ಜಿಂದಾಲ್ ಉಕ್ಕಿನ ಕಾರ್ಖಾನೆಗೆ ಸಂಡೂರು ತಾಲೂಕಿನ ತೋರಣಗಲ್ಲು ಹೋಬಳಿಯಲ್ಲಿ, 3,677 ಎಕರೆ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ ಪರಬಾರೆ
ಮಾಡಲು ಹೊರಟಿರುವ ಸರ್ಕಾರದ ಸಂಪುಟ ದರ್ಜೆಯ ನಿರ್ಧಾರವನ್ನು ಎ ಐ ಕೆ ಕೆ ಎಂ ಎಸ್ ರೈತ ಸಂಘಟನೆಯ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸುತ್ತಾ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಬಿ.ಭಗವಾನ್ ರೆಡ್ಡಿಯವರು ಈ ಕೆಳಕಂಡ ಹೇಳಿಕೆಯನ್ನು ನೀಡಿದ್ದಾರೆ.
ಈಗ ಪ್ರಸ್ತಾಪದಲ್ಲಿರುವಂತೆ ಸದರಿ ಜಮೀನನ್ನು ಗುತ್ತಿಗೆ ಆಧಾರದಲ್ಲಿ ಮುಂದುವರಿಸಬೇಕು ಎಂಬುದಾಗಿದೆ. ಆದರೆ,ಈಗಾಗಲೇ ಸಾವಿರಾರು ಎಕರೆ ಹೊಂದಿರುವ ಈ ಕಂಪನಿಗೆ ಹೆಚ್ಚುವರಿ ಭೂಮಿ ಏಕೆ ಬೇಕು? ಎನ್ನುವುದರ ಕುರಿತು ಭೂ ಲೆಕ್ಕ ಪರಿಶೋಧನೆ ಆಗಬೇಕು ಎಂದು ಆಗ್ರಹಿಸುತ್ತದೆ.
ಈ ಹಿಂದೆ ಇಂದು ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ನ ಹಿರಿಯ ಶಾಸಕರಾದ ಎಚ್ ಕೆ ಪಾಟೀಲರು ಜಿಂದಾಲ್ ಕಂಪನಿಯ ಭೂಮಿ ಖರೀದಿಸುವ ಪ್ರಸ್ತಾವನೆಯನಲ್ಲಿ ಪಾರದರ್ಶಕತೆ ಇಲ್ಲ ಎಂದು ಆರೋಪಿಸಿ, ಇದು ಸಾರ್ವಜನಿಕ ಹಿತಕ್ಕೆ ಮಾರಕ ಮತ್ತು ಅತಿ ಕಡಿಮೆ ಬೆಲೆಗೆ ಮಾರಾಟ ಮಾಡುವ ನಿರ್ಧಾರ ಕೈ ಬಿಡಬೇಕೆಂದು ಅಂದಿನ ಕೈಗಾರಿಕಾ ಸಚಿವರಿಗೆ ಪತ್ರ ಬರೆದಿದ್ದರು. ಈಗ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ, ಇವರೇ ಜಿಂದಾಲ್ ಕಂಪನಿಗೆ ಈಗ ಭೂಮಿ ಮಾರಲು ಹೊರಟಿರುವುದು ಅತ್ಯಂತ ಖಂಡನೀಯ, ಹಾಗಾಗಿ ಈ ನಿರ್ಧಾರವನ್ನು ಸರ್ಕಾರ ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ಎ ಐ ಕೆ ಕೆ ಎಂ ಎಸ್ ರಾಜ್ಯ ಸಮಿತಿಯು ಆಗ್ರಹಿಸುತ್ತದೆ.
ಸುಮಾರು ವರ್ಷಗಳಿಂದ ಕೆವಲ ತಮ್ಮ ಜೀವನೋಪಾಯಕ್ಕಾಗಿ ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡಿಕೊಂಡು ಬರುತ್ತಿರುವ 12 ಲಕ್ಷಕ್ಕೂ ಹೆಚ್ಚಿನ ರಾಜ್ಯದ ಬಗರ್ ಹುಕುಂ ಸಾಗುವಳಿದಾರರ ಅರ್ಜಿಗಳು ಭೂ ಮಂಜೂರಾತಿ ಸಮಿತಿಯ ಧೂಳು ಹಿಡಿದು ಕುಳಿತಿದೆ. ಅವರಿಗೆ ಭೂಮಿ ನೀಡಲು ಸರ್ಕಾರ ಮೀನಮೇಷ ಹಾಕುತ್ತಿರುವುದನ್ನು ನೋಡುತ್ತಿದ್ದೇವೆ. ಒಟ್ಟಾರೆ, ಈ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೇರಲಿ ಜನಸಾಮಾನ್ಯರ ಸೇವೆ ಬಿಟ್ಟು, ಉದ್ಯಮಪತಿಗಳ ಸೇವೆ ಗೈಯುವುದು ಶತಸಿದ್ದ ಎಂಬುದು ಇಂತಹ ಕಾರ್ಯಗಳಿಂದ ಮತ್ತೆ, ಮತ್ತೆ ಸಾಬೀತಾಗುತ್ತಿದೆ. ಹಾಗಾಗಿ ರಾಜ್ಯದ ದುಡಿಯುವ ಜನತೆ ಒಂದಾಗಿ, ಶೋಷಣೆ ಇಲ್ಲದ ಸಮಾಜ ನಿರ್ಮಿಸಲು ಬಲಿಷ್ಠ ಚಳುವಳಿ ಕಟ್ಟಲು ಮುಂದಾಗಬೇಕು ಎಂದು ಎ ಐ ಕೆ ಕೆ ಎಂ ಎಸ್ ಕರೆ ನೀಡುತ್ತದೆ ಎಂದರು
ಸುದ್ದಿ ಇವರಿಂದ
ಶರಣಬಸವ ಗೋನವಾರ
ಜಿಲ್ಲಾ ಕಾರ್ಯದರ್ಶಿ
ಎ ಐ ಕೆ ಕೆ ಎಂ ಎಸ್