ಮನುಕುಲದ ಉದ್ಧಾರಕ- ಶ್ರೀ ಪೂಜ್ಯ ಮೃತ್ಯುಂಜಯ ಅಪ್ಪಗಳು
( 26-4-2025 ರಂದು ಪೂಜ್ಯ ಮೃತ್ಯುಂಜಯ ಅಪ್ಪಗಳವರ 138 ನೇ ಜಯಂತಿ ನಿಮಿತ್ತ ಈ ವಿಶೇಷ ಲೇಖನ)
ಧಾರವಾಡ
ವಿಶ್ವದ ಅತ್ಯಂತ ಶ್ರೇಷ್ಠ ಪುಣ್ಯಭೂಮಿ ಭಾರತ. ಸಹಸ್ರಾರು ವರ್ಷಗಳಿಂದ ಆಧ್ಯಾತ್ಮಿಕ ಜ್ಞಾನ ದಾಸೋಹ ಪರಂಪರೆಯನ್ನು ಗುಪ್ತಗಾಮಿನಿಯಾಗಿ ಹರಿದು ಬಂದಿರುವ ಈ ಪುಣ್ಯಭೂಮಿಯಲ್ಲಿ ಹಿಂದಿನ ಕಾಲದಿಂದಲೂ ಋಷಿಮುನಿಗಳು ವಿದ್ಯೆ ಕಲಿಯಲು ಬಂದವರಿಗೆ ಜ್ಞಾನ ದಾಸೋಹ ನೀಡುವುದರ ಜೊತೆಗೆ ಅನ್ನದಾಸೋಹವನ್ನು ನೀಡಿ ಅವರ ಭವಿಷ್ಯವನ್ನು ಉಜ್ವಲವಾಗುವಂತೆ ಮಾಡಿ ಸಮಾಜಕ್ಕೆ ಶ್ರೇಷ್ಠ ವ್ಯಕ್ತಿಗಳನ್ನು ನೀಡುವ ಕಾರ್ಯವನ್ನು ಮಾಡಿದ ಅನೇಕ ಮಹಾನ್ ಪೂಜ್ಯರು ಶ್ರೇಷ್ಠ ಗುರುಗಳು ಇದ್ದಾರೆ. ಅಂತಹ ಶ್ರೇಷ್ಠ ವ್ಯಕ್ತಿಗಳಲ್ಲಿ ಮಹಾನ್ ಪುರುಷರಾದ ಧಾರವಾಡ ಶ್ರೀ ಮುರುಘಾಮಠದ ಶ್ರೀ ಪೂಜ್ಯ ಮೃತ್ಯುಂಜಯ ಅಪ್ಪಗಳು.
ಶ್ರೀ ಮೃತ್ಯುಂಜಯ ಅಪ್ಪಗಳೆಂದರೆ ಲೋಕ ಕಲ್ಯಾಣಾರ್ಥವಾಗಿ ಧರೆಗಿಳಿದು ಬಂದಿರುವ ಪರಮ ಪುಣ್ಯ ಪುರುಷ. ಹರ ತನ್ನ ರೂಪ ತೋರಬೇಕೆಂದು ಈ ಧರೆಗೆ ಮೃತ್ಯುಂಜಯಪ್ಪನಾಗಿ ಹುಟ್ಟಿ ಬಂದ...
ಎಡೆಯೂರು ತೋಂಟದ ಸಿದ್ಧಲಿಂಗೇಶ್ವರನ ಆಶೀರ್ವಾದದ ಬಲದಿಂದ ಶ್ರೀ ಮೃತ್ಯುಂಜಯ ಅಪ್ಪಗಳವರ ಜನ್ಮವು ಸರ್ವಧಾರಿ ನಾಮ ಸಂವತ್ಸರ ಅಧಿಕ ಚೈತ್ರ ಬಹುಳ ತ್ರಯೋದಶಿ ಸೋಮವಾರ ದಿನಾಂಕ 9-4-1888 ರಂದು ಹುಬ್ಬಳ್ಳಿ ತಾಲ್ಲೂಕ ಇಂಗಳಹಳ್ಳಿಯ ಜಂಗಮ ಹಿರೇಮಠದ ಕಾಂತಯ್ಯ ಮತ್ತು ಚೆನ್ನವೀರಮ್ಮ ದಂಪತಿಗಳ ಏಕಮಾತ್ರ ಮಗನಾಗಿ ಜನಿಸಿದರು.
