ಜಾತಿಗಿಂತ ನೀತಿ, ಜ್ಞಾನ ಮುಖ್ಯ
ಧಾರವಾಡ : ಪ್ರತಿಯೊಬ್ಬ ಮಾನವನಲ್ಲಿ ಅರಿವು ಜನ್ಮಜಾತವಾಗಿ ನೆಲೆಸಿರುತ್ತದೆ ಆದರೆ ಹೊರಗಿನ ಗುರುವು ಕವಲುದಾರಿಗಳಲ್ಲಿ ನಿಂತಿರುವ ಕೈಮರದಂತೆ ಕೇವಲ ಮಾರ್ಗದರ್ಶಕವಾಗಿರುತ್ತದೆ. ಮನುಷ್ಯನ ಶ್ರೇಯಸ್ಸು ಅವನ ದೃಢತೆಯನ್ನು ಅವಲಂಬಿಸಿರುತ್ತದೆ. ಮನುಷ್ಯ ಹುಟ್ಟುವಾಗ ವಿಶ್ವಮಾನವನಾಗಿ ಹುಟ್ಟುತ್ತಾನೆ ಆತ ಬೆಳೆಯುತ್ತಿದ್ದಂತೆ ಕೇವಲ ಮಾನವನಾಗಿ ಬದುಕುತ್ತಿದ್ದಾನೆ. ಜೀವನದಲ್ಲಿ ಮೂರು ಜನ ನಮಗೆ ಗುರುಗಳಾಗುತ್ತಾರೆ ಮೊದಲಿನವರು ತಾಯಿ ಎರಡನೆದವರು ಪ್ರಾಥಮಿಕ ಶಾಲೆಯ ಶಿಕ್ಷಕರು ಮೂರನೆಯದವರು ಧರ್ಮಗುರು, ಮಠಾಧೀಶರು. ತಾಯಿ, ಗುರು ಸ್ಥಾನ ತುಂಬಬಹುದು ಆದರೆ ತಾಯಿ ಋಣ ಹಾಗೂ ಗುರುವಿನ ಋಣ ತೀರಿಸಲಲ್ಲಾಗುವುದಿಲ್ಲ, ತಾಯಿಯಂತೆ ಮತ್ತೊಬ್ಬರು ಆಗಲು ಸಾಧ್ಯವೇ ಇಲ್ಲ ತಾಯಿ ಮನೆಯ ಮೊದಲ ಪಾಠಶಾಲೆಯಾದರೆ ಶಿಕ್ಷಕ ಜ್ಞಾನ, ಮಠಾಧೀಶ ಧರ್ಮ, ಸಂಸ್ಕೃತಿ, ಹಾಗೂ ಆಧ್ಯಾತ್ಮದ ಆತ್ಮದ ಸವಿಯನ್ನು ಉಣಬಡಿಸುತ್ತಾನೆ ಹೀಗಾಗಿ ಹರ ಮುನಿದರೂ ಗುರು ಕಾಯುವನು ಎಂಬುದು ಸತ್ಯದ ಮಾತು. ಭಕ್ತರ ಮನ ಪರಿವರ್ತನೆ ಮಾಡುವ ಸದ್ವಿಚಾರ, ಕರುಣೆ, ಪರಿಣತೆ, ಸುಜ್ಞಾನ, ಸದ್ಗುಣ ಮುಖ್ಯ. ಮಠಾಧೀಶರು ಗುಡಿ ಗುಂಡಾರ ಕಟ್ಟಿ ಶೋಷಣೆ ಮಾಡುವವರಲ್ಲ ಬದಲಾಗಿ ಹಸಿದವನಿಗೆ ಉಣಬಡಿಸಿ ಆತನಿಗೆ ಅಕ್ಷರದ ಜೊತೆಗೆ ಜ್ಞಾನ ನೀಡುವವರು ಎಂದು ಶಹರದ ಎಲ್.ಇ.ಎ ಮೈದಾನದಲ್ಲಿ ಪ್ರವಚನ ಸಮಿತಿ ಏರ್ಪಡಿಸಿದ ವಿಶ್ವಧರ್ಮ ಪ್ರವಚನ ಕಾರ್ಯಕ್ರಮದಲ್ಲಿ ಶ್ರೀ ನಿಜಗುಣಾನಂದ ಸ್ವಾಮಿಜಿ ಹೇಳಿದರು.
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ: 9945564891