*ಕರ್ನಾಟಕ ರಾಜ್ಯ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ-2023*
*ಮತದಾನ ಸಿದ್ಧತೆ ಪೂರ್ಣ ; ಒಟ್ಟು 15,23,080 ಮತದಾರರು*;
*1,642 ಮತಗಟ್ಟೆಗಳು, ಮತಗಟ್ಟೆಗಳಿಗೆ 8,319 ಸಿಬ್ಬಂದಿಗಳ ನಿಯೋಜನೆ; ಶಾಂತಿಯುತ ಮತದಾನಕ್ಕೆ* *ಅಗತ್ಯ ಕ್ರಮ ವಹಿಸಲಾಗಿದೆ*
*- ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ*
*ಧಾರವಾಡ (ಕರ್ನಾಟಕ ವಾರ್ತೆ) ಮೇ.05*: ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ 7 ವಿಧಾನಸಭಾ ಮತಕ್ಷೇತ್ರಗಳಿಗೆ ಮೇ.10 ರಂದು ಮತದಾನ ಜರುಗಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಒಟ್ಟು 15,23,080 ಜನ ಮತದಾರರು ತಮ್ಮ ಮತದಾನ ಹಕ್ಕು ಚಲಾಯಿಸಲಿದ್ದು, 1,642 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತ್ತು ಚುನಾವಣಾ ಕರ್ತವ್ಯಕ್ಕಾಗಿ 8,319 ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಅಗತ್ಯ ತರಬೇತಿ ನೀಡಿ ನಿಯೋಜಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ, ಮೇ.10, ಬುಧವಾರದಂದು ಮತದಾನ ಮತ್ತು ಮೇ. 13, ಶನಿವಾರ ದಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಈಗಾಗಲೇ ಪ್ರಕಟಗೊಂಡಿರುವ ಮತದಾರರ ಯಾದಿಯಲ್ಲಿರುವಂತೆ 7,65,160 ಪುರುಷ ಮತದಾರರು ಮತ್ತು 7,57,831 ಮಹಿಳಾ ಮತದಾರರು, 89 ಇತರೆ ಮತದಾರರು ಸೇರಿ ಒಟ್ಟು 15,23,080 ಮತದಾರರು ಮತದಾನದ ಹಕ್ಕು ಚಲಾಯಿಸಲಿದ್ದಾರೆ. ಇದರಲ್ಲಿ 31,934 ಯುವ ಮತದಾರರು ಪ್ರಥಮ ಬಾರಿಗೆ ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ.
*ಹೆಸರು ಪರಿಶೀಲನೆಗೆ ಆ್ಯಪ್*: ಮತದಾರರು ಮತದಾರರ ಯಾದಿಯಲ್ಲಿ ಹೆಸರು ದಾಖಲಿರುವ ಕುರಿತು ವೋಟರ್ ಹೆಲ್ಪ್‍ಲೈನ್ ಆ್ಯಪ್ (Voter Helpline App) www.nvsp.in website ಮೂಲಕ ಹಾಗೂ ಆಯಾ ವಿಧಾನಸಭಾ ಮತಕ್ಷೇತ್ರದ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಲಭ್ಯವಿರುವ ಮತದಾರರ ಯಾದಿಯನ್ನು ಪರಿಶೀಲಿಸಿ ಖಾತ್ರಿ ಪಡಿಸಿಕೊಳ್ಳಬಹುದಾಗಿದೆ.
