*ಗ್ರಾಮೀಣ ಆರ್ಥಿಕ ಅಭಿವೃದ್ಧಿಗೆ ಸಹಕಾರ ಚಳವಳಿ ಮಹತ್ತರ ಪಾತ್ರ*
*ಸಚಿವ ಆಚಾರ್ ಹಾಲಪ್ಪ*
*ಧಾರವಾಡ (ಕರ್ನಾಟಕ ವಾರ್ತೆ) ನ.15*: ರಾಜ್ಯ, ರಾಷ್ಟ್ರದ ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರ ಚಳವಳಿಯ ಪಾತ್ರ ಅತಿ ಮಹತ್ವದ್ದಾಗಿದ್ದು, ಸಹಕಾರ ಮಹಾಮಂಡಳಗಳ, ಒಕ್ಕೂಟಗಳು, ಸಂಘಗಳು, ಪ್ರಾಮಾಣಿತ, ಪಾರದರ್ಶಕತೆ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕೆಂದು ಜಿಲ್ಲಾ ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆಚಾರ್ ಹಾಲಪ್ಪ ಅವರು ಇಂದಿಲ್ಲಿ ತಿಳಿಸಿದರು.
ಧಾರವಾಡದ ಕೆಎಂಎಫ್ ಆವರಣದಲ್ಲಿ ಆಯೋಜಿಸಲಾಗಿದ್ದ 69 ನೇ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡುತ್ತಾ, ಭಾರತವು ಅಮೃತ ಮಹೋತ್ಸವದಲ್ಲಿರುವಾಗ ಸಹಕಾರ ಸಂಸ್ಥೆಗಳ ಬೆಳವಣಿಗೆ ಮತ್ತು ಮುಂದಿನ ಭವಿಷ್ಯ ಕುರಿತಂತೆ ಪ್ರತಿಯೊಬ್ಬ ಸಹಕಾರಿಯು ತನ್ನ ಪಾತ್ರವನ್ನು ಮನಗಾಣಬೇಕಿದೆ. ಗ್ರಾಮೀಣ ಅಭಿವೃದ್ಧಿಗೆ ಈ ಸಹಕಾರವೇ ಶಕ್ತಿ. ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು ಎನ್ನುವ ತತ್ವದ ಆಧಾರದ ಮೇಲೆ ರೈತರ ಹಾಗೂ ಮಹಿಳೆಯ ಆರ್ಥಿಕ ಸ್ವಾವಲಂಬನೆಯಲ್ಲಿ ಸಹಕಾರ ಸಂಸ್ಥೆಗಳು ಮಹತ್ತರ ಪಾತ್ರ ವಹಿಸುತ್ತವೆಯೆಂದು ಸಚಿವರು ತಿಳಿಸಿದರು.
ಗದುಗಿನ ಕಣಗಿನಹಾಳದಲ್ಲಿ 12 ಜನ ರೈತರೊಂದಿಗೆ ಆರಂಭಿಸಿದ ಸಿದ್ಧರಾಮನಗೌಡ ರಾಮನಗೌಡ ಪಾಟೀಲ ಅವರ ಈ ಸಹಕಾರ ಕ್ರಾಂತಿ ಇಡಿ ದೇಶದ್ಯಂತ ಹಮ್ಮಿಕೊಂಡಿದೆ. ಮಾನ್ಯ ಮುಖ್ಯಮಂತ್ರಿಗಳು 32 ಲಕ್ಷ ರೈತರಿಗೆ 24 ಸಾವಿರ ಕೋಟಿ ರೂ. ಸಾಲ ನೀಡುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಧಾರವಾಡದ ಕೆಎಂಎಫ್ ತನ್ನ ಛಾಪು ಮೂಡಿಸಿದ್ದು, ಈಗ 150 ಉತ್ಪನ್ನಗಳು ಹೊರತಂದಿದೆ. ಒಂದು ಲೀಟರ್ ಹಾಲಿಗೆ 5 ರೂ. ಸಬ್ಸಿಡಿ ನೀಡಲಾಗುತ್ತಿದೆ. ಧಾರವಾಡ ಕೆಎಂಎಫ್ ನಲ್ಲಿ ಈಗ 26 ಲಕ್ಷ ರೈತರ ನೋಂದಣಿಯಾಗಿದ್ದು, 10 ಲಕ್ಷ ರೈತರು ಹಾಲು ಪೂರೈಸಿದ್ದಾರೆ. 1.50 ಸಾವಿರ ಕೋಟಿ ಬಂಡವಾಳದ ಆರ್ಥಿಕ ವ್ಯವಹಾರ ನಡೆಸುತ್ತಿದೆ. ಇಪ್ಕೊ ಗೊಬ್ಬರ ಕಂಪನಿಯು 2100 ಕೋಟಿ ನಿವ್ವಳ ಲಾಭದಲ್ಲಿಯೆಂದ ಸಚಿವರು ಸಹಕಾರ ಕ್ಷೇತ್ರ ಅದ್ಭುತವಾಗಿ ಬೆಳೆಯುತ್ತಿದೆ ಎಂದರು.
