ಲೆಫ್ಟಿನೆಂಟ್ ಜನರಲ್ ಎಸ್ ಸಿ ಸರದೇಶಪಾಂಡೆ ಅವರಿಗೆ ಗೌರವ ಶ್ರದ್ಧಾಂಜಲಿ.
"ಲೆಫ್ಟಿನೆಂಟ್ ಜನರಲ್ ಶ್ರೀಕೃಷ್ಣ ಸರದೇಶಪಾಂಡೆ ಅವರು ಅಪ್ಪಟ ಸೈನಿಕ, ಮಾನವೀಯ ಹೃದಯವುಳ್ಳ ದೇಶಭಕ್ತರಾಗಿದ್ದರು. ಶಿಸ್ತು, ನಡೆ ನುಡಿಗಳಲ್ಲಿ ಪ್ರಾಮಾಣಿಕ ಕಳಕಳಿಯನ್ನು ಹೊಂದಿದ್ದ ಅವರು ನಮಗೆಲ್ಲ ಆದರ್ಶಗಳನ್ನು ಹಾಕಿಕೊಟ್ಟಿದ್ದಾರೆ. ಅವರು ಧಾರವಾಡದಲ್ಲಿ ಪ್ರಾರಂಭಿಸಿದ ಸಶ್ರೀ ಕುಮಾವೋ ಫೌಂಡೇಶನ್‌ದ ಹೆಸರಲ್ಲಿ ಸೈನಿಕರಿಗೆ ಸಂಬಂಧಿಸಿದ ಅನೇಕ ಉತ್ತಮ ಕೆಲಸಗಳನ್ನು ಮಾಡುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಮತ್ತು ಶ್ರದ್ಧಾಂಜಲಿ " ಎಂದು ಸಮಾಜ ಕಾರ್ಯಕರ್ತ ಶ್ರೀಧರ ನಾಡಿಗೇರ ಹೇಳಿದರು.
ಇಂದು ಧಾರವಾಡದ ಮನೋಹರ ಗ್ರಂಥಮಾಲಾ ಅಟ್ಟದಲ್ಲಿ ನಿನ್ನೆ ನಮ್ಮನ್ನಗಲಿದ ಲೇಖಕ, ಚಿಂತಕ, ಲೆಫ್ಟಿನೆಂಟ್ ಜನರಲ್ ಶ್ರೀಕೃಷ್ಣ ಸಿ ಸರದೇಶಪಾಂಡೆ ಅವರ ಕುರಿತು ಏರ್ಪಡಿಸಿದ ಶ್ರದ್ಧಾಂಜಲಿ ಗೌರವ ಸಭೆಯಲ್ಲಿ ಮಾತನಾಡುತ್ತಾ ಶ್ರೀಧರ ನಾಡಿಗೇರ ಮೇಲಿನಂತೆ ಹೇಳಿದರು.
ಲೇಖಕ ರಾಘವೇಂದ್ರ ಪಾಟೀಲ ಮಾತನಾಡುತ್ತಾ ಖಚಿತವಾದ ಮಾತುಗಳು, ದಾಖಲೆ ಸಹಿತ ವಿವರಣೆ ನೀಡುತ್ತಿದ್ದ ಎಸ್ ಸಿ ಸರದೇಶಪಾಂಡೆ ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಸೈನ್ಯ, ಸೈನಿಕರ ಕುರಿತು ಮಾತನಾಡಿ ಸಹಸ್ರಾರು ಕೇಳುಗರ ಮೆಚ್ಚುಗೆಗೆ ಪಾತ್ರರಾದರು. ಅತ್ಯುತ್ತಮ ಲೇಖಕರು ಅವರಾಗಿದ್ದರು.
ಡಾ.ರಮಾಕಾಂತ ಜೋಶಿ ಮಾತನಾಡಿ ಸೈನಿಕ ಸಾಹಿತ್ಯ ಪ್ರಕಟಿಸುತ್ತಿರಾ ಎಂದು ಕೇಳಿದರು. ನಮ್ಮ ಒಪ್ಪಿಗೆ ಸೂಚಿಸಿದೆವು. ಈವರೆಗೆ ಐದು ಕೃತಿಗಳು ಮಾಲೆಯಿಂದ ಪ್ರಕಟವಾಗಿ ಅಪಾರ ಜನಪ್ರಿಯತೆ ಗಳಿಸಿದವು ಎಂದು ಹೇಳಿದರು.
ಎಸ್ ಎಲ್ ಕುಲಕರ್ಣಿ, ಕೆ ಆರ್ ದೇಶಪಾಂಡೆ, ನರಸಿಂಹ ಪರಾಂಜಪೆ, ಉಮೇಶ್ ನಾಯಕ, ಡಾ.ಗಿರಿಧರ ಕಿನ್ನಾಳ ಮಾತನಾಡಿ ಅವರ ಸಾಮಾಜಿಕ ಸಾಂಸ್ಕೃತಿಕ ಬದ್ಧತೆ, ಉತ್ತಮ ಕಾರ್ಯಗಳಿಗಾಗಿ ನೀಡಿದ ಸಹಾಯ, ಅವರ ಕನ್ನಡ ಮತ್ತು ಇಂಗ್ಲಿಷ್ ಕೃತಿಗಳ ಕುರಿತು ಮಾತನಾಡಿ ಗೌರವ ಸಲ್ಲಿಸಿದರು.
ಎಸ್ ಎಮ್ ದೇಶಪಾಂಡೆ, ರಮೇಶ್ ಕಾಖಂಡಿಕಿ, ಸಮೀರ ಜೋಶಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಡಾ.ಹ ವೆಂ ಕಾಖಂಡಿಕಿ ಅವರು ಪ್ರಸ್ತಾವಿಕವಾಗಿ ಮಾತನಾಡಿ ಲೆಫ್ಟಿನೆಂಟ್ ಜನರಲ್ ಶ್ರೀಕೃಷ್ಣ ಸರದೇಶಪಾಂಡೆ ಅವರ ವೃತ್ತಿ, ಬರಹ, ಸಾಮಾಜಿಕ ಸೇವೆಗಳ ಕುರಿತು ವಿವರ ನೀಡಿದರು.
ಕೊನೆಯಲ್ಲಿ ಒಂದು ನಿಮಿಷ ಮೌನ ಆಚರಿಸುವ ಮೂಲಕ ಗೌರವ ಸಲ್ಲಿಸಲಾಯಿತು.