*ಗಾಳಿಪಟ ಉತ್ಸವಕ್ಕೆ ಮನಸೋತ ಯುವ ಮತದಾರರು*
*ಧಾರವಾಡ(ಕರ್ನಾಟಕ ವಾರ್ತೆ)ಏ. 16 :* ಯುವ ಮತದಾರರು ತಪ್ಪದೆ ಮತದಾನ ಮಾಡಿ ಪ್ರಜಾಪ್ರಭುತ್ವಕ್ಕೆ ಶಕ್ತಿ ನೀಡಿ, ಗಾಳಿಪಟ ಉತ್ಸವಕ್ಕೆ ಅಗಮಿಸಿದಂತೆ ಮೇ 10ರ ಮತದಾನ ಉತ್ಸವಕ್ಕೊ ಆಗಮಿಸಿ ಮತದಾನ ಮಾಡಿ ಎಂದು ಜಿಲ್ಲಾ ಪಂಚಾಯತ್ ಸಿ.ಇ. ಓ ಸ್ವರೂಪ ಟಿ.ಕೆ. ಹೇಳಿದರು.
ಇಂದು ಬೆಳಿಗ್ಗೆ ನಗರದ ಕರ್ನಾಟಕ ಕಾಲೇಜ್ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವಿಪ್ ಸಮಿತಿ ಸಂಯೋಗದಲ್ಲಿ ಕರ್ನಾಟಕ ರಾಜ್ಯ ಸಾರ್ವತ್ರಿಕ ವಿಧಾನಸಭೆ ಚುನಾವಣೆ -2023 ಅಂಗವಾಗಿ ಮತದಾರರ ಜಾಗೃತಿ ಅಭಿಯಾನವನ್ನು ಗಾಳಿಪಟ ಉತ್ಸವದ ಮೂಲಕ ಜಿಲ್ಲಾ ಪಂಚಾಯಿತಿ ಸಿ.ಇ.ಓ ಸ್ವರೂಪ ಟಿ.ಕೆ ಅವರು ಚಾಲನೆ ನೀಡಿದರು.
ಧಾರವಾಡ ಜಿಲ್ಲೆಯಾದ್ಯಂತ 100ಕ್ಕೆ 100ರಷ್ಟು ಮತದಾರರು ಮತದಾನ ಮಾಡಬೇಕು. ವಿಕಲಚೇತನರಿಗೆ ಮತ್ತು 80 ವರ್ಷ ಮೇಲ್ಪಟ್ಟ ಹಿರಿಯರಿಗೆ ಮನೆಯಲ್ಲಿ ಮತದಾನ ಮಾಡುವ ವ್ಯವಸ್ಥೆಯನ್ನು ಚುನಾವಣಾ ಆಯೋಗ ಮಾಡಿದೆ. ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮತ್ತು ಅಕ್ಕ-ಪಕ್ಕದವರನ್ನು ಮನವೊಲಿಸಿ ಮತದಾನ ಮಾಡುವಂತೆ ಪ್ರೇರೇಪಿಸಬೇಕು, ಮತದಾನ ನಮ್ಮೆಲ್ಲರ ಹಕ್ಕು.
ಎಲ್ಲ ಮತದಾರರು ಮೇ 10ಕ್ಕೆ ಮತದಾನ ಮಾಡುವುದನ್ನು ನೆನಪಿಟ್ಟುಕೊಳ್ಳಿ. ನ್ಯಾಯ ಸಮ್ಮತ ಮತದಾನದ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಿ, ಮತವನ್ನು ಹಾಕಿ ದೇಶದ ಹಿತವನ್ನು ಕಾಪಾಡಿ.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಿಷ್ಠ ಪಡಿಸಬೇಕೆಂದರೆ ಪ್ರತಿಯೊಬ್ಬರು ಕಡ್ಡಾಯ ಮತದಾನ ಮಾಡಬೇಕು. ಪ್ರಜಾಪ್ರಭುತ್ವದ ಹಬ್ಬ ಚುನಾವಣೆಯಾಗಿದೆ ಇದನ್ನು ಸಂತೋಷದಿಂದ ಆಚರಿಸೋಣ, ಮತದಾನ ಮಾಡಿ ಹಕ್ಕು ಚಲಾಯಿಸಿ, ಮತದಾನವೇ ದೇಶಕ್ಕೆ ವರದಾನ. ಜಿಲ್ಲಾ ಸ್ವೀಪ್ ಸಮಿತಿಯಿಂದ ಗಾಳಿಪಟ ಉತ್ಸವದಲ್ಲಿ ಗಾಳಿಪಟಗಳಿಗೆ ಕಡ್ಡಾಯ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಘೋಷಣೆಗಳನ್ನು ಬರೆದು ಪ್ರಚಾರ ಪಡಿಸಲಾಯಿತು ಎಂದು ಅವರು ಹೇಳಿದರು.
ಬಣ್ಣ ಬಣ್ಣಗಳ ಗಾಳಿಪಟಗಳಿಗೆ ಮನಸೋತ ಯುವಕ ಯುವತಿಯರು.ಹಲವು ಗಾಳಿಪಟಗಳು ತುಂಬಾ ಎತ್ತರಕ್ಕೆ ಹಾರಿದವು ಇದನ್ನು ಕಂಡು ಜಿಲ್ಲಾ ಪಂಚಾಯತ್ ಸಿ.ಈ.ಓ ಸ್ವರೂಪ ಟಿ.ಕೆ. ತುಂಬಾ ಸಂತೋಷ ಪಟ್ಟರು.
ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕ ಬಸವಲಿಂಗ ಮೂಗನೂರಮಠ, ಕೆ.ಎಂ.ಶೇಕ್, ಶಿಕ್ಷಕರ ಕಲಾ ತಂಡ, ಯುವಕ - ಯುವತಿಯರು, ವಿದ್ಯಾರ್ಥಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಕಾರಿಗಳು ಉಪಸ್ಥಿತರಿದ್ದರು.