ಧಾರವಾಡದ ಸುಪ್ರಸಿದ್ಧ ಭೂಸಪೇಟೆ ಕಾಮಣ್ಣ
ಧಾರವಾಡ :
ಧಾರವಾಡದ ಸುಪ್ರಸಿದ್ಧ ಭೂಸಪೇಟೆ ಕಾಮಣ್ಣ
ಹಲವಾರು ವರ್ಷಗಳ ಹಿಂದೆ ಯಾವನಾದರೂ ಆಜಾನುಬಾಹು ಸ್ಫುರದ್ರೂಪಿ ವ್ಯಕ್ತಿ ಮುಖದ ಮೇಲೆ ಹುರಿಕಟ್ಟಿ ಮೀಸೆಹೊಂದಿ, ತಲೆಗೆ ಜರಿ ರುಮಾಲು ಸುತ್ತಿ, ಮೈಮೇಲೆ ರೇಷ್ಮೆ ಜುಬ್ಬ ಧರಿಸಿ, ಜರಿ ಧೋತರ ಉಟ್ಟು, ಕಾಲಲ್ಲಿ ಜಿರ್ ಜಿರ್ ಅನ್ನುವ ಕೆರವು ತೊಟ್ಟವನನ್ನು ಕಂಡರೆ ಜನರು ‘ಭೂಸಪ್ಯಾಟಿ ಕಾಮಣ್ಣ ಆಗ್ಯಾನ, ಮಗ’ ಅನ್ನುವ ನುಡಿಮುತ್ತು ರೂಢಿಯಿಲ್ಲಿತ್ತು. ಅಷ್ಟು ಸುಪ್ರಸಿದ್ಧ ಧಾರವಾಡದ ಭೂಸ ಪೇಟೆ ಕಾಮಣ್ಣ.
ಧಾರವಾಡವು ಸಂಗೀತ, ಸಾಹಿತ್ಯ, ಕಲೆ, ನಾಟಕ, ವಿಜ್ಞಾನ ಯಾವುದೇ ಕ್ಷೇತ್ರವಿದ್ದರೂ ತನ್ನದೇ ಆದ ವಿಶಿಷ್ಟ ಮೆರಗನ್ನು ಹೊಂದಿದೆ. ಹೋಳಿ ಹುಣ್ಣಿಮೆಯ ಕಾಮಣ್ಣನ ವಿಷಯಕ್ಕೂ ಅದೇ ಅನ್ವಯ. ಧಾರವಾಡದ ಮಂಗಳವಾರ ಪೇಟೆಯಲ್ಲಿಯ ಭೂಸಪೇಟೆಯ ಅನೇಕ ಹಿರಿಯರು ಸುಮಾರು 154 ವರ್ಷಗಳ ಹಿಂದೆ ಹೋಳಿ ಹಬ್ಬವನ್ನು ಆಚರಿಸಬೇಕೆಂಬ ಉದ್ದೇಶದಿಂದ ಸುಂದರವಾದ ಕಾಮ, ರತಿಯರ ಕಟ್ಟಿಗೆಯ ಮೂರ್ತಿಗಳನ್ನು ಮಾಡಿಸಿದರು. ಕಾಮಣ್ಣನ ಮೂರ್ತಿ 6 1/2 ಅಡಿ ಎತ್ತರವಿದ್ದು. 6 ಅಡಿ ಅಗಲವಿರುವದು. ರತಿಯ ಮೂರ್ತಿ 5 ಅಡಿ ಎತ್ತರ, 3 ಅಡಿ ಅಗಲವಿದ್ದು, ಜಾನಪದ ಪರಂಪರೆಯ ಶೈಲಿಯಲ್ಲಿ ಇವೆ. ಮೂರ್ತಿಗಳ ಅಂಗಾಂಗಳನ್ನು ಬೇರೆ ಬೇರೆಯಾಗಿ ಬಿಡಿಸಿ ಮತ್ತೆ ಜೋಡಿಸಬಹುದಾಗಿದೆ. ಹೋಳಿ ಹುಣ್ಣಿಮೆಯಂದು ಈ ಕಾಮಣ್ಣನ ದಹನವಿಲ್ಲ. ಸಾಂಕೇತಿಕವಾಗಿ ಬೇರೆ ಮಣ್ಣಿನ ಕಾಮಣ್ಣನ ರುಂಡ ಕ್ಕೆ ಬಿದಿರಿನಲ್ಲಿ ಮಾಡಿ ಅದರ ಕೈ ಕಾಲಿಗೆ ಭತ್ತದ ಹುಲ್ಲಿನಲ್ಲಿ ಆಕಾರ ಮಾಡಿ ಅದನ್ನು
