*ಧರ್ಮ ಜಾಗೃತಿ ಮೂಡಿದರೆ ಮಾತ್ರ ವೀರಶೈವ ಲಿಂಗಾಯತ ಧರ್ಮ ಉಳಿಯಲು ಸಾಧ್ಯ:* *ಮಹಾಸಭಾ ಜಿಲ್ಲಾ ಅಧ್ಯಕ್ಷ ಗುರುರಾಜ ಹುಣಸಿಮರದ*
*ಧಾರವಾಡ, ಫೆ.26:* ಪ್ರತಿಯೊಬ್ಬ ವೀರಶೈವ ಲಿಂಗಾಯತರಲ್ಲಿ ಧರ್ಮದ ಅಭಿಮಾನ, ಜಾಗೃತಿ ಮೂಡಿದರೆ ಮಾತ್ರ ವೀರಶೈವ ಲಿಂಗಾಯತ ಧರ್ಮ ಉಳಿಯಲು ಸಾಧ್ಯ. ಉದಾರತೆ ಹೆಸರಿನಲ್ಲಿ ಅಭಿಮಾನ ಶೂನ್ಯರಾಗಿ ನಮ್ಮ ಧರ್ಮಪಾಲನೆ ಮಾಡದಿದ್ದರೆ ವೀರಶೈವ ಲಿಂಗಾಯತ ಧರ್ಮ ಉಳಿದು, ಬೆಳೆದು ಬರುವುದು ಕಷ್ಟವಾಗುತ್ತದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಧಾರವಾಡ ಜಿಲ್ಲಾ ಅಧ್ಯಕ್ಷ ಗುರುರಾಜ ಹುಣಸಿಮರದ ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಧಾರವಾಡ ನಗರಕ್ಕೆ ಆಗಮಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಯುಗಮಾನೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ಶ್ರೀ ರೇಣುಕಾಚಾರ್ಯ ಧರ್ಮ ಜಾಗೃತಿ ಜ್ಯೋತಿ ರಥವನ್ನು ಸ್ವಾಗತಿಸಿ, ಪೂಜೆ ಸಲ್ಲಿಸಿ, ಮಾತನಾಡಿದರು.
ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯರ ಹಾಗೂ ಶ್ರೀ ಜಗಜ್ಯೋತಿ ಬಸವೇಶ್ವರ ಪ್ರೇರಣೆ, ಆಶಿರ್ವಾದದಿಂದ ಹಾನಗಲ್ ಕುಮಾರಸ್ವಾಮಿಗಳು, ವೀರಶೈವ ಸಮಾಜದ ಹಿರಿಯರ ಸಹಕಾರ ಮತ್ತು ಸಹಾಯದಿಂದ ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪಿಸಿದರು. ವೀರಶೈವ ಲಿಂಗಾಯತ ಧರ್ಮದ ಎಲ್ಲ ಒಳಪಂಗಡಗಗಳನ್ನು ಒಗ್ಗೂಡಿಸಿ, ಧಾರ್ಮಿಕ, ಶೈಕ್ಷಣಿಕ, ಆರ್ಥಿಕ ಮತ್ತು ಸಂಸ್ಕಾರಯುತವಾಗಿ ಬಲಿಷ್ಠ ಗೊಳಿಸುವುದು ಮಹಾಸಭಾದ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಶ್ರೀ ರೇಣುಕಾಚಾರ್ಯ ಧರ್ಮ ಜ್ಯೋತಿ ಪ್ರತಿ ವೀರಶೈವ ಲಿಂಗಾಯತ ಧರ್ಮಿಯರ ಮನೆ,ಮನಗಳಿಗೆ ಬೆಳಕು ನೀಡಿ, ಅವರ ಬಾಳು ಬೆಳಗುವ ಜ್ಯೋತಿ ಆಗಲಿ ಎಂದು ಗುರುರಾಜ ಹುಣಸಿಮರದ ಹೇಳಿದರು.
ಧಾರವಾಡ ಉಳವಿ ಚನ್ನಬಸವೇಶ್ವರ ಟ್ರಸ್ಟ್ ಫಂಡ್ ಅಧ್ಯಕ್ಷ ಡಾ.ಎಸ್.ಆರ್.ರಾಮನಗೌಡರ ಅವರು ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳು ಜೀವನದಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ, ಭಕ್ತಿ, ಧರ್ಮ ಜಾಗೃತಿ ಮೂಡಿಸುತ್ತವೆ. ರೇಣುಕಾಚಾರ್ಯ ಜಯಂತಿ ಪ್ರತಿ ವರ್ಷ ನವಚೈತನ್ಯ, ಭಕ್ತಿ ಭಾವ ತರುತ್ತದೆ.ರಾಷ್ಟ್ರದ ಶ್ರೇಷ್ಠ ಧರ್ಮಗಳಲ್ಲಿ ವೀರಶೈವ ಲಿಂಗಾಯತ ಧರ್ಮ ಉನ್ನತವಾದ್ದು, ಜಗದ್ಗುರು ಪಂಚಾಚಾರ್ಯರು ವೀರಶೈವ ಧರ್ಮದ ಜಾಗೃತಿಗಾಗಿ ನಿತ್ಯ ನಾಡಿನಾದ್ಯಂತ ಸಂಚರಿಸಿ, ಧರ್ಮ ಸಭೆ ಮಾಡುತ್ತಿದ್ದಾರೆ. ಮಾನವ ಧರ್ಮವೇ ವೀರಶೈವ ಲಿಂಗಾಯತ ಧರ್ಮದ ತಿರುಳಾಗಿದೆ ಎಂದು ಅವರು ಹೇಳಿದರು.
