ಶಿಕ್ಷಕರ ಮರು ಹೊಂದಾಣಿಕೆ--ಹೆಚ್ಚುವರಿ ಶಿಕ್ಷಕರ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ :ಗುರಿಕಾರರು ಆಗ್ರಹ


      
   ಶಿಕ್ಷಕರ ಮರು ಹೊಂದಾಣಿಕೆ--ಹೆಚ್ಚುವರಿ ಶಿಕ್ಷಕರ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ :ಗುರಿಕಾರರು ಆಗ್ರಹ
      ಧಾರವಾಡ 14 : ಶಿಕ್ಷಕರ ಮರು ಹೊಂದಾಣಿಕೆ, ಹೆಚ್ಚುವರಿ ಶಿಕ್ಷಕರ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಅಖಿಲ ಭಾರತ ಶಿಕ್ಷಕರ ಫೆಡರೇಶನ್ ನವದೆಹಲಿ.ಕಾರ್ಯಾಧ್ಯಕ್ಷರಾದ 
ಬಸವರಾಜ ಗುರಿಕಾರ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ,
    ಈ ಕುರಿತು ಹೇಳಿಕೆ ನೀಡಿರುವ ಅವರು,
ಶಿಕ್ಷಣ ಇಲಾಖೆ ಸರಕಾರಿ ಶಾಲಾ ಶಿಕ್ಷಕರ ಮರು ಹೊಂದಾಣಿಕೆ ಮತ್ತು ಹೆಚ್ಚುವರಿ ಪ್ರಕ್ರಿಯೆಯನ್ನು ಆರಂಭಿಸಲು ಈಗಾಗಲೇ ಕಾರ್ಯಪ್ರವೃತ್ತವಾಗಿದೆ ಆದರೆ ಈ ಮರು ಹೊಂದಾಣಿಕೆಯಲ್ಲಿ ಬಹಳಷ್ಟು ಲೋಪ ದೋಷಗಳು ಇದ್ದು ಸರ್ಕಾರಿ ಶಾಲೆಗಳಿಗೆ ಇದು ಮಾರಕವಾಗಿ ಪರಿಣಮಿಸಲಿದೆ.  ಶೈಕ್ಷಣಿಕ ವರ್ಷದ ನವೆಂಬರ, ಡಿಸೆಂಬರ್, ಜನವರಿ, ಫೆಬ್ರುವರಿ ತಿಂಗಳುಗಳು ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತುಂಬಾ ಉಪಯುಕ್ತವಾದ ಮತ್ತು ಮಹತ್ವದ ದಿವಸಗಳಾಗಿವೆ. ಈ ಸಮಯದಲ್ಲಿ ಶಿಕ್ಷಕರ ಹೆಚ್ಚುವರಿ ಮರು ಹೊಂದಾಣಿಕೆ ಪ್ರಕ್ರಿಯೆ ಆರಂಭಿಸಿದ್ದರಿಂದ ಶಿಕ್ಷಕರು ಮಾನಸಿಕವಾಗಿ ಜರ್ಜರಿತರಾಗುತ್ತಾರೆ ಎಂದಿದ್ದಾರೆ.
     ಪಾಠ ಬೋಧನಾ ವಿಷಯವಾಗಿ ಪ್ರತಿಯೊಬ್ಬ ಶಿಕ್ಷಕ ತನ್ನದೇ ಆದ ಯೋಜನೆ ಹೊಂದಿರುತ್ತಾನೆ. ಶೈಕ್ಷಣಿಕ ವರ್ಷ ಮುಕ್ತಾಯವಾಗುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಯಾವ ರೀತಿ ಪರಿಣಾಮಕಾರಿ ಬೋಧನೆ ಮಾಡಬೇಕು ಎಂಬುದರ ಬಗ್ಗೆ ತನ್ನದೇ ಆದ ಕ್ರಿಯಾ ಯೋಜನೆ ಹೊಂದಿರುತ್ತಾನೆ. ಈ ಪರಿ ಪಕ್ವವಾದ ಸಂದರ್ಭದಲ್ಲಿ ಈ ಹೆಚ್ಚುವರಿ ಮರು ಹೊಂದಾಣಿಕೆ ಪ್ರಕ್ರಿಯೆ ಆರಂಬಿಸಿದ್ದರಿಂದ ಶಿಕ್ಷಕರು ಗಲಿಬಿಲಿಗೆ ಒಳಗಾಗಿ ಇದರ ಬಗ್ಗೆಯೇ ಯೋಚನೆ ಮಾಡುವ ಪರಿಸ್ಥಿತಿಗೆ ಶಿಕ್ಷಣ ಇಲಾಖೆ ತಂದೊಡ್ಡಿದೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಹಿತ ದೃಷ್ಟಿಯಿಂದ ಒಳ್ಳೆಯದಲ್ಲ ಎಂದಿದ್ದಾರೆ.
