ಧಾರವಾಡ ಜಿಲ್ಲೆ ಸಮಗ್ರ ಅಭಿವೃದ್ಧಿ ಕನಸು : ಸಚಿವ ಲಾಡ್
ಪೂರ್ವ ಬೈಪಾಸ್ ನಿರ್ಮಾಣ : 5 ಸಾವಿರ ಮನೆ–ಹಾಸ್ಟೆಲ್ ನಿರ್ಮಿಸುವ ಗುರಿ : ಧಾರವಾಡದ ಸಾಂಸ್ಕೃತಿಕ ಬ್ರಾಂಡ್ ಗೆ ಚಿಂತನೆ
ಧಾರವಾಡ: ಜಿಲ್ಲೆಯ ಬಹು ನಿರೀಕ್ಷಿತ ಪೂರ್ವ ಬೈಪಾಸ್ ನಿರ್ಮಾಣ ಹಾಗೂ ಧಾರವಾಡವನ್ನು ರಾಜ್ಯದ ಸಾಂಸ್ಕೃತಿಕ ಬ್ರ್ಯಾಂಡ್ ಮಾಡುವ ಕನಸು ಕಂಡಿದ್ದು, ಒಟ್ಟಾರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು.
ಇಲ್ಲಿನ ಧಾರವಾಡ ಜರ್ಮಲಿಸ್ಟ್ ಗಿಲ್ಡ್ ವತಿಯಿಂದ ಪತ್ರಿಕಾ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಧಾರವಾಡ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕನಸು ಕಂಡಿದ್ದೇನೆ. ನೀರಾವರಿ, ಮೂಲಭೂತ ಸೌಕರ್ಯಗಳ ವೃದ್ಧಿ, ಸಾಂಸ್ಕೃತಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಒತ್ತು ಕೊಟ್ಟು ಕೆಲಸ ಮಾಡಲು ಯೋಚಿಸಿದ್ದೇನೆ. ಜಿಲ್ಲೆಯ ಎಲ್ಲರ ಸಹಕಾರದೊಂದಿಗೆ ನನ್ನ ಅಭಿವೃದ್ಧಿ ಕನಸುಗಳನ್ನು ನನಸು ಮಾಡುವ ಅಭಿಲಾಷೆ ಇದೆ ಎಂದರು.
ಮುಂದಿನ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ಸರ್ಕಾರದ ಬಜೆಟ್ ಮಂಡಿಸಲಿದ್ದಾರೆ. ಇದರಲ್ಲಿ ಜಿಲ್ಲೆಯ ಯೋಜನೆಗಳಿಗೆ ಬೇಕಾದ ಅಗತ್ಯ ಅನುದಾನ ಲಭಿಸುವ ವಿಶ್ವಾಸವಿದೆ. ಮುಖ್ಯವಾಗಿ ಗದಗ ರಸ್ತೆಯಿಂದ ಧಾರವಾಡ ಕೃಷಿ ವಿವಿ ವರೆಗೆ ಪೆರಿಪೆರರ್ ರಿಂಗ್ ರಸ್ತೆ (ಪೂರ್ವ ಬೈಪಾಸ್) ನಿರ್ಮಿಸುವ ಮಹತ್ವದ ಯೋಜನೆ ಕುರಿತು ಚಿಂತನೆ ನಡೆಸಿದ್ದೇನೆ ಎಂದರು.
ಬರದಲ್ಲು ಕುಡಿಯುವ ನೀರು : ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಹೊಣೆ ನಮ್ಮ ಮೇಲಿದೆ. ಮನ್ಸೂನ್ ಮಳೆಗಳ ಕೊರತೆಯಿಂದ ಜಿಲ್ಲೆಯ 45 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರಿನ ತೊಂದರೆ ಇದೆ. ಆದಕ್ಕಾಗಿ ಟ್ಯಾಂಕರ್ ನೀರು ಪೂರೈಕೆಯಾಗುತ್ತಿದೆ. ಅಲ್ಲದೇ ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೂ ಕೂಡ ಕುಡಿಯುವ ನೀರಿಗೆ ತುರ್ತಾಗಿ ಕ್ರಮ ವಹಿಸಲು ಸೂಚಿಸಿದ್ದೇನೆ ಎಂದರು.
ಜಲ ಜೀವನ ಮಿಷನ್ ಅಡಿಯಲ್ಲಿ ಈಗಾಗಲೇ ನೀರು ಪೂರೈಕೆಗೆ ವ್ಯವಸ್ಥೆಯಾಗಿದೆ. ಉಳಿದ ಕಾಮಗಾರಿಗಳನ್ನು ಶೀಘ್ರವೇ ಮುಗಿಸಲಾಗುವುದು. ಮಳೆ ಕೊಂಚ ವಿಳಂಬವಾದರೂ ಕೂಡ ಜಿಲ್ಲೆಗೆ ಸಾಕಾಗುವಷ್ಟು ನೀರಿದೆ. ಆದರೂ ಮಳೆರಾಯ ಕೈ ಹಿಡಿಯುತ್ತಾನೆ ಎನ್ನುವ ವಿಶ್ವಾಸವಿದೆ ಎಂದರು.
ಪೂರ್ವಕ್ಕೂ ಬೈಪಾಸ್ : ಹು–ಧಾ ಪಶ್ಚಿಮ ಭಾಗದಲ್ಲಿ ಇರುವಂತೆ ಪೂವೃ ಭಾಗದಲ್ಲಿ ಕೂಡ ಒಂದು ಬೈಪಾಸ್ ನಿರ್ಮಿಸುವ ಕನಸಿದೆ. ಈ ಹಿಂದೆ ಕೂಡ ಈ ಬಗ್ಗೆ ನಾನು ಮಾತನಾಡಿದ್ದೇ, ಹುಬ್ಬಳ್ಳಿಯ ಗದಗ ರಸ್ತೆಯಿಂದ ಧಾರವಾಡ ಕೃಷಿ ವಿಶ್ವವಿದ್ಯಾಲಯವರೆಗೂ ಅಂದಾಜು ರೂ.800 ಕೋಟಿ ವೆಚ್ಚದಲ್ಲಿ ಪೂರ್ವ ಬೈಪಾಸ್ ನಿರ್ಮಿಸಲು ಯೋಜಿಸಲಾಗಿದೆ. ಈ ಬಗ್ಗೆ ಸರ್ವೇ ಕಾರ್ಯವೂ ಸಹ ಈಗಾಗಲೇ ನಡೆದಿತ್ತು. ಇದೀಗ ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದುವರೆಯುತ್ತೇನೆ ಎಂದರು.
ಸರ್ಕಾರಿ ಶಾಲೆಗಳು, ಪದವಿ ಕಾಲೇಜು ಹಾಗೂ ವಸತಿ ನಿಲಯ ಸ್ಥಾಪನೆ ಜೊತೆ ಶಿಕ್ಷಣ, ಆರೋಗ್ಯಕ್ಕೆ ಒತ್ತು ನೀಡಲಾಗುವುದು. ಬಡ ಜನರ ಅನಕೂಲಕ್ಕೆ ನಗರದಲ್ಲಿ 5 ಸಾವಿರ ಮನೆಗಳ ನಿರ್ಮಾಣವಾಗಬೇಕಿದೆ. ಅದನ್ನು ಸಾಕಾರಗೊಳಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದರು.
ಕಾಳಿ ತರಲು ಚಿಂತನೆ : ಧಾರವಾಡ ಜಿಲ್ಲೆಯ ಗ್ರಾಮಗಳಿಗೆ ಕುಡಿಯಲು ಹಾಗೂ ಕೃಷಿ ಚಟವಟಿಕೆಗೆ ಕಾಳಿನದಿ ನೀರು ಪೂರೈಸುವ ಚಿಂತನೆ ಬಹಳ ವರ್ಷಗಳಿಂದ ಇದೆ. ಈಗಾಗಲೇ ಆಳ್ನಾವರ ಪಟ್ಟಣದ ವರೆಗೆ ಕಾಳಿ ನದಿ ನೀರು ಹರಿದಿದೆ. ಕೃಷಿಗೆ ಕೂಡ ಕಾಳಿ ನದಿ ನೀರು ಹರಿಸಬೇಕು ಎನ್ನುವ ಕೂಗಿದೆ. ಹೀಗಾಗಿ ಯೋಜನೆ ಸಾಧ್ಯತೆ ಮತ್ತು ಬಾಧ್ಯತೆ ಕುರಿತು ಸಮೀಕ್ಷೆ ಅಗತ್ಯವಿದ್ದು, ತಜ್ಞರೊಂದಿಗೆ ಚರ್ಚಿಸಿ, ಸಮೀಕ್ಷೆ ನಡೆಸಿ ಯೋಜನೆ ರೂಪಿಸಲಾಗುವುದು ಎಂದರು.
