*ಪೌರಕಾರ್ಮಿಕರ ಶ್ರಮಕ್ಕೆ ತಕ್ಕ ಗೌರವ, ನೆರವು ಮತ್ತು ಸಂಭಾವನೆ ನೀಡುವಲ್ಲಿ*
*ರಾಜ್ಯ ಸರ್ಕಾರ ಅಗತ್ಯ ಕ್ರಮ ವಹಿಸಿದೆ: ಶಾಸಕ ಅರವಿಂದ ಬೆಲ್ಲದ*
*ಧಾರವಾಡ(ಕರ್ನಾಟಕ ವಾರ್ತೆ)ಮಾ.17*: ಸದಾ ಸ್ವಚ್ಚತೆಗೆ ಶ್ರಮಿಸುವ ಮತ್ತು ನಗರದ ನೈರ್ಮಲ್ಯ ಕಾಪಾಡುವ ಪೌರ ಕಾರ್ಮಿಕರ ಶ್ರಮಕ್ಕೆ ತಕ್ಕ ಗೌರವ, ನೆರವು ಸಂಭಾವನೆ ನೀಡುವಲ್ಲಿ ರಾಜ್ಯಸರ್ಕಾರವು ಅಗತ್ಯ ಕ್ರಮವಹಿಸಿ ಇತರ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಇಂದು ಬೆಳಿಗ್ಗೆ ಕರ್ನಾಟಕ ವಿಶ್ವವಿದ್ಯಾಲಯ ಆವರಣದ ಗಾಂಧಿ ಭವನದಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಜಿಲ್ಲಾ ನಗರಾಭಿವೃದ್ಧಿ ಕೋಶ, ಸಮಾಜ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಎಂ.ಎಸ್. ಕಾಯ್ದೆ 2013 ರಂತೆ ಸಫಾಯಿ ಕರ್ಮಚಾರಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೌರ ಕಾರ್ಮಿಕರ ಅನುಕೂಲಕ್ಕಾಗಿ ಸಮುದಾಯ ಭವನವನ್ನು ನಿರ್ಮಿಸಲಾಗಿದೆ. ಎಲ್ಲ ಪೌರ ಕಾರ್ಮಿಕರು ಕಡ್ಡಾಯವಾಗಿ ಆಯುಷ್ಮಾನ್ ಕಾರ್ಡ್ ಮಾಡಿಸಿಕೊಳ್ಳಬೇಕು. ಇದರಿಂದ ಕಾಯಿಲೆಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಲು ಸಹಾಯವಾಗುತ್ತದೆ ಎಂದು ಅವರು ಹೇಳಿದರು. ಕೇಂದ್ರ ಸರ್ಕಾರದ ಯೋಜನೆಯಂತೆ ಪ್ರತಿ ಒಬ್ಬ ಬಡವರಿಗೆ ಸರ್ಕಾರದಿಂದ ಮನೆ ನಿರ್ಮಿಸಿ ಕೊಡಲಾಗುತ್ತಿದೆ. ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬಡವರಿಗೆ ಮನೆಗಳನ್ನು ಈಗಾಗಲೇ ನಿರ್ಮಾಣ ಮಾಡಲಾಗಿದೆ ಎಂದರು.
ಪೌರ ಕಾರ್ಮಿಕರಿಗೆ ಬೆಳಗಿನ ಉಪಾಹಾರಕ್ಕಾಗಿ ಸರ್ಕಾರದಿಂದ ಅನುದಾನ ನೀಡಲಾಗುತ್ತಿದೆ. ಪ್ರಸ್ತುತ ರಾಜ್ಯಸರ್ಕಾರವು 11 ಸಾವಿರ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಂಡಿದೆ ಮತ್ತು ಇನ್ನು 12 ಸಾವಿರ ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳುವ ಹಂತದಲ್ಲಿದೆ. ಕುಡಿತ, ಬೆಟ್ಟಿಂಗ್, ಜೂಜುಗಳಿಂದ ದೂರವಿದ್ದು, ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸಬೇಕೆಂದು ಶಾಸಕ ಅರವಿಂದ ಬೆಲ್ಲದ ತಿಳಿಸಿದರು.
ಮುಖ್ಯ ಅತಿಥಿಗಳಾಗಿದ್ದ ಶಾಸಕ ಅಬ್ಬಯ್ಯ ಪ್ರಸಾದ್ ಅವರು ಮಾತನಾಡಿ, ಪೌರ ಕಾರ್ಮಿಕರಿಗೆ ನೀರಕ್ಷೆಯಷ್ಟು ಸೌಲಭ್ಯಗಳು ಸಿಗುತ್ತಿಲ್ಲ ಮತ್ತು ಸರ್ಕಾರದ ಯೋಜನೆ, ಸವಲತ್ತುಗಳು ಸಕಾಲದಲ್ಲಿ ಲಭಿಸುತ್ತಿಲ್ಲ. ಈ ಕುರಿತು ಅಧಿಕಾರಿಗಳು ಇನ್ನಷ್ಟು ಕಾಳಜಿ ವಹಿಸಬೇಕೆಂದು ಹೇಳಿದರು.
ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರಿಗೆ ಹಾಗೂ ಎಸ್‍ಸಿ, ಎಸ್‍ಟಿ ಸಮುದಾಯದವರಿಗೆ ಬೇಡಿಕೆಗೆ ಅನುಗುಣವಾಗಿ ಮನೆಗಳನ್ನು ಸರ್ಕಾರದ ಅನುದಾನದಲ್ಲಿ ನಿರ್ಮಿಸಲಾಗಿದೆ. ಪೌರಕಾರ್ಮಿಕರ ಆರೋಗ್ಯ ಮತ್ತು ಆರೈಕೆಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪೌರಕಾರ್ಮಿಕರು ತಮ್ಮ ಹಕ್ಕು ಮತ್ತು ಸೌಲಭ್ಯಗಳಿಗಾಗಿ ಸಂಘಟಿತರಾಗಬೇಕು. ಸರ್ಕಾರದಿಂದ ಮತ್ತು ಮಹಾನಗರ ಪಾಲಿಕೆಯಿಂದ ದೊರೆಯುವ ಸೌಕರ್ಯಗಳನ್ನು ಪಡೆದು ಅಭಿವೃದ್ಧಿಯಾಗಬೇಕೆಂದು ಅವರು ಹೇಳಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರ ಈರೇಶ ಅಂಚಟಗೇರಿ ಅವರು ಮಾತನಾಡಿ, ಮಹಾನಗರ ಪಾಲಿಕೆಯು ಪೌರಕಾರ್ಮಿಕರಿಗೆ ಅಗತ್ಯವಿರುವ ಸೌಲಭ್ಯ ನೀಡುತ್ತಿದೆ. ಸಕಾಲಕ್ಕೆ ಸಂಬಳ, ಕಾಲಕಾಲಕ್ಕೆ ಆರೋಗ್ಯ ಶಿಬಿರ ಆಯೋಜಿಸುವ ಮೂಲಕ ಆರೋಗ್ಯ ಕಾಳಜಿ ವಹಿಸುತ್ತಿದೆ. ಮಹಾನಗರ ಸ್ವಚ್ಛ ಹಾಗೂ ಸುಂದರವಾಗಿ ಇಡುವಲ್ಲಿ ದಿನನಿತ್ಯ ಶ್ರಮಿಸುವ ಪೌರಕಾರ್ಮಿಕರಿಗೆ ಮಹಾನಗರ ಪಾಲಿಕೆಯ ಎಲ್ಲ ಸದಸ್ಯರು, ಅವಳಿ ನಗರದ ನಾಗರೀಕರು ಋಣಿಯಾಗಿದ್ದಾರೆ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ: ಸುರೇಶ ಇಟ್ನಾಳ, ಕವಿವಿ ಕುಲಪತಿ ಪೆÇ್ರ.ಕೆ.ಬಿ.ಗುಡಸಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶ್ರವಣಕುಮಾರ ನಾಯ್ಕ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಪ್ರಿಯದರ್ಶಿನಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಜಿಲ್ಲಾಮಟ್ಟದ ಮತ್ತು ಉಪ ವಿಭಾಗಮಟ್ಟದ ಸಫಾಯಿ ಕರ್ಮಚಾರಿಗಳ ಸಮಿತಿ ನಾಮನಿರ್ದೇಶಿತ ಸದಸ್ಯರು ಮತ್ತು ಮಹಾನಗರ ಪಾಲಿಕೆಯ ಸದಸ್ಯರು ಹಾಗೂ ಎಸ್.ಸಿ., ಎಸ್.ಟಿ ಸಂಘಟನೆಗಳ ಮುಖಂಡರು, ಪೌರಕಾರ್ಮಿಕರು, ಪೌರಕಾರ್ಮಿಕರ ಕುಟುಂಬ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪೌರಕಾರ್ಮಿಕರ 91 ಕ್ಕೂ ಹೆಚ್ಚು ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ:ಬಿ.ಗೋಪಾಲಕೃಷ್ಣ .ಬಿ., ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಂ.ಎಸ್.ಅಲ್ಲಾಬಕಾಷ್ ಸ್ವಾಗತಿಸಿದರು. ಆರತಿ ದೇವಶಿಖಾಮಣಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಕರಡಿ ಮಜಲು, ಜಗ್ಗಲಗಿ ಬಾರಿಸುವ ಮೂಲಕ ಕಲಾತಂಡಗಳ ಪ್ರದರ್ಶನ ನೆರವೇರಿತು. ವೇದಿಕೆ ಕಾರ್ಯಕ್ರಮದ ನಂತರ ಖ್ಯಾತ ನಾಟಕಕಾರ ಆರ್.ಚಕ್ರಪಾಣಿ ಅವರು ರಚಿಸಿ ನಿರ್ದೇಶಿಸಿರುವ ಓ ಪೌರ ಕಾರ್ಮಿಕ ; ನೀನು ಆರೋಗ್ಯ ರಕ್ಷಕ ಎಂಬ ನಾಟಕವನ್ನು ಪ್ರದರ್ಶಿಸಲಾಯಿತು.
***********