*ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023*
*ನಾಮಪತ್ರ ಸಲ್ಲಿಕೆ ನಾಳೆ (ಏ.13) ಯಿಂದ ಆರಂಭ ; ಆಯಾ ಚುನಾವಣಾಧಿಕಾರಿಗಳಿಂದ ಅಧಿಸೂಚನೆ* *ಪ್ರಕಟ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ*
*ಧಾರವಾಡ (ಕರ್ನಾಟಕ ವಾರ್ತೆ) ಏ.12*: ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023 ಗೆ ಸಂಬಂಧಿಸಿದಂತೆ ನಾಮಪತ್ರಗಳ ಸಲ್ಲಿಕೆ ಕಾರ್ಯವು ನಾಳೆ ಏ.13 ರಿಂದ ಆರಂಭವಾಗಲಿದೆ. ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯು ಆಯಾ ಮತಕ್ಷೇತ್ರಗಳ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದರು.
ಈ ಕುರಿತು ಇಂದು ಮಧ್ಯಾಹ್ನ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಅವರು ಮಾತನಾಡಿದರು.
ನಾಮಪತ್ರ ಸಲ್ಲಿಕೆಯು ರಜಾದಿನಗಳನ್ನು ಹೊರತುಪಡಿಸಿ ಏ.20 ರ ವರೆಗೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸುವ ಅಭ್ಯರ್ಥಿಯು ತನ್ನೊಂದಿಗೆ ನಾಲ್ಕು ಜನರನ್ನು ಮಾತ್ರ ಕರೆದುಕೊಂಡು ಬರಲು ಅವಕಾಶವಿದೆ. ಅಭ್ಯರ್ಥಿ ಸೇರಿ ಒಟ್ಟು 5 ಜನ ನಾಮಪತ್ರ ಸಲ್ಲಿಸುವಾಗ ಉಪಸ್ಥಿತರಿರಬಹುದು ಎಂದು ಅವರು ಹೇಳಿದರು.
ಭಾರತೀಯ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023 ಕ್ಕೆ ಸಂಬಂಧಿಸಿದಂತೆ ಚುನಾವಣಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಏಪ್ರಿಲ್ 13 ರಂದು ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಏ.20 ರಂದು ನಾಮನಿರ್ದೇಶನಗಳನ್ನು ಮಾಡುವ ಕೊನೆಯ ದಿನವಾಗಿದ್ದು, ನಾಮ ನಿರ್ದೇಶನಗಳ ಪರಿಶೀಲನೆ ಮಾಡುವ ದಿನ ಏ.21 ಆಗಿರುತ್ತದೆ. ಅಭ್ಯರ್ಥಿಯು ಹೆಸರನ್ನು ಹಿಂತೆಗೆದುಕೊಳ್ಳುವ ದಿನ ಏ.24, ಮತದಾನ ಮೇ.10, ಮತ ಎಣಿಕೆಯ ದಿನ ಮೇ 13, ಚುನಾವಣೆಯು ಮೇ.15 ರಂದು ಮುಕ್ತಾಯಗೊಳ್ಳುವುದು ಎಂದು ಅವರು ತಿಳಿಸಿದರು.
