DHARWAD:ಭೃಂಗದ ಬೆನ್ನೇರಿದ ಊರಲ್ಲಿ ಬೇಂದ್ರೆ ಭಾವಗೀತ**ಮುಗದನಲ್ಲಿ ವರಕವಿ ಸಂಸ್ಮರಣೆ, ಮನ ಬೆಳಗಿದ ಬೇಂದ್ರೆ ಕಾವ್ಯ ದೀಪಾವಳಿ*

*ಭೃಂಗದ ಬೆನ್ನೇರಿದ ಊರಲ್ಲಿ ಬೇಂದ್ರೆ ಭಾವಗೀತ*
*ಮುಗದನಲ್ಲಿ ವರಕವಿ ಸಂಸ್ಮರಣೆ, ಮನ ಬೆಳಗಿದ ಬೇಂದ್ರೆ ಕಾವ್ಯ ದೀಪಾವಳಿ*
ಧಾರವಾಡ: ಅಂಬಿಕಾತನಯದತ್ತ ದ.ರಾ. ಬೇಂದ್ರೆ ಅವರಿಗೆ ಕಾವ್ಯ ರಚನೆಗೆ ಸ್ಫೂರ್ತಿ ನೀಡಿದ ಮುಗದ ಕೆರೆ ದಡದಲ್ಲಿ ವರಕವಿಯ ಕಾವ್ಯ ವಾಚನ, ಗಾಯನ, ನೃತ್ಯ ಸಾವಿರದ ಕವಿಯ ೪೩ನೇ  ಪುಣ್ಯಸ್ಮರಣೆಯನ್ನು ಸ್ಮರಣೀಯವಾಗಿಸಿತು.
ಜಿ. ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್, ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್, ಸಕ್ರಿ ಬಾಳಾಚಾರ್ಯ (ಶಾಂತಕವಿ) ಟ್ರಸ್ಟ್, ಮುಗದ ಗ್ರಾಮ ಪಂಚಾಯತಿ ಹಾಗೂ ಗ್ರಾಮದ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಶನಿವಾರ ಸಂಜೆ ಗ್ರಾಮದಲ್ಲಿ ನಡೆದ "ಭೃಂಗದ ಬೆನ್ನೇರಿ" ಕಾರ್ಯಕ್ರಮ ಯಶಸ್ವಿಯಾಯಿತು.

ಬ್ರಿಟೀಷ್ ಸರಕಾರ ದ.ರಾ. ಬೇಂದ್ರೆ ಅವರನ್ನು ಧಾರವಾಡ ಹತ್ತಿರದ "ಮುಗದ" ಎಂಬ ಹಳ್ಳಿಯಲ್ಲಿ ನಜರಬಂದಿಯಾಗಿ ೯ ತಿಂಗಳುಗಳ ಕಾಲ ಇಟ್ಟಿತ್ತು. ಶಬ್ದ ಗಾರುಡಿಗ ಕವಿಗೆ ಸ್ಫೂರ್ತಿ ನೀಡಿದ ಗ್ರಾಮದ ಕೆರೆ ದಡದ ದುರ್ಗಾದೇವಿ ಗುಡಿ ಅಂಗಳದಲ್ಲಿ ನಡೆದ ಕಾರ್ಯಕ್ರಮ ಮನಮುಟ್ಟುವಂತಿತ್ತು. ಮುಗದ ಗ್ರಾಮಸ್ಥರ ಸಹಕಾರ ಜಾನಪದ ಕವಿಯ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸಿತು. ಶಬ್ದಗಳನ್ನು ತಮ್ಮ ಲಯ, ಪ್ರಾಸಕ್ಕೆ ಅನುಗುಣವಾಗಿ ಕುಣಿಸ್ಯಾಡಿದ ಬೇಂದ್ರೆಯವರ "ಇನ್ನೂ ಯಾಕ ಬರಲಿಲ್ಲವ್ವ ಹುಬ್ಬಳ್ಳಿಯಾಂವಾ", "ಘಮಘಮ ಘಮಾಡಸ್ತಾವ ಮಲ್ಲಿಗಿ" ಹಾಡುಗಳಿಗೆ ಗ್ರಾಮದ ನವಭಾರತ ಕಾನ್ವೆಂಟ್ ಸ್ಕೂಲ್ ಮಕ್ಕಳು ಹೆಜ್ಜೆ ಹಾಕಿದ್ದು "ಕುಣಿಯೋಣು ಬಾರಾ" ಎಂಬ ಕವಿಯ ಕರೆಗೆ ಓಗೊಟ್ಟು ಮಕ್ಕಳು ಕುಣಿದಂತಿತ್ತು. ಶಾಲಾ ಮಕ್ಕಳು "ಹಕ್ಕಿ ಹಾರುತಿದೆ ನೋಡಿದಿರಾ" ಹಾಡಿನ ಮೂಲಕ ಬೇಂದ್ರೆ ಸಾವಿರದ ಕವಿ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದರು. ಅಂಬಿಕಾತನಯದತ್ತ ಕುರಿತ ಸಾಕ್ಷ್ಯ ಚಿತ್ರ ಪ್ರದರ್ಶನದೊಂದಿಗೆ ಬೇಂದ್ರೆ ಕಾವ್ಯ ದೀಪಾವಳಿ ಸಂಪನ್ನಗೊAಡಿತು. ಸಾಧನಕೆರಿ ಕವಿಯನ್ನು ಮುಗದಕೆರಿ ದಡದಲ್ಲಿ ಸ್ಮರಿಸಿಕೊಂಡಿದ್ದು ಅನನ್ಯವಾಗಿತ್ತು. ದುರ್ಗಾ ಮಾತೆಯ ಸನ್ನಿಧಿಯಲ್ಲಿ ಅಂಬಿಕಾತನಯನ ಕಲ್ಪನಾ ವಿಲಾಸ ಮನಮಿಡಿಯಿತು. ಪ್ರತಿ ವರ್ಷ ಬೇಂದ್ರೆ ಸ್ಮರಣೆ ಕಾರ್ಯಕ್ರಮ ಮಾಡಬೇಕಲ್ಲದೇ ಗ್ರಾಮದಲ್ಲಿ ಬೇಂದ್ರೆ ಭವನ ನಿರ್ಮಿಸಲು ಗ್ರಾಮಸ್ಥರು ಸಹಕಾರ ನೀಡಲಿದ್ದಾರೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ ಅಧ್ಯಕ್ಷ ರವಿ ಕಸಮಳಗಿ ಹೇಳಿದ್ದು ವರಕವಿ ಅಭಿಮಾನಿಗಳ ಆಸೆಗೆ ಇನ್ನಷ್ಟು ಬಲ ತುಂಬಿತು. 
ಹಿರಿಯ ಸಾಹಿತಿ ಡಾ. ಶಾಮಸುಂದರ ಬಿದರಕುಂದಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಡಾ.ರಮಾಕಾಂತ ಜೋಶಿ, ಅತಿಥಿಗಳಾಗಿ ಕಲ್ಲಪ್ಪ ಹಟ್ಟಿಯವರ, ಡಾ. ಕೃಷ್ಣ ಕಟ್ಟಿ ವೇದಿಕೆ ಮೇಲಿದ್ದರು. ರಾಧಿಕಾ ಕಾಖಂಡಿಕಿ ಪ್ರಾರ್ಥಿಸಿದರು. ಡಾ. ಹ.ವೆಂ. ಕಾಖಂಡಿಕಿ ನಿರೂಪಿಸಿದರು. 

