ಬಣಜಿಗ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಸತ್ಕಾರ ಸಮಾರಂಭ.
ಧಾರವಾಡ: ವೀರಶೈವ-ಲಿಂಗಾಯತ ಸಮಾಜಕ್ಕೆ ಕೇಂದ್ರದ ಇತರ ಹಿಂದುಳಿದ ಜಾತಿ (ಒಬಿಸಿ) ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಮಾಜ ಬಾಂಧವರು ಒಗ್ಗಟ್ಟಾಗಿ ಪ್ರಯತ್ನಿಸುವುದು ಅಗತ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ ಶೆಟ್ಟರ ಹೇಳಿದರು.
ಲಿಂಗಾಯತ ಭವನದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕ ಭಾನುವಾರ ಆಯೋಜಿಸಿದ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವೀರಶೈವ-ಲಿಂಗಾಯತ ಸಮಾಜದ ಎಲ್ಲ ಉಪಪಂಗಡಗಳ ಮುಖಂಡರು ಈ ದಿಸೆಯಲ್ಲಿ ಯತ್ನಿಸಿದರೆ ಖಂಡಿತವಾಗಿಯೂ ನಾವು ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಿದೆ ಎಂದರು.
ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಮಾಜದ ಶಾಸಕರ ಸಹಕಾರದಿಂದ ಬಣಜಿಗ ಸಮಾಜಕ್ಕೆ ೨ ಎ ಸೌಲಭ್ಯ ಕೊಡಿಸಿದೆ. ಇದರಿಂದ ಸಮಾಜದ ಬಡ ಮಕ್ಕಳು ಶಿಕ್ಷಣ ಹಾಗೂ ಉದ್ಯೋಗ ಪಡೆದುಕೊಳ್ಳಲು ಅನುಕೂಲವಾಗಿದೆ. ಬಣಜಿಗ ಸಮಾಜದ ಪ್ರತಿಭಾವಂತ ಮಕ್ಕಳನ್ನು ಸತ್ಕರಿಸುತ್ತಿರುವುದು ಶ್ಲಾಘನೀಯ ಇದರೊಂದಿಗೆ ವೀರಶೈವ-ಲಿಂಗಾಯತ ಸಮಾಜದ ಏಕತೆ ನಮ್ಮ ಮುಖ್ಯ ಉದ್ದೇಶವಾಗಿರಬೇಕು. ಲಿಂಗಾಯತ ಇತರ ಉಪಪಂಗಳಡದವರೊಂದಿಗೆ ಸೌಹಾರ್ದತೆಯಿಂದ ಇರಬೇಕು. ಉಪ ಪಂಗಡಗಳ ಜನರೊಂದಿಗೆ ಬೀಗತನ ನಡೆಯಬೇಕು. ಎಲ್ಲ ಉಪ ಪಂಗಡದವರು ಒಗ್ಗಟ್ಟಾಗಿದ್ದರೆ ಮಾತ್ರ ಸೌಕರ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಬಣಜಿಗ ಸಮಾಜ ಬಸವಣ್ಣನ ಆದರ್ಶಗಳ್ನು ಪಾಲನೆ ಪಾಲನೆ ಮಾಡುವ ಸಮಾಜವಾಗಿದ್ದು, ತಾಳ್ಮೆ, ಇತರರನ್ನು ಗೌರವಿಸುವುದು, ಸಂಘರ್ಷರಹಿತ, ದ್ವೇಷರಹಿತ ಗುಣಗಳು ಸಮಾಜ ಬಾಂಧವರ ಹಿರಿಮೆಗಳಾಗಿವೆ. ನಾನು ರಾಜ್ಯಾದ್ಯಂತ ಬಣಜಿಗ ಸಮಾಜದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಜಿಲ್ಲಾ ಹಾಗೂ ತಾಲೂಕು ಘಟಕಗಳು ಕ್ರಿಯಾಶೀಲವಾಗಿದ್ದು, ರಾಜ್ಯ ಮಟ್ಟದ ಕೇಂದ್ರ ಸಮಿತಿ ನಿಷ್ಕಿçಯಗೊಂಡಿದೆ. ಅದನ್ನು ಕ್ರಿಯಾಶೀಲಗೊಳಿಸುವ ದಿಸೆಯಲ್ಲಿ ಸಮಾಜದ ಹಿರಿಯರು ಕಾರ್ಯೋನ್ಮುಖರಾಗಬೇಕು ಎಂದರು.
