DHARWAD:ರಾಜ್ಯಮಟ್ಟದ ಯುವಜನರ ಆಗ್ರಹ ದಿನದ ಪೋಸ್ಟರ್ ಬಿಡುಗಡೆ.

ರಾಜ್ಯಮಟ್ಟದ ಯುವಜನರ ಆಗ್ರಹ ದಿನದ ಪೋಸ್ಟರ್ ಬಿಡುಗಡೆ.
ಎಐಡಿವೈಒ 60ನೇ ಸಂಸ್ಥಾಪನಾ ವರ್ಷಾಚರಣೆಯ ಅಂಗವಾಗಿ ಖಾಲಿ ಹುದ್ದೆಗಳ ಭರ್ತಿ ಮತ್ತು ಸಾಂಸ್ಕೃತಿಕ ಅಧಃಪತನದ ವಿರುದ್ಧ ಹಮ್ಮಿಕೊಂಡಿರುವ ರಾಜ್ಯಮಟ್ಟದ ಯುವಜನರ ಆಗ್ರಹ ದಿನದ ಪೋಸ್ಟರ್ ಬಿಡುಗಡೆ
       
ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಸ್ಥಾಪನೆಯಾಗಿ 59 ವರ್ಷ ಪೂರೈಸಿ 60ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಸಂದರ್ಭದಲ್ಲಿ ಎಐಡಿವೈಒ ರಾಜ್ಯ ಸಮಿತಿಯ ನೇತೃತ್ವದಲ್ಲಿ ಖಾಲಿ ಹುದ್ದೆಗಳ ಭರ್ತಿ ಮತ್ತು ಸಾಂಸ್ಕೃತಿಕ ಅಧಃಪತನದ ವಿರುದ್ಧ ರಾಜ್ಯ ಮಟ್ಟದ ಯುವಜನರ ಆಗ್ರಹ ದಿನವನ್ನು ಜೂನ್ 26ರಂದು ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಹಮ್ಮಿಕೊಳ್ಳಲಾಗಿದೆ. ರಾಜ್ಯಮಟ್ಟದ ಆಗ್ರಹ ದಿನದ ಪೋಸ್ಟರ್ ಅನ್ನು ಇಂದು ಧಾರವಾಡದ ಜಿಲ್ಲಾ ಕಚೇರಿಯಲ್ಲಿ ಬಿಡುಗಡೆ ಮಾಡಲಾಯಿತು.

ನಮ್ಮ ಸಂಘಟನೆಯು ಕೋಲ್ಕತ್ತಾದಲ್ಲಿ ಜೂನ್ 26, 1966ರಲ್ಲಿ ಸ್ಥಾಪನೆಯಾಗಿ 59 ವಸಂತಗಳನ್ನು ಪೂರೈಸಿ ಇದೇ ಜೂನ್ 26ಕ್ಕೆ 60ನೇ ವರ್ಷಕ್ಕೆ ಕಾಲಿಡುತ್ತಿರುವುದು ಅನನ್ಯವಾದ ಸಂಗತಿ. ಯುವಜನರ ಸಮಸ್ಯೆಗಳ ವಿರುದ್ಧ ಹೋರಾಟಗಳನ್ನು ಕಟ್ಟುತ್ತಾ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬೆಳೆಯುತ್ತಾ ಇಂದು ದೇಶದ 24 ರಾಜ್ಯಗಳಲ್ಲಿ ಸಂಘಟನೆ ವಿಸ್ತಾರಗೊಂಡಿದೆ. ಅಲ್ಲದೆ ನಮ್ಮ ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸಂಘಟನೆಯು ಸಕ್ರಿಯವಾಗಿದೆ. 60ನೇ ವರ್ಷದ ಈ ಸಂದರ್ಭದಲ್ಲಿ ಯುವಜನರ ಹಲವು ಗಂಭಿರ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ರಾಜ್ಯದ ಯುವಜನರ ಧ್ವನಿಯಾಗಿ ಈ ಯುವಜನ ಆಗ್ರಹ ದಿನವನ್ನು ಹಮ್ಮಿಕೊಂಡಿದೆ.
