ಅಳ್ನಾವರ ಯುವಕ ಮಂಡಳಿಗೆ ಬೇಕಿದೆ ನವ ಚೈತನ್ಯ

ಅಳ್ನಾವರ ಯುವಕ ಮಂಡಳಿಗೆ ಬೇಕಿದೆ ನವ ಚೈತನ್ಯ
ನಾಲ್ಕು ದಶಕಗಳ ಇತಿಹಾಸ ಹೊಂದಿರುವ ಯುವಕ ಮಂಡಳಿ
ಮಂಡಳಿ ಮೂಲ ಉದ್ದೇಶ ಗಾಳಿಗೆ ಕೆಲವರಿಂದ ದುರ್ಬಳಿಕೆ
70ರ ಹರಿಯದ ವೃದ್ಧರೇ ಇನ್ನೂ ಮಂಡಳಿಯ ಸದಸ್ಯರು
ನೂತನ ಸದಸ್ಯರಿಗೆ ಸದಸ್ಯತ್ವ ಬಿಟ್ಟು ಕೊಡದ ಹಳಬರು

ಅಳ್ನಾವರ: ಪಟ್ಟಣದಲ್ಲಿ ನಾಲ್ಕು ದಶಕಗಳ ಹಿಂದೆ ಯುವಕರ ಸದ್ಬಳಿಕೆಗೆ ಹಾಗೂ ಕ್ರಿಯಾ ಚಟುವಟಿಕೆಗಳಿಗಾಗಿ ಪ್ರಾರಂಭವಾದ ಯುವಕ ಮಂಡಳಿ ಕೆಲ ವರ್ಷಗಳಿಂದ ದುರುಪಯೋಗಕ್ಕೆ ಬಲಿಯಾಗಿದ್ದು, ಸದ್ಯ ಕೆಲವರ ಹಿತಾಶಕ್ತಿಗೆ ಸಿಲುಕಿ ನರಳುತ್ತಿದೆ.

ಯುವ ಜನತೆಗೆ ಪ್ರೋತ್ಸಾಹಿಸಲು 1979-80ರಲ್ಲಿ ಅಳ್ನಾವರ ಪಟ್ಟಣದಲ್ಲಿ ಹುಟ್ಟಿಕೊಂಡ ಯುವಕ ಮಂಡಳಿ ಈಗ ಆ ಯುವಕ ಮಂಡಳದ ಉದ್ದೇಶ ಗುರಿಗಳನ್ನು ಮಂಡಳದ ಸದಸ್ಯರು ಗಾಳಿಗೆ ತೂರಿ ದಶಕಗಳಿಂದ ಬರುತ್ತಿರುವ ಆದಾಯವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಪಟ್ಟಣದಲ್ಲಿ ಕೇಳಿ ಬರುತ್ತಿವೆ.

ಮಂಡಳಿಗೆ ನಿವೇಶನ:
1979-80ರ ಆಸುಪಾಸಿನಲ್ಲಿ ಆಗಿನ ಅಳ್ನಾವರ ಪುರಸಭೆಯ ಅದ್ಯಕ್ಷರಾಗಿದ್ದ ದಿ. ಶ್ರೀಕಾಂತ ಅಂಬಡಗಟ್ಟಿ ಆವರು ಪಟ್ಟಣ ಪಂಚಾಯತಿಯ ಆಸ್ತಿಯನ್ನು (ನಿವೇಶನ) ಗಣಪತಿ ದೇವಸ್ಥಾನ, ಕೆಸಿಸಿ ಬ್ಯಾಂಕ್, ಮಜಿದ್, ಮರಾಠ ಮಂಗಲ ಕಾರ್ಯಾಲಯ, ಕಲ್ಯಾಣ ಸಮಾಜ, ಶಿಂಪಿ ಸಮಾಜ, ಕ್ರಿಶ್ಚನ ಸಮಾಜ ಹೀಗೆ ಅನೇಕ ಪಟ್ಟಣ ಪಂಚಾಯತಿಯ ನಿವೇಶನಗಳನ್ನು ನೀಡಿದ್ದರು. ಅಲ್ಲದೇ ಶೈಕ್ಷಣಿಕ ಉದ್ಯೇಶಕ್ಕಾಗಿ ಹಾಗೂ ಯುವಕ ಮಂಡಳಿ, ಯುವ ಜನತೆಗಾಗಿ ಜಾಗೆಯನ್ನು ಪಟ್ಟಣದ ಇಂದಿರಾನಗರ ಬಡಾವಣೆಯಲ್ಲಿ ಆಸ್ತಿ ನಂ. 634ರ ಸ್ಥಳದಲ್ಲಿ ಯುವಕ ಮಂಡಳ ಕಟ್ಟಲು ಪಟ್ಟಣ ಪಂಚಾಯತಿ ನಿವೇಶನವನ್ನೂ ನೀಡಿದ್ದರು.