*ಚುನಾವಣಾಧಿಕಾರಿಗಳು ಹಾಗೂ ನಾಮಪತ್ರಗಳನ್ನು ಸ್ವೀಕರಿಸುವ ಸ್ಥಳದ ವಿವರ*:
*69-ನವಲಗುಂದ ವಿಧಾನಸಭಾ ಮತಕ್ಷೇತ್ರ*: ಚುನಾವಣಾಧಿಕಾರಿಗಳು, ತಹಶೀಲ್ದಾರ ಕಚೇರಿ, ನವಲಗುಂದ
*70-ಕುಂದಗೋಳ ವಿಧಾನಸಭಾ ಮತಕ್ಷೇತ್ರ*: ಚುನಾವಣಾಧಿಕಾರಿಗಳು, ತಹಶೀಲ್ದಾರ ಕಚೇರಿ, ಕುಂದಗೋಳ
*71-ಧಾರವಾಡ ವಿಧಾನಸಭಾ ಮತಕ್ಷೇತ್ರ*: ಚುನಾವಣಾಧಿಕಾರಿಗಳು, ಉಪವಿಭಾಗಾಧಿಕಾರಿಗಳ ಕಚೇರಿ, ಧಾರವಾಡ
*72-ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇತ್ರ* : ಚುನಾವಣಾಧಿಕಾರಿಗಳು, ತಹಶೀಲ್ದಾರ ಕಚೇರಿ, ಹುಬ್ಬಳ್ಳಿ
*73-ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಮತಕ್ಷೇತ್ರ*: ಚುನಾವಣಾಧಿಕಾರಿಗಳು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿ, ಹುಬ್ಬಳ್ಳಿ
*74-ಹುಬ್ಬಳ್ಳಿ- ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರ*: ಚುನಾವಣಾಧಿಕಾರಿಗಳು, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿ, ಧಾರವಾಡ
*75-ಕಲಘಟಗಿ ವಿಧಾನಸಭಾ ಮತಕ್ಷೇತ್ರ*: ಚುನಾವಣಾಧಿಕಾರಿಗಳು ತಹಶೀಲ್ದಾರ ಕಚೇರಿ, ಕಲಘಟಗಿ
*ಚುನಾವಣಾದಿಕಾರಿಗಳಿಂದ ಏ.13 ರಂದು ಚುನಾವಣಾ ಅಧಿಸೂಚನೆ ಪ್ರಕಟ*: ಏ.13 ರಂದು ಎಲ್ಲ ಚುನಾವಣಾಧಿಕಾರಿಗಳು ನಮೂನೆ-1 ರಲ್ಲಿ ಚುನಾವಣಾ ನೋಟೀಸ್‍ನ್ನು ಹೊರಡಿಸುವರು. ಜಿಲ್ಲೆಯಲ್ಲಿ ಒಟ್ಟು 7 ವಿಧಾನಸಭಾ ಮತಕ್ಷೇತ್ರಗಳಿದ್ದು, ಗಂಡು-757522, ಹೆಣ್ಣು–749807, ಇತರೆ-85 ಒಟ್ಟು–1507414 ಮತದಾರರು ಇರುತ್ತಾರೆ. ಏ.10 ರವರೆಗೆ ಸ್ವೀಕೃತವಾಗಿರುವ ಅರ್ಜಿಗಳನ್ನು ಮತದಾರರ ಯಾದಿಯಲ್ಲಿ ಸೇರ್ಪಡೆ ಮಾಡಲು ನಿಯಮಾನುಸಾರ ಕ್ರಮ ಜರುಗಿಸಲಾಗುವುದು.
ಜಿಲ್ಲೆಯಲ್ಲಿ ನಗರ ಪ್ರದೇಶದಲ್ಲಿ ಒಟ್ಟು-944, ಗ್ರಾಮೀಣ ಪ್ರದೇಶದಲ್ಲಿ–692 ಸೇರಿ ಒಟ್ಟು 1636 ಮತಗಟ್ಟೆಗಳಿದ್ದು, ಈ ಪೈಕಿ 216 ಮತಗಟ್ಟೆಗಳನ್ನು ಕ್ರಿಟಿಕಲ್ ಅಂತಾ ಹಾಗೂ ಒಟ್ಟು 162 ಮತಗಟ್ಟೆಗಳನ್ನು ವಲ್ನರೇಬಲ್ ಅಂತಾ ಗುರುತಿಸಲಾಗಿದೆ. ಸದರಿ ಮತಗಟ್ಟೆಗಳಿಗೆ ಮತದಾನದ ದಿನದಂದು ವಿಡಿಯೋಗ್ರಾಫಿ, ವೆಬ್‍ಕ್ಯಾಸ್ಟಿಂಗ್ ಮತ್ತು ಮೈಕ್ರೋ ಆಬ್ಸರ್ವರ್ಸ್‍ಗಳನ್ನು ನಿಯಮಾನುಸಾರ ನೇಮಕ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 1500 ಕ್ಕಿಂತ ಹೆಚ್ಚಿಗೆ ಮತದಾರರಿರುವ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಇಂತಹ ಮತಗಟ್ಟೆಗಳನ್ನು ವಿಭಾಗಿಸಿ ಹೆಚ್ಚುವರಿಯಾಗಿ ಒಟ್ಟು 13 ಮತಗಟ್ಟೆಗಳನ್ನು ಹೆಚ್ಚುವರಿ (ಆಕ್ಸಿಲರಿ) ಮತಗಟ್ಟೆಗಳೆಂದು ಸ್ಥಾಪಿಸಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1636 ಮತಗಟ್ಟೆಗಳಿದ್ದು, ಎಲ್ಲ ಮತಗಟ್ಟೆಗಳಿಗೆ ಅವಶ್ಯಕ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿರುತ್ತದೆ.