*ವೋಟರ್ ಸ್ಲೀಪ್ ವಿತರಣೆ*: ಮತದಾರನ ಹೆಸರು, ಕ್ರಮಸಂಖ್ಯೆ, ಮತಗಟ್ಟೆ ವಿವರ ಇರುವ 12,37,665 ವೋಟರ್ ಸ್ಲೀಪ್ (Voter slip) ಗಳನ್ನು ಮತ್ತು ಮತದಾನದ ಸ್ಥಳ ಹಾಗೂ ಇತರ ವಿವರ ಇರುವ 2,82,711 ವೋಟರ್ ಗೈಡ್ (Voter Guide) ಗಳನ್ನು ಮತದಾರರಿಗೆ ವಿತರಿಸಲಾಗಿದೆ. ಬಾಕಿ ಇರುವ ವೋಟರ್ ಸ್ಲೀಪ್ ಮತ್ತು ವೋಟರ್ ಗೈಡ್ ವಿತರಣಾ ಕಾರ್ಯ ಪ್ರಗತಿಯಲ್ಲಿದೆ.
*ಮತಗಟ್ಟೆಗಳ ವಿವರ* : ಜಿಲ್ಲೆಯಲ್ಲಿ 1,636 ಮತಗಟ್ಟೆಗಳು ಹಾಗೂ 6 ಆಕ್ಸಿಲರಿ ಮತಗಟ್ಟೆಗಳು ಸೇರಿ ಒಟ್ಟು 1,642 ಮತಗಟ್ಟೆಗಳಿವೆ ಹಾಗೂ 738 ಮತಗಟ್ಟೆಗಳ (ಲೊಕೇಶನ್) ಸ್ಥಳಗಳಿವೆ. ಎಲ್ಲ ಮತಗಟ್ಟೆಗಳಿಗೆ ಅವಶ್ಯಕ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಮತ್ತು ವ್ಹೀಲ್ ಚೇರ್‍ಗಳನ್ನು, ಮತಗಟ್ಟೆಗಳಿಗೆ ಮ್ಯಾಗ್ನಿಪೈಯಿಂಗ್ ಗ್ಲಾಸ್‍ಗಳನ್ನು ಒದಗಿಸಲಾಗಿದೆ.
*ಮನೆಯಿಂದ ಮತದಾನ*: ಏ.29 ರಿಂದ ಮೇ.01 ರವರೆಗೆ 80 ವರ್ಷ ಮೇಲ್ಪಟ್ಟ ಮತದಾರರು ಹಾಗೂ ವಿಕಲಚೇತನ ಮತದಾರರ ಮನೆ ಮನೆಗೆ ತೆರಳಿ ಮತದಾನ ಕಾರ್ಯವನ್ನು ಕೈಗೊಳ್ಳಲಾಗಿತ್ತು. 80 ವರ್ಷ ಮೇಲ್ಪಟ್ಟ 1,686 ಮತದಾರರ ಪೈಕಿ 1,615 ಮತದಾರರು ಮತದಾನ ಮಾಡಿದ್ದಾರೆ. ಹಾಗೂ ವಿಕಲಚೇತನರು 392 ಮತದಾರರ ಪೈಕಿ 383 ಜನ ಮತದಾನ ಮಾಡಿದ್ದಾರೆ.
ಮೇ.02 ರಿಂದ ಮೇ. 04 ರವರೆಗೆ ಅಗತ್ಯ ಸೇವಾ (Essential Service) ಮತದಾರರಿಗೆ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಆಯಾ ವಿಧಾನಸಭಾ ಮತಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಮತದಾನ ಸಹಾಯ ಕೇಂದ್ರ (Voter Facilitation Centre) ತೆರೆಯಲಾಗಿದ್ದು, ಒಟ್ಟು 182 ಅಗತ್ಯ ಸೇವೆ (Essential Service) ಮತದಾರರು ಅಂಚೆ ಮತಪತ್ರಗಳ ಮೂಲಕ ಮತದಾನವನ್ನು ಮಾಡಿದ್ದಾರೆ.
*ಕ್ರಿಟಿಕಲ್ ಮತ್ತು ವಲ್ನರೇಬಲ್ ಮತಗಟ್ಟೆ*: ಜಿಲ್ಲೆಯ 7 ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 216 ಕ್ರಿಟಿಕಲ್ ಹಾಗೂ 162 ವಲ್ನರೇಬಲ್ ಮತಗಟ್ಟೆಗಳನ್ನು ಗುರುತಿಸಲಾಗಿದೆ.
*ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ*: ಮಾ.29 ರಿಂದ ಮೇ.4 ರ ವರೆಗೆ ಜಿಲ್ಲೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಕುರಿತು 58 ಪ್ರಕರಣಗಳನ್ನು ದಾಖಲಿಸಲಾಗಿದೆ. ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ವಿವಿಧ ಸರಕು ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
*ವಶಪಡಿಸಿಕೊಂಡ ಸಾಮಗ್ರಿಗಳ ವಿವರ*: ರೂ.1,58,75,898 ನಗದು, 1,42,87,471 ರೂ. ಮೌಲ್ಯದ 28,617.461 ಲೀ. ಮದ್ಯ, 19,41,800 ರೂ. ಮೌಲ್ಯದ 5.957 ಕೆ.ಜಿಯಷ್ಟು ಮಾದಕವಸ್ತುಗಳು, 81,69,864 ರೂ. ನಷ್ಟು ಉಚಿತ ಕೊಡುಗೆಗಳ ಸಾಮಗ್ರಿಗಳು ಹಾಗೂ 14,545 ಕೆಜಿಯಷ್ಟು ರೂ.5,63,48,550 ಮೌಲ್ಯದ ಅತ್ಯಮೂಲ್ಯ ಲೋಹಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮತದಾನಕ್ಕೆ ಕೇವಲ 5 ದಿನಗಳು ಬಾಕಿಯಿದ್ದು, ಅಭ್ಯರ್ಥಿಗಳ ಪ್ರಚಾರ ತೀವ್ರಗೊಳ್ಳುವ ಹಿನ್ನಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಭಾರತ ಚುನಾವಣಾ ಆಯೋಗ ಹಾಗೂ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನಗಳಂತೆ ಈಗಿರುವ ಫ್ಲಾಯಿಂಗ್ ಸ್ಕ್ವಾಡ್ ತಂಡ ಹೊರತುಪಡಿಸಿ ಹೆಚ್ಚುವರಿಯಾಗಿ ಕೊನೆಯ 72 ಗಂಟೆ ಅವಧಿಯಲ್ಲಿ 14 ಫ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ರಚಿಸಲು ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
*ಮತದಾನ ಕೊನೆಗೊಳ್ಳುವ ಪೂರ್ವದ 48 ಗಂಟೆ*: ಮತದಾನ ಕೊನೆಗೊಳ್ಳುವ ಪೂರ್ವದ 48 ಗಂಟೆ ಅವಧಿಯಿಂದ ಅಂದರೆ ದಿನಾಂಕ:08-05-2023ರ ಸಂಜೆ 06 ಗಂಟೆಯಿಂದ ಬಹಿರಂಗ ಪ್ರಚಾರ ಅಂತ್ಯಗೊಳ್ಳುತ್ತದೆ.
ಬಹಿರಂಗ ಪ್ರಚಾರ ಅಂತ್ಯಗೊಂಡ ನಂತರ ಆಯಾ ಮತಕ್ಷೇತ್ರದ ಮತದಾರರಲ್ಲದ ರಾಜಕೀಯ ಪಕ್ಷದ ಮುಖಂಡರು, ಕಾರ್ಯಕರ್ತರು, ಪ್ರಚಾರಕರು ಆ ಮತಕ್ಷೇತ್ರದಲ್ಲಿ ಇರುವಂತಿಲ್ಲ. ಈ ಕುರಿತು ಫ್ಲ್ಯಾಯಿಂಗ್ ಸ್ಕ್ವಾಡ್ ತಂಡದವರು ಜಿಲ್ಲೆಯ ಎಲ್ಲ ಲಾಡ್ಜ್, ವಸತಿಗೃಹ, ಕಲ್ಯಾಣ ಮಂಟಪಗಳಿಗೆ ಭೇಟಿ ನೀಡಿ ಪರಿಶೀಲಿಸಲು ಹಾಗೂ ಮಾಲೀಕರಿಗೆ ತಿಳುವಳಿಕೆ ನೀಡಲು ನಿರ್ದೇಶನಗಳನ್ನು ನೀಡಲಾಗಿದೆ.