ರೇಣುಕಾಚಾರ್ಯ ಜಯಂತಿ ಉತ್ಸವ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ, ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಸರೋಜಾ ಪಾಟೀಲ ಅವರು ಮಾತನಾಡಿ, ವೀರಶೈವ ಸಂಸ್ಥಾಪನಾಚಾರ್ಯ ಶ್ರೀ ರೇಣುಕರ ಜಯಂತಿಯನ್ನು ಪ್ರತಿ ವರ್ಷ ನಾಡಿನಾದ್ಯಂತ ಅದ್ದೂರಿಯಾಗಿ, ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.
ನಮ್ಮ ರಾಜ್ಯ ಸರಕಾರ ಈ ವರ್ಷದಿಂದ ಶ್ರೀ ರೇಣುಕರ ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸುತ್ತಿರುವುದು ರೇಣುಕರ ಧರ್ಮ ಸಂದೇಶಕ್ಕೆ ನೀಡಿದ ಮಾನ್ಯತೆ ಆಗಿದೆ ಎಂದರು.
ಪ್ರತಿ ಸಲದಂತೆ ಈ ವರ್ಷವೂ ಧಾರವಾಡದಲ್ಲಿ ಎಲ್ಲ ವೀರಶೈವ ಲಿಂಗಾಯತ ಧರ್ಮಿಯರ ನೇತ್ರತ್ವ ಮತ್ತು ಸಹಕಾರದಲ್ಲಿ ಶ್ರೀ ರೇಣುಕಾಚಾರ್ಯ ಜಯಂತಿಯನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಪ್ಯಾಟಿ ವೀರಭದ್ರೇಶ್ವರ ದೇವಸ್ಥಾನದ ಅರ್ಚಕ ವಿರೇಶ ಶಾಸ್ತ್ರೀ ಹಿರೇಮಠ ಅವರು ಜ್ಯೋತಿಗೆ ಪೂಜೆ ಸಲ್ಲಿಸಿ, ಮಂಗಳ ಆರತಿ ಮಾಡಿದರು.
ವೀರಶೈವ ಜಂಗಮ ಸಂಸ್ಥೆಯ ಖಜಾಂಚಿ ಪಿ.ಎಸ್.ಹಿರೇಮಠ ಸ್ವಾಗತಿಸಿದರು. ಡಾ.ಸುರೇಶ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಕ್ತಿ ಜೆ. ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.
ರೇಣುಕಾಚಾರ್ಯ ಉತ್ಸವ ಜಯಂತಿ ಸಮಿತಿ ಪ್ರಧಾನ ಕಾರ್ಯದರ್ಶಿ ಮಂಜುನಾಥ ಹಿರೇಮಠ ವಂದಿಸಿದರು.
ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ರಾಜಣ್ಣ ಹಿರೇಮಠ, ಗೌರವಾಧ್ಯಕ್ಷ ಈಶ್ವರ ಹಿರೇಮಠ, ಸದಸ್ಯರಾದ ಜಗದೀಶ ಹಿರೇಮಠ, ಬಸವರಾಜ ಕುರಹಟ್ಟಿಮಠ, ಗುರುಪಾದಯ್ಯ ಚಿಲ್ಲಾಳಮಠ, ಮಹೇಶ ಗುರುಸ್ಥಲಮಠ, ಚಂದ್ರಕಾಂತ ಹಿರೇಮಠ, ಪ್ಯಾಟಿ ವೀರಭದ್ರೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಬಾಬಣ್ಣ ಹೆಗಡಿ, ಜಂಗಮ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರಭು ಕೆಂಡದಮಠ, ಸದಸ್ಯರಾದ ಡಾ.ಎಸ್.ಜಿ.ಮಠದ, ಸುಮಿತಾ ಹಿರೇಮಠ, ಶಿವಾನಂದ ಹಿರೇಮಠ, ಅನುಷಾ ಹಿರೇಮಠ ಸೇರಿದಂತೆ ಸಾರ್ವಜನಿಕರು, ಜಂಗಮ ಸಮಾಜದ ಹಿರಿಯರು ಭಾಗವಹಿಸಿದ್ದರು.
ರೇಣುಕಾಚಾರ್ಯ ಧರ್ಮ ಜಾಗೃತಿ ಜ್ಯೋತಿಯು ಶಿವಮೊಗ್ಗ ಜಿಲ್ಲೆ ಸೊರಬದ ಪಂಚಾಚಾರ್ಯ ಸೇವಾ ಸಮಿತಿ ಅಧ್ಯಕ್ಷರಾದ ಶಂಭುಲಿಂಗಯ್ಯ ಕೆ.ಎನ್. ಅವರವನೇತ್ರತ್ವದಲ್ಲಿ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ, ಆಲೂರು ವೆಂಕಟರಾವ್ ವೃತ್ತದಿಂದ ಹುಬ್ಬಳ್ಳಿಗೆ ತೆರಳಿತು