ಜಿಲ್ಲೆಯಲ್ಲಿ 2018ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ವೇಳೆಯಲ್ಲಿ ಒಟ್ಟು 16902 ಯುವ ಮತದಾರರಿದ್ದು, ಪ್ರಸ್ತುತ ಒಟ್ಟು 30,056 ಯುವ ಮತದಾರರಿರುತ್ತಾರೆ. ವಿಕಲಚೇತನ ಮತದಾರರು–21,273 (ಜಿಲ್ಲೆಯ ಒಟ್ಟು 1636 ಮತಗಟ್ಟೆಗಳಿದ್ದು, 738 ಮತಗಟ್ಟೆ ಲೊಕೇಶನ್‍ಗಳಿರುತ್ತವೆ. ಸದರಿ ಎಲ್ಲ ಮತಗಟ್ಟೆ ಲೊಕೇಷನ್‍ಗಳಿಗೆ ವ್ಹೀಲ್ ಚೇರ್‍ಗಳನ್ನು ಮತ್ತು ಎಲ್ಲ ಮತಗಟ್ಟೆಗಳಿಗೆ ಮ್ಯಾಗ್ನಿಪೈಯಿಂಗ್ ಗ್ಲಾಸ್‍ಗಳನ್ನು ಒದಗಿಸಲಾಗಿರುತ್ತದೆ.) 80+ ಮತದಾರರು -32301. ಜಿಲ್ಲೆಯಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸ್ವತ್ತುಗಳಲ್ಲಿ ಅಳವಡಿಸಿದ ಗೋಡೆ ಬರಹ-6,174, ಪೆÇೀಸ್ಟರ್‍ಗಳು-9,145, ಬ್ಯಾನರ್‍ಗಳು - 3,231, ಇತರೆ- 2,563, ವಿರೂಪ ತೆಗೆಯುವ ಸಂಖ್ಯೆ 10,188 ನೇದ್ದವುಗಳನ್ನು ತೆರವುಗೊಳಿಸಲಾಗಿರುತ್ತದೆ.
ಭಾರತ ಚುನಾವಣಾ ಆಯೋಗವು ಮಾ.29 ರಂದು ಕರ್ನಾಟಕ ವಿಧಾನಸಭೆಗೆ ಚುನಾವಣೆಯನ್ನು ಘೊಷಿಸಿದ್ದು, ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಬಂದಿರುತ್ತದೆ. *ಈವರೆಗೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಹಾಗೂ ವಶಪಡಿಸಿಕೊಂಡ ಸರಕು ಸಾಮಗ್ರಿಗಳ ವಿವರ* :
*ನಗದು ವಶ*: ಮಾ.29 ರವರಗೆ 80,32,072 ರೂ ಮೊತ್ತದ ನಗದು ಹಾಗೂ ಮಾ.29 ರಿಂದ ಏಪ್ರಿಲ್12 ರವರೆಗೆ 18,92,780 ರೂ ಮೊತ್ತದ ನಗದು ವಶಪಡಿಸಿಕೊಳ್ಳಲಾಗಿದೆ.
