*ಸರಕಾರಿ UBDT ಇಂಜಿನಿಯರಿಂಗ್ ಕಾಲೇಜಿನ 50%ಸೀಟುಗಳನ್ನು ಹೆಚ್ಚಿನ ಶುಲ್ಕಕ್ಕೆ ಮಾರುವ ನಿರ್ಧಾರವನ್ನು ಕೈಬಿಡಿ!*
*ಶುಲ್ಕಗಳನ್ನು ಹೆಚ್ಚಿಸಿ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಿಂದ ದೂರವಿಡುವುದನ್ನು ನಿಲ್ಲಿಸಿ!* *ಧಾರವಾಡದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಿ!* *ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣಕ್ಕೆ ಧಿಕ್ಕಾರ!*
ಎಂದು ಧಾರವಾಡ ನಗರದ ವಿವೇಕಾನಂದ ವೃತ್ತದಲ್ಲಿ ಇಂದು AIDSO ಧಾರವಾಡ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯನ್ನು ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ AIDSO ನ ರಾಜ್ಯ ಉಪಾಧ್ಯಕ್ಷರಾದ ಹಣಮಂತ ಎಸ್. ಹೆಚ್. ರವರು ಮಾತನಾಡುತ್ತಾ,
ಕಳೆದ ಒಂದು ತಿಂಗಳಿನಿಂದ, ದಾವಣಗೆರೆಯ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಕಾಲೇಜನ್ನು ಉಳಿಸಿಕೊಳ್ಳಲು ಹೋರಾಟ ನಡೆಸುವಲ್ಲಿ ನಿರತರಾಗಿದ್ದಾರೆ. ರಾಜ್ಯದ ಅತ್ಯಂತ ಹಳೆಯ ಕಾಲೇಜುಗಳಲ್ಲಿ ಒಂದಾದ ಹಾಗೂ ರಾಜ್ಯದ ಪ್ರಥಮ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಾದ ಯುಬಿಡಿಟಿಯಲ್ಲಿ ಶೇ.50 ರಷ್ಟು ಪ್ರಮಾಣದ ಸೀಟುಗಳಲ್ಲಿ ಭೀಕರ ಶುಲ್ಕ ಏರಿಕೆಯನ್ನು ಮಾಡಿ, 97 ಸಾವಿರ ರೂಪಾಯಿಗಳಷ್ಟು ವಿದ್ಯಾರ್ಥಿಗಳಿಂದ ಪಡೆಯಲು ನಿರ್ಧರಿಸಲಾಗಿದೆ. ದೇಶದ ಯಾವುದೇ, ಸರ್ಕಾರದ ದೇಣಿಗೆಯಿಂದ ನಡೆಯುವ ಒಂದು ಇಂಜಿನಿಯರಿಂಗ್ ಕಾಲೇಜಿನಲ್ಲಿ ಈ ಪ್ರಮಾಣದ ಶುಲ್ಕ ಪಡೆಯುವ ನಿರ್ವಹಣಾ ಕೋಟಾದ ಸೀಟುಗಳ ಸಂಖ್ಯೆ ಇಲ್ಲ. ಸರ್ಕಾರಿ ಇಂಜಿನಿಯರಿಂಗ್ ಶುಲ್ಕವೇ, 43 ಸಾವಿರದಷ್ಟಿದ್ದು, ಈಗಾಗಲೇ ಬಡ ವಿದ್ಯಾರ್ಥಿಗಳಿಗೆ ಇದನ್ನು ಭರಿಸಲು ಕಷ್ಟಸಾಧ್ಯವಾಗಿದೆ. ಇಂತಹ ಸಂದರ್ಭದಲ್ಲಿ, ಸರ್ಕಾರಿ ಕಾಲೇಜು ಒಂದರಲ್ಲಿ ₹97,೦೦೦/- ಶುಲ್ಕ
