*ವೆಂಕಟಾಪುರ ಗ್ರಾಮದ ಸಂತ್ರಸ್ತರ ಮನೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭೇಟಿ, ಸಾಂತ್ವನ ; ಸರಕಾರದ ಸೌಲಭ್ಯ ದೊರಕಿಸುವ ಭರವಸೆ ನೀಡಿದ ಸಚಿವರು.*
ಧಾರವಾಡ (ಕ.ವಾ) ಆ.04: ಅತಿ ಮಳೆಯಿಂದಾಗಿ ಪಕ್ಕದ ಮನೆಯ ಮಣ್ಣಿನ ಗೋಡೆ ಕುಸಿದು ಇತ್ತಿಚೆಗೆ ನಿಧನರಾದ ಯಲ್ಲಪ್ಪ ಹಿಪ್ಪಿಯವರ ಅವರ ಮನೆಗೆ ಇಂದು ಮಧ್ಯಾಹ್ನ ಸಂಸದರು, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರು ಭೇಟಿ ನೀಡಿ, ಯಲ್ಲಪ್ಪ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಯಲ್ಲಪ್ಪ ಅವರ ಕುಟುಂಬಕ್ಕೆ ಸರಕಾರದಿಂದ ಪರಿಹಾರಧನ ರೂ.5 ಲಕ್ಷಗಳನ್ನು ಈಗಾಗಲೇ ಕೊಟ್ಟಿದ್ದಾರೆ. ಗಾಯಾಳುಗಳಾಗಿದ್ದ ಯಲ್ಲಪ್ಪನ ಹೆಂಡ್ತಿ ಮತ್ತು ಮಗಳಿಗೆ ಅಗತ್ಯ ವೈಧ್ಯಕೀಯ ಚಿಕಿತ್ಸೆ ನೀಡಲಾಗಿದೆ. ಅವರಿಗೆ ವಿಧವಾ ವೇತನ ಮತ್ತು ರಾಷ್ಟ್ರೀಯ ಕೌಟಂಬಿಕ ಯೋಜನೆಯಡಿ ಆರ್ಥಿಕ ನೆರವು, ಸೌಲಭ್ಯ ನೀಡಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಅವರು ಎಂದು ತಿಳಿಸಿದರು.
ರಾಜ್ಯ ಮತ್ತು ಕೇಂದ್ರ ಸರಕಾರದ ನೆರವಿನಲ್ಲಿ ಗ್ರಾಮ ಪಂಚಾಯತಿಯಿಂದ ತಕ್ಷಣ ಹಿಪ್ಪಿಯವರ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡಬೇಕು. ಅತಿ ಮಳೆಯಿಂದ ಮನೆ ಹಾನಿ ಆಗಿರುವ ಜನರಿಗೆ ಮನೆ ದುರಸ್ತಿ ಅಥವಾ ನೂತನ ಮನೆ ಕಟ್ಟಿಕೊಳ್ಳಲು ಆರ್ಥಿಕ ನೆರವು ನೀಡಬೇಕೆಂದು ಅವರು ಅಧಿಕಾರಿಗಳಿಗೆ ಹೇಳಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಉಪವಿಭಾಗಾಧಿಕಾರಿ ಶಾಲಂ ಹುಸೇನ, ಮಾಜಿ ಶಾಸಕ ಅಮೃತ ದೇಸಾಯಿ, ತಹಶೀಲ್ದಾರ ಡಾ.ಡಿ.ಎಚ್.ಹೂಗಾರ ಸೇರಿದಂತೆ ಇತರರು ಇದ್ದರು.