*ಮದ್ಯ*: ಮಾ.29 ರವರೆಗೆ 5,33,358 ರೂ ಮೊತ್ತದ 1061.75 ಲೀ ಮದ್ಯ ಹಾಗೂ ಮಾ.29 ರಿಂದ ಏ.12 ರವರೆಗೆ 4,90,371 ರೂ ಮೊತ್ತದ 1214.825 ಲೀ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
*ಮಾದಕವಸ್ತು*- ಮಾ29ರವರೆಗೆ 78,100 ರೂ ಮೊತ್ತದ 4.49 ಕೆ.ಜಿ.ಹಾಗೂ ಮಾ.29 ರಿಂದ ಏ.12 ರವರೆಗೆ 6,18,000 ಮೊತ್ತದ 2.370 ಕೆ.ಜಿ ಯಷ್ಟು ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
*ಉಚಿತ ಕೊಡುಗೆಗಳು*- ಮಾ.29ರವರೆಗೆ 1,00,000 ರೂ ಹಾಗೂ ಮಾ.29 ರಿಂದ ಏ.12 ರವರೆಗೆ 21,15,581 ಮೊತ್ತದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
*ಸೀರೆಗಳು*- ಮಾ.29ರವರೆಗೆ 25,12,400 ರೂ ಮೊತ್ತದ 12562 ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ.
*ಹಾಲು*- ಮಾ.29 ರವರೆಗೆ 7,23,425 ಮೊತ್ತದ 4185 ಕೆ.ಜಿ ಹಾಲಿನ ಕಂಟೇನರ್‍ನ್ನು ವಶಪಡಿಸಿಕೊಳ್ಳಲಾಗಿದೆ.
*ಅಕ್ಕಿ*-ಮಾ.29 ರವರೆಗೆ 615,000 ರೂ.ಮೊತ್ತದ 190 ಕ್ವಿಂಟಲ್‍ನಷ್ಟು ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.
*ಅತ್ಯಮೂಲ್ಯ ಲೋಹಗಳು*- ಮಾ.29 ರಿಂದ ಏ.12 ರವರಗೆ 44,70,490 ರೂ ಮೊತ್ತದ ಅತ್ಯಮೂಲ್ಯ ಲೋಹಗಳನ್ನು ವಶಪಡಿಸಿಕೊಳ್ಳಲಾಗಿದೆ.
*ಆಯುಧಗಳ ವಿವರ*: ಜಿಲ್ಲೆಯಲ್ಲಿ ಒಟ್ಟು- 1880 ಪರವಾನಿಗೆ ಪಡೆದ ಆಯುಧಗಳಿದ್ದು ಅವುಗಳನ್ನು ಸ್ಕ್ರೀನಿಂಗ್ ಕಮಿಟಿ ಪರಿಶೀಲನೆಗೆ ಒಳಪಟ್ಟು, ಠೇವಣಿ ಮಾಡಲು ಆದೇಶಿಸಲಾಗಿದೆ.
*ವಿವಿಧ ತಂಡಗಳ ವಿವರ*: ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಲು ಜಿಲ್ಲೆಯಲ್ಲಿ ವಿವಿಧ ತಂಡಗಳನ್ನು ರಚಿಸಲಾಗಿದೆ, ಎಸ್.ಎಸ್.ಟಿ. ಚೆಕ್ ಪೆÇೀಸ್ಟ್-24 ತಂಡಗಳು-72, ಎಫ್.ಎಸ್.ಟಿ.-21 ತಂಡಗಳು, ವಿ.ಎಸ್.ಟಿ.-21, ವಿ.ವಿ.ಟಿ.–21, ಲೆಕ್ಕಪತ್ರ ಪರಿಶೋಧನೆ ತಂಡಗಳು–7, ಮಾದರಿ ನೀತಿ ಸಂಹಿತೆ ವಿಧಾನಸಭಾ ಕ್ಷೇತ್ರವಾರು ನೋಡಲ್ ಅಧಿಕಾರಿಗಳು-7, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಮೇಲೆ ತಕ್ಷಣ ಕ್ರಮವಹಿಸಲು ಸಿ-ವಿಜಿಲ್ ತಂತ್ರಾಂಶವನ್ನು ನಿರ್ವಹಿಸಲಾಗುತ್ತಿದೆ. ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ, ವಿವಿಧ ರಾಜಕೀಯ ಪಕ್ಷಗಳ ಸಭೆ, ಸಮಾರಂಭ, ವಾಹನ ಪರವಾನಿಗೆ ಇತ್ಯಾದಿಗಳಿಗಾಗಿ ಸುವಿಧ (SUVIDHA) ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿದಲ್ಲಿ ಸಂಬಂಧಿಸಿದ ಚುನಾವಣಾಧಿಕಾರಿಗಳು ಪರವಾನಿಗೆ ನೀಡುವ ಕುರಿತು ಕ್ರಮವಹಿಸಬೇಕು ಎಂದು ಹೇಳಿದ್ದಾರೆ.