ಬಾಲಕ ಮೃತ್ಯುಂಜಯ ಇಂಗಳಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಧಾರವಾಡದಲ್ಲಿ ಹಿರೇಮಠದಲ್ಲಿದ್ದುಕೊಂಡು ಕನ್ನಡ ನಾಲ್ಕನೆಯ ತರಗತಿ ಮುಗಿಸಿದರು. ಅಲ್ಲಿಯೇ ಹೂಲಿಮಠದ ಪಾಠ ಶಾಲೆಯಲ್ಲಿ ತಕ್ಕಮಟ್ಟಿಗೆ ಸಂಸ್ಕೃತ ಅಭ್ಯಾಸವನ್ನು ಮಾಡಿದರು. ಅದೇ ಸಮಯದಲ್ಲಿ ಸಂಗೀತ ವಿದ್ಯಾಭ್ಯಾಸವು ಸ್ವಲ್ಪಮಟ್ಟಿಗೆ ನಡೆಯಿತು.
ಕನಸಿನಲ್ಲಿ ತಾವು ವಚನಕೊಟ್ಟ ಮೇರೆಗೆ ಬಾಲಕ ಮೃತ್ಯುಂಜಯನನ್ನು ತಂದೆ-ತಾಯಿಗಳು ಗದುಗಿನ ತೋಂಟದಾರ್ಯರಿಗೆ ಅರ್ಪಿಸಿದರು. ಬಾಲಕ ಮೃತ್ಯುಂಜಯನ ಸಂಸ್ಕೃತ ಅಭ್ಯಾಸ ಮುಂದುವರಿತು ಜೊತೆಗೆ ಮಗ್ಗೆಯ ಮಾಯದೇವರ ಶತಕತ್ರಯ, ನಿಜಲಿಂಗಶತಕತ್ರಯಗಳ ಅಭ್ಯಾಸ ಮಾಡಿ, ನಿಜಗುಣ ಶಿವಯೋಗಿಗಳ, ಬಾಲಲೀಲಾ ಮಹಾಂತ ಶಿವಯೋಗಿಗಳ ತತ್ವ ಪದಗಳನ್ನು ಮಂಜುಳವಾಗಿ ರಾಗಬದ್ದವಾಗಿ ಹಾಡಲು ಕಲಿತರು. ಮೃತ್ಯುಂಜಯಪ್ಪಗಳು ತಮ್ಮ ಬಾಲ್ಯದಲ್ಲಿಯೇ ಎಲ್ಲ ಮೋಹವನ್ನು ತ್ಯಜಿಸಿ ಭಗವಂತನ ಸಾಕ್ಷತ್ಕಾರವಾಗಬೇಕೆಂದು ತೀರ್ಥಕ್ಷೇತ್ರಗಳ, ಮಹಾತ್ಮರ ಶಿವಶರಣರ, ಶಿವಯೋಗಿಗಳ ದರ್ಶನ ಹಾಗೂ ಉನ್ನತ ವಿದ್ವತ್ತನ್ನು ಪಡೆಯಲು ಕಾಶಿಗೆ ಹೋಗಬೇಕೆಂದು ಲೋಕ ಸಂಚಾರ ಕೈಗೊಂಡರು.
ಲೋಕ ಸಂಚಾರ ಕಾಲದಲ್ಲಿ ಬಳ್ಳಾರಿ, ಸೊನ್ನಲಾಪುರ, ರೇವಣಸಿದ್ದರಬೆಟ್ಟ, ಬಳಗಾನೂರ, ಕೊಪ್ಪಳ, ಎಮ್ಮಿಗನೂರು, ಕಾನಾಮೊಡಿ, ಉಜ್ಜಯಿನಿ, ಹರಪನಹಳ್ಳಿ, ಹರಿಹರ ಮುಂತಾದ ಕ್ಷೇತ್ರಗಳನ್ನು ಸಂಚರಿಸುತ್ತ, ಮಹಾತ್ಮರಾದ ಅಂಕಲಗಿಯ ಅಡವಿಸ್ವಾಮಿಗಳ ಮಠಕ್ಕೆ ಬಂದು ತಲುಪಿದರು. ತಮ್ಮ ಸುಮಧುರ ಕಂಠದಿಂದ ತತ್ವ ಪದಗಳನ್ನು ಹಾಡಿ ಅಡವಿ ಸ್ವಾಮಿಗಳನ್ನು ಆನಂದಗೊಳಿಸಿದರು.