ಇಂದು ನಮ್ಮ ದೇಶದಲ್ಲಿ ಯುವಜನರು ಅಗಾಧ ಪ್ರಮಾಣದಲ್ಲಿದ್ದಾರೆ. ನಿರುದ್ಯೋಗಿ ಯುವಪಡೆಯೇ ಸೃಷ್ಟಿಯಾಗಿದೆ. ಈ ಯುವಜನರನ್ನು ಸರಿಯಾಗಿ ಬಳಸಿಕೊಂಡರೆ ದೇಶದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಒಂದು ಮಹಾನ್ ಶಕ್ತಿಯಾಗುತ್ತಾರೆ. ಆದರೆ ಸ್ವಾತಂತ್ರ್ಯ ಬಂದಾಗಿನಿಂದಲೂ ಯಾವುದೇ ಪಕ್ಷಗಳು ಈ ಶಕ್ತಿಯನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡಿಲ್ಲ. ಬದಲಿಗೆ ಈ ಯುವಜನತೆಯನ್ನು ತಮ್ಮ ವೋಟ್ ಬ್ಯಾಂಕ್ ಮಾಡಿಕೊಳ್ಳಲು ಪ್ರಯತ್ನಿಸಿವೆ. ಜಾಗತೀಕರಣ ನೀತಿಗಳನ್ನು ಜಾರಿಗೊಳಿಸಿದ ಕಾಂಗ್ರೆಸ್ ಸರ್ಕಾರ ಉದ್ಯೋಗಗಳನ್ನು ಸೃಷ್ಟಿಸಲಿಲ್ಲ. ನಂತರ, ತಾನು ಅಧಿಕಾರಕ್ಕೆ ಬಂದರೆ ವರ್ಷಕ್ಕೆ 2 ಕೋಟಿ ಹುದ್ದೆಗಳನ್ನು ಸೃಷ್ಟಿ ಮಾಡುವುದಾಗಿ ಹೇಳಿದ ಬಿಜೆಪಿ ಸರ್ಕಾರ ಸಹ ಹುದ್ದೆಗಳನ್ನು ಸೃಷ್ಟಿಸಲಿಲ್ಲ. ಬದಲಿಗೆ ಸಾರ್ವಜನಿಕ ಉದ್ಯಮಗಳು ಹಾಗೂ ಸೇವಾ ವಲಯಗಳನ್ನೂ ಖಾಸಗೀಕರಣಗೊಳಿಸಿ ಉದ್ಯೋಗ ನಾಶ ಮಾಡುತ್ತಿದೆ. 
       
ನಮ್ಮ ರಾಜ್ಯದಲ್ಲಿ ಹಿಂದೆ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರ ಖಾಲಿ ಹುದ್ದೆಗಳ ಭರ್ತಿಗೆ ಯಾವುದೇ ಪ್ರಯತ್ನ ಮಾಡಲಿಲ್ಲ. ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಇನ್ನಿತರ ವೈಫಲ್ಯಗಳನ್ನು ಎತ್ತಿ ತೋರಿಸುತ್ತಾ ಕಾಂಗ್ರೆಸ್ ಪಕ್ಷವು ತಾನು ಅಧಿಕಾರಕ್ಕೆ ಬಂದರೆ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆಯನ್ನು ನೀಡಿತ್ತು. ಅಧಿಕಾರಕ್ಕೆ ಬಂದು ಎರಡು ವರ್ಷ ಗತಿಸಿದರೂ ಸಹ ಯಾವುದೇ ನೇಮಕಾತಿಯನ್ನು ಮಾಡಿಲ್ಲ. ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿರುವ ಹುಮ್ಮಸ್ಸಿನಲ್ಲಿ ಬೇರೆಲ್ಲವನ್ನು ಬದಿಗೆ ಸರಿಸಿದೆ. ತಾನು ನೀಡಿದ ಉದ್ಯೋಗದ ಗ್ಯಾರಂಟಿಯನ್ನು ಅಧಿಕಾರಕ್ಕೆ ಬಂದ ನಂತರ ಕಾರ್ಯರೂಪಕ್ಕೆ ತರುವುದೆಂದು ಯುವಜನರು ನಂಬಿದ್ದರು. ಆದರೆ ಅವರ ನಂಬಿಕೆ ಹುಸಿಯಾಗಿದೆ. ರಾಜ್ಯದ 44 ಇಲಾಖೆಗಳಲ್ಲಿ 2,75,000 ಹುದ್ದೆಗಳು ಖಾಲಿ ಬಿದ್ದಿವೆ. ಅವುಗಳ ನೇಮಕಕ್ಕೆ ಕಿಂಚಿತ್ತು ಪ್ರಯತ್ನಗಳು ನಡೆಯುತ್ತಿಲ್ಲ. ಕೆಲವು ಕುಂಟುನೆಪಗಳನ್ನು ಹೇಳುತ್ತಾ ನೇಮಕಾತಿಗಳನ್ನು ಮುಂದೂಡಲಾಗುತ್ತಿದೆ. ಇನ್ನೊಂದೆಡೆ ಕೆಪಿಎಸ್‌ಸಿ ಅಧ್ಯಕ್ಷರು-ಸದಸ್ಯರ ಒಳಜಗಳ, ಭ್ರಷ್ಟಾಚಾರವು ನೇಮಕಾತಿಗಾಗಿ ಕಾಯುತ್ತಿರುವ ಆಕಾಂಕ್ಷಿಗಳಿಗೆ ಬೇಸರ ತರಿಸಿದೆ. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 59, 454 ಶಿಕ್ಷಕ ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ಎಸ್.ಎಸ್.ಎಲ್.ಸಿ ಫಲಿತಾಂಶ ಅಧೋಗತಿಗೆ ಇಳಿದಿದೆ. ಕೇವಲ ಶಿಕ್ಷಕರ ಮೇಲೆ ಗೂಬೆ ಕೂರಿಸುತ್ತಾ, ಅಗತ್ಯವಿರುವಷ್ಟು ಶಿಕ್ಷಕರನ್ನು ನೇಮಕ ಮಾಡದೆ ಇರುವುದು ಇಂತಹ ಕೆಟ್ಟ ಫಲಿತಾಂಶಕ್ಕೆ ಕಾರಣವಾಗಿದೆ. ಕಲ್ಯಾಣ ಕರ್ನಾಟಕ ಭಾಗದ 6 ಜಿಲ್ಲೆಗಳಲ್ಲಿ 21,381 ಶಿಕ್ಷಕರ ಹುದ್ದೆಗಳು ಖಾಲಿ ಇರುವುದು, ಶಾಲೆಗಳಲ್ಲಿ ಮೂಲ ಸೌಲಭ್ಯಗಳಿಲ್ಲದಿರುವುದು, ಆ ಜಿಲ್ಲೆಗಳ ಶೈಕ್ಷಣಿಕ ಪ್ರಗತಿಗೆ ದೊಡ್ಡ ಅಡಚಣೆಯಾಗಿವೆ. ಇನ್ನು ಆರೋಗ್ಯ ಇಲಾಖೆಯಲ್ಲಿ ಖಾಯಂ ನೇಮಕಾತಿಗಳನ್ನು ಮಾಡದೆ ಗುತ್ತಿಗೆ ನೌಕರರನ್ನು ಅವಲಂಬಿಸಲಾಗಿದೆ. ಸಿಬ್ಬಂದಿ ಕೊರತೆಯಿಂದಾಗಿ ರಾಜ್ಯದ ಆರೋಗ್ಯ ವ್ಯವಸ್ಥೆಯು