ಮೇಳದಲ್ಲಿ ೭೮ ಸಂಸ್ಥೆಗಳು ಭಾಗಿ| 200 ಜನ ಶಿಕ್ಷಕರು ನೇಮಕ
ಶಿಕ್ಷಕರ ಉದ್ಯೋಗ ಮೇಳ ಯಶಸ್ವಿ
ಧಾರವಾಡ: ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಟ್ರಸ್ಟ್, ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ನಗರದ ಭಾರತ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡ ಖಾಸಗಿ ಶಾಲೆ ಶಿಕ್ಷಕರ ಉದ್ಯೋಗ ಮೇಳ ಯಶಸ್ವಿಯಾಗಿದೆ.
ಉದ್ಘಾಟಿಸಿದ ಮರಾಠ ವಿದ್ಯಾಪ್ರಸಾರ ಮಂಡಳಿ ಕಾರ್ಯದರ್ಶಿ ರಾಜು ಬೀರ್ಜನ್ನವರ, ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ಈ ಕೊರತೆ ನೀಗಿಸಲು ಅಲಲ್ಲಿ ಉದ್ಯೋಗ ಮೇಳ ನಡೆಸುವುದು ಸಾಮಾನ್ಯ. ಶಿಕ್ಷಕರಿಗೂ ಉದ್ಯೋಗ ಮೇಳವು ಅಪರೂಪದ ಕೆಲಸ ಎಂದರು.
ಸಾಮಾನ್ಯ ಪಠ್ಯಕ್ರಮ ಅಲ್ಲದೇ, ಸಿಬಿಎಸ್‌ಇ ಮತ್ತು ಟಿಸಿಎಸ್‌ಇ ಪಠ್ಯಕ್ರಮದ ಶಿಕ್ಷಣ ಸಂಸ್ಥೆಗಳು ಮೇಳದಲ್ಲಿ ಪಾಲ್ಗೊಂಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ ಬೀರ್ಜನ್ನವರ, ಈ ಮೇಳ ಸದ್ಬಳಕೆ ಮಾಡಿಕೊಂಡು, ಆರ್ಥಿಕ ಸ್ಥಿತಿಗತಿ ಸುಧಾರಿಸಿಕೊಳ್ಳುವಂತೆ ಸಲಹೆ ನೀಡಿದರು.
ಉದ್ಯೋಗ ಮೇಳದ ಆಯೋಜಕ ನಾಗರಾಜ್ ಎಚ್.ಎನ್.ಮಾತನಾಡಿ, ಪ್ರತಿಭೆಗೆ ತಕ್ಕ ಉದ್ಯೋಗ ನೀಡುವುದು ಸಂಸ್ಥೆಯ ಧ್ಯೇಯ. ಉತ್ತಮ ವೇತನ ನೀಡುವ ಸಂಸ್ಥೆಗಳಿಗೆ ಶಿಕ್ಷಕರೂ ಕೂಡ ಬದ್ಧತೆಯಿಂದ ಕೆಲಸ ಮಾಡುವಂತೆ ಕಿವಿಮಾತು ಹೇಳಿದರು.
ಉತ್ತರ ಕರ್ನಾಟಕದ ವಿವಿಧ ಖಾಸಗಿ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವಿ-ಸ್ನಾತಕೋತ್ತರ ಪದವಿ ಹಂತದ ಶಾಲಾ-ಕಾಲೇಜುಗಳಲ್ಲಿ ಮುಖ್ಯೋಪಾದ್ಯಾಯರು, ಉಪನ್ಯಾಸಕರು, ಸಹ ಶಿಕ್ಷಕರು, ಸಿಬ್ಬಂದಿ ಹೀಗೆ ಎರಡು ಸಾವಿರು ಹುದ್ದೆಗಳು ಖಾಲಿ ಇದ್ದವು.
ಉದ್ಯೋಗ ಮೇಳದಲ್ಲಿ ಬೆಳಗಾವಿ, ಬಾಗಲೋಟಿ, ವಿಜಯಪುರ, ಕೊಪ್ಪಳ್ಳ, ಬೀದರ, ಹಾವೇರಿ, ಧಾರವಾಡ, ಕಾರವಾರ, ಮಂಗಳೂರು, ದಾವಣಗೇರಿ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳು ಸೇರಿದಂತೆ ಒಟ್ಟು ೭೮ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳು ಪಾಲ್ಗೊಂಡಿದ್ದವು.
ಮೇಳಕ್ಕೆ ವಿವಿಧ ಜಿಲ್ಲೆಗಳಿಂದ ಆನ್‌ಲೈನ್ ಹಾಗೂ ಆಫ್‌ಲೈನ್ ಒಟ್ಟು ೫೦೦ಕ್ಕೂ ಅಧಿಕ ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಿ, ಆಸಕ್ತ ಸಂಸ್ಥೆಗೆ ಸಂದರ್ಶನ ನೀಡಿದರು. ಈ ಸಂದರ್ಶನದಲ್ಲಿ ಆಯ್ಕೆಯಾದ 200 ಜನರಿಗೆ ಸ್ಥಳದಲ್ಲೇ ನೇಮಕಾತಿ ಪತ್ರವನ್ನು ನೀಡಿತು.
ಮರಾಠಾ ವಿದ್ಯಾಪ್ರಸಾರಕ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತು ಸದಸ್ಯರು, ಪ್ರಾಚಾರ್ಯ ಪಿ.ಎಸ್.ಗಾಣಿಗೇರ, ಪ್ರಾಚಾರ್ಯೆ ಶೈಲಜಾ, ಅಮರೇಶ ಸೇರಿದಂತೆ ಅನೇಕರು ಭಾಗವಹಿಸಿದ್ದರು.