ಉತ್ಸಾಹದ ಚಟುವಟಿಕೆಗಳು:
ಪಟ್ಟಣದ ಸಾರ್ವಜನಿಕರು ಹಾಗೂ ಪಟ್ಟಣದ ಅರ್ಬನ್ ಕೋ.ಆ ಬ್ಯಾಂಕಿನವರು 1 ಲಕ್ಷ ರೂ. ಸಹಾಯ ಧನ ನೀಡಿ ಯುವಕ ಮಂಡಳಕ್ಕೆ ಪ್ರೋತ್ಸಾಹಿಸಿದರು. ಪಟ್ಟಣದ ಸಾರ್ವಜನಿಕರು, ಯುವಕ ಮಂಡಲದ ಸದಸ್ಯರು, ಯುವಕ ಮಂಡಳ ಅಭಿವೃದ್ಧಿಗಾಗಿ ಸಾಕಷ್ಟು ದೇಣಿಗೆ ನೀಡಿದ್ದರು. ಯುವಕ ಮಂಡಳ ಪ್ರಾರಂಭದಲ್ಲಿ ಮಹಿಳೆಯರಿಗೆ ಹೋಲಿಗೆ ತರಬೇತಿ ಹಾಗೂ ಯುವಕರಿಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕ್ರಿಯಾ ಚಟುವಟಿಕೆಗಳು ಉತ್ಸಾಹದಿಂದಲೇ ನಡೆದಿದ್ದವು.

ಚಟುವಟಿಕೆ ಕಣ್ಮರೆ:
ಯುವಕರಿಗೆ ಉತ್ತೇಜನ ನೀಡಲು ಹಲವಾರು ಸಾಂಸ್ಕೃತಿಕ ಹಾಗೂ ಸ್ಪರ್ಧಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿತ್ತು. ದಿನಗಳು ಕಳೆದಂತೆ ಚಟುವಟಿಕೆಗಳು ನಿಧಾನವಾಗಿ ಕಣ್ಮರೆ ಆಗುತ್ತಾ ಸಾಗಿದವು. ಯುವಕ ಮಂಡಲದ ಉತ್ಸಾಹದ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡವು. ಆದರೆ ಅಂದಿನ ಯುವಕ ಮಂಡಲದ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಸದಸ್ಯರು ಇಲ್ಲಿವರೆಗೆ ಮುಂದುವರೆಯುತ್ತಾ ಬಂದಿರುವುದೇ ಯುವಕ ಮಂಡಳದ ಉದ್ದೇಶಗಳಿಗೆ ಹಿನ್ನಡೆ ಆಗಲು ಕಾರಣ ಎನ್ನಲಾಗಿದೆ.

ಹಳೇ ಸದಸ್ಯರಲ್ಲಿ ಕೆಲವರು ನಿಧನರಾಗಿದ್ದಾರೆ. ಇನ್ನೂ ಉಳಿದ ಸದಸ್ಯರ ವಯಸ್ಸು 70ರ ಗಡಿ ದಾಟಿದೆ. ಯುವ ಮನಸ್ಸುಗಳಿಗೆ ಸ್ಪಂದಿಸಬೇಕಾದ ಯುವಕರೇ ಮಂಡಳಿ ಸದಸ್ಯರಿಲ್ಲದಿರುವುದು ಮಂಡಳಿಗೆ ಗ್ರಹಣ ಹಿಡಿದಂತಾಗಿ ನಿಷ್ಕ್ರೀಯಗೊಂಡಿದೆ. 