ಅಡವಿ ಸ್ವಾಮಿಗಳು ಮೃತ್ಯುಂಜಯ ಸ್ವಾಮಿಗಳ ಸೇವಾಭಾವನೆ ಮಧುರಕಂಠ. ಭಕ್ತಿಯ ರೀತಿ
ಲಕ್ಣಣಗಳನ್ನು ಕಂಡು ಅವರ ಮನದ ಇಚ್ಛೆಯನ್ನು ಕೇಳಿದರು. ನಾನು ಕಾಶಿಗೆ ಹೋಗಿ ವಿಶ್ವನಾಥ ದರ್ಶನ ಪಡೆಯ ಬೇಕು ಎಂದು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದಾಗ ಅಡವಿ ಸ್ವಾಮಿಗಳು ಅಥಣಿಯಲ್ಲಿ ಸಾಕ್ಷಾತ ಪರಶಿವನ ಅವತಾರವೆನಿಸಿದ ಮಹಾತಪಸ್ವಿಗಳಾದ ಮಹಾಮಹಿಮಾ ಪುರುಷರು ಜಂಗಮ ಜ್ಯೋತಿಯಾದ ಶ್ರೀ ಮುರುಘೇಂದ್ರ ಶಿವಯೋಗಿಗಳಿದ್ದಾರೆ ಅಲ್ಲಿಗೆ ಹೋಗಿ ನೀನು ಅವರ ಸೇವೆಯನ್ನು ಮಾಡು ಎಂದು ಅಪ್ಪಣೆ ಮಾಡಿದರು.
ಅಡವಿ ಸ್ವಾಮಿಗಳ ಅಪ್ಪಣೆಯಂತೆ ಮೃತ್ಯುಂಜಯ ಅಪ್ಪಗಳು ಅಥಣಿಗೆ ಬಂದು ಶ್ರೀ ಶಿವಯೋಗಿಗಳ ಸನ್ನಿಧವನ್ನು ಹೊಂದಿದ್ದನ್ನು ಎಂತಹವರಿಗೂ ಸಾಧ್ಯವಾಗದ ಶ್ರೀ ಶಿವಯೋಗಿಗಳ ಸೇವೆಯು ಈತನ ಸಾಹಸ, ದೃಢಭಕ್ತಿ, ಪರಿಶುದ್ಧ ಹೃದಯದ ಪರಿಣಾಮವಾಗಿ ಈತನಿಗೆ ಸಾಧಿಸಿತು. ಮೃತ್ಯುಂಜಯಪ್ಪ ಶಿವಯೋಗಿಗಳ ನೆಚ್ಚು ಮೆಚ್ಚಿನ ಸೇವಕನಾದನು.
