*ನರೇಂದ್ರ ಗ್ರಾಮದಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ರೈತರ ಆದಾಯ ದ್ವಿಗುಣಗೊಳಿಸುವ ಚಟುವಟಿಕೆಗಳಿಗೆ ಶಾಸಕ ಅಮೃತ ದೇಸಾಯಿ ಚಾಲನೆ*
*ಧಾರವಾಡ(ಕರ್ನಾಟಕ ವಾರ್ತೆ)ಅ.07*: ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಜಲಾನಯನ ಪ್ರದೇಶ ಅಭಿವೃದ್ಧಿಗಾಗಿ ಸೆಟಲೈಟ್ ಮೂಲಕ ಆಯ್ಕೆ ಮಾಡಿಕೊಂಡಿರುವ ನರೇಂದ್ರ, ಯಾದವಾಡ ಮತ್ತು ಮುಳಮುತ್ತಲ ಗ್ರಾಮಗಳ ವ್ಯಾಪ್ತಿಯಲ್ಲಿ 2022 ರಿಂದ 2027 ರವರೆಗೆ ಹಮ್ಮಿಕೊಳ್ಳುವ ಕೃಷಿ ಹಾಗೂ ಕೃಷಿ ಆಧಾರಿತ ಚಟುವಟಿಕೆಗಳಿಗೆ ಶಾಸಕ ಅಮೃತ ದೇಸಾಯಿ ಅವರು ನರೇಂದ್ರ ಗ್ರಾಮದಲ್ಲಿ ಇಚೆಗೆ (ಅ.03) ಚಾಲನೆ ನೀಡಿದರು.
ನಂತರ ಅವರು ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೃಷಿ ಹಾಗೂ ಕೃಷಿಕರ ಅಭಿವೃದ್ಧಿಗಾಗಿ ವಿವಿಧ ರೀತಿಯ ಜನಪರ ಯೋಜನೆಗಳನ್ನು ಜಾರಿಗೊಳಿಸಿವೆ. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಭೂಫಲವತ್ತತೆಯನ್ನು ಹೆಚ್ಚಿಸುವ ಮತ್ತು ಮಿತ ಪ್ರಮಾಣದಲ್ಲಿ ನೀರು ಬಳಸುವ ಮೂಲಕ ಅಂತರ್ಜಲ ಮಟ್ಟವನ್ನು ವೃದ್ಧಿಸುವ ಉದ್ದೇಶ ಹೊಂದಲಾಗಿದೆ.
ಕೃಷಿ ಜೊತೆಗೆ ಕೃಷಿಗೆ ಪೂರಕವಾದ ಪಶುಸಂಗೋಪನೆ, ಜೇನು ಸಾಕಾಣಿಕೆ, ಕೋಳಿ ಸಾಕಾಣಿಕೆ, ಹೈನುಗಾರಿಕೆ, ಮೇವು ಸಂಗ್ರಹಣೆ ಬ್ಯಾಗ್ ತಯಾರಿಕೆ, ತರಕಾರಿ ಕೀರುಚಿಲುಗಳ ತಯಾರಿಕೆ ಮತ್ತು ರೊಟ್ಟಿ ಮಾಡುವ ಯಂತ್ರದಂತಹ ಸ್ವಉದ್ಯೋಗ ಹೆಚ್ಚಿಸುವ ಚಟುವಟಿಕೆಗಳಿಗೆ ಕೃಷಿ ಸಿಂಚಾಯಿ ಯೋಜನೆಯಲ್ಲಿ ಪ್ರಾಮುಖ್ಯತೆ ನೀಡಲಾಗಿದೆ. ಕೃಷಿ ಇಲಾಖೆಯಿಂದ ಈ ಯೋಜನೆಯಡಿ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ರೈತರು ಉತ್ತಮ ಜೀವನ ನಿರ್ವಹಿಸಬೇಕೆಂದು ಶಾಸಕರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯಿಂದ ವಿವಿಧ ಸೌಲತ್ತುಗಳನ್ನು ಪಡೆದು ಆದಾಯವನ್ನು ದ್ವಿಗುಣಗೊಳಿಸಲು ತಿಳಿಸಿದರು. ಸಾಂಕೇತಿಕವಾಗಿ ತರಕಾರಿ ಕಿರು ಚೀಲಗಳು, ಕೈತೋಟದ ಸಸಿಗಳು, ಮೇವು ಸಂಗ್ರಹಣೆಗೆ ಸೈಲೇಜ ಬ್ಯಾಗ, ಜೇನು ಸಾಕಾಣಿಕೆಗೆ ಜೇನು ಪೆಟ್ಟಿಗೆ, ಕೋಳಿ ಮರಿಗಳು, ರೊಟ್ಟಿ ಮಾಡುವ ಯಂತ್ರ ಹಾಗೂ ಹಿಂಗಾರು ಹಂಗಾಮಿನ ಬೀಜಗಳನ್ನು ಶಾಸಕರು ವಿತರಿಸಿದರು.
