*ಧಾರವಾಡ* ಹಳೆಯ ಶಿಷ್ಯ ಬಳಗ ಸೇರಿದ ಸಂಭ್ರಮ,
ಇದರ ಜತೆಗೆ ಅಕ್ಷರ ಕಲಿಸಿದ ಗುರು ಬಳಗದ ದರ್ಶನದ ಜತೆ ಸಿಕ್ಕ ಆರ್ಶೀವಾದ, ಇಡೀ ಶಾಲಾ ಆವರಣದಲ್ಲಿ ಗುರು-ಶಿಷ್ಯ ಬಳಗದ ಸಮ್ಮಿಲನ, ಶಿಷ್ಯರ ಏಳ್ಗೆ ಕಂಡು ಖುಷಿಪಟ್ಟ ಗುರು ಬಳಗ, ಕಾಲು ಮುಟ್ಟಿ ನಮಸ್ಕರಿಸಿದ ಶಿಷ್ಯರ ಕಂಡ ಗುರುಗಳ ಆನಂದ ಬಾಷ್ಪ...!
ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದ ಗುಡ್ಡದ ಶಾಲೆಯೆಂಬ ಹಣೆಪಟ್ಟಿ ಹೊಂದಿರುವ 157 ವಸಂತದ ಸಂಭ್ರಮದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಂಡು ಬಂದ ದೃಶ್ಯಗಳಿವು. ಶತಮಾನೋತ್ತರ ಸುವರ್ಣ ಮಹೋತ್ಸವ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಶತಮಾನೋತ್ತರ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಜರುಗಿದ ಗುರುವಂದನೆ ಕಾರ್ಯಕ್ರಮವು ಇದಕ್ಕೆ ಸಾಕ್ಷಿಯಾಯ್ತು. ಶಿಷ್ಯ ಬಳಗದ ಗುರುವಂದನೆ ಸ್ವೀಕರಿಸಲು ಗುರು ಬಳಗ ಆಗಮಿಸಿದರೆ ಗುರುಗಳ ಕಾಣಲು, ವಂದಿಸಲು ಶಿಷ್ಯ ಬಳಗವೂ ಬಂದಿತ್ತು.
ಅಕ್ಷರ ಕಲಿಸಿದ ಗುರುಗಳೊಂದಿಗೆ ತಾವು ಕಲಿತ ಶಾಲಾ ಕೊಠಡಿಗಳಿಗೆ ತೆರಳಿದ ಶಿಷ್ಯರು, ಹಳೆಯ ನೆನಪಿನ ಬುತ್ತಿಯನ್ನು ಮುಚ್ಚಿಟ್ಟರು. ಶಿಷ್ಯರ ಮಾತು , ಗುರು ವಂದನೆಯಿಂದ ಗುರು ಬಳಗದವರ ಕಣ್ಣುಗಳಿಂದ ಕಣ್ಣೀರು ಜಿನುಗುಡುವಂತೆ ಮಾಡಿತು. ಗುರುಗಳ ಜತೆ ಸೆಲ್ಪಿ, ಗುರುಗಳ ಜತೆ ಶಿಷ್ಯರು ಪೋಟೋ ತೆಗೆಸಿಕೊಂಡು, ಸಂಭ್ರಮ ಪಟ್ಟರು. ಇದಾದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಈ ಶಾಲೆಯಲ್ಲಿ ಕಲಿಸಿದ ಶಿಕ್ಷಕರ ಬಳಗ, ನಿವೃತ್ತ ಶಿಕ್ಷಕರ ಜತೆಗೆ ಎಸ್ ಜಿವಿ ಹೈಸ್ಕೂಲ್, ಪಿಯು ಕಾಲೇಜಿನಲ್ಲಿ ಕಲಿಸಿ, ನಿವೃತ್ತಗೊಂಡವರನ್ನು ಸನ್ಮಾನಿಸಿ, ಗುರುವಂದನೆ ಸಲ್ಲಿಸಲಾಯಿತು. ಹೀಗಾಗಿ ಪ್ರಾಥಮಿಕ, ಪ್ರೌಢಶಾಲೆ, ಪಿಯು ಕಾಲೇಜಿನಲ್ಲಿ ಕಲಿಸಿದ ಗುರುಗಳ ಸಮ್ಮಿಲನವನ್ನು ಶಿಷ್ಯ ಬಳಗವು ಕಣ್ತುಂಬಿಕೊಂಡಿತು.