ಹದಗೆಟ್ಟಿದೆ. ಗರ್ಭಿಣಿಯರು, ಬಾಣಂತಿಯರು, ಹಸುಗೂಸುಗಳ ಸಾವು ಹೆಚ್ಚಳವಾಗಿದೆ. ಆದ್ದರಿಂದ ಸರ್ಕಾರ ಯಾವುದೇ ನೆಪಗಳನ್ನು ಹೇಳದೆ ಎಲ್ಲ ಖಾಲಿ ಹುದ್ದೆಗಳ ಭರ್ತಿಗೆ ಕೂಡಲೇ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
        
ಕೋವಿಡ್ ಸಂದರ್ಭದಲ್ಲಿ ಆನ್‌ಲೈನ್ ಶಿಕ್ಷಣದ ಕಾರಣಕ್ಕೆ ಎಲ್ಲರ ಕೈಗೂ ಅನಿವಾರ್ಯವಾಗಿ ಮತ್ತು ಸಲೀಸಾಗಿ ಸ್ಮಾರ್ಟ್ ಫೋನ್ ಸಿಗುವಂತಾಯಿತು. ತಂತ್ರಜ್ಞಾನದ ಉಪಯುಕ್ತತೆ ಒಂದೆಡೆಯಾದರೆ, ಇನ್ನೊಂದೆಡೆ ಸಮಸ್ಯೆಗಳು ಇನ್ನಷ್ಟು ಗಂಭೀರ ಸ್ವರೂಪ ಪಡೆದುಕೊಂಡಿವೆ. ಸಾಮಾಜಿಕ ಜಾಲತಾಣಗಳು, ಸಮೂಹ ಮಾಧ್ಯಮಗಳಲ್ಲಿ ಯಾವುದೇ ಸೆನ್ಸಾರ್‌ನ ಅಡೆತಡೆ ಇಲ್ಲದೆ ಅಂಗೈಯಲ್ಲಿ ಸಿಗುವ ಎಲ್ಲಾ ಕೊಳಕನ್ನು ನೋಡಿ ನೋಡಿ ಅಪರಾಧ ಕೃತ್ಯಗಳಲ್ಲಿ ತೊಡಗಿ ಯುವಜನರು ತಮ್ಮ ಭವಿಷ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಮೊಬೈಲ್‌ಅನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾದ ಮನುಷ್ಯ ಮೊಬೈಲ್‌ನ ನಿಯಂತ್ರಣಕ್ಕೆ ಒಳಗಾಗಿದ್ದಾನೆ. ಮನುಷ್ಯನ ಸೂಕ್ಷ್ಮ ಸಂವೇದನೆಯನ್ನು ನಾಶ ಮಾಡಿ ಮಚ್ಚು-ಲಾಂಗು ಸಂಸ್ಕೃತಿಯನ್ನು ವೈಭವೀಕರಿಸಲಾಗುತ್ತಿದೆ. ಹಾಗಾಗಿಯೇ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ. ಪ್ರತಿ 11 ನಿಮಿಷಕ್ಕೆ ಒಬ್ಬ ಮಹಿಳೆಯ ಮೇಲೆ ಮತ್ತು ಪ್ರತಿದಿನ 90 ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿದೆ. ಕೊಲೆ, ಅತ್ಯಾಚಾರ, ದೌರ್ಜನ್ಯಗಳಂತಹ ಕೃತ್ಯಗಳಲ್ಲಿ 15 ವರ್ಷದ ಮೇಲ್ಪಟ್ಟ ಯುವಕರೇ ಹೆಚ್ಚು ಭಾಗಿಯಾಗುತ್ತಿರುವುದು ಬಹಳ ಆತಂಕದ ಸಂಗತಿಯಾಗಿದೆ. ಅಪರಾಧಿಗಳ ಶಿಕ್ಷೆಯ ಪ್ರಮಾಣ ಅತ್ಯಂತ ಕನಿಷ್ಟ ಮಟ್ಟದಲ್ಲಿದೆ. ಆದ್ದರಿಂದ ಯುವ ಜನಾಂಗದ ಸತ್ವವನ್ನು ಕಾಪಾಡಲು ಅಶ್ಲೀಲತೆ ಮತ್ತು ಕ್ರೌರ್ಯವನ್ನು ಭಿತ್ತರಿಸುವ ಜಾಲತಾಣಗಳನ್ನು ನಿಷೇಧಿಸಬೇಕಾಗಿದೆ. ಆದರೆ ಸರ್ಕಾರಗಳು ಇದರ ಬಗ್ಗೆ ಏನೂ ಮಾತನಾಡದೆ ಮೌನವಾಗಿ ಉತ್ತೇಜನ ನೀಡುತ್ತ್ತಿವೆ. ಅಮಾನವೀಯ ಹಿಂಸೆ, ಕ್ರೌರ್ಯ ಹಾಗೂ ಅಶ್ಲೀಲ ವೀಡಿಯೋಗಳನ್ನು ನಿಷೇಧ ಮಾಡಲು ಆಗ್ರಹಿಸಬೇಕು. ಇನ್ನೊಂದೆಡೆ ಆನ್‌ಲೈನ್ ಗೆಮ್, ಬೆಟ್ಟಿಂಗ್, ಕುಡಿತ ಮತ್ತು ಮಾದಕ ದ್ರವ್ಯದ ಹಾವಳಿಯು ಮಿತಿಮೀರಿದೆ. ಪ್ರತಿ ಊರು-ಹಳ್ಳಿಗಳಲ್ಲಿ ಬೆಟ್ಟಿಂಗ್ ದಂಧೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಇದರಿಂದಾಗಿ ಯುವಜನರು ತಮ್ಮ ಮಾನಸಿಕ ಸ್ವಾಸ್ಥö್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ತಮ್ಮ ವಿವೇಚನಾ ಶಕ್ತಿಯನ್ನು ಕಳೆದುಕೊಂಡು ಸಮಾಜ ವಿರೋಧಿ ಕೃತಗಳಲ್ಲಿ ತೊಡಗುತ್ತಿದ್ದಾರೆ. ಒಂದು ವರದಿಯ ಪ್ರಕಾರ ಇಂದು 18 ರಿಂದ 24 ವರ್ಷಗಳ ಒಳಗಿನ ಶೇ.50 ರಷ್ಟು ಯುವಜನತೆ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಐ.ಪಿ.ಎಲ್ ಬೆಟ್ಟಿಂಗ್ ಆಡಿ ತೆಲಂಗಾಣ ರಾಜ್ಯದಲ್ಲಿ 1023 ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ದಾಖಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತನ್ನ ಅಸಹಾಯಕತೆ ವ್ಯಕ್ತಪಡಿಸಿರುವುದು ವಿಷಾದನೀಯ ಸಂಗತಿಯಾಗಿದೆ. ಆದ್ದರಿಂದ ಅಶ್ಲೀಲ ವೆಬ್‌ಸೈಟ್‌ಗಳು, ಆನ್‌ಲೈನ್ ಗೇಮ್, ಬೆಟ್ಟಿಂಗ್ ಮುಂತಾದವುಗಳನ್ನು ಸರ್ಕಾರ ಸಂಪೂರ್ಣವಾಗಿ ನಿಷೇಧಿಸಬೇಕು.