ಪಟ್ಟು ಬಿಡದ ವೃದ್ಧ ಯುವಕರು!: 
ಯುವಕ ಮಂಡಲದ ಸದಸ್ಯರೆಲ್ಲರು ವೃದ್ಧರಾಗಿದ್ದರೂ ತಮ್ಮ ಸದಸ್ಯತ್ವವನ್ನು ಮಾತ್ರ ಯುವ ಪೀಳಿಗೆಗೆ ಬಿಟ್ಟುಕೊಡುತ್ತಿಲ್ಲ. ಹೊಸ ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳದೇ ತಾವೇ ಯುವಕರು ಎಂದು ಮಂಡಳಿ ಸದಸ್ಯತ್ವಕ್ಕೆ ನಾವೇ ಯುವಕರು ಎಂದು ವೃದ್ಧ ಸದಸ್ಯರು ಪಟ್ಟು ಹಿಡಿದಿರುವುದಕ್ಕೆ ಯುವಕ ಮಂಡಲ ತನ್ನ ಕ್ರಿಯಾಶೀಲತೆಯನ್ನೇ ಮರೆತಂತಾಗಿದೆ.

ಕುಗ್ಗದ ಆದಾಯ: 
ಯುವಕ ಮಂಡಳದ ಉದ್ದೇಶಗಳನ್ನು ಎಂದು ಗಾಳಿಗೆ ತೂರಿ ಆರ್ಥಿಕ ಚಟುವಟಿಕೆಗಳಿಗೆ ಮಂಡಳಿಯನ್ನು ಒಳಪಡಿಸಲಾಯಿತೋ ಅಂದಿನಿಂದ ಯುವಕ ಮಂಡಳದ ಹೆಸರಲ್ಲಿ ಆದಾಯ ಬರಲು ಆರಂಭಿಸಿತು. ಅದೇ ಕಟ್ಟಡದಲ್ಲಿ 1990-91ರಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾರಂಬಿಸಲಾಯಿತು. ಒಟ್ಟು 11 ಕೊಠಡಿ ಹಾಗೂ ಪ್ರತಿಯೊಂದು ಕೊಠಡಿಗೆ 400 ರೂ. ಬಾಡಿಗೆ ನೀಡಲಾಗುತ್ತಿತ್ತು. ಇದರಿಂದ ಸಾವಿರಾರೂ ರೂಪಾಯಿಗಳು ಯುವಕ ಮಂಡಲಕ್ಕೆ ಆದಾಯ ಬರಲು ಶುರುವಾಯಿತು. 