*ಹೈಟೆಕ್ ಸ್ಪರ್ಶ ಒಳಗೂ ಸಿಗಲಿ*
ಸಮತಟ್ಟಾದ ಮೈದಾನ, ಸುಸಜ್ಜಿತ ಶಾಲಾ ಕಂಪೌಂಡ್, ಬಣ್ಣ, ಕಲಾಕೃತಿಗಳಿಂದ ಕಂಗೊಳಿಸುವ ಶಾಲಾ ಆವರಣ ಕಂಡು ಗುರು-ಶಿಷ್ಯರು ಖುಷಿಪಟ್ಟರು. ಇದರ ಜತೆಗೆ ಶಾಲಾ ಆವರಣದ ಹೊರಗಡೆ ಜತೆಗೆ ಒಳಗಡೆ ಭಾಗಕ್ಕೂ ಹೈಟೆಕ್ ಸ್ಪರ್ಶ ನೀಡುವ ಕೆಲಸ ಆಗಬೇಕೆಂಬ ಸಲಹೆಗಳು ಕೇಳಿ ಬಂದವು. ಇದಲ್ಲದೇ ಗಣನೀಯ ಪ್ರಮಾಣದಲ್ಲಿ ಕುಸಿದಿರುವ ಮಕ್ಕಳು ಸಂಖ್ಯೆ ಹಾಗೂ ಶಿಕ್ಷಕರ ಸಂಖ್ಯೆ ಬಗ್ಗೆ ಆತಂಕ ವ್ಯಕ್ತಪಡಿಸಿದ ಗುರುಗಳು, ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ನೀಡಿದ ಶಾಲೆಯ ಉಳಿವಿಗಾಗಿ ಹಾಗೂ ಮಕ್ಕಳ ಸಂಖ್ಯೆ ಏರಿಸುವ ನಿಟ್ಟಿನಲ್ಲಿ ರೂಪರೇಷೆ ಸಿದ್ದಪಡಿಸುವಂತೆ ಶಿಷ್ಯ ಬಳಗಕ್ಕೆ ಸೂಚಿಸಿದರು.
*ವೇದಿಕೆಯಲ್ಲಿ ಗುರುವಂದನೆ*
*ಗುರುವಂದನೆ ಕಾರ್ಯಕ್ರಮ*
ಗುರು ವಂದನೆ ವೇದಿಕೆಯ ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಮೂರು ಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಮಾತನಾಡಿ,
ಗುರುಗಳು ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಲು ಅವರಿಗೆ ಯಾವುದೇ ಸ್ವಾರ್ಥವಿರುವುದಿಲ್ಲ. ಕಲ್ಲಿನಂತೆ ಇರುವ ವಿದ್ಯಾರ್ಥಿಗಳನ್ನು ಮೂರ್ತಿಯನ್ನಾಗಿ ಮಾಡುವವರು ಗುರು, ಇಂತಹ ಗುರು ದೊರಕುವುದು ಬಹಳ ಪುಣ್ಯ ಬೇಕು ಎಂದರು.
ಅತಿಥಿಯಾಗಿದ್ದ ಕವಿಸಂ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಗುರುಗಳು ಕೇವಲ ಅಕ್ಷರ ಕಲಿಸದೇ, ಹೇಗೆ ಬದುಕಬೇಕು, ಈ ನಾಡನ್ನು ಈ ದೇಶವನ್ನು ಹೇಗೆ ಕಟ್ಟಬೇಕು ಎಂಬುದನ್ನು ಕಲಿಸಿದ್ದಾರೆ. ಬದಲಾದ ಕಾಲಘಟ್ಟದಲ್ಲಿ ಈಗಿನ ಮಕ್ಕಳನ್ನು ಹೇಗೆ ಕಲಿಸಬೇಕು ಎಂಬುದನ್ನು ನಾವೆಲ್ಲರೂ ಸೇರಿ ವಿಚಾರ ಮಾಡಬೇಕಾಗಿದೆ ಎಂದರು.
ಕಲಿತ ಮತ್ತು ಕಲಿಸಿದ ಗುರುಗಳನ್ನು ಗೌರವಿಸುವ ಈ ಕಾರ್ಯ ಕೃತಜ್ಞತೆಯ ಕಾರ್ಯವಾಗಿದ್ದು, ಈ ಕಾರ್ಯ ಮಾಡಿದ ಶಿಷ್ಯ ಬಳಗವೇ ಧನ್ಯ ಎಂದರು.