ಹಲವಾರು ವರ್ಷಗಳಿಂದ ಆರ್ಥಿಕವಾಗಿ ಹಿಂದುಳಿದು ಹಾನಿಲ್ಲಿದ್ದ ಧಾರವಾಡದ ಕೆಸಿಸಿ ಬ್ಯಾಂಕ್ ಈ ಲಾಭದಲ್ಲಿದೆಯೆಂದು ಧಾರವಾಡದ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಅವರು ಮಾತನಾಡಿ, ಪ್ರಾಮಾಣಿಕತೆ, ಶ್ರದ್ಧೆಯಿಂದ ಸಹಕಾರ ಕ್ಷೇತ್ರವನ್ನು ಬೆಳೆಸಬಹುದೆನ್ನಲು ಧಾರವಾಡದ ಕೆಎಂಎಫ್ ಉತ್ತಪನ್ನ ಉದಾಹರಣೆ ಎಂದರು. ನಗರ, ಪಟ್ಟಣ, ಹಳ್ಳಿಗಳಲ್ಲಿ ಈ ಹಿಂದೆ ವಿವಿಧ ವಿದೇಶ ತಂಪು ಪಾನೀಯಗಳ ಜಾಹೀರಾತುಗಳು ರಾರಾಜಿಸುತ್ತಿದ್ದವು. ಆದರೆ ಈಗ ನಂದಿನಿ ಉತ್ಪನ್ನಗಳ ಜಾಹೀರಾತುಗಳು ಎಲ್ಲಡೆ ಕಾಣುತ್ತಿವೆ. 150 ಉತ್ಪನ್ನಗಳಿಂದಾಗಿ ರೈತರ ಕಿಸೆಗೆ ಹಣ ತುಂಬುತ್ತಿದ್ದಾರೆ ಎಂದರು. ಸಹಕಾರ ಕ್ಷೇತ್ರವನ್ನು ಬೆಳೆಸಲು ನಾವೆಲ್ಲರೂ ಪಣ ತೊಡಬೇಕು ಎಂದರು.
ಕಲಘಟಗಿ ಶಾಸಕರಾದ ಸಿ.ಎಂ. ನಿಂಬಣ್ಣವರ ಅವರು ಮಾತನಾಡಿ, ಸಹಕಾರ ಆಂದೋಲನ ನಮ್ಮ ಬಸವಾದಿ ಶರಣರು 12ನೆ ಶತಮಾನದಲ್ಲೇ ಆರಂಭಿಸಿದರು. ಸರ್ವರಿಗೂ ಸಮಪಾಲು ಎನ್ನುವ ಸಿದ್ಧಾಂತವನ್ನು ಕಾರ್ಯರೂಪಕ್ಕೆ ತಂದರು. ಸರ್ವೆ ಜನ ಸುಖಿನೋಭವಂತು ಎನ್ನುವಂತೆ ಕಾಯಕವೇ ಮೂಲವಾಗಿ ಪ್ರಾಮಾಣಿಕ ದಕ್ಷತೆಯಿಂದ ಸಹಕಾರ ಕ್ಷೇತ್ರವನ್ನು ಬೆಳೆಸಬಹುದಾಗಿದೆ ಎಂದರು.
