ಭೋವಿ ಅಭಿವೃದ್ಧಿ ನಿಗಮಕ್ಕೆ ೨ ಸಾವಿರ ಕೋಟಿ ಅನುದಾನ ಬಿಡುಗಡೆಗೆ ಒತ್ತಾಯ*

ಅಖಿಲ ಕರ್ನಾಟಕ ಭೋವಿ ವಡ್ಡರ ಯುವ ವೇದಿಕೆಯಿಂದ ರಾಜ್ಯ ಮಟ್ಟದ ಸಮಾವೇಶ | ರಾಜ್ಯಾಧ್ಯಕ್ಷ ವೈ.ಕೊಟ್ರೇಶ್ ಆಗ್ರಹ |  
*ಭೋವಿ ಅಭಿವೃದ್ಧಿ ನಿಗಮಕ್ಕೆ ೨ ಸಾವಿರ ಕೋಟಿ ಅನುದಾನ ಬಿಡುಗಡೆಗೆ ಒತ್ತಾಯ*

ಧಾರವಾಡ: ಭೋವಿ ಅಭಿವೃದ್ಧಿ ನಿಗಮಕ್ಕೆ ಎರಡು ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಬೇಕು. ಕಲ್ಲು ಬಂಡೆ ಕಸಬು ನಡೆಸುವವರ ಮೇಲೆ ದಾಖಲಾದ ಪ್ರಕರಣಗಳನ್ನು ಹಿಂಪಡೆಯಬೇಕು. ಭೋವಿ ಅಭಿವೃದ್ಧಿ ನಿಗಮಕ್ಕೆ ಸೂಕ್ತ ಅಧ್ಯಕ್ಷರನ್ನು ನೇಮಿಸಬೇಕು ಹಾಗೂ ವಿಧಾನಸೌಧದ ಮುಂಭಾಗದಲ್ಲಿ ಶ್ರೀ ಸಿದ್ಧರಾಮೇಶ್ವರರ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು ಎಂದು ಅಖಿಲ ಕರ್ನಾಟಕ ಭೋವಿ ವಡ್ಡರ ಯುವ ವೇದಿಕೆ ಹಾಗೂ ಅಖಿಲ ಕರ್ನಾಟಕ ಕಲ್ಲು ಬಂಡೆ ಮತ್ತು ಕಟ್ಟಡ ಕಾರ್ಮಿಕರ ವೇದಿಕೆಯ ರಾಜ್ಯಾಧ್ಯಕ್ಷ ವೈ.ಕೊಟ್ರೇಶ್ ಆಗ್ರಹಿಸಿದರು.  

ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ನಡೆದ ಅಖಿಲ ಕರ್ನಾಟಕ ಭೋವಿ ವಡ್ಡರ ಯುವ ವೇದಿಕೆ ಆಯೋಜಿಸಿದ ರಾಜ್ಯ ಮಟ್ಟದ ಸಭೆ ಮತ್ತು ಸದಸ್ಯರ ಮಹಾಸಭೆ ಹಾಗೂ ಧಾರವಾಡ ಚಲೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭೋವಿ ವಡ್ಡರ ಜಾತಿ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆದು ಸರಕಾರದ ಸೌಲಭ್ಯಗಳನ್ನು ಪಡೆಯುತ್ತಿರುವವರ ಮೇಲೆ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಬೇಕು ಎಂದರು.

ನಮ್ಮ ಸಂಘಟನೆ ರಾಜ್ಯಾದ್ಯಂತ ಸುಮಾರು ವರ್ಷಗಳಿಂದ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಯುವಕರು ಸಂಘಟಿತರಾಗಬೇಕು. ಸಮಾಜದ ಯಾವುದೇ ಸಮಸ್ಯೆಗಳಿದ್ದರೂ ನಮ್ಮ ಸಂಘಟನೆ ಸ್ಪಂದಿಸುತ್ತದೆ. ದಿನಂಪ್ರತಿ ಕೂಲಿ ಕೆಲಸ ಮಾಡಿ ಬದುಕುವ ಭೋವಿ ವಡ್ಡರ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮುಂದೆ ಬರಬೇಕಾಗಿದೆ ಆ ನಿಟ್ಟಿನಲ್ಲಿ ನಿರಂತರ ಕಾರ್ಯವನ್ನು ಮಾಡುತ್ತಾ ಬಂದಿದ್ದೇನೆ. ಮುಂದೆಯೂ ಕೂಡಾ ನಮ್ಮ ಸಮುದಾಯವರಿಗಾಗಿ ಶ್ರಮ ವಹಿಸಿ ದುಡಿಯುತ್ತೇನೆ ಎಂದ ಅವರು, ಈ ಕಾರ್ಯಕ್ರಮವನ್ನು ಯಶಸ್ವಿಗೋಳಿಸಿದ ರಾಜ್ಯ ಉಪಾಧ್ಯಕ್ಷ ಅವರ ಕಾರ್ಯವನ್ನು ಶ್ಲಾಘಿಸಿದರು.  

ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಆಶೀರ್ವಚನ ನೀಡಿದ ಮನಗುಂಡಿಯ ಶ್ರೀ ರೇವಣಸಿದ್ಧೇಶ್ವರ ಮಹಾಮಠದ ಪರಮಪೂಜ್ಯ ಶ್ರೀ ಬಸವರಾಜ ದೇವರು ಮಾತನಾಡಿ, ದಿಲ್ಲಿಯಲ್ಲಿ ಇರುವಂತಹ ಸಂಸತ್ತ ಭವನ, ವಿಧಾನಸೌಧ, ವಿಶ್ವವಿದ್ಯಾಲಯಗಳು, ಮಠಗಳು, ದೇವಸ್ಥಾನಗಳು ಭೋವಿ ಸಮಾಜದ ವಿಶ್ವಬ್ರಹ್ಮವಾಗಿವೆ. ಅವುಗಳನ್ನು ನಿರ್ಮಾಣ ಮಾಡಿ ತಮ್ಮ ಜೀವನವನ್ನು ಶ್ರಮದ ಮೂಲಕ ಶ್ರಮಿಸುತ್ತಿರುವ ಭೋವಿ ವಡ್ಡರ ಸಮಾಜಕ್ಕೆ ಸೂಕ್ತ ನ್ಯಾಯ ದೊರಕಬೇಕು. ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಸಂಯೋಜನೆ ಮಾಡಲಾಗಿದೆ. ಕೆರೆ, ಭಾವಿ, ಆಣೆಕಟ್ಟುಗಳನ್ನು ನಿರ್ಮಾಣ ಮಾಡಿ ನಾಗರೀಕ ಸಾಮಾಜಕ್ಕೆ ಅನುಕೂಲ ಮಾಡಿದ ಕೀರ್ತಿ ಭೋವಿ ವಡ್ಡರ ಸಾಮಾಜಕ್ಕೆ ಸೇರುತ್ತದೆ ಅಂತಾ ಹೇಳಿದರು.  
ಮಹಿಳಾ ರಾಜ್ಯಾಧ್ಯಕ್ಷೆ ಸುಶೀಲಾ ಕೆ.ಎಂ. ಮಾತನಾಡಿ, ಭೋವಿ ಅಭಿವೃದ್ಧಿ ನಿಗಮದಿಂದ ಅನೇಕ ಸೌಲಭ್ಯಗಳಿದ್ದು, ಅವುಗಳನ್ನು ಪಡೆಯಲು ಸಮಾಜ ಬಾಂಧವರು ಮುಂದೆ ಬರಬೇಕು. ಭೋವಿ ವಡ್ಡರ ನಿಗಮದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಭೋವಿ ಅಭಿವೃದ್ಧಿ ನಿಗಮ ಮಂಡಳಿಗೆ ಕಳಂಕರಹಿತ ಅಧ್ಯಕ್ಷರನ್ನು ನೇಮಕ ಮಾಡಬೇಕು. ಫಲಾನುಭವಿಗಳಿಗೆ ಸರಕಾರದಿಂದ ಸಿಗುವಂತಹ ಯೋಜನೆಗಳನ್ನು ತಲುಪಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದ ಪ್ರತಿನಿಧಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.