ಪಡೆಯುವುದು ವಿದ್ಯಾರ್ಥಿಗಳ ಮೇಲೆ ಒಂದು ಬೃಹತ್ ಪ್ರಹಾರವಾಗಿದೆ. ಇದೇ ರೀತಿಯಲ್ಲಿ ಬೆಂಗಳೂರಿನ ಪ್ರತಿಷ್ಠಿತ ಯುವಿಸಿಇ ಕಾಲೇಜ್ ಸೇರಿದಂತೆ ರಾಜ್ಯದ ಹಲವು ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ಏರಿಸುವ ಹಾಗೂ ಕಾಲೇಜು ನಿರ್ವಹಣೆಯ ಹಣವನ್ನು ವಿದ್ಯಾರ್ಥಿಗಳ ಶುಲ್ಕ ಪಡೆಯುವ ಪ್ರಯತ್ನಗಳು ನಡೆಯುತ್ತಿವೆ. ಇದು ಸಾರ್ವಜನಿಕ ಶಿಕ್ಷಣದ ಮೂಲ ಉದ್ದೇಶಕ್ಕೆ ವಿರುದ್ಧವಾದ ನಡೆಯಾಗಿದೆ. ದಾವಣಗೆರೆ-ಧಾರವಾಡ ಸೇರಿದಂತೆ ರಾಜ್ಯದಾದ್ಯಂತ ವಿದ್ಯಾರ್ಥಿಗಳು-ಶಿಕ್ಷಕರು-ಪೋಷಕರು ಆತಂಕದಲ್ಲಿದ್ದಾರೆ. ರಾಜ್ಯದ ಹೆಮ್ಮೆಗೆ ಪಾತ್ರವಾದ ಯುಬಿಡಿಟಿಯಲ್ಲಿ ಇನ್ನು ಮುಂದೆ ಬಡ ಕುಟುಂಬದ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಅಧ್ಯಯನ ನಡೆಸಲು ಸಾಧ್ಯವಾಗುವುದಿಲ್ಲ, ಜೊತೆಗೆ ರಾಜ್ಯದ ಹಲವು ಇಂಜಿನಿಯರಿಂಗ್ ಕಾಲೇಜ್ ಹಾಗೂ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳು ಇದೇ ಸ್ಥಿತಿಯನ್ನು ತಲುಪುತ್ತಿರುವುದು ನೋವಿನ ಸಂಗತಿಯಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಜನರ ಸಮಸ್ಯೆಯ ಗಂಭೀರತೆಯನ್ನು ಅರಿತು ಈ ಕೂಡಲೇ ಯುಬಿಡಿಟಿ ಕಾಲೇಜಿನಲ್ಲಿ ಶೇ. 50 ಹೆಚ್ಚುವರಿ ಶುಲ್ಕವನ್ನು ಕೈಬಿಡಬೇಕು ಹಾಗೂ ಈ ವರ್ಷ ಪಡೆದಿರುವ ಹೆಚ್ಚುವರಿ ಹಣವನ್ನು ಹಿಂದಿರುಗಿಸಬೇಕು. ಬಡ ವಿದ್ಯಾರ್ಥಿಗಳ ಪರ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ, AIDSO ಧಾರವಾಡ ಜಿಲ್ಲಾ ಕಾರ್ಯದರ್ಶಿಗಳಾದ ಶಶಿಕಲಾ ಮೇಟಿಯವರು ಮಾತನಾಡುತ್ತಾ,
‘ರಾಜ್ಯದ ಶಿಕ್ಷಣ ಕಾಶಿ’ಯೆಂದೇ ಹೆಸರಾಗಿರುವ ಧಾರವಾಡ ಜಿಲ್ಲೆಯಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಬೇಕು ಹಾಗೂ
ರಾಜ್ಯದ ಎಲ್ಲ ಸರ್ಕಾರಿ ಹಾಗೂ ವಿವಿಯ ಅಡಿಯಲ್ಲಿ ಬರುವ ಇಂಜಿನಿಯರಿಂಗ್ ಕಾಲೇಜುಗಳ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ನೀಡಬೇಕು ಹಾಗೂ ಕಾಲೇಜು ನಿರ್ವಹಣೆಯ ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ಸರ್ಕಾರ ವಹಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ AIDSO ನ ಧಾರವಾಡ ಜಿಲ್ಲಾಧ್ಯಕ್ಷೆ ಸಿಂಧು ಕೌದಿ, ಜಿಲ್ಲಾ ಕಾರ್ಯಕರ್ತರಾದ ಕಾವೇರಿ ಹಾಗೂ ನಗರದ ಹಲವು ಕಾಲೇಜುಗಳಿಂದ ವಿದ್ಯಾರ್ಥಿಗಳು ಭಾಗಹಿಸಿದ್ದರು.