ಅಥಣಿಯ ಗಚ್ಚಿನ ಮಠಾಧ್ಯಕ್ಷರಾದ ಸಿದ್ಧಲಿಂಗ ಮಹಾಸ್ವಾಮಿಗಳಿಂದ ಹದಿನೇಳು ವರ್ಷದ ಮೃತ್ಯುಂಜಯಪ್ಪನಿಗೆ ಷಟ್‌ಸ್ಥಲ ಬ್ರಹ್ಮೋಪದೇಶ ನೀಡಿ ಸಂಸ್ಕಾರವಾಯಿತು. ವಿರಕ್ತಾಶ್ರಮವನ್ನು ಹೊಂದಿ ಕೆಲಕಾಲ ಶಿವಯೋಗಿಗಳ ಸೇವೆಯಲ್ಲಿದ್ದರು. ಅಂದಿನ ಚಿತ್ರದುರ್ಗ ಮುರುಘಾಮಠದ ಜಗದ್ಗುರು ಜಯದೇವ ಮುರುಘರಾಜೇಂದ್ರ ಸ್ವಾಮಿಗಳು ಚೈತನ್ಯದ ಚಿಲುಮೆಯಾದ ಬ್ರಹ್ಮರ‍್ಯಯ ತೇಜಸ್ಸಿನಿಂದ ಬೆಳಗುತ್ತಿರುವ ಮೃತ್ಯುಂಜಯಪ್ಪನನ್ನು ಕಂಡು ದಾವಣಗೆರೆಯ ವಿರಕ್ತಮಠದ ಚರಪಟ್ಟವನ್ನು ವಹಿಸಿಕೊಳ್ಳಲು ಅಪ್ಪಣೆಯನ್ನು ನೀಡಿದರು. ಮೃತ್ಯುಂಜಯಪ್ಪನಿಗೆ ಶಿವಯೋಗಿಗಳನ್ನಾಗಲಿ ಹೋಗಬೇಕಾಗುತ್ತದೆ ಎಂದು ತುಂಬಾ ದುಃಖ ಉಂಟಾಯಿತು. ಸಾಕ್ಷಾತ ಶಿವಯೋಗಿಗಳು ಮೃತ್ಯುಂಜಯಪ್ಪಗಳನ್ನು ಕರೆದು ಇದೆ `ಶ್ರೀ ಮುರುಘೇಶನ ಸೇವೆಯಾಗಿದೆ’ ಎಂದು ಆಶೀರ್ವದಿಸಿ ಡಾವಣೆಗೆರೆಯ ಭಕ್ತರ ಜೊತೆಗೆ ಕಳುಹಿಸಿದರು.
1906 ನೇ ಇಸ್ವಿಯಲ್ಲಿ ಡಾವಣಗೆರೆಯ ವಿರಕ್ತಮಠದ ಪೀಠಾಧಿಪತಿಯಾಗಿ ಮೃತ್ಯುಂಜಯ ಸ್ವಾಮಿಗಳು ಸಮಾಜ ಸೇವೆಯನ್ನು ಮಾಡಲು ಟೊಂಕಕಟ್ಟಿ ನಿಂತರು. ದಾವಣಗೆರೆಯ ವೀರಶೈವ ಧರ್ಮದ ಜಾಗೃತಿಯ ಕೇಂದ್ರವಾಗಿ ಪರಿವರ್ತಿಸಿದರು. ದಾವಣಗೆರೆಯ ಭಕ್ತರ ಮನೆ-ಮನೆಗೆ ತೆರಳಿ ಅವರಲ್ಲಿ ಆಧ್ಯಾತ್ಮಿಕ ಅರಿವನ್ನು ಮೂಡಿಸಿದರು. ಭಜನಾ ಸಂಘಗಳನ್ನು ಏರ್ಪಡಿಸಿ, ಜನಸಾಮಾನ್ಯರಿಗೆ ವೀರಶೈವ ಧರ್ಮದ ಶ್ರೇಷ್ಠತೆ, ಆಚಾರ ವಿಚಾರಗಳ ವಚನ ಸಾಹಿತ್ಯದ ಮಹತ್ವವನ್ನು ತಿಳಿಸಿ ಧರ್ಮದ ಜಾಗೃತಿಯನ್ನು ಮೂಡಿಸಿದರು. ತರುಣ ಸಂಘಗಳನ್ನು ಸ್ಥಾಪಿಸಿ ತರುಣರಲ್ಲಿ ನವಚೈತನ್ಯ ತುಂಬಿದರು.
12 ನೇ ಶತಮಾನದ ಕ್ರಾಂತಿಪುರುಷ ಭಕ್ತಿ ಭಂಡಾರಿ ಬಸವಣ್ಣನವರ ಜಯಂತಿಯನ್ನು ಮೃತ್ಯುಂಜಯಪ್ಪಗಳು 1913 ರಲ್ಲಿ ದಾವಣಗೆರೆಯಲ್ಲಿ ಪ್ರಾರಂಭಿಸಿದರು. ಬಸವ ಜಯಂತಿಯ ಮಹತ್ವ ಹಾಗೂ ವಿಶಾಲ ಕರ್ನಾಟಕಕ್ಕೆ ಪ್ರಚಾರದಲ್ಲಿ ತಂದ ಕೀರ್ತಿ ಮೃತ್ಯುಂಜಯಪ್ಪಗಳಿಗೆ ಸಲ್ಲುತ್ತದೆ.