ಭೋವಿ ನಿಗಮದಿಂದ ಸಿಗುವ ಸೌಲಭ್ಯಗಳನ್ನು ಸಮಾಜದ ಶ್ರೀಮಂತರಿಗೆ ದೊರಕುತ್ತಿರುವದು ನೋವಿನ ಸಂಗತಿ. ಅದನ್ನು ತಪ್ಪಿಸಲು ನಮ್ಮ ಸಂಘಟನೆ ಬದ್ಧವಾಗಿದೆ. ಭೋವಿ ಸಮಾಜದ ಮಹಿಳೆಯರಿಗೆ ಸರಕಾರದಿ ಸಿಗುವ ಸೌಲಭ್ಯಗಳನ್ನು ಪಡೆದು ಮುಂದೆ ಬರಬೇಕು ಎಂದರು.          
ಭೋವಿ ಸಮಾಜದ ಬಸವರಾಜ ಆನೆಗುಂದಿ ಮಾತನಾಡಿ, ಶತಶತಮಾನಗಳಿಂದ ಶೋಷಣೆಗೊಳಗಾದ ನಮ್ಮ ಸಮಾಜ ೧೨ನೇ ಶತಮಾನದಲ್ಲಿ ಶ್ರೀ ಸಿದ್ಧರಾಮೇಶ್ವರರು ನಮ್ಮ ಸಮುದಾಯಕ್ಕೆ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟರೂ ಸಹ ೨೧ನೇ ಶತಮಾನದಲ್ಲಿಯೂ ಕೂಡಾ ನಾವುಗಳು ಸಾಮಾಜಿಕ, ಆರ್ಥಿಕ, ಶಿಕ್ಷಣ ಹಾಗೂ ಉದ್ಯೋಗಗಳಿಂದ ವಂಚಿತರಾಗಿದ್ದೇವೆ. ಅದನ್ನು ಹೋಗಲಾಡಿಸಲು ಸಮಾಜದವರು ಒಗ್ಗಟಾಗಬೇಕಾಗಿದೆ. ಮುಂಬರುವ ದಿನಗಳಲ್ಲಿ ನಮ್ಮ ಶಕ್ತಿ ಏನು ಎಂಬುವದನ್ನು ಈ ಸಂಘಟನೆಯಿಂದ ತೋರಿಸಬೇಕಾಗಿದೆ ಎಂದರು.
ರಾಜ್ಯಾಧ್ಯಕ್ಷರಾದ ವೈ.ಕೊಟ್ರೇಶ್ ಅವರು ಹಿರಿಯ ನ್ಯಾಯವಾದಿಗಳಾಗಿದ್ದು ಹಾಗೂ  ರಾಜ್ಯ ಉಪಾಧ್ಯಕ್ಷರಾದ ಮಂಜುನಾಥ ತಿಮ್ಮಣ್ಣ ಹಿರೇಮನಿ ಅವರ ನೇತೃತ್ವದಲ್ಲಿ ನಮ್ಮ ಸಮಾಜಕ್ಕೆ ನ್ಯಾಯ ದೊರಕುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದರು.    

ಇದೇ ಸಂದರ್ಭದಲ್ಲಿ ಧಾರವಾಡದ ಮಂಜನಾಥ ತಿಮ್ಮಣ್ಣಾ ಹಿರೇಮನಿ ಅವರನ್ನು ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯ ಮಾನ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಭೋವಿ ಸಮಾಜದ ಮುಖಂಡರಾದ ರಾಜಶೇಖರ ದುಮ್ಮವಾಡ ಸ್ವಾಗಿತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಹೆಗಡೆ ನಿರೂಪಿಸಿದರು.  

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹರೀಶ ವಡ್ಡರ, ರಾಜು ರುದ್ರಾಪೂರ, ಸುನೀಲ ಧೋತ್ರೆ, ಬಸವರಾಜ ಮುತ್ತಳ್ಳಿ, ಉಪನ್ಯಾಸಕ ಫಕ್ಕೀರಪ್ಪ ಕರಿದುರ್ಗಣ್ಣವರ, ಮಲ್ಲೇಶ್ ಮುನವಳ್ಳಿ, ಬಸವರಾಜ ರುದ್ರಾಪೂರ, ಭೀಮಶಿ ನೇಮಿಕಲ್ಲ, ಮಂಜುನಾಥ ಹಳ್ಯಾಳ, ರಮೇಶ ಪಾಯಪ್ಪನವರ, ಶ್ರೀನಿವಾಸ ಅವರೊಳ್ಳಿ, ದುರಗಪ್ಪ ಶಿಗ್ಗಾಂವಿ, ಗಣಪತಿ ಮೊರಬ, ಯಲ್ಲಪ್ಪ ಹಿರೇಮನಿ ಸೇರಿದಂತೆ ರಾಜ್ಯಾದ್ಯಂತ ಭೋವಿ ಸಮಾಜದ ಬಾಂಧವರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ನವೀನ ಹಳೆಯದು

نموذج الاتصال