      ಹೆಚ್ಚುವರಿ ಮತ್ತು ಮರು ಹೊಂದಾಣಿಕೆಗೆ ಒಳಪಟ್ಟ ಶಿಕ್ಷಕ/ ಶಿಕ್ಷಕಿಯರಿಗೆ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಈ ಶಾಲೆ ಬಿಟ್ಟು ಮತ್ತೊಂದು ಶಾಲೆಗೆ ಹೋಗುವುದರಿಂದ ಅಲ್ಲಿನ ಪರಿಸ್ಥಿತಿಗೆ ಶಿಕ್ಷಕರು ಹೊಂದಿಕೊಳ್ಳಲು ಕಷ್ಟ, ವಿದ್ಯಾರ್ಥಿಗಳು ಸಹ ಬದಲಾದ ಬೋಧನಾ ವ್ಯವಸ್ಥೆಗೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ. 
     ಈಗಿರುವ ವಿದ್ಯಾರ್ಥಿ ಶಿಕ್ಷಕ ಅನುಪಾತ ಗುಣಾತ್ಮಕ ಕಲಿಕೆಗೆ ಪೂರಕವಾಗಿಲ್ಲ ಇದನ್ನು ಮಾರ್ಪಡಿಸುವ ಅವಶ್ಯಕತೆ ಇದೆ, ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 5 ತರಗತಿಗಳು ಇದ್ದು, ವಿದ್ಯಾರ್ಥಿಗಳ ಸಂಖ್ಯೆ 1ರಿಂದ 11 ಇದ್ದರೆ ಒಬ್ಬರೇ ಶಿಕ್ಷಕರು ಇರಬೇಕು ಎಂಬ ನಿಯಮ ಇದ್ದು, ವಿದ್ಯಾರ್ಥಿಗಳ ಸಂಖ್ಯೆ 12 ರಿಂದ 60 ಇದ್ದರೆ ಇಬ್ಬರು ಶಿಕ್ಷಕರು ಇರಬೇಕೆಂಬ ನಿಯಮವಿದೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ ಸಹ ತರಗತಿಗಳು 5 ಇರುತ್ತದೆ 5 ತರಗತಿಗಳಿಗೆ ಒಬ್ಬರು ಅಥವಾ ಇಬ್ಬರು ಶಿಕ್ಷಕರು ಹೇಗೆ ಪಾಠ ಮಾಡಲು ಸಾಧ್ಯ, ಗುಣಾತ್ಮಕ ಕಲಿಕೆ ಕನಸಿನ ಮಾತಾಗುತ್ತದೆ. ಇಂತಹ ಅವೈಜ್ಞಾನಿಕ ನಿಯಮ ಅಳವಡಿಸಿಕೊಂಡು ಮರು ಹೊಂದಾಣಿಕೆ ಶಿಕ್ಷಕರ ಹೆಚ್ಚುವರಿ ಮಾಡುವುದರಿಂದ ಸರ್ಕಾರಿ ಶಾಲೆಗಳನ್ನು ಶಾಶ್ವತವಾಗಿ ಮುಚ್ಚಬೇಕೆಂಬ ಹುನ್ನಾರ ಅಡಗಿದೆ ಎಂಬ ಸಂಶಯ ಪಾಲಕ ಪೋಷಕರಲ್ಲಿ ಬಂದಿದೆ.