ಮೇ.08 ರ ಸಂಜೆ 05 ಗಂಟೆಯಿಂದ ಮೇ.11 ರ ಬೆಳಿಗ್ಗೆ 06 ಗಂಟೆಯವರೆಗೆ ಶಾಂತಿಯುತವಾಗಿ ಮತದಾನ ಜರುಗಿಸುವ ಉದ್ದೇಶದಿಂದ ಮತ್ತು ಮೇ.13 ರ ಬೆಳಿಗ್ಗೆ 06 ಗಂಟೆಯಿಂದ ಮೇ.14 ರ ಬೆಳಿಗ್ಗೆ 06 ಗಂಟೆಯವರೆಗೆ ಮತ ಎಣಿಕೆ ದಿನಗಳಂದು ಶುಷ್ಕ ದಿನ (Dry Day) ಎಂದು ಆದೇಶವನ್ನು ಹೊರಡಿಸಲಾಗಿದೆ. ಶುಷ್ಕ ದಿನಗಳಂದು ಮದ್ಯ ಮಾರಾಟ, ಮದ್ಯ ಸಾಗಾಣಿಕೆ ಹಾಗೂ ಮದ್ಯ ತಯಾರಿಕೆ, ಬಾರ್, ದೇಸಿಯ ಸರಾಯಿ ತಯಾರಿಕಾ ಘಟಕಗಳನ್ನು ಬಂದ್ ಇಡುವಂತೆ ಆದೇಶದಲ್ಲಿ ತಿಳಿಸಲಾಗಿದ್ದು, ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಅವರು ಹೇಳಿದ್ದಾರೆ.
*ಪ್ರತಿಬಂಧಕಾಜ್ಞೆ*: ಮೇ.08 ರ ಸಾಯಂಕಾಲ 06 ಗಂಟೆಯಿಂದ ಮೇ.10 ರ ಸಾಯಂಕಾಲ 06 ಗಂಟೆಯವರೆಗೆ ಹಾಗೂ ಮೇ.13 ರಂದು ಬೆಳಿಗ್ಗೆ 06 ಗಂಟೆಯಿಂದ ಮೇ.14ರ ಬೆಳಿಗ್ಗೆ 06 ಗಂಟೆಯವರೆಗೆ ಜಿಲ್ಲೆಯಾದ್ಯಂತ ಸಿ.ಆರ್.ಪಿ.ಸಿ. 1973ರ ಕಲಂ 144ರ ಮೇರೆಗೆ ಪ್ರತಿಬಂಧಕಾಜ್ಞೆಯನ್ನು ಜಾರಿ ಮಾಡಿ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
*ಸಿ-ವಿಜಿಲ್ ತಂತ್ರಾಂಶ ಮತ್ತು 1950 ಸಹಾಯವಾಣಿ*: ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಮೇಲೆ ತಕ್ಷಣ ಕ್ರಮವಹಿಸಲು ಸಿ-ವಿಜಿಲ್ ತಂತ್ರಾಂಶ ಹಾಗೂ 1950 ಸಹಾಯವಾಣಿಯು 24x7 ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಿ-ವಿಜಿಲ್ ತಂತ್ರಾಂಶದಲ್ಲಿ ಈವರೆಗೆ ದಾಖಲಾದ ಒಟ್ಟು 441 ದೂರುಗಳನ್ನು ಹಾಗೂ 1950 ಸಹಾಯವಾಣಿ ಮೂಲಕ ದಾಖಲಾದ ಒಟ್ಟು 282 ದೂರುಗಳ ಮೇಲೆ ನಿಯಮಾನುಸಾರ ಕ್ರಮಕೈಗೊಳ್ಳಲಾಗಿದೆ.
