ಧಾರವಾಡ ನಗರದ ಪಟಾಕಿ ಸಂಗ್ರಹ, ಮಾರಾಟ ಉಗ್ರಾಣಗಳಿಗೆ ಅಧಿಕಾರಿಗಳ ದಿಢೀರ್ ಜಂಟಿ ಭೇಟಿ, ತಪಾಸಣೆ; ಸುರಕ್ಷಿತ ಕ್ರಮಕ್ಕೆ ಕಟ್ಟು ನಿಟ್ಟಿನ ಸೂಚನೆ
ಧಾರವಾಡ (ಕ.ವಾ) ಅ.11: ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಗೂ ಮಹಾನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರ ನಿರ್ದೇಶನದ ಮೇರೆಗೆ ಧಾರವಾಡ ತಹಸಿಲ್ದಾರ ದೊಡ್ಡಪ್ಪ ಹೂಗಾರ ಹಾಗೂ ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ ನೇತೃತ್ವದಲ್ಲಿ ಕಂದಾಯ, ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆ ಅಧಿಕಾರಿಗಳ ತಂಡವು ಇಂದು ತಡರಾತ್ರಿ ಧಾರವಾಡ ನಗರದ ಲೈಸನ್ಸ್ ದಾರರ ಪಟಾಕಿ ಸಂಗ್ರಹ ಮತ್ತು ಮಾರಾಟದಾರರ ಉಗ್ರಾಣಗಳಿಗೆ
ದಿಢೀರ್ ಭೇಟಿ ನೀಡಿ, ನಿಯಮಾನುಸಾರ ಕೈಗೊಂಡಿರುವ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರು.
ಬೆಂಗಳೂರಿನ ಪಟಾಕಿ ಉಗ್ರಾಣದ ಅವಘಡದ ಹಿನ್ನಲೆಯಲ್ಲಿ ರಾಜ್ಯ ಸರಕಾರವು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಎಲ್ಲ ಪಟಾಕಿ ಸಂಗ್ರಹ ಹಾಗೂ ಮಾರಾಟಗಾರರ ಉಗ್ರಾಣ, ಅಂಗಡಿಗಳನ್ನು ಪರಿಶೀಲಿಸಿ, ಪರವಾಣಿಗೆಯಲ್ಲಿ ತಿಳಿಸಿರುವ ಎಲ್ಲ ಷರತ್ತುಗಳನ್ನು ಪಾಲಿಸಿರುವ ಹಾಗೂ ನಿಯಮಾನುಸಾರ ಅಗತ್ಯ ಸುರಕ್ಷತಾ ಕ್ರಮ ಕೈಗೊಂಡಿರುವ ಕುರಿತು ಪರಿಶೀಲಿಸಿ, ಸೂಕ್ತ ಕ್ರಮಕೈಗೊಳ್ಳಲು ಆದೇಶಿದೆ.
ಅದರಂತೆ ಇಂದು ರಾತ್ರಿ ಕಂದಾಯ, ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಗಳ ಅಧಿಕಾರಿಗಳ ತಂಡವು ಧಾರವಾಡ ನಗರದ ಸವದತ್ತಿ ರಸ್ತೆಯ ಮೇದಾರ ಓಣಿಯಲ್ಲಿನ ಬಿ.ಜಿ.ಅತ್ತಾರ ಆ್ಯಂಡ್ ಬ್ರದರ್ಸ್ ಪಟಾಕಿ ಸಂಗ್ರಹ, ಮಾರಾಟ ಉಗ್ರಾಣ, ಸಪ್ತಾಪುರ ರಸ್ತೆ ಶ್ರೀನಗರ ಕ್ರಾಸ್ ದಲ್ಲಿನ ವಿ.ಎಚ್.ಕಂದಕೂರ ಉಗ್ರಾಣ, ರಾಮಾಶ್ರಯ ಬುಕ್ ಡಿಪೋ ರಸ್ತೆಯ ಎಸ್.ಕೆ.ಆಕಳವಾಡಿ ಉಗ್ರಾಣ, ಮದಿಹಾಳ ರಸ್ತೆಯ ಎಸ್.ಕೆ.ಜೋಶಿ ಉಗ್ರಾಣ, ಕೆಲಗೇರಿ ರಸ್ತೆಯ ಎಸ್.ಜಿ.ಬೆಣ್ಣಿ ಉಗ್ರಾಣಗಳಿಗೆ , ಅನಿರೀಕ್ಷಿತ ದಿಡೀರ್ ಭೇಟಿ ನೀಡಿ, ಜಂಟಿ ತಪಾಸಣೆ ಕೈಗೊಂಡಿತು.