ಆ ಸಮಯದಲ್ಲಿ ಧಾರವಾಡದ ಮುರುಘಾಮಠಕ್ಕೆ ಸ್ವಾಮಿಗಳಿಲ್ಲದ ಮಠವಾಗಿತ್ತು. ಧಾರವಾಡದ ಭಕ್ತರು ಜಗದ್ಗುರು ಮುರುಘರಾಜೇಂದ್ರ ಸ್ವಾಮಿಗಳಲ್ಲಿ ನಮ್ಮ ಮಠಕ್ಕೆ ಒಬ್ಬ ಯೋಗ್ಯ ಸ್ವಾಮಿಗಳನ್ನು ದಯಪಾಲಿಸಬೇಕೆಂದು ಕೇಳಿಕೊಂಡಾಗ ಜಗದ್ಗುರುಗಳವರು ಕರ್ನಾಟಕ ಕೇಂದ್ರ ಸ್ಥಾನವಾದ ಧಾರವಾಡ ಮುರುಘಾಮಠಕ್ಕೆ ಸಮರ್ಥರಾದ ಮೃತ್ಯುಂಜಯಪ್ಪಗಳು ಸೂಕ್ತವಾದ ವ್ಯಕ್ತಿಯೆಂದು ಯೋಚಿಸಿ, ಮೃತ್ಯುಂಜಯಪ್ಪಗಳಿಗೆ ಧಾರವಾಡ ಮುರುಘಾಮಠದ ಅಧಿಕಾರವನ್ನು ವಹಿಸಿಕೊಳ್ಳಲು ಅಪ್ಪಣೆ ನೀಡಿದರು.
ಜಗದ್ಗುರುಗಳ ಅಪ್ಪಣೆಯನ್ನು ಶಿರಸಾವಹಿಸಿ ಮೃತ್ಯುಂಜಯಪ್ಪಗಳು 1919 ರಲ್ಲಿ ಧಾರವಾಡದ ಮೂರು ಅಂಕಣದ ಮುರುಘಾಮಠದ ಪೀಠಾಧಿಪತಿಗಳಾಗಿ ಅಧಿಕಾರವಹಿಸಿಕೊಂಡರು. ಶ್ರೀಮಠದ ಕರ್ತೃ ಗದ್ದಿಗೆಯ ಜೀರ್ಣವಾದ ಕಟ್ಟಡ ಮಾತ್ರ ಇತ್ತು. ಅದಾದರು ಗಿಡ-ಮರ ಮುಳ್ಳು-ಕಂಟಿಗಳಿಂದ ಸುತ್ತುವರಿಯಲ್ಪಟ್ಟಿತ್ತು. ಮೃತ್ಯುಂಜಯಪ್ಪಗಳು ಧಾರವಾಡಕ್ಕೆ ಆಗಮಿಸಿದ ದಿನ ಉತ್ತರ ಕರ್ನಾಟಕ್ಕೆ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡತಕ್ಕದ್ದು.
ಇದೇ ಸಮಯದಲ್ಲಿ ಧಾರವಾಡದಲ್ಲಿ ಕರ್ನಾಟಕ ಕಾಲೇಜು ಸ್ಥಾಪಿತವಾಗಿತ್ತು ಆದರೆ ಅದರಲ್ಲಿ ಕಲಿಯುವವರಾರು? ಶ್ರೀಮಂತರು ಮಾತ್ರ ಕಲಿಯಬೇಕೆಂದರೆ ಲಿಂಗಾಯತ ಸಮಾಜದ ಶ್ರೀಮಂತರಲ್ಲಿ ಇನ್ನು ವಿದ್ಯಾಭ್ಯಾಸದ ಆಸಕ್ತಿಯೇ ಉಂಟಾಗಿರಲಿಲ್ಲ. ಆಸಕ್ತಿಯುಳ್ಳ ಬಹುಜನರು ಹಳ್ಳಿಗಳಲ್ಲಿರುವವರು ಮತ್ತು ಬಡತನದಲ್ಲಿದ್ದವರು. ಧಾರವಾಡದಂತಹ ಊರಿಗೆ ಮಕ್ಕಳನ್ನು ಕಳಿಸಿ ಬಹುವೆಚ್ಚದ ಉನ್ನತ ಶಿಕ್ಷಣವನ್ನು ಕೊಡಿಸುವುದು ಬಹು ಜನರಿಗೆ ಸಾಧ್ಯವೇ ಇರಲಿಲ್ಲ.