    ಶಿಕ್ಷಣ ಇಲಾಖೆ, ಪ್ರಗತಿಪರ ಶಿಕ್ಷಣ ತಜ್ಞರು, ಶಿಕ್ಷಕರು, ಶಿಕ್ಷಕ ಸಂಘ, ಎಸ್ ಡಿ ಎಂ ಸಿ, ಪಾಲಕ ಪೋಷಕರ ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯ ಕ್ರೂಢೀಕರಿಸಿ ಹೊಸ ನಿಯಮ ರೂಪಿಸಬೇಕು ಈಗಾಗಲೇ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಎಲ್ಲ ಶಿಕ್ಷಕರು ಎಲ್ಲ ವಿಷಯಗಳ ಬೋಧನೆ ಮಾಡುವುದರ ಜೊತೆಗೆ ಬೋಧನೇತರ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ವಿಷಯವಾರು ಶಿಕ್ಷಕರು ಬೇಕು ಎಂಬ ನೆಪದಲ್ಲಿ ವಿಷಯವಾರು ಮರುಹೊಂದಾಣಿಕೆ ಮಾಡಲಾಗುತ್ತದೆ 52,630 ಹುದ್ದೆಗಳು ಮಂಜೂರಾಗಿರುತ್ತವೆ ಎಂದು ಶಿಕ್ಷಣ ಇಲಾಖೆ ಹೇಳಿದೆ ಈ ಹುದ್ದೆಗಳು ವಾಸ್ತವಿಕವಾಗಿ ಈಗಾಗಲೇ ಒಂದರಿಂದ ಏಳನೇ ತರಗತಿಗೆ ಮಂಜೂರಾದ ಹಾಲಿ  ಕರ್ತವ್ಯ ನಿರ್ವಹಿಸುತ್ತಿರುವ, ನಿರ್ವಹಿಸಿದ ಶಿಕ್ಷಕರ ಹುದ್ದೆಗಳಾಗಿವೆ. ನೇರ ನೇಮಕಾತಿಯಿಂದ 12,494 ಶಿಕ್ಷಕರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಇಲಾಖೆ ಹೇಳಿದೆ,  43,697 ಹುದ್ದೆಗಳಲ್ಲಿ ಕೆಲವು ಖಾಲಿ ಹುದ್ದೆಗಳಿದ್ದು 43,600 ಶಿಕ್ಷಕರು ಈ ಹುದ್ದೆಗಳಿಗೆ ಎದುರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ.            ಇವರೆಲ್ಲರೂ ಎಲ್ಲ ವಿಷಯಗಳನ್ನು ಬೋಧಿಸಬಲ್ಲ ಅನುಭವಿಕ ನುರಿತ ಶಿಕ್ಷಕರಾಗಿದ್ದು 1 ರಿಂದ 8 ನೇ ತರಗತಿಗೆ ನೇಮಕವಾದ ಶಿಕ್ಷಕರಾಗಿದ್ದಾರೆ. ಇವರುಗಳನ್ನು  ಈಗಿರುವ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರೆಂದು ಗುರುತಿಸಿ ಇವರಿಗೆ ಪದವೀಧರ ಶಿಕ್ಷಕರ ವೇತನ ಶ್ರೇಣಿ ನಿಗದಿಗೊಳಿಸಿದ್ದರೆ ಸರ್ಕಾರಕ್ಕೆ ಆರ್ಥಿಕವಾಗಿ ಉಳಿತಾಯವಾಗುತ್ತದೆ. ಹೊಸ ನೇಮಕಾತಿಯ ಪ್ರಶ್ನೆಯೆ ಉದ್ಭವಿಸುವದಿಲ್ಲ. ಸರಕಾರ ಇದೇ ಶೈಕ್ಷಣಿಕ ಸಾಲಿನಲ್ಲಿ 43,697 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಸಾಧ್ಯವಿಲ್ಲ ಅಂದಮೇಲೆ ಶಿಕ್ಷಕರ ಮರು ಹೊಂದಾಣಿಕೆಗೆ ಹೆಚ್ಚುವರಿಗೆ ಯಾವ ಅರ್ಥವಿದೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ
        ಹಾಲಿ ಶಿಕ್ಷಕರುಗಳಿಗೆ ಮಾನಸಿಕ ಹಿಂಸೆ ನೀಡುವ ಕಾರ್ಯ ಮಾತ್ರ ಇಲಾಖೆ ಆರಂಭಿಸಿದೆ ಎಂಬ ಸಂಶಯ ಬರುತ್ತದೆ 1967 ರಿಂದ ಒಂದರಿಂದ ಏಳನೇ ತರಗತಿಗೆ ಸಾಮಾನ್ಯ ಶಿಕ್ಷಕರನ್ನು ನೇಮಕಗೊಂಡಿರುವುದರಿಂದ ಇವರೆಲ್ಲರೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿರುವ 6, 7, 8ನೇ ತರಗತಿಗಳಲ್ಲಿ ಇರುವುದರಿಂದ ಶಿಕ್ಷಕರು ಹೆಚ್ಚಾಗಿದ್ದಾರೆಂದು ಇಲಾಖೆ ಶಿಕ್ಷಕರಿಗೆ ಅವಮಾನವಾಗುವ ರೀತಿಯಲ್ಲಿ ಪದ ಬಳಕೆ ಮಾಡಿದೆ,  ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಇದೇ ಶಿಕ್ಷಕರು ಸರ್ವಜ್ಞರಂತೆ ಒಂದರಿಂದ ಎಂಟನೇ ತರಗತಿಗೆ ಬೋಧನೆ ಮಾಡುತ್ತಾ ಬಂದ ಪರಿಣಾಮ ಕರ್ನಾಟಕದ ಶಿಕ್ಷಣ ಗುಣಮಟ್ಟ ದೇಶಕ್ಕೆ ಮಾದರಿಯಾಗಿದೆ ಇವರು ಸಹಜವಾಗಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರಲ್ಲ, ಸರ್ಕಾರಿ ಶಾಲೆಗಳ ಉಳಿವಿಗಾಗಿ ಹಗಲಿರಳು ಶ್ರಮಿಸಿದ ಶಿಕ್ಷಕರಾಗಿದ್ದಾರೆ. ಈ ಶಿಕ್ಷಕರ ಶ್ರಮದಿಂದ ಸರ್ಕಾರಿ ಶಾಲೆಗಳು ಜೀವಂತವಾಗಿ ಉಳಿದಿವೆ. 1,86,000 ಶಿಕ್ಷಕರಲ್ಲಿ ಈಗ 1,61,000 ಶಿಕ್ಷಕರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ 25,000ಕ್ಕೂ ಹೆಚ್ಚು ಹುದ್ದೆಗಳು ಎಲ್ಲಿ ಮಾಯವಾಗಿದೆ, ನಿವೃತ್ತಿಯಾದ ಶಿಕ್ಷಕರ ಕೆಲವು ಹುದ್ದೆಗಳನ್ನು ಸರ್ಕಾರ ರದ್ದುಗೊಳಿಸಿರಬಹುದು ಎಂಬ ಗುಮಾನಿ ಕಾಡುತ್ತದೆ. 
      ಇದ್ದ ಹುದ್ದೆಗಳನ್ನು ಉಳಿಸಿಕೊಳ್ಳದೆ ಇಲಾಖೆ ಈಗ ಮರು ಹೊಂದಾಣಿಕೆ ಹೆಚ್ಚುವರಿ ನೆಪದಲ್ಲಿ ಸರ್ಕಾರಿ ಶಾಲೆಗಳ ಸುಧಾರಣೆಗೆ ಕ್ರಮ ಕೈಗೊಳ್ಳುತ್ತೇವೆ ಎಂಬುದು ಹಾಸ್ಯಾಸ್ಪದ 1987ರಲ್ಲಿ 11,000 ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯ ಹುದ್ದೆಗಳು 2007ರಲ್ಲಿ 747 ಹುದ್ದೆಗಳು ಒಟ್ಟು 18047 ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಈಗ 15,413 ಮುಖ್ಯೋಪಾಧ್ಯಾಯರು ಇದ್ದು ಈ ಹಿಂದೆ ಮಂಜುರಾದ ಮೂರು ಸಾವಿರ ಮುಖ್ಯೋಪಾಧ್ಯಾಯ ಹುದ್ದೆಗಳು ಎಲ್ಲಿ ಮಾಯವಾಗಿವೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ /ಮರು ಹೊಂದಾಣಿಕೆ ಮಾಡಿದರೆ ಹಾಲಿ ಇರುವ ಶಾಲೆಗಳ ಪರಿಸ್ಥಿತಿ ಏನು? ವಾಸ್ತವಿಕವಾಗಿ ಎಲ್ಲ ಹಿರಿಯ ಎಲ್ಲ ಶಾಲೆಗಳಿಗೆ ಮುಖ್ಯೋಪಾಧ್ಯಾಯರ ಹುದ್ದೆಗಳನ್ನು ಮಂಜೂರು ಮಾಡುವುದರ ಮುಖಾಂತರ ಸರಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಪ್ರಯತ್ನ ಮಾಡಬೇಕಾಗಿತ್ತು ಆದರೆ  ಹುದ್ದೆಗಳನ್ನು ಕಡಿಮೆಗೊಳಿಸುವ ಮುಖಾಂತರ ಮುಖ್ಯೋಪಾದ್ಯಯರುಗಳನ್ನು ಮರು ಹೊಂದಾಣಿಕೆ /ಹೆಚ್ಚುವರಿ ಮಾಡುವುದು ಸೂಕ್ತವಲ್ಲ ಪ್ರತಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ದೈಹಿಕ ಶಿಕ್ಷಕರ ಅವಶ್ಯಕತೆ ಇದೆ ಸರ್ಕಾರ ಆ ಕಾರ್ಯವನ್ನು ಮಾಡದೆ ಹಾಲಿ ಇರುವ ದೈಹಿಕ ಶಿಕ್ಷಕರುಗಳನ್ನು ಕಡಿಮೆ ಸಂಖ್ಯೆಯಿಂದ ಹೆಚ್ಚಿನ ಸಂಖ್ಯೆಯಲ್ಲಿರುವ ವಿದ್ಯಾರ್ಥಿಗಳ ಶಾಲೆಗೆ ಮರು ಹೊಂದಾಣಿಕೆ/ ಹೆಚ್ಚುವರಿ ಮಾಡುತ್ತಿರುವುದು ಇದು ಅವೈಜ್ಞಾನಿಕವಾಗಿದ್ದು, ವೈದ್ಯನಾಥ್ ವರದಿಗೆ ಮಾಡಿದ ಅವಮಾನವಾಗಿದೆ. ಈಗ ಶಾಲೆಯಿಂದ ದೈಹಿಕ ಶಿಕ್ಷಕರು ಬೇರೆ ಶಾಲೆಗೆ ಹೋದರೆ ಇಲ್ಲಿಯವರೆಗೆ ಅವರಿಂದ ಕ್ರೀಡಾಬ್ಯಾಸ ಮಾಡಿದ ವಿದ್ಯಾರ್ಥಿಗಳು ದೈಹಿಕ ಶಿಕ್ಷಣದಿಂದ ವಂಚಿತರಾಗುವುದಿಲ್ಲವೇ ಈ ವಿದ್ಯಾರ್ಥಿಗಳು ಮಾಡಿದ ತಪ್ಪೇನು? ಸರಕಾರಕ್ಕೆ ಇಚ್ಛಾಶಕ್ತಿ ಇದ್ದರೆ ಎಲ್ಲ ಶಾಲೆಗಳಿಗೆ ದೈಹಿಕ ಶಿಕ್ಷಕ ಹುದ್ದೆಗಳನ್ನು ಮಂಜೂರು ಮಾಡಲಿ ಅಲ್ಲಿಯವರೆಗೆ ಈಗಿರುವ ದೈಹಿಕ ಶಿಕ್ಷಕರ ಮರು ಹೊಂದಾಣಿಕೆ ಹೆಚ್ಚುವರಿ ಮಾಡುವುದು ಸೂಕ್ತವಲ್ಲವೆಂದು  ಬಸವರಾಜ ಗುರಿಕಾರ ಹೇಳಿದ್ದಾರೆ.
STAR 74 NEWS DO SUBSCRIBE LIKE SHARE

ನವೀನ ಹಳೆಯದು

نموذج الاتصال