9 ರಿಂದ 13ರ ವರೆಗೆ ಕೆಲಗೇರಿ ಕಲ್ಮೇಶ್ವರ 25 ನೇ ಜಾತ್ರಾ ಮಹೋತ್ಸವ.
ಧಾರವಾಡ 08 - ಶತಮಾನೋತ್ತರ ಇತಿಹಾಸ ಹೊಂದಿರುವ ಕೆಲಗೇರಿ ಕೆರೆಯ ದಂಡೆ ಮೇಲಿರುವ ಕಲ್ಮೇಶ್ವರ ದೇವರ ಜಾತ್ರಾ ಮಹೋತ್ಸವಕ್ಕೆ ಗ್ರಾಮವು ಸಂಪೂರ್ಣ ಸಜ್ಜಾಗಿದೆ. ಇದು 25 ನೇ ವರ್ಷದ ಜಾತ್ರಾ ಮಹೋತ್ಸವದ ನಿಮಿತ್ತ ಗ್ರಾಮದ ಜನರು ಈ ಬಾರಿ ತುಸು ಅದ್ಧೂರಿಯಾಗಿಯೇ ಜಾತ್ರೆ ಮಾಡಲು ಉತ್ಸುಕರಾಗಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಕಲ್ಮೇಶ್ವರ ದೇವಸ್ಥಾನ ಟ್ರಸ್ಟ್ ಕಮೀಟಿ ಪದಾಧಿಕಾರಿಗಳು, ಇದೇ ಮೇ 9 ರಿಂದ 13ರ ವರೆಗೆ ಜಾತ್ರೆ ನಿಮಿತ್ತ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಟ್ರಸ್ಟ್ ಕಮೀಟಿ ಆಯೋಜಿಸಿದೆ. ಮೇ 9 ರಂದು ಬೆಳಿಗ್ಗೆ 9 ಕ್ಕೆ ಸುಳ್ಳದ ಪಂಚಗೃಹ ಹಿರೇಮಠದ ಶಿವಸಿದ್ಧ ರಾಮೇಶ್ವರ ಶಿವಾಚಾರ್ಯರ ಹಸ್ತದಿಂದ ಕಳಸಾರೋಹಣ ಕಾರ್ಯಕ್ರಮ ಜರುಗಲಿದೆ. ಸಂಜೆ 4 ಕ್ಕೆ ಉಚ್ಛಾಯ ಕಾರ್ಯಕ್ರಮ ವಿಶೇಷವಾಗಿದ್ದು ಮಹಾರಾಷ್ಟ್ರದ ಕುಂತಲಗಿರಿಯ ಗಜಲಕ್ಷ್ಮಿ (ಆನೆ) ಗ್ರಾಮದಲ್ಲಿ ಮೆರವಣಿಗೆ ನಡೆಯಲಿದೆ.
ರಥೋತ್ಸವ..
ಮೇ 10ರಂದು ಬೆಳಿಗ್ಗೆ 5ಕ್ಕೆ ಕಲ್ಮೇಶ್ವರ ಸ್ವಾಮಿಗೆ ದೇವಸ್ಥಾನದ ಪ್ರಧಾನ ಅರ್ಚಕ ಬಸಯ್ಯ ಹಿರೇಮಠ ಅವರಿಂದ ರುದ್ರಾಭಿಷೇಕ ಹಾಗೂ ಮಹಾಮಂಗಳಾರತಿ ಜರುಗುವುದು. ಮಧ್ಯಾಹ್ನ 12.30ಕ್ಕೆ ಅನ್ನಪ್ರಸಾದ ನಡೆಯಲಿದೆ. ಸಂಜೆ 4.30ಕ್ಕೆ ಮುರುಘಾಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ, ಸುಳ್ಳದ ಪಂಚಗೃಹ ಹಿರೇಮಠದ ಶಿವಸಿದ್ಧ ರಾಮೇಶ್ವರ ಸ್ವಾಮೀಜಿ ಹಸ್ತದಿಂದ, ಸಕಲ ವಾದ್ಯ ಮೇಳಗಳಿಂದ ಮಹಾರಥೋತ್ಸವ ಜರುಗಲಿದೆ. ರಥೋತ್ಸವದ ಮೆರವಣಿಗೆಯಲ್ಲಿ ಕುಂದಾಪೂರದ ಚಂಡಿ ಹಾಗೂ ಮಾಗಡಿಯ ಬ್ಯಾಂಡ್ ಕಲಾ ತಂಡಗಳು ಪಾಲ್ಗೊಳ್ಳಲಿವೆ.
