ಟಾರ್ಗೆಟೆಡ್ ಮತಗಳನ್ನು ಡಿಲೀಟ್ ಮಾಡಲಾಗುತ್ತಿದೆ; ಕೆಪಿಸಿಸಿ ವಕ್ತಾರ ಪಿ.ಎಚ್.ನೀರಲಕೇರಿ ಆರೋಪ
ಧಾರವಾಡ
ಆರ್.ಎಸ್.ಎಸ್ ಕುತಂತ್ರದಿಂದ ತಮಗೆ ಬಾರದಿರುವ ಮತಗಳನ್ನು ಗುರಿಯಾಗಿಸಿ ಅಂತವರ ಮತಗಳನ್ನು ಮತಪಟ್ಟಿಯಿಂದ ಅಳಿಸಿಹಾಕುವ ಕಾರ್ಯವನ್ನು ಬಿಜೆಪಿ ಹಾಗೂ ಅದರ ಕಾರ್ಯಕರ್ತರು ಮಾಡುತ್ತಿರುವುದು ನಿಜ ಎಂದು ಕೆಪಿಸಿಸಿ ವಕ್ತಾರ ಹಾಗೂ ಧಾರವಾಡ ಕಾಂಗ್ರೆಸ್ ಮುಖಂಡ ಪಿ.ಎಚ್. ನೀರಲಕೇರಿ ಆರೋಪಿಸಿದ್ದಾರೆ.
ಗುರುವಾರ ಧಾರವಾಡದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಾನು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಲೋಪ ಆಗಿದೆ. ಮತಗಳನ್ನು ಗುರಿಯಾಗಿಸಿ ಅಳಿಸಿ ಹಾಕಲಾಗಿದೆ ಎಂದು ಮಾಡಿದ ಆರೋಪದ ಬಗ್ಗೆ ಜಿಲ್ಲಾ ಚುನಾವಣಾ ಅಧಿಕಾರಿಗಳು ಸ್ಷಷ್ಟನೆ ಕೊಟ್ಟಿದ್ದಾರೆ. ಆದರೆ, ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಲಕ್ಷ ಸನಿಹ ಮತದಾರರು ಇರಬೇಕಿತ್ತು. ಆದರೆ, ಅಳಿಸಿ ಹಾಕಲಾಗಿರುವ 20,974 ಮತಗಳ ವ್ಯತ್ಯಾಸದ ಬಗ್ಗೆ ಸರಿಯಾದ ಉತ್ತರ ನೀಡುತ್ತಿಲ್ಲ ಎಂದು ದೂರಿದರು.
ಚುನಾವಣಾ ಅಧಿಕಾರಿಗಳ ವಿರುದ್ಧ ನಮ್ಮ ಹೋರಾಟ ಅಲ್ಲ. ಮತ ಪಟ್ಟಿಯಲ್ಲಿ ಆಗಿರುವ ಲೋಪಗಳ ಬಗ್ಗೆ ನಮ್ಮ ಪ್ರಶ್ನೆ ಎಂದರು.
ಡಿಲೀಟ್ ಆಗಿರುವ ಮತಗಳು ಸತ್ತವರು ಎಂದು ತೋರಿಸಿದರೆ ನಾನು ಒಪ್ಪುತ್ತೇನೆ. ಆದರೆ, ಅವರು ತೋರಿಸಿರುವ ಪಟ್ಟಿಯಲ್ಲಿ ಇನ್ನು ಬದುಕಿರುವವರನ್ನು ತೋರಿಸುತ್ತೇನೆ. ಮನೆಗೆ ಬಂದು ಪರಿಶೀಲಿಸಲಿ ಎಂದು ಸವಾಲು ಹಾಕಿದರು.
ಧಾರವಾಡದಲ್ಲಿ ಮತ ಪಟ್ಟಿಯಲ್ಲಿ ಆಗಿರುವ ವ್ಯತ್ಯಾಸದಲ್ಲಿ ಸ್ಥಳೀಯ ಶಾಸಕರ ಕೈವಾಡವೇ ಇದೆ. ಮತ ಪರಿಷ್ಕರಣೆಗಾಗಿ ರೂಪಿಸಲಾಗಿರುವ ಆ್ಯಪ್ ನಲ್ಲಿ ಶಾಸಕರ ಹಸ್ತಕ್ಷೇಪ ಇದೆ. ಪಾಲಿಕೆಯಲ್ಲಿ ಅವರ ಆಪ್ತರೇ ತುಂಬಿಕೊಂಡಿದ್ದಾರೆ. ಅಂತವರು ತಮಗೆ ಬೇಕಾದಂತೆ ಮತದಾರರ ಪಟ್ಟಿ ರಚನೆ ಆಗುವಂತೆ ಪ್ರಯತ್ನ ಮಾಡುತ್ತಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಮತಪಟ್ಟಿ ತಯಾರು ಮಾಡುವುದು ಪವಿತ್ರ ಕೆಲಸ.ಅಧಿಕಾರಿಗಳು ಅದನ್ನು ಪ್ರಮಾಣಿಕವಾಗಿ ಮಾಡಬೇಕು ಎಂದು ಆಗ್ರಹಿಸಿದರು.
ಅಧಿಕಾರಿಗಳು ಬಡವರ ಮನೆ ಮನೆಗೆ ಹೋಗಿ ಅವರು ಮನೆಯಲ್ಲಿದ್ದಾಗ ಮತ ಪರಿಷ್ಕರಣೆ ಮಾಡಬೇಕು. ಅಂದಾಗ ಮಾತ್ರ ವಾಸ್ತವಾಂಶ ತಿಳಿಯುತ್ತದೆ. ರಾಜಕೀಯ ಕಾರ್ಯಕರ್ತರ ಮಾತು ಕೇಳಿ ಮತದಾರರ ಪಟ್ಟಿ ತಯಾರಿಸಬಾರದು . ಮತ ಪಟ್ಟಿಯಲ್ಲಿ ಹಲವಾರು ಲೋಪದೋಷಗಳು ಇದ್ದಾವೆ. ಆದರೆ, ಚುನಾವಣಾ ಅಧಿಕಾರಿ ನೀಡಿರುವ ಸ್ಷಷ್ಟನೇ ಇದನ್ನು ಗಮನಿಸಿಲ್ಲ. ನಮ್ಮನ್ನು ಕರೆದು ಮಾತನಾಡಿದರೇ ನಾವು ತೋರಿಸಲು ಸಿದ್ದರಿದ್ದೇವೆ ಎಂದು ನೀರಲಕೇರಿ ಅವರು ಹೇಳಿದರು.
ಆಡಳಿತಾರೂಢ ಬಿಜೆಪಿ ಕಿತ್ತೋಗೆಯಲು ಜನ ತೀರ್ಮಾನಿಸಿದ್ದಾರೆ. ಇದು ಬಿಜೆಪಿಯ ಆಂತರಿಕ ಸಮೀಕ್ಷೆ ಪ್ರಕಾರ ಅವರಿಗೆ ಗೊತ್ತಾಗಿದೆ. ಹೀಗಾಗಿಯೇ ಮತ್ತೆ ಅಧಿಕಾರ ಹಿಡಿಯಲು ವಾಮಮಾರ್ಗ ಬಳಸುತ್ತಿದ್ದಾರೆ. ಮತಪಟ್ಟಿಯಲ್ಲಿ ತಮಗೆ ಬೇಡದಿರುವವರ ಮತಗಳನ್ನು ಅಳಿಸಿ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೊಂಗವಾಡ ವೀರುಪಾಕ್ಷಪ್ಪ ಹಾಜರಿದ್ದರು.