ಶಾಲೆಯ ಹಳೆಯ ವಿದ್ಯಾರ್ಥಿ ಅಶೋಕ ಮಸೂತಿ ಅಧ್ಯಕ್ಷತೆ ವಹಿಸಿದ್ದರು. ಹಳೆಯ ವಿದ್ಯಾರ್ಥಿಗಳಾದ ಗಿರೀಶ ಪದಕಿ, ಶ್ರೀಶೈಲ ಪುಡಕಲಕಟ್ಟಿ, ಶಿವಾನಂದ ಕೇಸರಿ, ಗುರು ತಿಗಡಿ, ಕಾಶಪ್ಪ ದೊಡವಾಡ, ಫಕ್ಕೀರಪ್ಪ ಮಡಿವಾಳರ, ವಿರೂಪಾಕ್ಷಪ್ಪ ಗುಗ್ರಿ, ರಾಜೀವ ಬೆಟಗೇರಿ, ಪತ್ರಕರ್ತರಾದ ಶಶಿಧರ ಬುದ್ನಿ, ಪ್ರವೀಣ ಓಂಕಾರಿ, ಚನ್ನಬಸಪ್ಪ ಲಗಮಣ್ಣನವರ ಸೇರಿದಂತೆ ಸೇರಿದಂತೆ ಹಲವರು ಇದ್ದರು. ಇನ್ನು ಗುರುವಂದನೆಯ ಬಳಿಕ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಹಾಲಿ ಹಾಗೂ ಮಾಜಿ ಸೈನಿಕರನ್ನು ಹಾಗೂ ಸಮಾರಂಭದ ಯಶಸ್ಸಿಗೆ ಕೈಜೋಡಿಸಿದ ಮಹನೀಯರನ್ನು ಸನ್ಮಾನಿಸಲಾಯಿತು. ಸಂಜೆ ಸಮಾರೋಪ ಕಾರ್ಯಕ್ರಮದ ಬಳಿಕ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.
------ಬಾಕ್ಸ್ ಮಾಡಿರಿ---------
ಇದೊಂದು ಅವಿಸ್ಮರಣೀಯ, ಅದ್ಬುತ ಕ್ಷಣಗಳಿವು. ಗುರು-ಶಿಷ್ಯರ ಸಮ್ಮಿಲನವು ಹಳೆ ನೆನಪು ಮರುಕಳಿಸುವಂತೆ ಮಾಡಿದೆ.
ಹಳೆಯ ನೆನಪಿನ ಬುತ್ತಿ ಬಿಚ್ಚಿಟ್ಟ ಶಿಷ್ಯರ ಬಳಗದ ಏಳ್ಗೆ ಕಂಡು ಖುಷಿಯಾಯ್ತು. ಈ ಸಮ್ಮಿಲನಕ್ಕೆ ಕಾರಣೀಭೂತರಾದ ಶಿಷ್ಯ ಬಳಗಕ್ಕೆ ಧನ್ಯವಾದಗಳು
-ಶ್ರೀದೇವಿ ಕೌಜಲಗಿ, ಈ ಶಾಲೆಯಲ್ಲಿ ಕಲಿಸಿದ ಶಿಕ್ಷಕರು,
------------------------------------
*ಗುಡ್ಡ ಹತ್ತಿ-ಇಳಿದ ಅನುಭವ*
ಪ್ರತಿ ದಿನವೂ ಶಾಲೆಗಾಗಿ ಗುಡ್ಡ ಹತ್ತಿ-ಇಳಿಯುತ್ತಿದ್ದ ವಿದ್ಯಾರ್ಥಿಗಳು, ಈಗ ಕುಟುಂಬ ಸಮೇತ, ಮತ್ತೆ ಗೆಳೆಯರ ಬಳಗದೊಂದಿಗೆ ಗುಡ್ಡ ಹತ್ತಿ-ಇಳಿದು ಹಳೆಯ ಅನುಭವದ ಮೆಲುಕು ಹಾಕಿದರು. ಕುಟುಂಬದೊಂದಿಗೆ ಶಾಲಾ ಆವರಣದಲ್ಲಿ ಸುತ್ತಾಡಿ, ಅಕ್ಷರ ಕಲಿಸಿದ ಶಾಲೆಯ ದರ್ಶನ ಮಾಡಿಸಿದರು. ಗುರುಗಳೊಂದಿಗೆ ಕುಳಿತು, ಹರಟೆ ಹೊಡೆದರು.
------------------------------------
ವಿದ್ಯಾರ್ಥಿಗಳ ಕೊರತೆಯಿಂದ ಈ ಶಾಲೆ ಈಗ ಬಳಲುತ್ತಿದ್ದು, ಈ ಶಾಲೆಯ ಗತ ವೈಭವ ಮರಳಿ ಬರಬೇಕು. ಎಲ್ಲ ಹಿರಿಯರು, ಹಳೆಯ ವಿದ್ಯಾರ್ಥಿಗಳೆಲ್ಲರೂ ಸೇರಿ ಈ ಶಾಲೆಯ ಅಭಿವೃದ್ಧಿಗೆ ಶ್ರಮಿಸಬೇಕು.
-ಶಂಕರ ಹಲಗತ್ತಿ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ
----------------------------
ಪೋಟೋ: ಉಪ್ಪಿನಬೆಟಗೇರಿ ಗ್ರಾಮದ ಸರಕಾರಿ ಶಾಲಾ ಆವರಣದಲ್ಲಿ ಗುರು ಶಿಷ್ಯರ
ಪೋಟೋ: ಗುರು ಬಳಗದೊಂದಿಗೆ ಶಿಷ್ಯರ ಸೆಲ್ಪಿ