ಈಗಾಗಲೇ ಬೇಡ್ತಿಯಿಂದ ಜನ-ಜಾನುವಾರಗಳ ಅನುಕೂಲಕ್ಕೆ ಕೆರೆ ತುಂಬಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ವ್ಯರ್ಥವಾಗಿ ಹರಿಯುವ ಬೆಣ್ಣೆ ಹಳ್ಳ, ತುಪ್ಪರಿಹಳ್ಳದ ನೀರಿನ ಬಳಕೆ ಯೋಜನೆ ಜಾರಿಯಲ್ಲಿದೆ. ಇನ್ನಷ್ಟು ನೀರಿನ ಬಳಕೆಗಾಗಿ ಅಲ್ಲಲ್ಲಿ ಬ್ಯಾರೇಜ್ ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಜಿಡಿಪಿ ವೃದ್ಧಿ ಗ್ಯಾರಂಟಿ :
ಸರ್ಕಾರದ ಐದು ಗ್ಯಾರಂಟಿ ಯೋಜನೆಗೆ ವಾರ್ಷಿಕ ₹60 ಸಾವಿರ ಕೋಟಿ ವ್ಯಯವಾಗಲಿದೆ. ಈ ಹಣ ಜನರ ಬಳಿ ಕ್ರೋಢಿಕರಣಗೊಳ್ಳದೆ, ಪುನಃ ಮಾರುಕಟ್ಟೆಗೆ ಬರಲಿದೆ. ಇದರಿಂದ ಸಣ್ಣ ಕೈಗಾರಿಕೆಗಳ ಕಾರ್ಯ ಚಟುವಟಿಕೆಗಳಲ್ಲಿ ವೃದ್ಧಿ ಆಗಲಿದೆ. ಚಿಕ್ಕಪುಟ್ಟ ವ್ಯಾಪಾರಸ್ಥರ ಜೀವನ, ಜನರ ಆರ್ಥಿಕ ಪರಿಸ್ಥಿತಿ ಸುಧಾರಣೆಯ ಜೊತೆಗೆ ಜಿಡಿಪಿಯೂ ಜಿಗಿತ ಕಾಣಲಿದೆ ಎಂದು ಸಚಿವ ಲಾಡ್ ಹೇಳಿದರು.
ಕಾನೂನು ಉಲ್ಲಂಘನೆ: ಕಠಿಣ ಕ್ರಮ
ಜಿಲ್ಲೆಯಲ್ಲಿ ನಿರುದ್ಯೋಗ ನಿವಾರಣೆಗೆ ಉದ್ಯೋಗ ಮೇಳ ಆಯೋಜಿಸಲು ಕ್ರಮ ಕೈಗೊಳ್ಳಲಾಗುವುದು. ಕಾರ್ಮಿಕರಿಗ ಕಡಿಮೆ ಸಂಬಳ ನೀಡದಂತೆ ಪ್ರತಿ ತಿಂಗಳು ಕಾರ್ಮಿಕರಿಗೆ ವೇತನ ಪಾವತಿ ರಶೀದಿ ನೀಡಲು ಸೂಚಿಸಲಾಗಿದೆ. ಗುತ್ತಿಗೆ ಪದ್ಧತಿ ನಿಲ್ಲಬೇಕು. ಕಾರ್ಮಿಕ ಕಾನೂನು ಉಲ್ಲಂಘಿಸಿದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಲಾಡ್ ಎಚ್ಚರಿಸಿದರು.
ಧಾರವಾಡ ಜರ್ನಲಿಸ್ಟ್ ಗಿಲ್ಡ್ ಅಧ್ಯಕ್ಷ ಡಾ. ಬಸವರಾಜ್ ಹೊಂಗಲ್ ಪ‍್ರಾಸ್ತಾವಿಕವಾಗಿ ಮಾತನಾಡಿ, ಪತ್ರಕರ್ತರು ಮತ್ತು ಸಚಿವರು ಅಭಿವೃದ್ಧಿಗಾಗಿ ಒಂದಾಗಿ ಕೆಲಸ ಮಾಡಬೇಕಾಗುತ್ತದೆ. ಜೊತೆಗೆ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು, ಅದರ ಬಗ್ಗೆ ಗಮನ ಹರಿಸಬೇಕು. ಜಿಲ್ಲೆಗೆ ಬರಗಾಲದ ಛಾಯೆ ಆವರಿಸಿದ್ದು, ಕೂಡಲೇ ಲಕ್ಷ್ಯ ವಹಿಸುವಂತೆ ಸಲಹೆ ನೀಡಿದರು.