ಬಣಜಿಗ ಸಂಘ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಸಮಾಜದ ಬಡ ಮಕ್ಕಳಿಗೆ ಶಿಕ್ಷಣ ನೀಡಲು ಅನುಕೂಲತೆ ಕಲ್ಪಿಸಬೇಕು. ಬ್ಯಾಂಕ್‌ಗಳ್ನು ಆರಂಭಿಸಿ ಬಡವರಿಗೆ ಸಾಲ ಸೌಲಭ್ಯ ಒದಗಿಸಿ ಅವರು ಆರ್ಥಿಕವಾಗಿ ಸದೃಢವಾಗಲು ಪ್ರಯತ್ನಿಸಬೇಕು. ಸಮಾಜದ ಒಳಿತಿಗಾಗಿ ಜಾತಿ ಸಮೀಕ್ಷೆ ಕಾರ್ಯವನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಬೇಕು. ಸಮಾಜದ ಕೆಲಸಕ್ಕೆ ನಾನು ಸದಾ ಸಿದ್ಧ ಎಂದು ತಿಳಿಸಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಬಣಜಿಗ ಸಮಾಜದ ಮಕ್ಕಳು ಕೇವಲ ಅಂಕಗಳ ಬೆನ್ನು ಹತ್ತುವುದು ಸರಿಯಲ್ಲ. ಅಂಕಗಳಿಕೆ ಮುಖ್ಯವಾದರೂ ಕೇವಲ ಅಂಕಗಳಿಗೆಯೋಂದೆ ಅಂತಿಮವಲ್ಲ. ಶೇ. 35 ರಷ್ಟು ಅಂಕಗಳಿಸಿದರೂ ಜೀವನದಲ್ಲಿ ಸಾಧನೆ ಮಾಡುವ ಸಾಮರ್ಥ್ಯ ಬಣಜಿಗರಲ್ಲಿದೆ. ಸಾಧನೆ ಮಾಡಲು ಹಲವು ಕ್ಷೇತ್ರಗಳಿವೆ ಎಂಬುದನ್ನು ಯುವಕರು ಮರೆಯಬಾರದು ಎಂದರು.
ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ ಮಾತನಾಡಿದರು. ಅರುಣಕುಮಾರ ಶೀಲವಂತ ಅಧ್ಯಕ್ಷತೆ ವಹಿಸಿದ್ದರು. ಡಾ. ವಿ.ಸಿ. ಸವಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ವಿಧಾನ ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಶಾಸಕಿ ಸೀಮಾ ಮಸೂತಿ, ಶರಣಪ್ಪ ಕೊಟಗಿ, ಮಲ್ಲಿಕಾರ್ಜುನ ಸಾವಕಾರ, ಪ್ರೇಮಕ್ಕ ಅಂಗಡಿ, ವಿಜಯಲಕ್ಷ್ಮೀ ಕಲ್ಯಾಣಶೆಟ್ಟರ ಸವಿತಾ ಅಮರಶೆಟ್ಟಿ, ವೀರಣ್ಣ ಮಳಗಿ, ಶಿವಶಂಕರ ಹಂಪಣ್ಣವರ ಮೊದಲಾದವರಿದ್ದರು. ಮಹಾಂತೇಶ ಗುಂಜೆಟ್ಟಿ ಸ್ವಾಗತಿಸಿದರು. ಮಾರ್ತಾಂಡಪ್ಪ ಕತ್ತಿ ನಿರೂಪಿಸಿದರು.