*ಮತಯಂತ್ರಗಳ ವಿವರ*: ಜಿಲ್ಲೆಯಲ್ಲಿ ಒಟ್ಟು ಸಿ.ಯು- 2310, ಬಿ.ಯು.-3295 ಮತ್ತು ವಿ.ವಿ.ಪ್ಯಾಟ್-2497 ವಿದ್ಯುನ್ಮಾನ ಮತಯಂತ್ರಗಳು ಹಂಚಿಕೆಯಾಗಿವೆ. ವಿದ್ಯುನ್ಮಾನ ಮತಯಂತ್ರಗಳ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಫೆ.18 ರವರೆಗೆ ಒಟ್ಟು 738 ಮತಗಟ್ಟೆ ಲೊಕೇಷನ್‍ಗಳಲ್ಲಿ, 63 ತಂಡದವರಿಂದ ಹಾಗೂ 141 ಸೆಕ್ಟರ್ ಅಧಿಕಾರಿಗಳಿಂದ ಅಂದಾಜು 5,14,326 ಮತದಾರರಿಗೆ ಜಾಗೃತಿ ಮೂಡಿಸಲಾಗಿದೆ. ವಿದ್ಯುನ್ಮಾನ ಮತಯಂತ್ರಗಳ ಮೊದಲ ಹಂತದ ರ್ಯಾಂಡಮೈಜೇಷನ್ ಕಾರ್ಯ ಕೈಗೊಳ್ಳಲಾಗಿದ್ದು, ಏ.5 ರಂದು 125% ಬಿ.ಯು. & ಸಿ.ಯು ಹಾಗೂ 135% ವಿ.ವಿ.ಪ್ಯಾಟ್‍ಗಳನ್ನು 7 ವಿಧಾನಸಭಾ ಮತಕ್ಷೇತ್ರಗಳ ಚುನಾವಣಾಧಿಕಾರಿಗಳಿಗೆ ಒದಗಿಸಲಾಗಿರುತ್ತದೆ.
ಮತದಾನಕ್ಕೆ ಪಿ.ಆರ್.ಒ–2036, ಎ.ಪಿ.ಆರ್.ಒ- 2036 ಹಾಗೂ ಪಿ.ಓ.-4072 ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಿದೆ. ಏ.16 ರಂದು ವಿಧಾನಸಭಾ ಮತಕ್ಷೇತ್ರವಾರು ಮೊದಲ ಹಂತದ ತರಬೇತಿಯನ್ನು ಆಯೋಜಿಸಲಾಗಿದೆ. ಕೃಷಿ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪ್ರಕಟಿಸಿರುವ ಧಾರವಾಡ ಜಿಲ್ಲಾ ವಿಧಾನ ಸಭೆ ಚುನಾವಣಾ ಹಿನ್ನೋಟ 1957 ರಿಂದ 2018 ರ ಮಾಹಿತಿ ಪತ್ರಿಕೆಯನ್ನು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಗೂ ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಬಿಡುಗಡೆ ಮಾಡಿದರು. ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ, ವಾರ್ತಾ ಸಹಾಯಕ ಅಧಿಕಾರಿ ಸುರೇಶ ಹಿರೇಮಠ, ಚುನಾವಣಾ ವಿಭಾಗದ ಶಿರಸ್ತೇದಾರ ಸುನೀಲ ಚೌಡಣ್ಣವರ, ಆಡಳಿತ ವಿಭಾಗದ ಶಿರಸ್ತೇದಾರ ಮಲ್ಲಿಕಾರ್ಜುನ ಸೊಲಗಿ ಹಾಗೂ ಇತರರು ಉಪಸ್ಥಿತರಿದ್ದರು.
***************