ಬಾಕ್ಸ್
ಕಾವ್ಯ ವಾಚನ
"ಹಸುಗೂಸು ಮಲಗಿಹುದು ಹುಸಿ ನಗೆಯು ತೊಲಗಿಹುದು.....ಕನಸಿನಾಚೆಗೆ ಇರುವ ನಿದ್ದೆಯಲ್ಲಿ'......ಕವನವನ್ನು ಮಥುರಾ ದೀಕ್ಷಿತ ಸುಶ್ರಾವ್ಯವಾಗಿ ಹಾಡುವ ಮೂಲಕ ಕಿವಿಗಿಂಪು ನೀಡಿದರೆ, ಡಾ. ಶ್ರೀಧರ ಕುಲಕರ್ಣಿ ಮಕ್ಕಳ ಕೋರಸ್ನೊಂದಿಗೆ "ಇನ್ನೂ ಯಾಕ್ ಬರಲಿಲ್ಲವ್ವ ಹುಬ್ಬಳ್ಳಿಯಾಂವಾ' ಹಾಡಿ ರಂಜಿಸಿದರು. 
ಡಾ. ಕೃಷ್ಣ ಕಟ್ಟಿ, ಡಾ. ಪ್ರಕಾಶ ಗರೂಡ, ರಶ್ಮಿ ಶಿರಹಟ್ಟಿ, ಡಾ. ಅರವಿಂದ ಯಾಳಗಿ, ಡಾ. ಶಶಿಧರ ತೋಡಕರ, ಆನಂದ ಝುಂಝರವಾಡ, ಶ್ರೀದೇವಿ ಜೋಶಿ, ಡಾ. ರಾಜೇಶ್ವರಿ ಮಹೇಶ್ವರಯ್ಯ, ಅಶ್ವಿನಿ ಕಾಶೀಕರ, ನರಸಿಂಹ ಪರಾಂಜಪೆ, ಡಾ. ಬಾಳಣ್ಣ ಶೀಗಿಹಳ್ಳಿ, ರಾಧಿಕಾ ಕಾಖಂಡಕಿ, ಸಕ್ಕೂಬಾಯಿ ತಳವಾರ, ಅಶೋಕ ನಿಂಗೋಳಿ, ಪ್ರೇಮಾ, ಕಾಶಿನಾಥ, ಮುಕುಂದ ಕುಲಕರ್ಣಿ ಕವನ ವಾಚಿಸಿದರು. 

ಬಾಕ್ಸ್:
ಕಲ್ಲುಸಕ್ಕರೆ ಪ್ರೀತಿ
ದ.ರಾ. ಬೇಂದ್ರೆಯವರು ತಮ್ಮ ಮನೆಗೆ ಬಂದವರಿಗೆಲ್ಲ ಕಲ್ಲುಸಕ್ಕರೆ ಕೊಟ್ಟು ಬಾಯಿ ಸಿಹಿ ಮಾಡಿಸುತ್ತಿದ್ದರು. ಅದೇ ಪರಂಪರೆಯAತೆ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಕಲ್ಲುಸಕ್ಕರೆ ನೀಡಿದ್ದು ಬೇಂದ್ರೆ ಅಭಿಮಾನಿಗಳಿಗೆ ಮೆಚ್ಚುಗೆಯಾಯಿತು.

ಫೋಟೊ:
ಧಾರವಾಡ ತಾಲೂಕು ಮುಗದ ಗ್ರಾಮದಲ್ಲಿ ವರಕವಿ ದ.ರಾ. ಬೇಂದ್ರೆ ಪುಣ್ಯಸ್ಮರಣೆ ನಿಮಿತ್ತ ಆಯೋಜಿಸಿದ "ಭೃಂಗದ ಬೆನ್ನೇರಿ' ಕಾರ್ಯಕ್ರಮದಲ್ಲಿ ಹಿರಿಯ ಚಿಂತಕ ಡಾ. ಶಾಮಸುಂದರ ಬಿದರಕುಂದಿ ಮಾತನಾಡಿದರು. ಡಾ. ರಮಾಕಾಂತ ಜೋಶಿ, ಡಾ. ಕೃಷ್ಣ ಕಟ್ಟಿ, ರವಿ ಕಸಮಳಗಿ, ಕಲ್ಲಪ್ಪ ಹಟ್ಟಿಯವರ, ಡಾ. ಹ.ವೆಂ. ಕಾಖಂಡಿಕಿ ಇದ್ದರು.
ನವೀನ ಹಳೆಯದು

نموذج الاتصال