ಕಾರ್ಯಕ್ರಮದ ಪೂರ್ವದಲ್ಲಿ ಸಚಿವ ಆಚಾರ್ ಹಾಲಪ್ಪ ಅವರು ಗೋಪೂಜೆ ನೆರವೇರಿಸಿದರು. ಕಲಘಟಗಿ ಶಾಸಕ ಸಿ. ಎಂ. ನಿಂಬಣ್ಣವರ ಸಹಕಾರ ಧ್ವಜಾರೋಹಣ ನೆರವೇರಿಸಿದರು. ಕರ್ನಾಟಕ ಸಹಕಾರ ಹಾಲು ಮಹಾಮಂಡಳದ ನಿವೃತ್ತ ನಿರ್ರ್ದೇಶಕ ಮತ್ತು ಪ್ರಸ್ತುತ ಸಲಹೆಗಾರ ಡಾ. ಡಿ.ಎನ್. ಹೆಗಡೆ ವಿಶೇಷ ಉಪನ್ಯಾಸ ನೀಡಿದರು. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ, ಸಹಕಾರ ಪಿತಾಮಹ ಸಿದ್ದನಗೌಡ ಪಾಟೀಲ ರವರ ಕ್ಷೀರ ಪಿತಾಮಹ ಡಾ.ವರ್ಗಿಸ್ ಕುರಿಯನ್ ರವರ ಹಾಗೂ ಎಂ.ವಿ. ಕೃಷ್ಣಪ್ಪರವರ ಭಾವಚಿತ್ರಗಳಿಗೆ ಪುಷ್ಪಾರ್ಚಣೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಹಕಾರ ಸಂಘಗಳಿಗೆ ಸನ್ಮಾನ, ಸೌರಶಕ್ತಿ ಚಾಲಿತ ಹಾಲು ಕರೆಯುವ ಯಂತ್ರಗಳ ವಿತರಣೆ, ಸಹಕಾರಿಗಳಿಗೆ ಸನ್ಮಾನ, ಸಹಕಾರ ವಾರಪತ್ರಿಕೆ ವಿಶೇಷ ಸಂಚಿಕೆ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅರಣ್ಯ, ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯ ಅಧ್ಯಕ್ಷ ರಾಜೇಶ್ ಕೋಟೆನ್ನವರ, ಕರ್ನಾಟಕ ರಾಜ್ಯ ಗ್ರಾಹಕರ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಪಿ. ಪಾಟೀಲ, ಉಪಾಧ್ಯಕ್ಷ ಜಗದೀಶ ಕವಟಗಿಮಠ, ನಿರ್ದೇಶಕರುಗಳಾದ ಬಸವರಾಜ ಅರಬಗೊಂಡ, ಈರಣ್ಣ ಪಟ್ಟಣಶೆಟ್ಟಿ, ಬಾಪೂಗೌಡ ಪಾಟೀಲ, ಧಾರವಾಡ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶಂಕರಪ್ಪ ರಾಯನಾಳ, ಕೆಸಿಸಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ ಹೊರಕೇರಿ, ಸಹಕಾರ ಸಂಘಗಳ ಉಪನಿಬಂಧಕಿ ರಂಜನಾ ಪೋಳ, ಧಾರವಾಡ ಸಹಕಾರ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಎಂ. ಲೋಹಿತೇಶ್ವರ, ಧಾರವಾಡ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ವಿ. ಹಿರೇಮಠ, ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರಾದ ಶಂಕರ ಮುಗದ, ನೀಲಕಂಠಪ್ಪ ಅಸೂಟಿ, ಹನುಮಂತಗೌಡ ಹಿರೇಗೌಡ್ರ, ಸುರೇಶ್ಚಂದ್ರ ಹೆಗಡೆ, ಮಂಜುನಾಥಗೌಡ ಪಾಟೀಲ, ಸುರೇಶ ಬಣವಿ, ಗೀತಾ ಮರಲಿಂಗಣ್ಣವರ, ಪರಶುರಾಮ ನಾಯ್ಕ, ಶಂಕರ ಹೆಗಡೆ, ಹನುಮಂತಗೌಡ ಭರಮಣ್ಣವರ, ಬಸನಗೌಡ ಮೇಲಿನಮನಿ, ಜಿ.ಎಂ. ಪಾಟೀಲ, ರಮೇಶ ಕೊಣ್ಣೂರ, ಲತಾ ಎಸ್, ಡಾ. ಉಮೇಶ್ ಕೊಂಡಿ ಉಪಸ್ಥಿತರಿದ್ದರು.
ಕರ್ನಾಟಕ ಹಾಲು ಮಹಾಮಂಡಳಿ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಧಾರವಾಡ ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ ಸ್ವಾಗತಿಸಿದರು.
*************