ವಿದ್ಯೆಯ ಮಹತ್ವ ಅರಿತಿದ್ದ ಮೃತ್ಯುಂಜಯಪ್ಪಗಳು ಶಿಕ್ಷಣದಿಂದಲೇ ಸಮಾಜವನ್ನು ಉದ್ಧಾರ ಮಾಡಲು ಸಾಧ್ಯ. ಶಿಕ್ಷಣವು ಸಮಾಜದ ಪ್ರಗತಿಯ ಅಸ್ತç ಎಂಬುದನ್ನು ತಿಳಿದಿದ್ದ ಅಪ್ಪಗಳು ತಮ್ಮ ಗುರುಗಳಾದ ಶಿವಯೋಗಿಗಳ ಅಪ್ಪಣೆಯನ್ನು ಪಡೆದುಕೊಂಡು ಬಹು ಸಂಖ್ಯಾತ ಬಡವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಪಡೆಯಲು ಅನುಕೂಲವಾಗಲೆಂದು 1917 ರಲ್ಲಿ ಮುರುಘರಾಜೇಂದ್ರ ಉಚಿತ ಪ್ರಸಾದ ನಿಲಯವನ್ನು ಸ್ಥಾಪಿಸಿದ್ದರು. ಉನ್ನತ ಶಿಕ್ಷಣದಿಂದ ದೂರ ಉಳಿದಿದ್ದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಪಡೆಯಲು ಅನುಕೂಲ ಮಾಡಿಕೊಟ್ಟರು. ಅಂದಿನ ಕಠಿಣ ಕಾಲದಲ್ಲಿ ಪ್ರಸಾದ ನಿಲಯದ ನಿರ್ವಹಣೆಗಾಗಿ ನಾಡಿನಾದ್ಯಂತ ಊರೂರಿಗೆ ಪಾದಚಾರಿಗಳಾಗಿ ಸಂಚರಿಸಿ ಕೈಯಲ್ಲಿ ಜೋಳಿಗೆ ಹಿಡಿದು ಭಿಕ್ಷೆ ಬೇಡಿ ಪ್ರಸಾದ ನಿಲಯವನ್ನು ಕಟ್ಟಿ ಬೆಳೆಸಿದರು.
ಪ್ರಸಾದ ನಿಲಯವನ್ನು ಅರವತ್ತಮೂರು ಪುರಾತನರ ಹೆಸರಿನಲ್ಲಿ ಪ್ರತಿಯೊಂದು ಕೋಣೆ ನಿರ್ಮಿಸಿ ಪ್ರಸಾದ ನಿಲಯದಲ್ಲಿರುವ ವಿದ್ಯಾರ್ಥಿಗಳು. ನಿಷ್ಠೆ, ಪ್ರಾಮಾಣಿಕತೆ, ಧೀರರಾಗಿ ಸಮಾಜದ ಉತ್ತಮ ಭಕ್ತರಾಗಲಿ ಎಂಬ ಸತ್ಸಂಕಲ್ಪದಂತೆ ಗುರುಕುಲದ ಪವಿತ್ರ ವಾತಾವರಣವನ್ನು ಉಂಟು ಮಾಡಿದರು. ಶ್ರೀಮಧಥಣಿ ಶಿವಯೋಗಿಗಳವರ ಮೂರ್ತಿಯನ್ನು ಪ್ರಸಾದ ನಿಲಯದಲ್ಲಿ ಸ್ಥಾಪಿಸಿ ಅವರ ಆಶೀರ್ವಾದ ವಿದ್ಯಾರ್ಥಿಗಳಿಗೆ ನಿತ್ಯ ಸಿಗುವಂತೆ ಮಾಡಿ ವಿದ್ಯಾರ್ಥಿಗಳಿಗೆ ವಚನ ಸಾಹಿತ್ಯ, ವೀರಶೈವ ಧರ್ಮದ ಅಷ್ಠಾವರಣ, ಪಂಚಾಚಾರಗಳು, ಷಟ್‌ಸ್ಥಲಗಳ ಬಗ್ಗೆ ಆಧ್ಯಾತ್ಮಿಕ ಜಾಗೃತಿ ಹಾಗೂ ಧಾರ್ಮಿಕ ಜಾಗೃತಿಯನ್ನು ಮಾಡಿ ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿ ನಿರ್ಮಿಸುವ ಮಹತ್ಕರ‍್ಯವನ್ನು ಮಾಡಿದರು.