*ಮತಗಟ್ಟೆಗಳಿಗೆ 8,319 ಸಿಬ್ಬಂದಿ ನೇಮಕ*: ಜಿಲ್ಲೆಯಲ್ಲಿ ಶಾಂತಿಯುತ ಹಾಗೂ ಚುನಾವಣಾ ಆಐಒಗದ ನಿಯಮಾನುಸಾರ ಮತದಾನ ಜರುಗಿಸಲು ಅಗತ್ಯ ಕ್ರಮ ವಹಿಸಲಾಗಿದೆ. ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸಲು 2,036 ಪಿ.ಆರ್.ಒ, 2,036 ಎ.ಪಿ.ಆರ್.ಒ,4,072 ಪಿ.ಓ. ಹಾಗೂ 175-ಮೈಕ್ರೋ ಆಬ್ಸರ್ವರ್‍ಗಳು ಸೇರಿ ಒಟ್ಟು 8,319 ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮತ್ತು ಪ್ರತಿ ಮತಗಟ್ಟೆ ಲೊಕೇಷನ್‍ಗೆ ವೈದ್ಯಕೀಯ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಮತದಾನಕ್ಕಾಗಿ 2310 ಸಿ.ಯ, 3295 ಬಿ.ಯು ಹಾಗೂ 2497 ವಿವಿಪ್ಯಾಟ್ ವಿದ್ಯುನ್ಮಾನ ಮತಯಂತ್ರಗಳನ್ನು ಉಪಯೋಗಿಸಲಾಗುತ್ತಿದೆ.
*ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್*: ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕಾರ್ಯವನ್ನು ಆಯಾ ವಿಧಾನಸಭಾ ಮತಕ್ಷೇತ್ರಗಳ ಕೇಂದ್ರ ಸ್ಥಾನಗಳಲ್ಲಿ ಮಾಡಲಾಗುತ್ತದೆ. 69- ನವಲಗುಂದ ವಿಧಾನಸಭಾ ಮತಕ್ಷೇತ್ರದ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕಾರ್ಯವನ್ನು ಶ್ರೀ ಶಂಕರ ಕಲಾ ಮತ್ತು ವಾಣಿಜ್ಯ ಕಾಲೇಜ್, ನವಲಗುಂದ ಮತ್ತು 70- ಕುಂದುಗೊಳ ವಿಧಾನಸಭಾ ಮತಕ್ಷೇತ್ರದ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕಾರ್ಯವನ್ನು ಶ್ರೀ ಆರ್ಯಭಟ ಪಿಯು ಕಾಲೇಜ್ ಕುಂದುಗೊಳ ಮತ್ತು 71- ಧಾರವಾಡ ವಿಧಾನಸಭಾ ಮತಕ್ಷೇತ್ರದ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕಾರ್ಯವನ್ನು ಬಾಶೇಲ್ ಮಿಷನ್ ಇಂಗ್ಲಿμï ಮೀಡಿಯಂ ಪ್ರೌಢ ಶಾಲೆ, ರೈಲ್ವೆ ನಿಲ್ದಾಣ ರಸ್ತೆ, ಧಾರವಾಡ ಮತ್ತು 72- ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇತ್ರದ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕಾರ್ಯವನ್ನು ಸರ್ಕಾರಿ ಪಾಲಿಟೆಕ್ನಿಕಲ್ ಜಿಟಿಎಸ್ ಆವರಣ, ವಿದ್ಯಾನಗರ, ಹುಬ್ಬಳ್ಳಿ ಮತ್ತು 73-ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಮತಕ್ಷೇತ್ರದ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕಾರ್ಯವನ್ನು ಲ್ಯಾಮಿಂಗ್ಟನ್ ಬಾಲಕರ ಪ್ರೌಢ ಶಾಲೆ, ಹುಬ್ಬಳ್ಳಿ ಮತ್ತು 74 ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರದ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕಾರ್ಯವನ್ನು ಆರ್.ಎಲ್.ಎಸ್. ಆವರಣ, ಪಿಯು ಕಾಲೇಜ್, ಮಹಾನಗರ ಪಾಲಿಕೆ ಹತ್ತಿರ, ಧಾರವಾಡ ಮತ್ತು 75-ಕಲಘಟಗಿ ವಿಧಾನಸಭಾ ಮತಕ್ಷೇತ್ರದ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕಾರ್ಯವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಬಾಲಕರ ಶಾಲೆ ಕಲಘಟಗಿಯಲ್ಲಿ ಮಾಡಲಾಗುತ್ತದೆ ಎಂದು ತಿಳಿಸಿದರು.