ಸಹಾಯಕ ಕೃಷಿ ನಿರ್ದೇಶಕಿ ಸುಷ್ಮಾ ಮಳಿಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕೈಗೊಳ್ಳುವ ಕಾಮಗಾರಿ ಮತ್ತು ಕಾರ್ಯಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ಶೇ.60 ರಷ್ಟು ಮತ್ತು ರಾಜ್ಯ ಸರ್ಕಾರ ಶೇ.40 ರಷ್ಟು ಅನುದಾನ ನೀಡುತ್ತದೆ. ಈ ಯೋಜನೆಯಡಿ ಕೃಷಿ ಕಾರ್ಯಕ್ರಮಗಳಿಗೆ ಆಯ್ಕೆಯಾಗುವ ಫಲಾನುಭವಿಗಳು ಸಾಮಾನ್ಯರಾಗಿದ್ದಲ್ಲಿ ಶೇ.10 ರಷ್ಟು ಮತ್ತು ಪ.ಜಾತಿ ಹಾಗೂ ಪ.ಪಂಗಡ ಫಲಾನುಭವಿಗಳು ಶೇ.5 ರಷ್ಟು ಹಾಗೂ ತೋಟಗಾರಿಕೆ ಆಧಾರಿತ ಚಟಿವಟಿಕೆಗಳಿದ್ದಲ್ಲಿ ಸಾಮಾನ್ಯ ರೈತರು ಶೇ.20 ರಷ್ಟು ಮತ್ತು ಪ.ಜಾತಿ ಹಾಗೂ ಪ.ಪಂಗಡ ಫಲಾನುಭವಿಗಳು ಶೇ.10 ರಷ್ಟು ವಂತಿಕೆಯನ್ನು ನೀಡಬೇಕಾಗುತ್ತದೆ.
ಕೃಷಿ ಮತ್ತು ರೈತರ ಆದಾಯ ಉತ್ಪನ್ನಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾಗಿದೆ. ಮಣ್ಣು ಮತ್ತು ನೀರು ಸಂರಕ್ಷಣೆ ರಚನೆಗಳ ಅನುಷ್ಠಾನ, ಕೃಷಿ ಊತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು, ಭೂ ಸಂರಕ್ಷಣಾ ಕ್ರಮಗಳು, ಪರ್ಯಾಯ ಜೀವನೋಪಾಯದ ಅವಕಾಶಗಳನ್ನು ಉತ್ತೇಜಿಸುವುದು, ಜೀವನೋಪಾಯದ ಚಟುವಟಿಕೆಗಳಾದ ತೋಟಗಾರಿಕೆ, ಪಶು ಸಂಗೋಪನೆ, ಕೃಷಿ ಅರಣ್ಯ, ಜಲಚರಗಳು, ಜಲಮೂಲಗಳು, ರೈತರ ಆದಾಯವನ್ನು ದ್ವಿಗುಣಗೊಳಿಸಲು ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಕಾರ್ಯಕ್ರಮಗಳನ್ನು ಕೃಷಿ ಸಿಂಚಾಯಿ ಯೋಜನೆಯಲ್ಲಿ ಆದ್ಯತೆ ಮೇಲೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.
ನರೇಂದ್ರ ಗ್ರಾಮ ಪಂಚಾಯತಿ ಅದ್ಯಕ್ಷರಾದ ಗಂಗಮ್ಮ ನಿರಂಜನ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು. ಉಪಾದ್ಯಕ್ಷ ತಿರಕಯ್ಯ ಹಿರೇಮಠ, ಎ.ಪಿ.ಎಂ.ಸಿ ಮಾಜಿ ಅದ್ಯಕ್ಷ ಚನ್ನವೀರಗೌಡ ಪಾಟೀಲ, ಧಾರವಾಡ ಕೃಷಿ ಸಹಾಯಕ ನಿರ್ದೇಶಕರ ಕಚೇರಿಯ ತಾಂತ್ರಿಕ ವ್ಯವಸ್ಥಾಪಕ ಶಿವುಕುಮಾರ ಜಿ.ಬಿ., ಉಪಸ್ಥಿತರಿದ್ದರು. ರವಿ ನಾಯಕ ನಿರೂಪಿಸಿದರು. ಎಚ್. ಎಂ ಬಾದಾಮಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳ ರೈತರು, ಫಲಾನುಭವಿಗಳು ಮತ್ತು ನರೇಂದ್ರ ಗ್ರಾಮಸ್ಥರು ಭಾಗವಹಿಸಿದ್ದರು.
*************