*ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಜರುಗಿದ*
*ವಿಡಿಯೋ ಕಾನ್ಪರೆನ್ಸ್ ಕೊಠಡಿಗಳ ಉದ್ಘಾಟನಾ ಸಮಾರಂಭ*
*ಧಾರವಾಡ (ಕರ್ನಾಟಕ ವಾರ್ತೆ) ಡಿ.17:* ರಾಜ್ಯ ಸರ್ಕಾರವು ರಾಜ್ಯದ ಕಾರಾಗೃಹಗಳಲ್ಲಿ ಬಂದಿಗಳನ್ನು ವಿಚಾರಣೆಗೆ ಹಾಜರು ಪಡಿಸಲು ಅನುಕೂಲವಾಗಲು ವಿಡಿಯೋ ಕಾನ್ಪರೆನ್ಸ್ ಕೊಠಡಿಗಳನ್ನು ನಿರ್ಮಿಸಲು ಮತ್ತು ಅದಕ್ಕೆ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಿದೆ.
ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ನೂತನವಾಗಿ 4 ವಿಡಿಯೋ ಕಾನ್ಪರೆನ್ಸ್ ಕೊಠಡಿಗಳನ್ನು ಸ್ಥಾಪಿಸಲಾಗಿದ್ದು, ಡಿ.12 ರಂದು ಈ ನೂತನ ಕೊಠಡಿಗಳನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಉದ್ಘಾಟಿಸಿದರು.
ಉದ್ಘಾಟಿಸಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಕಾರಾಗೃಹಗಳಲ್ಲಿರುವ ವಿಚಾರಣಾ ಹಾಗೂ ಶಿಕ್ಷಾ ಬಂದಿಗಳನ್ನು ನ್ಯಾಯಾಲಯಗಳಿಗೆ ನಿಗಧಿತ ದಿನಾಂಕಗಳಂದು ಸರಿಯಾದ ಸಮಯಕ್ಕೆ ಹಾಜರುಪಡಿಸುವುದು ಪೊಲೀಸ್ ಇಲಾಖೆಗೆ ದೊಡ್ಡ ಸವಾಲು ಹಾಗೂ ಭದ್ರತಾ ಕಾರ್ಯಕ್ಕೆ ಸಿಬ್ಬಂದಿ ಕೊರತೆ ಉಂಟಾಗುತ್ತಿರುವುದರಿಂದ ನಿಗದಿತ ಸಮಯಕ್ಕೆ ನ್ಯಾಯಾಲಯಗಳಿಗೆ ಹಾಜರುಪಡಿಸಲು ತೊಂದರೆಯಾಗುತ್ತಿದೆ. ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯು ತನ್ನ ಕಾರಾಗೃಹಗಳಲ್ಲಿ ವಿಡಿಯೋ ಕಾನ್ಪರೆನ್ಸ್ ಕೊಠಡಿಗಳನ್ನು ನಿರ್ಮಿಸಿ, ವಿಡಿಯೋ ಮುಖಾಂತರ ನ್ಯಾಯಾಲಯಕ್ಕೆ ಹಾಜರುಪಡಿಸುವ ವಿನೂತನ ಕಾರ್ಯ ಕೈಗೊಂಡಿದೆ. ಬಂದಿಗಳನ್ನು ಸಕಾಲದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸುವುದರಿಂದ ಬಂದಿಗಳಿಗೆ ತ್ವರಿತ ನ್ಯಾಯ ಸಿಗಲು ಅನೂಕೂಲವಾಗುತ್ತದೆ. ಮತ್ತು ಸಿಬ್ಬಂದಿ ಕೊರತೆ ನೀಗಿಸಲು ಸಹಾಯವಾಗುತ್ತದೆ. ಕಾರಾಗೃಹದಲ್ಲಿ ಇಂಥಹ ಮಹತ್ವದ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ. ಈ ಸೌಲಭ್ಯ ಸದುಪಯೋಗ ಆಗಬೇಕೆಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಪೋಲಿಸ್ ಅಧೀಕ್ಷಕ ಲೊಕೇಶ ಜಗಲಾಸರ್ ಅವರು ಮಾತನಾಡಿ, ಈಗಾಗಲೇ ಧಾರವಾಡ ಕೇಂದ್ರ ಕಾರಾಗೃಹದಲ್ಲಿ 2 ವಿಡಿಯೋ ಕಾನ್ಫರೆನ್ಸ್ ಕೊಠಡಿಗಳಿದ್ದು, ಬಂದಿಗಳಿಗೆ ಇನ್ನು ಹೆಚ್ಚಿನ ಅನುಕೂಲವಾಗಲು ಹಾಗೂ ಸಿಬ್ಬಂದಿಯ ಕೊರತೆ ನೀಗಿಸಲು ಸಹಕಾರಿಯಾಗಿರುವ ಇಂತಹ ಮಹಾಂತ್ವಾಕಾಂಕ್ಷಿ ಯೋಜನೆಗೆ ಕೇಂದ್ರ ಕಾರಾಗೃಹದಲ್ಲಿ ನೂತನವಾಗಿ 4 ವಿಡಿಯೋ ಕಾನ್ಪರೆನ್ಸ್ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ವಿಡಿಯೋ ಕಾನ್ಪರೆನ್ಸ್ ಸೇವೆ ಅವಶ್ಯವಿದ್ದು ಸದರಿ ಸೇವೆಯು ಎಲ್ಲ ಬಂದಿಗಳಿಗೆ ಅನುಕೂಲವಾಗುವುದು ಎಂದು ತಿಳಿಸಿದರು.
ಕಾರಾಗೃಹದ ಅಧೀಕ್ಷಕ ಎಂ.ಎ.ಮರಿಗೌಡ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಪಿ.ಬಿ. ಕುರಬೇಟ ಸ್ವಾಗತಿಸಿದರು. ಸಹಾಯಕ ಅಧೀಕ್ಷಕ ಸುನೀಲ್ ಗಲ್ಲೆ ಅವರು ವಂದಿಸಿದರು.
STAR 74 NEWS DO SUBSCRIBE LIKE SHARE