       
ಜಾತಿ, ಧರ್ಮ, ಭಾಷೆ, ಪ್ರಾಂತ್ಯದ ಹೆಸರಿನಲ್ಲಿ ಯುವಜನರು ಪರಸ್ಪರ ಕೊಲೆ ಮಾಡುವಂತಹ ಆಘಾತಕಾರಿ ಘಟನೆಗಳು ರಾಜ್ಯದ ವಿವಿಧ ಕಡೆ ವರದಿಯಾಗುತ್ತಿವೆ. ಇಂತಹ ಕೃತ್ಯಗಳನ್ನು ಎಸಗುವವರಿಗೆ ಪ್ರಭಾವಕ್ಕೆ ಮಣಿದು ಅವರಿಗೆ ತಕ್ಕ ಶಿಕ್ಷೆ ನೀಡುವಲ್ಲಿ ಸರ್ಕಾರಗಳು ವಿಫಲವಾಗಿವೆ. ಪರಿಣಾಮವಾಗಿ ಇಂತಹ ಕುಕೃತ್ಯ ಎಸಗುವವರಿಗೆ ಕುಮ್ಮಕ್ಕು ನೀಡಿದಂತಾಗಿದೆ. ಸ್ವಾರ್ಥ ಹಿತಾಸಕ್ತಿಗಾಗಿ ಕೆಲ ಪಟ್ಟಭದ್ರ ಶಕ್ತಿಗಳು ಕೋಮುದ್ವೇಷವನ್ನು ಬೆಂಬಲಿಸುತ್ತಿವೆ. ಆದ್ದರಿಂದ ಜನರ ಐಕ್ಯತೆಗೆ ಭಂಗ ಉಂಟುಮಾಡುವ ಯಾವುದೇ ಸಂಘಟನೆ ಅಥವಾ ವ್ಯಕ್ತಿಯಾಗಿರಲಿ ಅವರು ಎಷ್ಟೇ ಪ್ರಭಾವಿಯಾಗಿದ್ದರೂ ಸಹ ಕೋಮು ದ್ವೇಷ ಹರಡುವವರಿಗೆ ತಕ್ಕ ಶಿಕ್ಷೆ ನೀಡಲು ಸರ್ಕಾರ ತಕ್ಷಣ ಕಾರ್ಯಪ್ರವೃತ್ತವಾಗಬೇಕು. 
       
ಗ್ರಾಮೀಣ ಪ್ರದೇಶದ ಯುವಜನರಿಗೆ ಮತ್ತು ಗ್ರಾಮೀಣ ಕೃಷಿ ಕೂಲಿಕಾರರಿಗೆ ಒಂದಿಷ್ಟು ಅನುಕೂಲವಾಗಿದ್ದ ಉದ್ಯೋಗ ಖಾತ್ರಿ ಯೋಜನೆಯನ್ನು ಕೇಂದ್ರದ ಬಿಜೆಪಿ ಸರ್ಕಾರವು ಕ್ರಮೇಣವಾಗಿ ನಿಷ್ಕಿçಯಗೊಳಿಸುತ್ತಿದೆ. ಅದಕ್ಕೆ ನೀಡಲಾಗುತ್ತಿದ್ದ ಅನುದಾನವನ್ನು ಪ್ರತಿವರ್ಷದ ಬಜೆಟ್‌ನಲ್ಲಿ ಕಡಿತಗೊಳಿಸುತ್ತಾ, ಅಂತಿಮವಾಗಿ ಈ ಯೋಜನೆಯನ್ನು ಸ್ಥಗಿತಗೊಳಿಸುವ ಹುನ್ನಾರ ನಡೆಸುತ್ತಿದೆ. ಆದ್ದರಿಂದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಬಜೆಟ್ ಅನುದಾನವನ್ನು ಹೆಚ್ಚಿಸಿ ಅದನ್ನು ಬಲಪಡಿಸಬೇಕು ಎಂದು ಕೇಂದ್ರ ಸರ್ಕಾರವನ್ನು ನಾವು ಆಗ್ರಹಿಸುತ್ತೇವೆ.
       
ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ಗದ್ದುಗೆ ಏರಿದ ಯಾವುದೇ ಪಕ್ಷವು ಯುವಜನರ ಸಮಸ್ಯೆಗಳನ್ನು ಪರಿಹರಿಸಿಲ್ಲ. ಬದಲಿಗೆ ಯುವಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿವೆ. ಆದ್ದರಿಂದ ನಾವು ಯಾವುದೇ ಪಕ್ಷದ ಬಣ್ಣದ ಮಾತುಗಳಿಗೆ ಬಲಿಯಾಗದೆ ಹೋರಾಟವೊಂದೇ ನಮ್ಮ ಸಮಸ್ಯೆಗಳಿಗೆ ಪರಿಹಾರವೆಂದು ಅರಿಯಬೇಕು. ಯುವಜನರ ನೈಜ ಪ್ರತಿನಿಧಿಯಾಗಿರುವ ಎಐಡಿವೈಒ ಸಂಘಟನೆಯು ಯುವಜನರ ಇಂತಹ ಆಗ್ರಹಗಳಿಗೆ ಧ್ವನಿಯಾಗಲು ಜೂನ್ 26 ರಂದು ಸಂಸ್ಥಾಪನಾ ದಿನವನ್ನು ಯುವಜನರ ಆಗ್ರಹ ದಿನವನ್ನಾಗಿ ಸಂಘಟಿಸುತ್ತಿದೆ. ರಾಜ್ಯದ ಯುವಜನತೆ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಈ ಮೂಲಕ ಕೋರುತ್ತೇವೆ.