ಹೆಸರಿಗಷ್ಟೇ ಅಸ್ತಿತ್ವ:
ಕಾಲೇಜು ಬೇರೆ ಕಡೆ ಸ್ವಂತ ಕಟ್ಟಡಕ್ಕೆ ಶಿಪ್ಟ ಆದ ಮೇಲೆ ಅದೇ ಕೊಠಡಿಗಳಲ್ಲಿ ಖಾಸಗಿ ಟ್ಯೂಷನ್ ಕ್ಲಾಸ್ ತೆರೆಯಲು ಬಾಡಿಗೆ ನೀಡಲಾಗಿತ್ತು. ನಂತರ ವರ್ತಕರ ಸಂಘದವರು ಅಳ್ನಾವರ ಪತ್ತಿನ ಸಹಕಾರಿ ಸಂ್ಘಕ್ಕೂ ನೀಡಿದ್ದರಿಂದ ಹೆಚ್ಚೆಚ್ಚು ಬಾಡಿಗೆ ಬರತೊಡಗಿತು. ಹೀಗೆ ದಿನಗಳು ಕಳೆದಂತೆ ಯುವಕರಿಗೆ ಮೀಸಲಾಗಿದ್ದ ಕಟ್ಟಡ ಹಂತ ಹಂತವಾಗಿ ಬೇರೆ, ಬೇರೆ ಉದ್ದೇಶಗಳಿಗೆ ಬಳಕೆಯಾಗುತ್ತಾ ಸಾಗಿದೆ. ಮಂಡಳಿ ಯಾವ ಉದ್ದೇಶಕ್ಕೆ ಬಳಕೆಯಾಗಬೇಕಿತ್ತೊ ಅದು ಬಿಟ್ಟು ಅನ್ಯ ಕಾರ್ಯಕ್ಕೆ ಹೆಚ್ಚು ಬಳಕೆಯಾಗುತ್ತಾ ಸಾಗಿದೆ.  ತನ್ನ ಮೂಲ ಉದ್ದೇಶ ಹಾಗೂ ಚಟುವಟಿಕೆಗಳನ್ನು ಕಳೆದುಕೊಂಡ ಯುಮಕ ಮಂಡಲ ಹೆಸರಿಗಷ್ಟೇ ತನ್ನ ಅಸ್ತಿತ್ವ ಉಳಿಸಿಕೊಂಡಿದೆ.
ಬೇಕಿದೆ ಹೊಸ ಸ್ಪರ್ಶ: 
‘ಯಾವ ಕಾರಣಕ್ಕೆ ಯುವಕ ಮಂಡಳಿ ಪ್ರಾರಂಭವಾಗಿತ್ತೋ ಅದು ಮತ್ತೆ ಮರಳಿ ತನ್ನ ಮೂಲ ಅಸ್ತಿತ್ವ ಉಳಿಸಿಕೊಳ್ಳಲು ನೂತನ ಸದಸ್ಯರನ್ನು ಒಳಗೊಂಡ ನೂತನ ಸದಸ್ಯರ ಮಂಡಳಿ ರಚನೆ ಆಗಬೇಕಿದೆ. ನಿಂತು ಹೋಗಿದ್ದ ಯುವ ಚಟುವಟಿಕೆಗಳು ಮತ್ತೆ ಆರಂಭಗೊಳಬೇಕಿದೆ. ಹಳೆ ಸದಸ್ಯರು ವೃದ್ಧರಾದರೂ ಸದಸ್ಯತ್ವ ಬಿಟ್ಟು ಕೊಡದೇ ಯುವಕರಿ ಮೋಸವೆಸಗಲಾಗುತ್ತಿದೆ. ಆದಾಯಕ್ಕೆ ಮೀಸಲುಗೊಳಿಸದೇ ಯುವ ಚಟುವಟಿಕೆಗಳಿಗೆ ಮಂಡಳಿ ಬಾಗಿಲು ತೆರೆಯಬೇಕು’ ಎಂದು ಹೆಸರು ಹೇಳಲು ಇಚ್ಚಿಸದ ಯುವಕರೊಬ್ಬರು ಅಭಿಪ್ರಾಯ ಹಂಚಿಕೊಂಡರು.

‘ಪಟ್ಟಣ ಪಂಚಾಯತಿಯಿಂದ ಪಡೆದ ನಿವೇಶನ ಸಾರ್ವಜನಿಕರ ಸಹಾಯ ಧನ, ದೇಣಿಗೆಯಿಂದ ನಿರ್ಮಿಸಲಾದ ಕಟ್ಟಡ ಯುವಕರಿಗೆ ವಿವಿಧ ಚಟುವಟಿಕೆಗಳಿಗೆ, ಸಂಘ ಸಂಸ್ಥೆಗಳು, ಗ್ರಂಥಾಲಯ, ಮಹಿಳೆಯರು, ಯುವತಿಯರು , ಯುವಕರಿಗೆ ಈ ಕಟ್ಟಡ ಉಪಯೋಗವಾಗಬೇಕಿದೆ. ಯುವಕಮಂಡಲ ಸಾರ್ವಜನಿಕರ ಸ್ವತ್ತು. ಯುವಕ ಮಂಡಲ ಸದಸ್ಯರ ಆಸ್ತಿಯಲ್ಲ ಅದನ್ನು ಕಬಳಿಸಲು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು’ ಎಂದು ಪಟ್ಟಣದ ಯುವತಿಯೊಬ್ಬರು ಹೇಳಿದರು. 
ಸುದ್ದಿ ಹಾಗೂ ಜಾಹೀರಾತುಗಾಗಿ ಸಂಪರ್ಕಿಸಿರಿ: 9945564891

ನವೀನ ಹಳೆಯದು

نموذج الاتصال