ಪಂಚ ಗ್ಯಾರಂಟಿ -- ಗುತ್ತಿಗೆದಾರರ ಹಣವನ್ನು ಕಾಂಗ್ರೆಸ್‌ನವರು ಡೈವರ್ಟ್ - ಸಂಘದ ಅಧ್ಯಕ್ಷ ಸುಭಾಷ ಪಾಟೀಲ್ ಆಕ್ರೋಶ.
ಧಾರವಾಡ :-- ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ ಬಿಜೆಪಿ ಶೇ . 40 ಕಮಿಷನ್ ಪಡೆಯುತ್ತಿದೆ ಎಂಬ ಆರೋಪ ಮಾಡಿದ್ದ ಗುತ್ತಿಗೆದಾರರು ಇದೀಗ ತಮ್ಮ ಬಾಕಿ ಬಿಲ್ ಪಡೆದುಕೊಳ್ಳಲು ಪರದಾಡುತ್ತಿದ್ದಾರೆ . ಈ ಕುರಿತು ಉತ್ತರ ಕರ್ನಾಟಕ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಭಾಷ ಪಾಟೀಲ್ ತಮ್ಮ ಅಳಲು ತೋಡಿಕೊಂಡು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಗುತ್ತಿಗೆದಾರರ 25 ರಿಂದ 30 ಸಾವಿರ ಕೋಟಿ ಬಿಲ್‌ನ್ನು ಸರ್ಕಾರ ಬಾಕಿ ಇರಿಸಿಕೊಂಡಿದೆ . ಮೂರು ವರ್ಷಗಳಿಂದ ಸರ್ಕಾರ ಸರಿಯಾಗಿ ಬಾಕಿ ಬಿಲ್ ಕೊಡುತ್ತಿಲ್ಲ . 25 ಸಾವಿರ ಕೋಟಿ ರೆಗ್ಯುಲರ್ ಪೇಮೆಂಟ್ ಬಾಕಿ ಇದೆ . ಬೃಹತ್ ನೀರಾವರಿ ಇಲಾಖೆಯ 10 ಸಾವಿರ ಕೋಟಿ , ಸಣ್ಣ ನೀರಾವರಿ ಇಲಾಖೆಯ 3 ಸಾವಿರ ಕೋಟಿ ಹಾಗೂ ಲೋಕೋಪಯೋಗಿ ಇಲಾಖೆಯ 4 ಸಾವಿರ ಕೋಟಿ ಬಿಲ್ ಬಾಕಿ ಇದೆ . ಇದರ ಜೊತೆಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಬಿಲ್ ಕೂಡ ಬಾಕಿ ಇದೆ ಎಂದರು.