*ಮತಗಟ್ಟೆಗಳಲ್ಲಿ ವೆಬ್‍ಕಾಸ್ಟಿಂಗ್*: ಜಿಲ್ಲೆಯ ಒಟ್ಟು 1,642 ಮತಗಟ್ಟೆಗಳ ಪೈಕಿ 824 ಮತಗಟ್ಟೆಗಳಿಗೆ ವೆಬ್‍ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಮತ್ತು 175 ಮತಗಟ್ಟೆಗಳಿಗೆ ಮೈಕ್ರೋ ಆಬ್ಸರ್ವರ್‍ಗಳನ್ನು ನಿಯೋಜಿಸಲಾಗಿದೆ.
*ಮತದಾನಕ್ಕಾಗಿ ಗುರುತಿನ ಚೀಟಿ ಅಥವಾ ದಾಖಲೆಗಳು*: ಮತಗಟ್ಟೆಗೆ ಬರುವ ಮತದಾರ ಆಧಾರ ಕಾರ್ಡ್, ಎಂ.ಎನ್.ಆರ್.ಇ.ಜಿ.ಎ. ಜಾಬ್ ಕಾರ್ಡ್, ಬ್ಯಾಂಕ್ ಅಥವಾ ಅಂಚೆ ಕಚೇರಿ ನೀಡಿರುವ ಭಾವಚಿತ್ರ ಇರುವ ಪಾಸ್ ಬುಕ್, ಕಾರ್ಮಿಕ ಸಚಿವಾಲಯದಿಂದ ನೀಡಿರುವ ಆರೋಗ್ಯ ವಿಮೆ ಕಾರ್ಡ್, ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್), ಪ್ಯಾನ್ ಕಾರ್ಡ್, ಎನ್.ಪಿ.ಆರ್ ನ ಅಡಿಯಲ್ಲಿ ಆರ್.ಜಿ.ಐ. ನೀಡಿರುವ ಸ್ಮಾರ್ಟ್ ಕಾರ್ಡ್, ಭಾರತೀಯ ಪಾಸ್‍ಪೋರ್ಟ್, ಭಾವಚಿತ್ರ ಇರುವ ಪಿಂಚಣಿ ದಾಖಲೆ, ಸೇವಾ ಗುರುತಿನ ಚೀಟಿ (ಕೇಂದ್ರ, ರಾಜ್ಯ ಸರ್ಕಾರ, ಪಿಎಸ್‍ಯು ಗಳ ಗುರುತಿನ ಚೀಟಿ) ಎಂ.ಪಿ, ಎಂ.ಎಲ್.ಎ, ಎಂ.ಎಲ್.ಸಿ. ಗಳಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ ಸೇರಿದಂತೆ ಸುಮಾರು 19 ಕ್ಕೂ ಹೆಚ್ಚು ಮತದಾರನ ಭಾವಚಿತ್ರವಿರುವ ದಾಖಲೆಗಳನ್ನು ತರಬಹುದಾಗಿದೆ.