ಮೃತ್ಯುಂಜಯ ಸ್ವಾಮಿಗಳು ಶ್ರೀ ಬಾಲಲೀಲಾ ಮಹಾಂತ ಶಿವಯೋಗೀಶ್ವರ ಗ್ರಂಥಮಾಲೆಯೊಂದನ್ನು ಸ್ಥಾಪಿಸಿ ಈ ಗ್ರಂಥಮಾಲೆಯಲ್ಲಿ 54 ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದರು. ಈಗ ಈ ಗ್ರಂಥಮಾಲೆಯಲ್ಲಿ 1000 ಕ್ಕೂ ಹೆಚ್ಚು ಗ್ರಂಥಗಳ ಪ್ರಕಟಗೊಂಡಿವೆ. ಇಂತಹ ಮಹತ್ಕಾರ್ಯವನ್ನು ಇಂದಿನ ಪೀಠಾಧಿಪತಿಗಳಾದ ಪೂಜ್ಯ ಮಲ್ಲಿಕಾರ್ಜುನ ಸ್ವಾಮಿಗಳು ಮುಂದುವರಿಸಿಕೊಂಡು ಬಂದಿದ್ದಾರೆ.
1943 ರಲ್ಲಿ ಮೃತ್ಯುಂಜಯ ಸ್ವಾಮಿಗಳು ಅಖಿಲ ಭಾರತ ಶಿವಾನುಭವ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆಯ ಮೂಲಕ ಹಳ್ಳಿ-ಹಳ್ಳಿಗಳಲ್ಲಿ ಶಿವಾನುಭವ ಸಮ್ಮೇಳನಗಳನ್ನು ಹಮ್ಮಿಕೊಂಡು ಧರ್ಮಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಮಾಡಿದರು. ವೃತ್ತ ಪತ್ರಿಕೆಯ ಮಹತ್ವವನ್ನು ಅರಿತಿದ್ದ ಮೃತ್ಯುಂಜಯಪ್ಪಗಳು ‘ಸಾವಧಾನ’ ಎಂಬ ಪಾಕ್ಷಿಕ ವೃತ್ತ ಪತ್ರಿಕೆಯನ್ನು 1945 ರಲ್ಲಿ ಪ್ರಾರಂಭಿಸಿ ಸಮಾಜದಲ್ಲಿ ಆಧ್ಯಾತ್ಮಿಕದ ಅರಿವನ್ನು ಮೂಡಿಸಿದರು.
ಮೃತ್ಯುಂಜಯಪ್ಪಗಳ ದೃಷ್ಟಿ ವಿಶ್ವದಷ್ಟು ವಿಶಾಲವಾದದ್ದು. ಸಾಹಿತ್ಯವೊ, ಸಂಸ್ಕೃತಿಯೋ, ಕಲೆಯೋ, ವಿಜ್ಞಾನವೋ, ಎಲ್ಲದಕ್ಕೂ ಅವರ ಆಶ್ರಯ ಪ್ರೋತ್ಸಾಹ ಕವಿಗಳು, ಕಲಾವಿದರು. ಗಮಕಿಗಳು, ವಾದಿಗಳು, ಎಲ್ಲರಿಗೂ ಮೃತ್ಯುಂಜಯ ಸ್ವಾಮಿಗಳ ಆಶೀರ್ವಾದದ ಆಶ್ರಯ ಪ್ರತಿ ವರುಷ ಶ್ರಾವಣಮಾಸದ ಒಂದು ತಿಂಗಳು ನಿರಂತರ ಹಾಗೂ ಮಾಘಮಾಸದಲ್ಲಿ ಜರುಗುವ ಶಿವಯೋಗಿಗಳ ಜಾತ್ರಾಮಹೋತ್ಸವದ ಸಮಾರಂಭವೆಂದರೆ, ಕಲಾವಿದರ ಗೋಷ್ಠಿ ವಿದ್ವಜ್ಜನರ ಪರಿಷತ್ತು ರಸಿಕರ ರಸದೊಟ, ಶ್ರೇಷ್ಠ ಶ್ರೇಣಿಯ ಗಾನ ವಿಧರನ್ನು ಮೊದಲು ಮಾಡಿಕೊಂಡು ಜಾನಪದ ಲಾವಣಿಕಾರರ ವರೆಗೆ ಎಲ್ಲ ಬಗೆಯ ಕಲಾವಿದರೂ ಅಲ್ಲಿಗೆ ಬಂದು ಸೇವೆ ಸಲ್ಲಿಸುತ್ತಾರೆ. ಎಲ್ಲರಿಗೂ ಮುಕ್ತ ಅವಕಾಶ ನೀಡಿ ಪೂಜ್ಯರು ಅವರನ್ನು ಆಶೀರ್ವದಿಸುತ್ತಾರೆ. ಅಷ್ಟೇ ಅಲ್ಲದೆ ನಾಡಿನ ನಾನಾ ಭಾಗದ ಹರ-ಗುರು ಚರಮೂರ್ತಿಗಳು, ರಾಜಕೀಯ ಧುರೀಣರು, ಸೇವಕರು, ಭಕ್ತರು ಸೇರಿ ಶಿವಯೋಗಿಗಳ ಸೇವೆ ಸಲ್ಲಿಸುತ್ತಾರೆ.
ಮೃತ್ಯುಂಜಯ ಅಪ್ಪಗಳು 75 ವರ್ಷಗಳವರೆಗೆ ತಮ್ಮ ತನುಮನಗಳನ್ನು ಸಮಾಜದ ಹಿತಕ್ಕಾಗಿ ಮಾನವತೆಯ ಉದ್ಧಾರಕ್ಕಾಗಿ ಧರ್ಮ ಜಾಗೃತಿಗಾಗಿ ಶ್ರೀಗಂಧದಂತೆ ಸವೆಸಿದರು. ಇಂತಹ ದೈಹಿಕ ಪರಿಶ್ರಮ ಶ್ರೀಗಳವರನ್ನು ಕೊನೆಯ ಆರು ತಿಂಗಳು ಹಾಸಿಗೆ ಹಿಡಿಸಿತು. 1964 ನೇ ಇಸ್ವಿ ಅಶ್ವೀಜ ಶುದ್ಧ ಅಷ್ಟಮಿ ಸೋಮವಾರದಂದು ಜ್ಯೋತಿ ಜ್ಯೋತಿಯಲ್ಲಿ ಬೆರೆಯುವಂತೆ ಬಯಲು ಬಯಲನ್ನು ಸೇರುವಂತೆ ಎರಡಾಲಿಕಲ್ಲು ಒಂದಾಗುವಂತೆ ಮೃತ್ಯುಂಜಯ ಸ್ವಾಮಿಗಳು ಲಿಂಗದಲ್ಲಿ ಬೆರೆಸಿ ಬೇರಿಲ್ಲವಾದರು.
ಇಂತಹ ಮಹಾನ ಚೇತನಶಕ್ತಿ ವೀರಶೈವ ಧರ್ಮದ ಹರಿಕಾರ ಬಸವಣ್ಣನವರ ಹಾದಿಯಲ್ಲಿ ನಡೆದು ಕರುನಾಡಿಗೆ ಕೀರ್ತಿ ತಂದ ಹಾಗೂ ಸಮಾಜದ ಉದ್ಧಾರಕರು ಆದ ಪೂಜ್ಯ ಮೃತ್ಯುಂಜಯ ಅಪ್ಪಗಳವರ 138 ನೇ ಜಯಂತಿಯನ್ನು ನಾಡಿನ ಎಲ್ಲ ಧರ್ಮದವರು ಸೇರಿ ಭಕ್ತಿಪೂರ್ವಕವಾಗಿ ಆಚರಿಸೋಣ.
ಇಂದ
ಮಾಹಿತಿ ಲೇಖನ
-ಡಾ. ಕೊಟ್ರೇಶ್ವರಸ್ವಾಮಿ ಅ. ಸುರಪುರಮಠ