ಧಾರವಾಡ ನಗರದ ಈ ಲೈಸೆನ್ಸ್ ದಾರರು ವಿವಿಧ ರೀತಿಯ ಪಟಾಕಿ ಮಾರಾಟ ಮತ್ತು ಸಂಗ್ರಹದ ಪರವಾನಿಗೆ ಪಡೆದಿದ್ದಾರೆ. ಸರಕಾರ ಹಾಗೂ ಸಂಭಂದಿಸಿದ ಇಲಾಖೆಗಳ ಷರತ್ತುಗಳ ಅನ್ವಯ ಪಟಾಕಿ ದಾಸ್ತಾನು ಉಗ್ರಾಣಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ.
ವಿಜಯ ದೊಡವಾಡ ಹಾಗೂ ಡಿ.ಎಸ್.ಆಕಳವಾಡಿ ಎಂಬ ಇಬ್ಬರು ಲೈಸೆನ್ಸ್ ಹೊಂದಿದ್ದು, ಆದರೆ ನವೀಕರಣ ಮಾಡಿಕೊಂಡಿಲ್ಲ ಮತ್ತು ಪಟಾಕಿ ದಾಸ್ತಾನು ಸಹ ಹೊಂದಿರುವದಿಲ್ಲ ಎಂಬುದು ತಪಾಸಣೆಯಲ್ಲಿ ತಿಳಿದುಬಂದಿತು ಎಂದು ತಹಸಿಲ್ದಾರ ದೊಡ್ಡಪ್ಪ ಹೂಗಾರ ತಿಳಿಸಿದ್ದಾರೆ.
ಅಧಿಕಾರಿಗಳ ತಂಡವು ಪ್ರತಿ ಉಗ್ರಾಣವನ್ನು ನಿಯಮಾನುಸಾರ ಕೂಲಂಕಷವಾಗಿ ಪರಿಶೀಲಿಸಿ, ಪರವಾನಿಗೆದಾರರಿಗೆ ಯಾವುದೇ ಅವಗಡ ಆಗದಂತೆ ಮುನ್ನೆಚ್ಚರಿಕೆವಹಿಸಿ, ಸೂಕ್ತವಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ ಎಂದು ಎಸಿಪಿ ಪ್ರಶಾಂತ ಸಿದ್ದನಗೌಡರ ತಿಳಿಸಿದ್ದಾರೆ.
ಜಂಟಿ ತಪಾಸಣಾ ತಂಡದಲ್ಲಿ ಇನ್ಸ್ಪೆಕ್ಟರ್ ಗಳಾದ. ದಯಾನಂದ ಶೇಗುಣಸಿ, ನಾಗಯ್ಯ ಕಾಡದೇವರಮಠ, ಸಂಗಮೇಶ ದಿಡಗಿನಾಳ, ಅಗ್ನಿಶಾಮಕ ಅಧಿಕಾರಿ ಅವಿನಾಶ ಹಾಗೂ ಕಂದಾಯ ನಿರೀಕ್ಷಕ ಗುರು ಸುಣಗಾರ, ಗ್ರಾಮ ಆಡಳಿತ ಅಧಿಕಾರಿಗಳಾದ ಕರಿಯಪ್ಪ ಗುಡ್ಡದ , ವಿಠ್ಠಲ ಕೀಲಿ ಹಾಗೂ ಅಗ್ನಿಶಾಮಕ, ಪೊಲೀಸ್ ಸಿಬ್ಬಂದಿಗಳು ಇದ್ದರು.