ಈ ಸಂಧರ್ಭದಲ್ಲಿ ಎಐಡಿವೈಒ ಜಿಲ್ಲಾಧ್ಯಕ್ಷ ಭವಾನಿ ಶಂಕರ್ ಎಸ್. ಗೌಡ, ಉಪಾಧ್ಯಕ್ಷ ಅಕ್ಷಯ್ ಊರಮುಂದಿನ, ಕಾರ್ಯದರ್ಶಿ ರಣಜಿತ್ ಧೂಪದ್, ಸಂಘಟನಾಕಾರರಾದ ಪ್ರೀತಿ ಸಿಂಗಾಡಿ ಇದ್ದರು.

ಯುವಜನ ಆಗ್ರಹ ದಿನದ ಹಕ್ಕೊತ್ತಾಯಗಳು 
 ಕೇಂದ್ರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 10 ಲಕ್ಷ ಹುದ್ದೆಗಳನ್ನು ಹಾಗೂ ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2.75 ಲಕ್ಷ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿ. 
ಸಾಮಾಜಿಕ ಜಾಲತಾಣಗಳು ಮತ್ತು ಸಮೂಹ ಮಾಧ್ಯಮಗಳಲ್ಲಿನ ಅಶ್ಲೀಲ ವಿಡಿಯೋಗಳು, ಹಿಂಸೆ ಮತ್ತು ಕ್ರೌರ್ಯವನ್ನು ನಿಷೇಧಿಸಿ.  ಯುವಜನರನ್ನು ವ್ಯಸನಕ್ಕೀಡು ಮಾಡುತ್ತಿರುವ ಆನ್‌ಲೈನ್ ಗೇಮ್ ಮತ್ತು ಬೆಟ್ಟಿಂಗ್ ಹಾಗೂ ಮಾದಕ ದ್ರವ್ಯಗಳನ್ನು ನಿಷೇಧಿಸಿ. 
ಜನತೆಯ ಐಕ್ಯತೆಯನ್ನು ಮುರಿಯುವ ಜಾತಿವಾದಿ ಮತ್ತು ಕೋಮುವಾದಿ ಶಕ್ತಿಗಳನ್ನು ನಿಯಂತ್ರಿಸಿ.
ಉದ್ಯೋಗ ಖಾತ್ರಿ ಯೋಜನೆ(ಎಂಜಿಎನ್‌ಆರ್‌ಇಜಿ)ಗೆ ಬಜೆಟ್ ಅನುದಾನವನ್ನು ಹೆಚ್ಚಿಸಿ, ಕೂಲಿಯನ್ನು ರೂ.600ಕ್ಕೆ ಹಾಗೂ ಮಾನವ ಕೆಲಸದ ದಿನಗಳನ್ನು 200ಕ್ಕೆ ಹೆಚ್ಚಿಸಿ.
ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವವನ್ನು ಕೂಡಲೇ ನೀಡಿ ಹಾಗೂ ಕೆಪಿಎಸ್‌ಸಿಯಲ್ಲಿ ನಡೆಯುವ ಅಕ್ರಮ ಮತ್ತು ಭ್ರಷ್ಟಾಚಾರವನ್ನು ತಡೆಗಟ್ಟಿ.
 ನೇಮಕಾತಿಗಳ ಅರ್ಜಿ ಶುಲ್ಕ ಕೈಬಿಡಿ ಹಾಗೂ ನೇಮಕಾತಿ ಪ್ರವೇಶ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಿ.
ನವೀನ ಹಳೆಯದು

نموذج الاتصال