*ಉಳವಿ ತಲುಪಿದ ಪಾದಯಾತ್ರೆ*
ಧಾರವಾಡ: ಮಡಿವಾಳೇಶ್ವರ ಕಲ್ಮಠದ ಭಕ್ತರರೊಂದಿಗೆ ಕೈಗೊಂಡ ಪಾದಯಾತ್ರೆ ಭಾನುವಾರ ಉಳವಿ ಚನ್ನಬಸವೇಶ್ವರ ದೇವಸ್ಥಾನಕ್ಕೆ ಯಶಸ್ವಿಯಾಗಿ ತಲುಪಿತು.
ಧಾರವಾಡ ತಾಲೂಕಿನ ಗರಗ ಗ್ರಾಮದ ಶ್ರೀ ಮಡಿವಾಳೇಶ್ವರ ಕಲ್ಮಠದಿಂದ ಆರಂಭವಾದ ಪಾದಯಾತ್ರೆ ನಾಲ್ಕನೆ ದಿನವಾದ ಭಾನುವಾರ ಸಂಜೆ ಉಳವಿ ಚನ್ನಬಸವೇಶ್ವರ ದೇವಸ್ಥಾನ ತಲುಪಿತು.
ದೇವಸ್ಥಾನಕ್ಕೆ ಆಗಮಿಸುತ್ತಿದ್ದಂತೆ ಘಂಟೆ, ಜಾಗಟೆ ಹಾಗೂ ಶಂಖನಾದಗಳು ದೇವಸ್ಥಾನದಲ್ಲಿ ಮೊಳಗಿದವು. ಸಾವಿರಾರು ಭಕ್ತರು ಹರ,ಹರ ಮಹಾದೇವ..ಉಳವಿ ಚನ್ನಬಸವೇಶ್ವರ ಮಹಾರಾಜ್ ಕೀ ಜೈ ಸೇರಿದಂತೆ ವಿವಿಧ ಜಯ ಘೋಷಗಳನ್ನು ಕೂಗಿ ಭಕ್ತಿ ಮೆರೆದರು.
ಶ್ರೀ ಮಡಿವಾಳೇಶ್ವರ ಕಲ್ಮಠದ ಚನ್ನಬಸವ ಸ್ವಾಮೀಜಿ ಹಾಗೂ ಅಶೋಕ ದೇಸಾಯಿ, ಪ್ರೀಯಾ ದೇಸಾಯಿಯವರು ಈ ವೇಳೆ ಉಳವಿ ಚನ್ನಬಸವೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಸೋಮುವಾರ ಮುಂಜಾನೆ ಭಜನೆ, ಕಾರ್ತಿಕ ದೀಪೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ. ನಾಳೆ ಬೆಳಿಗ್ಗೆ ವಿಶೇಷ ಪೂಜೆ, ರುದ್ರಾಭಿಷೇಕ , ಮಹಾಮಂಗಳಾರತಿ ಕಾರ್ಯಕ್ರಮ ಮುಗಿಸಿಕೊಂಡು ವಾಹನದ ಮೂಲಕ ಪಾದಯಾತ್ರಿಕರು ವಾಪಸ್ ಗರಗ ಮಡಿವಾಳೇಶ್ಚರ ಮಠಕ್ಕೆ ಆಗಮಿಸಲಿದ್ದಾರೆ.
ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಧಾರವಾಡ ಶಾಸಕರ ಅಮೃತ ದೇಸಾಯಿ ಮಾತನಾಡಿ, ಗರಗ ಮಡಿವಾಳೇಶ್ವರರ ಶ್ರೀಗಳ ಇಚ್ಛೆಯಂತೆ ಸತತ 6ನೇ ಬಾರಿಗೆ ನಾವು ಕೈಗೊಂಡ ಪಾದಯಾತ್ರೆ ಯಶಸ್ವಿಯಾಗಿದೆ. ನಾಲ್ಕು ದಿನದ ಉಳವಿ ಪಾದಯಾತ್ರೆಯಲ್ಲಿ ಭಾಗವಹಿಸಿದ ಎಲ್ಲರೂ ಚನ್ನಬಸವೇಶ್ವರನ ದರ್ಶನ ಪಡೆದಿದ್ದೇವೆ. ಸೋಮವಾರ ಬೆಳಗ್ಗೆ ಪೂಜಾ ಕಾರ್ಯಕ್ರಮ, ಅಭಿಷೇಕ ಮುಗಿಸಿಕೊಂಡು ವಾಪಸ್ ಧಾರವಾಡಕ್ಕೆ ಬರುತ್ತೇವೆ. ಪಾದಯಾತ್ರೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಹಾಗೂ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಶಾಸಕ ಅಮೃತ ದೇಸಾಯಿಯವರು ತಿಳಿಸಿದರು.