*ಮೇ. 10 ರಂದು ಸಾರ್ವತ್ರಿಕ ರಜೆ*: ಮೇ.10 ರ ಬುಧವಾರದಂದು ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಆಯಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿನ ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳಿಗೆ, ಶಾಲಾ, ಕಾಲೇಜುಗಳಿಗೆ, ವಿವಿಧ ಸಂಘ ಸಂಸ್ಥೆಗಳಿಗೆ ಮತ್ತು ಅನುದಾನಿತ, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ ಖಾಸಗಿ ಸಂಸ್ಥೆಗಳಿಗೆ ತುರ್ತು ಸೇವೆಗಳನ್ನು ಹೊರತುಪಡಿಸಿ ಸರ್ಕಾರವು ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಿರುತ್ತದೆ. ಅದರಂತೆ ಜಿಲ್ಲೆಯಲ್ಲಿ ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದು, ನಿಗಾ ವಹಿಸಲಾಗಿದೆ.
*ಕೃ.ವಿ.ವಿ ಯಲ್ಲಿ ಮತ ಎಣಿಕಾ ಕೇಂದ್ರ*: ಮತದಾನ ಪೂರ್ಣಗೊಂಡ ನಂತರ ಮತದಾನವಾದ ವಿದ್ಯುನ್ಮಾನ ಮತಯಂತ್ರಗಳನ್ನು ಹಾಗೂ ಮಹತ್ವದ ದಾಖಲೆಗಳನ್ನು ಪೊಲೀಸ್ ಭದ್ರತೆಯೊಂದಿಗೆ ಮತ ಎಣಿಕೆ ಕೇಂದ್ರವಾದ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿನ ಭದ್ರತಾ ಕೊಠಡಿಯಲ್ಲಿ ಶೇಖರಿಸಿಡಲಾಗುವುದು.
*ಮತ ಎಣಿಕೆಗೆ 14 ಟೇಬಲ್*: ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಮೇ.13 ರಂದು ಬೆಳಿಗ್ಗೆ 08 ಗಂಟೆಯಿಂದ ಮತ ಎಣಿಕೆ ಕಾರ್ಯವನ್ನು ಕೈಗೊಳ್ಳಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕೊಠಡಿಯಲ್ಲಿ ಮತದಾನವಾದ ವಿದ್ಯುನ್ಮಾನ ಮತಯಂತ್ರಗಳ ಮತ ಎಣಿಕೆಗಾಗಿ 14 ಟೇಬಲ್‍ಗಳನ್ನು, ಅಂಚೆ ಮತಪತ್ರಗಳ ಎಣಿಕೆ ಕುರಿತು ಮತದಾನವಾದ ಅಂಚೆ ಮತಪತ್ರಗಳ ಪ್ರಮಾಣಕ್ಕನುಸಾರವಾಗಿ ಪ್ರತ್ಯೇಕವಾಗಿ ಮತ ಎಣಿಕೆ ಟೇಬಲ್‍ಗಳನ್ನು ಹಾಗೂ ಸೇವಾ ಮತದಾರರ ಅಂಚೆ ಮತಪತ್ರಗಳ ಎಣಿಕೆಗಾಗಿ ಟೇಬಲ್‍ಗಳ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಒಟ್ಟು 143 ಮತ ಎಣಿಕೆ ಮೇಲ್ವಿಚಾರಕರು, 166 ಮತ ಎಣಿಕೆ ಸಹಾಯಕರು, 133 ಮೈಕ್ರೋ ಆಬ್ಸರ್ವರ್‍ಗಳನ್ನು ನಿಯೋಜಿಸಲಾಗಿದ್ದು, ಅಂಚೆ ಮತಪತ್ರಗಳನ್ನು ಎಣಿಕೆ ಮಾಡಲು 65 ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಜಿಲ್ಲೆಯ ಎಲ್ಲ ಮತದಾರರು ಮತದಾನದ ದಿನದಂದು ತಪ್ಪದೇ ಮತದಾನ ಮಾಡಲು ಜಿಲ್ಲಾ ಚುನವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪತ್ರಿಕಾಗೊಷ್ಠಿ ಮೂಲಕ ಮತದಾರರಲ್ಲಿ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ಆಗಿರುವ ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಉಪಸ್ಥಿತರಿದ್ದರು.