ಮೇ 10ರ ರಾತ್ರಿ 10.30ಕ್ಕೆ ಕೆಲಗೇರಿಯ ಸಿದ್ಧಲಿಂಗೇಶ್ವರ ನವ ತರುಣ ನಾಟ್ಯ ಸಂಘದಿಂದ ಆದರ್ಶ ಪ್ರೇಮ ಎಂಬ ಸಾಮಾಜಿಕ ನಾಟಕವು ಗ್ರಾಮದ ಸಮುದಾಯ ಭವನದಲ್ಲಿ ಪ್ರದರ್ಶನಗೊಳ್ಳಲಿದೆ.
ಜಾತ್ರಾ ಮಹೋತ್ಸವ ನಿಮಿತ್ತ ಗ್ರಾಮದ ಅಯ್ಯಪ್ಪಸ್ವಾಮಿ ಟ್ರಸ್ಟನಿಂದ ಮೇ 10ರಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 12ರ ವರೆಗೆ ಸಮುದಾಯ ಭವನದಲ್ಲಿ ರಕ್ತದಾನ ಶಿಬಿರ ನಡೆಯಲಿದೆ.
ಮೇ 11ರಂದು ದೇವಸ್ಥಾನದಲ್ಲಿ ಸಂಜೆ 5ಕ್ಕೆ ಭಜನಾ ಕಾರ್ಯಕ್ರಮ, ಮೇ
12ರಂದು ಸಂಜೆ 4ಕ್ಕೆ ಕೆಲಗೇರಿ ಕೆರೆಯ ಆವರಣದಲ್ಲಿ ಕೇಸರಿ ಗೆಳೆಯರ ಬಳಗದಿಂದ ಟಗರಿ ಕಾಳಗ ನಡೆಯಲಿದೆ.
ಇನ್ನು, ಮೇ 13ರಂದು ಸಂಜೆ 6ಕ್ಕೆ ಕಡಬಿನ ಕಾಳಗ ಹಾಗೂ ಮೇ
14ರಂದು ಬೆಳಿಗ್ಗೆ 10ಕ್ಕೆ ಅಯ್ಯಪ್ಪಸ್ವಾಮಿ ಟ್ರಸ್ಟನಿಂದ ಕೆಲಗೇರಿ ಕೆರೆ ಆವರಣದಲ್ಲಿ ಟ್ರಾಕ್ಟರ್ ಹಿಮ್ಮುಖವಾಗಿ ಓಡಿಸುವ ಸ್ಪರ್ಧೆ ಏರ್ಪಡಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ರುದ್ರಗೌಡ ಪಾಟೀಲ್, ಕಾರ್ಯದರ್ಶಿ ಪ್ರಭು ಅಜಗೊಂಡನವರ,
ಗ್ರಾಮದ ಮುಖಂಡರಾದ ಶಂಕರ ಕೊಟ್ರಿ, ಈರಣ್ಣ ಹಳವದ, ಚನ್ನಬಸ್ಸು ಹೊಂಗಲಮಠ,
ಮಂಜುನಾಥ ಗುಡ್ಡದಮಠ, ರುದ್ರಯ್ಯ ಕಲ್ಮಠ, ಗಿರಿಯಪ್ಪ ಸಿದ್ದಪ್ಪಗೌಡರ ಇದ್ದರು.