳನ್ನು ಬಿಂಬಿಸುವ ಬಸವ ಭವನ ನಿರ್ಮಾಣ ಮಾಡಬೇಕು ಎಂದು ಸ್ವಾಮೀಜಿ ಆಗ್ರಹಿಸಿದರು.
ಇಂತಹ ಬಸವಣ್ಣನವರ ಬೋಧಿಸಿದ ಮೌಲ್ಯಗಳ ಆಚರಣೆಯೇ ಸಾಂಸ್ಕೃತಿಕ ನಾಯಕ ಎಂದು ಕರೆದಿದ್ದಕ್ಕು ಸಾರ್ಥಕ ಎಂದರು.
ಶಾಸಕ ಎಂ.ಆರ್.ಪಾಟೀಲ ಮಾತನಾಡಿ,
ಬಸವಣ್ಣನವರು ಸಾರ್ವಕಾಲಕ್ಕೂ ಪ್ರಸ್ತುತ ಎನಿಸುತ್ತಾರೆ. ಅವರು ತೋರಿಸಿದ ಸನ್ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕು.
ಲಿಂಗಾಯತಭವನದ ಮೊದಲ ಮಹಡಿಗೆ ತ್ಯಾಗ ವೀರ ಶಿರಸಂಗಿ ಲಿಂಗರಾಜರ ಹೆಸರಿಟ್ಟಿರುವುದು ಆ ಮಹಾನ ವ್ಯಕ್ತಿಗೆ ಸಲ್ಲಿಸಿದ ಅತಿ ದೊಡ್ಡ ಗೌರವ ಎಂದರು.
ಮುಂಡರಗಿಯ ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮಿಗಳು ಮಾತನಾಡಿ, ಬಸವಣ್ಣನವರು ಬರೀ ಧಾರ್ಮಿಕ, ಸಾಮಾಜಿಕ, ಆರ್ಥಿಕ ಸುಧಾರಣೆಗೆ ಮಾತ್ರ ಸೀಮಿತವಾಗಿರಲಿಲ್ಲ.
ಅವರು ಅಪಾರ ಕನ್ನಡ ಭಾಷಾ ಪ್ರೇಮಿ ಆಗಿದ್ದರು. ಈ ಕಾರಣದಿಂದ ಅನ್ಯ ಪ್ರಾಂತ್ಯಗಳಿಂದ ಬಂದ ಶರಣರಿಗೂ ಕನ್ನಡ ಕಲಿಸಿ, ಕನ್ನಡದಲ್ಲಿ ವಚನ ರಚನೆಗೆ ಪ್ರೋತ್ಸಾಹಿಸಿದರು.
ಸಮಾನತೆಯ ತಳಹದಿಯಲ್ಲಿ ಸಾಮಾಜಿಕ ವ್ಯವಸ್ಥೆ ಸುಧಾರಣೆಗೆ ಶ್ರಮಿಸಿದ ಸಾಮಾಜಿಕ ನಾಯಕ ಕೂಡ ಬಸವಣ್ಣ. ಆದರೆ, ಬಸವಣ್ಣನವರನ್ನು ಅರ್ಥೈಸಿಕೊಳ್ಳುವಲ್ಲಿ ನಾವು ಸೋತಿದ್ದೆವೆ.
ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದರೆ ಸಾಲದು, ಅವರ ಸಂದೇಶಗಳನ್ನು ರಾಜ್ಯದ ಪ್ರತಿ ಹಳ್ಳಿಗೂ ತಲುಪಿಸುವ ಕಾರ್ಯವನ್ನು ಸರಕಾರ ಮಾಡಬೇಕು ಎಂದರು.
ಚಿತ್ತರಗಿ ಗುರುಮಹಾಂತ ಮಹಾಸ್ವಾಮಿಗಳು, ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯವಹಿಸಿದ್ದರು.
ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ಹುಣಶಿಮರದ ಸಮಾರಂಭದ ಅಧ್ಯಕ್ಷತೆವಹಿಸಿದ್ದರು.
ವಿಧಾನ ಪರಿಷತ್
ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಎಸ್.ಬಿ.ಗೋಲಪ್ಪನವರ, ಶಿವಾನಂದ ಕವಳಿ,
ಶಂಕರ ಕುಂಬಿ, ಬಿ.ಎಂ.ಸೂರಗೊಂಡ, ವಿಜಯಲಕ್ಷ್ಮಿ ಕಲ್ಯಾಣಶೆಟ್ಟರ್, ಸಂಧ್ಯಾ ಅಂಬಡಗಟ್ಟಿ ಇತರರು ವೇದಿಕೆಯಲ್ಲಿದ್ದರು.
ಉಪಾಧ್ಯಕ್ಷ
ಬಿ.ವೈ.ಪಾಟೀಲ ಸ್ವಾಗತಿಸಿದರು. ಮಲ್ಲನಗೌಡ ಪಾಟೀಲ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯದರ್ಶಿ ಸಿದ್ದಣ್ಣ ಕಂಬಾರ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ
ಶಿವಶರಣ ಕಲಬಶೆಟ್ಟರ ವಂದಿಸಿದರು.
ಆರಂಭದಲ್ಲಿ ರತಿಕಾ ನೃತ್ಯ ನಿಕೇತನ ವಿದ್ಯಾರ್ಥಿಗಳು ವಚನ ನೃತ್ಯ ಪ್ರಸ್ತುತಪಡಿಸಿದರು.