ದಹನ ಮಾಡಲಾಗುವುದು. ಹೀಗಾಗಿ 154 ವರ್ಷಗಳಿಂದ ಅದೇ ಕಾಮಣ್ಣ ಸುಸ್ಥಿತಿಯಲ್ಲಿದ್ದಾನೆ. ವಿಶಿಷ್ಟ ತರಹದ ಕಟ್ಟಿಗೆಯಿಂದ ಮಾಡಿರುವರಿಂದ ಮೂರ್ತಿಗಳು ಬಿರುಕು ಬಿಟ್ಟಿಲ್ಲ. ಹುಳಗಳ ಪೀಡೆಯೂ ಇಲ್ಲ. ಮೂರ್ತಿಯ ಕಾಯಂ ಕಟ್ಟಡದ ನೆಲಕ್ಕೆ ಟೈಲ್ಸ ಕೂಡಿಸಲಾಗಿದೆ. ಸುತ್ತಲು ಆಕರ್ಷಕ ಮಂಟಪವನ್ನು ನಿರ್ಮಿಸಿದ್ದು ಜನರ ಕಣ್ಮನ ಸೆಳೆಯುವಂತಿದೆ. ಹೋಳಿ ಹಬ್ಬ ಮುಗಿದ ನಂತರ ಮೂರ್ತಿಗಳನ್ನು ಬಟ್ಟೆಯಲ್ಲಿ ಸುತ್ತಿ ಇಡಲಾಗುತ್ತದೆ.
ಕಾಮಣ್ಣನಿಗೆ ಪ್ರತಿವರ್ಷ ರೇಶ್ಮೆ ಧೋತರ, ರೇಶ್ವೆ ಜುಬ್ಬ, ಭರ್ಜರಿ ಶಾಲು, ರತಿಗೆ ಚಂದ್ರಕಾಳಿ ಸೀರೆ, ಜರಿಕುಪ್ಪಸ ಹಾಕಲಾಗುತ್ತದೆ. ಹುರಕಡ್ಲಿ ಮನೆತನದವರು ಈ ಮೂರ್ತಿಗಳಿಗೆ ಪ್ರತಿವರ್ಷ ಹೋಳಿಹಬ್ಬದಂದು ಎರಡು ಕಿಲೊ ಭಾರದ ಸಕ್ಕರೆ ಸರವನ್ನು ನೀಡುವರು. ಅಲಂಕೃತ ಮೂರ್ತಿಯನ್ನು ನೋಡಲು ಹೋಳಿಹಬ್ಬದಲ್ಲಿ ಇಡೀ ಊರಿನ ಜನರೇ ಹರಿದು ಬರುತ್ತಾರೆ.
ಈ ವರ್ಷ ಶನಿವಾರ ದಿನಾಂಕ 23 ರಾತ್ರಿಯಿಂದ ಸೋಮವಾರ ದಿ 25 ರಾತ್ರಿ 12 ರವರೆಗೆ ಇಂತಹ ಅಪರೂಪದ ರತಿ-ಕಾಮರ ಮೂರ್ತಿಗಳನ್ನು ನೋಡುವದೇ ಕಣ್ಣಿಗೆ ಒಂದು ಹಬ್ಬ.
ಬಹುಶಃ ಇಂತಹ ಸುಂದರ ಮತ್ತು ಭವ್ಯವಾದ ಮೂರ್ತಿಗಳನ್ನು ಸತತವಾಗಿ ೧೫೪ ವರ್ಷಗಳಿಂದ ಪೂಜಿಸುತ್ತ ಬಂದ ಪರಂಪರೆ ಭಾರತ ದೇಶದ ಯಾವುದೇ ಭಾಗದಲ್ಲಿಯೂ ಇರಲಿಕ್ಕಿಲ್ಲ ಅನಿಸುವುದು. ಈ ಮೂರ್ತಿಗಳ ಮತ್ತು ಹಬ್ಬದ ಉಸ್ತುವಾರಿಗಾಗಿ ಪಂಚರ ಒಂದು ಕಮೀಟಿಯಿದೆ. ಇಂತಹ ಅಮೋಘ ಪರಂಪರೆಯುಳ್ಳ ಈ ಕಾಮಣ್ಣನನ್ನು ನೋಡುವ ಅವಕಾಶವನ್ನು ತಪ್ಪಿಸಿಕೊಳ್ಳಬಾರದೆಂದು ಸದ್ಯ ಕಮೀಟಿಯ ಅಧ್ಯಕ್ಷರಾಗಿರುವ ಈರಣ್ಣ ಆಕಳವಾಡಿಯವರು ವಿನಂತಿಸಿದ್ದಾರೆ.