" ಜಿ ಬಿ ಓರ್ವ ಅತ್ಯುತ್ತಮ ಸಂಘಟಕರು ಅಗಿದ್ದರು" ಪ್ರೊ.ವಿ ಟಿ ನಾಯಕ.
ಧಾರವಾಡ :
"ಜಿ ಬಿ ಜೋಶಿ ಅವರು ಓರ್ವ ಅತ್ಯುತ್ತಮ ಸಂಘಟಕರಾಗಿದ್ದರು. ಬರಹ, ಪ್ರಕಾಶನ, ಸಾಹಿತ್ಯೋತ್ಸವ, ನಾಟಕೋತ್ಸವ ಹೀಗೆ ಎಲ್ಲದರಲ್ಲೂ ಅವರದೇ ಛಾಪು ಇರುತ್ತಿತ್ತು. ದುಡ್ಡು ಗಳಿಸುವುದು, ಆಸ್ತಿ ಮಾಡುವುದು, ಹೆಸರು ಮಾಡುವುದು ಮೊದಲಾದ ಸಂಗತಿಗಳಲ್ಲಿ ಅವರಿಗೆ ಆಸಕ್ತಿಯೇ ಇರಲಿಲ್ಲ. ಸಾಹಿತ್ಯ ಸಮ್ಮೇಳನದಂತಹ ಎರಡು ಉತ್ಸವಗಳನ್ನು ಮಾಸ್ತಿ ವೆಂಕಟೇಶ ಅಯ್ಯಂಗಾರ್, ದ ರಾ ಬೇಂದ್ರೆ ಅವರ ಅಧ್ಯಕ್ಷತೆಯಲ್ಲಿ ಏಕಾಂಗಿಯಾಗಿ ಮಾಡಿ ಯಶಸ್ವಿಯಾದ ಖ್ಯಾತಿ ಅವರದು. ಹನ್ನೊಂದು ಜನ ಲೇಖಕರಿಂದ ಒಂದೊಂದು ಅಧ್ಯಾಯ ಬರೆಯಿಸಿ 'ಖೋ' ಎನ್ನುವ ಕೃತಿ ಹೊರ ತಂದರು. ಮನ್ವಂತರ ಷಾಣ್ಮಾಸಿಕವನ್ನು ಹೊರ ತಂದರು. ನಾಟಕ ತಂಡಗಳನ್ನು ಕಟ್ಟಿ ನಾಟಕ ಆಡಿಸಿದರು. ನಲ್ವತ್ತು ಗಾಯಕರನ್ನು ಕೂಡಿಸಿಕೊಂಡು ಕೆರೂರ ವಾಸುದೇವಾಚಾರ್ಯರ 'ನಳದಮಯಂತಿ' ನಾಟಕ ಆಡಿಸಿದರು. ಅವರಲ್ಲಿ ಭಾರತ ರತ್ನ ಭೀಮಸೇನ ಜೋಶಿ ಅವರೂ ಒಬ್ಬರಾಗಿದ್ದರು. ಗೆಳೆಯರ ಗುಂಪಿನ ಎಲ್ಲ ಆಶಯಗಳನ್ನು ತಮ್ಮ ಸಂಘಟನೆಯ ಉದ್ದಕ್ಕೂ ಅಕ್ಷರಶಃ ಪಾಲಿಸಿದ್ದರು" ಎಂದು ಡಾ.ವಿನಾಯಕ ನಾಯಕರು ಹೇಳಿದರು.
ಜಿ ಬಿ ಜೋಶಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಜಿ ಬಿ ಜೋಶಿ ಅವರ 120 ನೆಯ ಜನ್ಮ ದಿನಾಚರಣೆ ನಿಮಿತ್ಯ ಮನೋಹರ ಗ್ರಂಥಮಾಲೆ ಅಟ್ಟದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದ ವಿಶೇಷ ಉಪನ್ಯಾಸ ನೀಡುತ್ತಾ ಡಾ.ವಿ ಟಿ ನಾಯಕರು ಹೇಳಿದರು. ಇತರರನ್ನು ಪ್ರೋತ್ಸಾಹಿಸುವುದರಲ್ಲಿ ಜಿ ಬಿ ಅವರು ಯಾವಾಗಲೂ ಮುಂದು. ನಾಟಕ ತಾಲೀಮು, ರಂಗಸಜ್ಜಿಕೆಗಳ ಕಡೆ ಅವರಿಗೆ ವಿಪರೀತ ಆಸಕ್ತಿ. ಇವುಗಳಿಂದ ಸಾಕಷ್ಟು ನುಕ್ಸಾನು, ಸಂಕಷ್ಟಗಳನ್ನು ಅನುಭವಿಸಿದರೂ ಎದೆಗುಂದುತ್ತಿರಲಿಲ್ಲ." ಎಂದರು . ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಡಾ.ರಮಾಕಾಂತ ಜೋಶಿ ಅವರು ಮಾತನಾಡುತ್ತಾ
" ಜ. ಬಿ ಅವರ ಮಗನಾಗಿ ಹುಟ್ಟಿರುವುದು ನನ್ನ ಸೌಭಾಗ್ಯ. ಅವರು ಎಷ್ಟು ದೊಡ್ಡ ಲೇಖಕರೋ, ಅಷ್ಟೇ ದೊಡ್ಡ ಪ್ರಕಾಶಕರು. ಸದಾ ಉತ್ಸವಪ್ರಿಯರು. ಒಂದು ಕಾರ್ಯಕ್ರಮ ಮುಗಿಯುವುದರೊಳಗಾಗಿ ಮತ್ತೊಂದು ಕಾರ್ಯಕ್ರಮ ಆಯೋಜಿಸುತ್ತಿದ್ದರು. ನುಕ್ಸಾನು, ನಷ್ಟದ ಪರಿವೆಯೇ ಅವರಿಗೆ ಇರಲಿಲ್ಲ," ಎಂದು ಹೇಳಿದರು. ಗಣ್ಯರಾದ ಜಿ ಸಿ ತಲ್ಲೂರ, ದುಷ್ಯಂತ ನಾಡಗೌಡ, ಅರವಿಂದ ಯಾಳಗಿ, ಹರ್ಷ ಡಂಬಳ, ಪಿ ಜಿ ಅಪರಂಜಿ, ವಿಶ್ವನಾಥ ಕೋಳಿವಾಡ, ಶಂಕರ ಕುಂಬಿ, ಬಿ ಎಸ್ ಶಿರೋಳ, ಪ್ರಕಾಶ ಗರುಡ, ಆನಂದ ಪಾಟೀಲ, ಕೃಷ್ಣ ಕಟ್ಟಿ, ರಮೇಶ ಪರ್ವತೀಕರ, ಶಶಿಧರ ನರೇಂದ್ರ, ಹನುಮೇಶ ಸಕ್ರಿ, ಸಮೀರ ಜೋಶಿ ಮೊದಲಾದವರು ಉಪಸ್ಥಿತರಿದ್ದರು.
ಹ ವೆಂ ಕಾಖಂಡಿಕಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ:9945564891