ಗಿಲ್ಡ್ ನ ಉಪಾಧ್ಯಕ್ಷ ಬಸವರಾಜ ಅಳಗವಾಡಿ, ಖಜಾಂಚಿ ವಿಕ್ರಂ ನಾಡಿಗೇರ ಮಿಲಿಂದಪಿಸೆ,ರಾಯಸಾಬ ಅನ್ಸಾರಿ,ಪೃಜ್ ಮುನ್ಶಿ , ರಾಜು ಕರಣಿ, ಶಶಿಧರ ಬದ್ನಿ , ರವಿ ಕಗ್ಗಣ್ಣವರ, ರವೀಶ ಪವಾರ ,ಸೇರಿದಂತೆ ಗಿಲ್ಡ್ ನ ಸರ್ವ ಸದಸ್ಯರು ಇದ್ದರು.
–––––––––––––––––––––––––––––––––––––––––––
-ಬಾಕ್ಸ್-
ನೀರಿನ ಬವಣೆಗೆ ಕ್ರಮ
ಜಿಲ್ಲೆಗೆ ಮಳೆರಾಯ ಬರುವ ನಿರೀಕ್ಷೆ ಇದೆ. ಬರದ ಛಾಯೆ ಆವರಿಸುವ ಲಕ್ಷಣ ಕಾಣಿಸುತ್ತಿದೆ. ಎದುರಾಗುವ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಈಗಾಗಲೇ ಅಧಿಕಾರಿಗಳ ಜೊತೆಗೆ ಮೂರು ಸಭೆ ನಡೆಸಿದ್ದು, ಅವಳಿನಗರದಲ್ಲಿ ನೀರಿನ ಸಮಸ್ಯೆ ಅಷ್ಟಿಲ್ಲ. ಸಮಸ್ಯೆ ಕಾಣಿಸುವ 30 ಹಳ್ಳಿಗೆ ಟ್ಯಾಂಕರ್ ನೀರು ಪೂರೈಸುತ್ತಿದೆ. ಗ್ರಾಪಂನಲ್ಲಿ ಬೋರ್‌ವೆಲ್ ಕೊರಸಲು ಜಿಪಂಗೆ ಸೂಚಿಸಿದ್ದೇನೆ. ಕೆಲ ಹಳ್ಳಿಗಳಲ್ಲಿ ಜೆಜೆಎಂ ಕಾರ್ಯ ಕುಂಠಿತಗೊಂಡಿದ್ದು, ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು.
-ಸಂತೋಷ ಲಾಡ್, ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು
–––––––––––––––––––––-ಬಾಕ್ಸ್-–––––––––––––––––
ಹಳ್ಳಿಗಳಲ್ಲಿ ಅಕ್ರಮ ಮದ್ಯಕ್ಕೆ ಕಡಿವಾಣ
ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಸಮಾಜಘಾತುಕ ಕೆಲಸ. ಕಡಿವಾಣ ಹಾಕಲು ಅಬಕಾರಿ ಅಧಿಕಾರಿಗಳಿಗೆ ಅಕ್ರಮದಲ್ಲಿ ತೊಡಗಿದವರ ಲೈಸೆನ್ಸ್ ರದ್ದುಗೊಳಿಸಲು ಸೂಚಿಸಲಾಗಿದೆ. ಅಲ್ಲದೇ ಅಕ್ರಮ ಮದ್ಯ ಮಾರಾಟದ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಹಾಗೂ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕುವುದು ನಿಶ್ಚಿತ. ಸಮಾಜ ವಿರೋಧಿ ಕೃತ್ಯದ ಯಾವುದೇ ಕೆಲಸವನ್ನು ನಾನು ಸಹಿಸಲಾರೆ ಎಂದು ಸಚಿವ ಲಾಡ್ ಹೇಳಿದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂರ್ಪಕಿಸಿ.M: (9945564891)