ಊಟವಿಲ್ಲದೇ ಉಪ್ಪಿನಕಾಯಿ ನೀಡಿದಂತಾಗಿದೆ -- ಶಾಸಕ ಕೋನರಡ್ಡಿ
ಧಾರವಾಡ:---ರಾಜ್ಯದಲ್ಲಿ ಸಾಕಷ್ಟು ಬರಗಾಲವಿದೆ ಎಂದು ಮನವರಿಕೆ ಮಾಡಿದರೂ ಕೇಳದ ಕೇಂದ್ರ ಸರಕಾರ ಈಗ ನ್ಯಾಯಾಲಯದ ನಿರ್ದೇಶನದಿಂದ ಪರಿಹಾರ ಬಿಡುಗಡೆ ಮಾಡಿದೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ತಿಳಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯಕ್ಕೆ ಬರ ಅಧ್ಯಯನ ತಂಡ ಬಂದು ಹೋದ ತಕ್ಷಣ ನಾವು 18,172 ಕೋಟಿ ಬರ ಪರಿಹಾರ ಕೇಳಿದ್ದೇವು. ಆದರೆ, ಮೂರು ದಿನಗಳಲ್ಲಿ ನೀಡುವುದಾಗಿ ಹೇಳಿ ಕೈಚೆಲ್ಲಿ ಕುಳಿತಿದ್ದರು ಎಂದು ಆರೋಪಿಸಿದರು.
ಕೇಂದ್ರದ ನಡೆ ಖಂಡಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲಾಗಿತ್ತು. ಈಗ ನ್ಯಾಯಾಲಯದ ನಿರ್ದೇಶನದ ಪ್ರಕಾರ 3,454 ಕೋಟಿ ನೀಡಿದ್ದಾರೆ. ಇದು ಒಂದು ರೀತಿ ಊಟವಿಲ್ಲದೇ ಉಪ್ಪಿನಕಾಯಿ ನೀಡಿದಂತಾಗಿದೆ ಎಂದು ಆರೋಪಿಸಿದರು.
ಕೂಡಲೇ ಬಾಕಿ ಪರಿಹಾರವನ್ನೂ ಸರಕಾರ ನೀಡಬೇಕು. ಇಲ್ಲದಿದ್ದರೆ ನಾವು ನ್ಯಾಯಾಂಗ ನಿಂದನೆ ಕೇಸ್ ಹಾಕುತ್ತೇವೆ ಎಂದರು.